ಸಾರಾಂಶ
ದಾರ್ಶನಿಕರ ವಿಚಾರಧಾರೆ ಒಂದು ಧರ್ಮ, ಜಾತಿಗೆ ಸೀಮಿತವಲ್ಲ: ತಮ್ಮಯ್ಯಕುವೆಂಪು ಕಲಾಮಂದಿರದಲ್ಲಿ ಕನಕದಾಸರ ಜಯಂತಿ
ಚಿಕ್ಕಮಗಳೂರಿನ ಕುವೆಂಪು ಕಲಾಮಂದಿರದಲ್ಲಿ ಕನಕದಾಸರ 536 ನೇ ಜಯಂತಿ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುದಾರ್ಶನಿಕರು, ಮಹಾಪುರುಷರು ಒಂದು ಧರ್ಮಕ್ಕೆ ಸೀಮಿತರಾದವರಲ್ಲ. ಸರ್ವರನ್ನು ಸಮಾನವಾಗಿ ಕಾಣುವ ಅವರ ವಿಚಾರಧಾರೆಗಳು ಪ್ರಸ್ತುತ ಸಮಾಜಕ್ಕೆ ದಾರಿದೀಪವಾಗಿದೆ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು. ಗುರುವಾರ ನಗರದ ಕುವೆಂಪು ಕಲಾಮಂದಿರದಲ್ಲಿ ಜಿಲ್ಲಾಡಳಿತದಿಂದ ಏರ್ಪಡಿಸಿದ್ದ ಭಕ್ತ ಕನಕದಾಸರ 536 ನೇ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಹಾನ್ ದಾರ್ಶನಿಕರು ಹಾಕಿರುವ ಹೆಜ್ಜೆ ಗುರುತುಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಹೇಳಿದರು. ರಾಜ್ಯಾದ್ಯಂತ ಕನಕ ಜಯಂತಿ ಆಚರಿಸುತ್ತಿದ್ದೇವೆ. ಜಿಲ್ಲೆಯಲ್ಲಿ ಅದ್ದೂರಿಯಾಗಿ ನಡೆಯುವ ಜಯಂತಿಗಳಲ್ಲಿ ಕನಕಜಯಂತಿಯೂ ಒಂದು. ಬುದ್ದ, ಬಸವ, ಅಂಬೇಡ್ಕರ್, ಕನಕದಾಸರಂತಹ ಮಹನೀಯರ ತತ್ವಾ ದರ್ಶಗಳು ಇಂದಿಗೂ ಪ್ರಸ್ತುತ ಎಂದರು. ಹಾವೇರಿ ಜಿಲ್ಲೆ, ಶಿಗ್ಗಾವಿ ತಾಲೂಕು, ಬಾಡಗ್ರಾಮ ಕನಕದಾಸರು ಹುಟ್ಟಿದ ಊರು. ಬಹಳ ವರ್ಷ ಬೀರಪ್ಪನಾಯಕ ಮತ್ತು ಬಚ್ಚಮ್ಮ ದಂಪತಿಗೆ ಮಕ್ಕಳಿರಲಿಲ್ಲ. ತಿರುಪತಿ ತಿಮ್ಮಪ್ಪನಿಗೆ ಹರಕೆ ಹೊತ್ತ ಮೇಲೆ ತಿಮ್ಮಪ್ಪ ನಾಯಕನ (ಕನಕ) ಜನನವಾಯಿತು. ವಿಜಯನಗರ ಸಾಮ್ರಾಜ್ಯದಲ್ಲಿ ಶ್ರದ್ಧೆ, ಶೌರ್ಯ, ಬದ್ಧತೆ ನೋಡಿ ಬೀರಪ್ಪನಾಯಕನಿಗೆ 78 ಹಳ್ಳಿಗಳ ಉಸ್ತುವಾರಿ ನೀಡಲಾಗಿತ್ತು. ಮುಂದೆ ತಿಮ್ಮಪ್ಪನೂ ಕೂಡ ದಂಡನಾಯಕನಾಗಿ ಶೌರ್ಯ ಮೆರೆಯುತ್ತಾನೆ. ದಾಸ ಕೀರ್ತನೆಗಳು ಸಾಕಷ್ಟಿವೆ. ಆದರೆ, ಶೋಷಿತವರ್ಗದಿಂದ ಬಂದು ಕೀರ್ತನೆ ರಚಿಸಿ ಹಾಡಿದ್ದು ಕನಕದಾಸರು ಮಾತ್ರ ಎಂದು ಬಣ್ಣಿಸಿದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾಧಿಕಾರಿ ಮೀನಾ ನಾಗರಾಜ್, ಸತ್ಯವಂತರ ಸಂಗವಿರಲು ತೀರ್ಥವೇತಕೆ, ನಿತ್ಯ ಅನ್ನದಾನವಿರಲು ಭಯವೇತಕೆ ಎಂದು ಹೇಳಿದ್ದ ಕನಕದಾಸರು ಜೀವನದಲ್ಲಿ ಬಾಳುವೆ ಮುಖ್ಯವೇ ವಿನಾ, ಜಾತಿ ಮುಖ್ಯ ಅಲ್ಲ ಎಂದು ಸಾರಿದವರು ಎಂದರು. 15-16ನೇ ಶತಮಾನದಲ್ಲೇ ದಾಸಪಂಥದಲ್ಲಿ ಹರಿದಾಸರಲ್ಲಿ ಕನಕರ ಹೆಸರು ಅವಿಸ್ಮರಣೀಯ. ಜನಸಾಮಾನ್ಯರೊಂದಿಗೆ ಬೆರೆತು ಜನರ ದನಿಯಾದ ಮಹಾನುಭಾವ. ತಮ್ಮ ತತ್ವ ಸಿದ್ದಾಂತಗಳನ್ನು ಆಡುಭಾಷೆಯಲ್ಲಿ ಜನರಿಗೆ ತಿಳಿಸಿದವರು. ಭಕ್ತನಿಗೆ ಜಾತಿ ಇಲ್ಲ ನೀತಿ ಮುಖ್ಯ ಎಂದು ಸಾರಿದವರು. ಸಮಾಜದಲ್ಲಿನ ತಾರತಮ್ಯ ವ್ಯವಸ್ಥೆ ವಿರುದ್ಧ ಸೆಟೆದು ನಿಂತವರು. ಜಾತಿ ಪದ್ಧತಿ, ತಾರತಮ್ಯದಿಂದ ನೊಂದು ವ್ಯವಸ್ಥೆ ವಿರುದ್ಧ ಪ್ರತಿಕ್ರಿಯಿಸಿದವರು ಭಕ್ತ ಕನಕದಾಸ ಶ್ರೇಷ್ಠರು ಎಂದು ಹೇಳಿದರು. ಮನುಷ್ಯನು ಸದಾ ಸನ್ಮಾರ್ಗದಲ್ಲಿ ಬಾಳಬೇಕು. ನಿತ್ಯ ಕಲಿಯಲು, ಭಕ್ತಿ ಮಾರ್ಗ ಅನುಸರಿಸಲು ಯಾವುದೇ ಜಾತಿ ಕಟ್ಟುಪಾಡುಗಳಿಲ್ಲ. ವಿಶಾಲ ಮನಸ್ಸಿನಿಂದ ಪೂಜಿಸಿದರೆ ದೇವರು ಎಲ್ಲರಿಗೂ ಒಬ್ಬನೇ ಎಂದು ಕನಕರು ಸಾರಿದ್ದಾರೆ. ಕನಕರ ಜೀವನವೇ ಉತ್ಸಾಹದ ಚಿಲುಮೆ. ಮನಸ್ಸಿಗೆ ಚೈತನ್ಯ ಸ್ಪೂರ್ತಿ ತುಂಬುತ್ತದೆ. ಅಂತಹ ಮಹನೀಯರ ಜೀವನಾದರ್ಶಗಳನ್ನು ಎಲ್ಲರೂ ಅಳವಡಿಸಿಕೊಳ್ಳೋಣ ಎಂದು ತಿಳಿಸಿದರು. ಸಾಹಿತಿ ನಟರಾಜ್ ಬೂದಾಳ್ ಪ್ರಧಾನ ಉಪನ್ಯಾಸ ನೀಡಿ, ಸರಕಾರ ಇತ್ತೀಚೆಗೆ ಆಚರಣೆಗೆ ತಂದಿರುವ ಜಯಂತಿಗಳಲ್ಲಿ ಶೇ.99 ಜಯಂತಿಗಳು ಶೂದ್ರ ಸಮುದಾಯದ ಮಹನೀಯರ ಜಯಂತಿಗಳಾಗಿವೆ. ಇವರೆಲ್ಲಾ ಹಿಂದೆ ಎಲ್ಲಿ ಹೋಗಿದ್ದರೂ ಎಂದು ಆತ್ಮಾವಲೋಕನ ಅಗತ್ಯವಿದೆ. ಕನಕದಾಸರು ಇದ್ದ ಅಧಿಕಾರ ತ್ಯಜಿಸಿ ಜನಸಾಮಾನ್ಯರೊಳಗೆ ಹೋದ ದಾರ್ಶನಿಕ. ಮಹಾಕವಿಯ ದುಡಿಮೆಯ ಫಲ ನಮಗೆ ಧಕ್ಕಿದೆಯೇ ? ಕನಕರ ಕೀರ್ತನೆಗಳು ದೇವಾಲಯ ಪ್ರವೇಶಿಸಿವೆಯೇ ಎಂದು ಪ್ರಶ್ನಿಸಿಕೊಳ್ಳಬೇಕಿದೆ. ಕನಕ ದಾಸರು ಎಚ್ಚರದ ಪ್ರತೀಕ. ಹೀಗಾಗಿ ವಿವೇಕದ ಎಚ್ಚರ ಸದಾ ನಮ್ಮಲ್ಲಿರಬೇಕು ಎಂದು ಜಾಗೃತಿಗೊಳಿಸಿದರು. ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್, ಜಿಲ್ಲಾ ರಕ್ಷಣಾಧಿಕಾರಿ ಡಾ. ವಿಕ್ರಂ ಅಮಟೆ, ಜಿಪಂ ಸಿಇಒ ಡಾ.ಗೋಪಾಲಕೃಷ್ಣ, ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಕೆ.ಎಂ.ಮಂಜುನಾಥ, ಪ್ರಧಾನ ಕಾರ್ಯದರ್ಶಿ ಶಾಂತೇಗೌಡ, ವಿಧಾನಪರಿಷತ್ ಮಾಜಿ ಸದಸ್ಯೆ ಗಾಯತ್ರಿ ಶಾಂತೇಗೌಡ, ಜಿಪಂ ಮಾಜಿ ಅಧ್ಯಕ್ಷ ಎ.ಎನ್.ಮಹೇಶ್, ಕುರುಬರ ಸಂಘದ ತಾಲೂಕು ಅಧ್ಯಕ್ಷ ಡಿ.ಎಸ್ ಚಂದ್ರೇಗೌಡ, ಡಿ.ಸಿ.ಪುಟ್ಟೇಗೌಡ, ಈಶ್ವರಹಳ್ಳಿ ಮಹೇಶ್, ಎಚ್.ಪಿ. ಮಂಜೇಗೌಡ, ಕೆಂಗೇಗೌಡ, ಚಂದ್ರಪ್ಪ, ಗುರು ಮಲ್ಲಪ್ಪ, ಸುಜಾತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಸಿ.ರಮೇಶ್ , ರೂಪನಾಯ್ಕ್ಉ ಪಸ್ಥಿತರಿದ್ದರು.30 ಕೆಸಿಕೆಎಂ 2ಚಿಕ್ಕಮಗಳೂರಿನ ಕುವೆಂಪು ಕಲಾಮಂದಿರದಲ್ಲಿ ಗುರುವಾರ ನಡೆದ ಕನಕ ಜಯಂತಿ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಉದ್ಘಾಟಿಸಿದರು. ಶಾಸಕ ಎಚ್.ಡಿ. ತಮ್ಮಯ್ಯ, ಗಾಯತ್ರಿ ಶಾಂತೇಗೌಡ, ಮಂಜೇಗೌಡ, ಎ.ಎನ್. ಮಹೇಶ್ ಇದ್ದರು.