ಎಸ್ಐಆರ್ ಎಂಬುದು ಸಂವಿಧಾನದಲ್ಲಿ ಇಲ್ಲದ, ಚುನಾವಣಾ ಆಯೋಗದ ನಿಯಮ ಉಲ್ಲಂಘಿಸುವ, ಜನಸಾಮಾನ್ಯರನ್ನು ಇಕ್ಕಟ್ಟಿಗೆ ಸಿಲುಕಿಸುವ, ಮಹಿಳೆಯರು, ಅಲೆಮಾರಿಗಳು, ಆದಿವಾಸಿಗಳು, ದಲಿತರು, ಅಲ್ಪಸಂಖ್ಯಾತರು ಹಾಗೂ ಎಲ್ಲಾ ಜಾತಿಯ ಬಡವರು ದೊಡ್ಡ ಸಂಖ್ಯೆಯಲ್ಲಿ ಮತದಾನದ ಹಕ್ಕನ್ನು ಕಳೆದುಕೊಳ್ಳಲು ಕಾರಣವಾಗುತ್ತಿರುವ ಮತಪಟ್ಟಿಯ ಪರಿಷ್ಕರಣಾ ಪದ್ಧತಿಯಾಗಿದೆ.

ಕನ್ನಡಪ್ರಭ ವಾರ್ತೆ, ಚಿಕ್ಕಬಳ್ಳಾಪುರ:

ಎಸ್‌ಐಆರ್ ಎಂಬುದು ಪ್ರಜಾತಂತ್ರದ ಕಗ್ಗೊಲೆಗೆ ಹೊಸ ಸಂಚಾಗಿದೆ. ಸಂವಿಧಾನದ ಮೂಲಭೂತ ಹಕ್ಕಾದ ಮತದಾನದಿಂದ ಈ ದೇಶದ ಮೂಲನಿವಾಸಿಗಳನ್ನು ದೂರವಿಡುವ ಹುನ್ನಾರ ಇದರ ಹಿಂದೆ ಇದ್ದು ಪ್ರತಿಯೊಬ್ಬರೂ ಈ ಬಗ್ಗೆ ಜಾಗೃತರಾಗಬೇಕು ಎಂದು ಎದ್ದೇಳು ಕರ್ನಾಟಕ ಪ್ರತಿ ಜಿಲ್ಲೆಯಲ್ಲಿಯೂ ಜಾಗೃತಿ ಮೂಡಿಸುತ್ತಿದೆ ಎಂದು ಜಿಲ್ಲಾ ಸಂಯೋಜಕ ಡಾ. ಮಹಮದ್ ನೂರುಲ್ಲಾ ತಿಳಿಸಿದರು.

ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಎಸ್ಐಆರ್ ಎಂಬುದು ಸಂವಿಧಾನದಲ್ಲಿ ಇಲ್ಲದ, ಚುನಾವಣಾ ಆಯೋಗದ ನಿಯಮ ಉಲ್ಲಂಘಿಸುವ, ಜನಸಾಮಾನ್ಯರನ್ನು ಇಕ್ಕಟ್ಟಿಗೆ ಸಿಲುಕಿಸುವ, ಮಹಿಳೆಯರು, ಅಲೆಮಾರಿಗಳು, ಆದಿವಾಸಿಗಳು, ದಲಿತರು, ಅಲ್ಪಸಂಖ್ಯಾತರು ಹಾಗೂ ಎಲ್ಲಾ ಜಾತಿಯ ಬಡವರು ದೊಡ್ಡ ಸಂಖ್ಯೆಯಲ್ಲಿ ಮತದಾನದ ಹಕ್ಕನ್ನು ಕಳೆದುಕೊಳ್ಳಲು ಕಾರಣವಾಗುತ್ತಿರುವ ಮತಪಟ್ಟಿಯ ಪರಿಷ್ಕರಣಾ ಪದ್ಧತಿಯಾಗಿದೆ. ದಾಖಲೆಗಳ ಕಾರಣ ನೀಡಿ ಅರ್ಹ ಪ್ರಜೆಗಳ ಮತದಾನದ ಹಕ್ಕನ್ನು ಜೀವಿತ ಕಾಲದಲ್ಲಿಯೇ ನಿರಾಕರಿಸುವುದು ಪ್ರಜಾತಂತ್ರ ವ್ಯವಸ್ಥೆಯ ದುರಂತ ಅಂತ್ಯವಾಗಿದೆ. ಎಸ್ಐಆರ್ ಎಂಬುದು ಪರೋಕ್ಷ ರೀತಿಯಲ್ಲಿ ಸಿಎಎ, ಎನ್.ಆರ್.ಸಿ ಯನ್ನು ಜಾರಿಗೊಳಿಸುವ ಕುತಂತ್ರವೂ ಆಗಿದೆ. ಎಸ್ಐಆರ್ ನಡೆದ ರಾಜ್ಯಗಳಲ್ಲಿ 20 ಲಕ್ಷದಿಂದ ಆರಂಭಿಸಿ, 3 ಕೋಟಿಯ ತನಕ ಅರ್ಹ ಮತದಾರರನ್ನು ಮತಪಟ್ಟಿಯಿಂದ ತೆಗೆದು ಹಾಕಲಾಗಿದೆ ಎಂದರು.

ಚುನಾವಣಾ ಆಯೋಗ ಎಸ್ಐಆರ್ ಮೂಲಕ ನುಸುಳುಕೋರರನ್ನು ಪತ್ತೆ ಹಚ್ಚುತ್ತಿಲ್ಲ, ಬದಲಿಗೆ ಬಿಜೆಪಿ ತನ್ನ ವಿರೋಧ ಪಕ್ಷಗಳ ಹಿಡಿತ ಹೆಚ್ಚಾಗಿರುವ ಮತ್ತು ವಿರೋಧ ಪಕ್ಷಕ್ಕೆ ಹೆಚ್ಚಾಗಿ ಓಟು ಹಾಕುವ ಸಮುದಾಯಗಳ ಮತಗಳನ್ನು ಕತ್ತರಿಸಿ ಅವರು ಗೆಲ್ಲಲಾಗದ ತಳಪಾಯವನ್ನು ಸೃಷ್ಟಿ ಮಾಡುವುದಾಗಿದೆ. ಜೊತೆಗೆ, ಮತದಾನದ ಹಕ್ಕು ಇಲ್ಲದ ಎರಡನೇ ದರ್ಜೆಯ ಜನ ವರ್ಗವನ್ನು ಸೃಷ್ಟಿಸುವ ಅಜೆಂಡಾ ಎಸ್ಐಆರ್ ನಲ್ಲಿ ಆಡಗಿದೆ. ಶರಣ, ಸೂಫಿ, ಸಂತರ ಬೀಡಾದ ಕರ್ನಾಟಕದಲ್ಲಿ ಇಂತಹ ಯಾವುದೇ ದುಷ್ಟ ನೀತಿಗಳು ನಡೆಯುವುದಿಲ್ಲ ಎಂಬ ಖಡಕ್ ಎಚ್ಚರಿಕೆಯನ್ನು ಆಯೋಗಕ್ಕೆ ನೀಡುತ್ತಿದ್ದೇವೆ. ಇಷ್ಟೊಂದು ಸಾರ್ವಜನಿಕ ಆಕ್ಷೇಪಣೆಗಳು ಮತ್ತು ಪ್ರಶ್ನೆಗಳ ನಡುವೆಯೂ ರಾಜ್ಯ ಚುನಾವಣಾ ಆಯೋಗದ ವತಿಯಿಂದ ಇಲ್ಲಿವರೆಗೂ ಯಾವುದೇ ರೀತಿಯ ಪ್ರತಿಕ್ರಿಯೆ/ಸ್ಪಂದನೆ ದೊರೆತಿಲ್ಲ. ಚುನಾವಣಾ ಆಯೋಗದ ಈ ನಿರ್ಲಕ್ಷ್ಯ ಧೋರಣೆಯನ್ನು ತೀವ್ರವಾಗಿ ಖಂಡಿಸುತ್ತೇವೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಎದ್ದೇಳು ಕರ್ನಾಟಕ ಜಿಲ್ಲಾ ಸಂಯೋಜಕ ಜಿ. ಶಮೀರ್, ಸಂವಿಧಾನ ಸಂರಕ್ಷಣಾ ಪಡೆಯ ನಾರಾಯಣಪ್ಪ, ಜೀವಿಕ ನಾರಾಯಣಸ್ವಾಮಿ, ಎಸ್ ಡಿಪಿಐನ ಎ.ಅಪ್ಸರ್ ಪಾಶ, ಗುಡಿಬಂಡೆ ನಾರಾಯಣಸ್ವಾಮಿ, ನಾರಾಯಣಮ್ಮ, ಸೌಭಾಗ್ಯಮ್ಮ, ಶ್ರೀನಿವಾಸ, ಬಾಲಪ್ಪ ಮತ್ತಿತರರು ಇದ್ದರು.

ಇಂದಿನಿಂದ ರಾಜ್ಯವ್ಯಾಪಿ ಜಗಜಾಗೃತಿಎಸ್ಐಆರ್ ವಿರೋಧಿ ಕರ್ನಾಟಕ ಹಾಗೂ ಎದ್ದೇಳು ಕರ್ನಾಟಕದ ವತಿಯಿಂದ ಜೂ.13 ರಿಂದ 18 ರವರೆಗೂ ಐದು ಮಾರ್ಗಗಳಲ್ಲಿ ರಾಜ್ಯವ್ಯಾಪಿ ಜನಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಜೂ. 20 ರಂದು ಇಡೀ ಕರ್ನಾಟಕದ ಪ್ರಾತಿನಿಧ್ಯ ಬೆಂಗಳೂರಿನಲ್ಲಿ ಬೃಹತ್ ಪ್ರತಿರೋಧ ಸಮಾವೇಶ ನಡೆಯಲಿದೆ. ಮತದಾನದ ಹಕ್ಕನ್ನು ದುರ್ಬಲಗೊಳಿಸುವ, ಪ್ರಜಾಪ್ರಭುತ್ವದ ಹಕ್ಕುಗಳನ್ನು ಕಸಿಯುವ, ಆಡಳಿತಾತ್ಮಕ ಅಧಿಕಾರವನ್ನು ಮನಬಂದಂತೆ ಬಳಸುವ ಯಾವುದೇ ಪ್ರಯತ್ನವನ್ನು ಕರ್ನಾಟಕದ ಜನತೆ ಸಹಿಸುವುದಿಲ್ಲ ಎಂಬ ಎಚ್ಚರಿಕೆಯನ್ನು ಬಹಿರಂಗವಾಗಿ ಈ ಮೂಲಕ ಚುನಾವಣಾ ಆಯೋಗಕ್ಕೆ ನೀಡುತ್ತಿದ್ದೇವೆ ಎಂದು ಡಾ. ಮಹಮದ್ ನೂರುಲ್ಲಾ ತಿಳಿಸಿದರು.

ಸಿಕೆಬಿ-2... ಸುದ್ದಿಗೋಷ್ಠಿಯಲ್ಲಿ ಎದ್ದೇಳು ಕರ್ನಾಟಕದ ಡಾ.ಮಹಮದ್ ನೂರುಲ್ಲಾ ಮಾತನಾಡಿದರು.