ಗಾಂಜಾ ಘಮಲಿನ ಮೂಲ ಮರೆತ ಪೊಲೀಸರು!

| Published : Jul 31 2024, 01:02 AM IST

ಸಾರಾಂಶ

ಅನ್ಯರಾಜ್ಯಗಳಿಂದಲೇ ವಿವಿಧ ಬಗೆಯ ಮಾದಕ ವಸ್ತುಗಳು ಬರುತ್ತಲೇ ಇರುತ್ತವೆ. ವಿದೇಶಿ ಮಾದಕ ವಸ್ತುಗಳು ಇಲ್ಲಿ ಬರುವುದು ಕಂಡು ಬರುತ್ತದೆ.

ಶಿವಾನಂದ ಗೊಂಬಿ

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ಮಾದಕ ವಸ್ತುಗಳ ವಿರುದ್ಧ ಸಮರವನ್ನೇ ಸಾರಿರುವ ಹುಬ್ಬಳ್ಳಿ-ಧಾರವಾಡ ಪೊಲೀಸ್‌ ಕಮಿಷನರೇಟ್‌, ಬರೀ ಮಾದಕ ವಸ್ತುಗಳ ಮಾರಾಟಗಾರರನ್ನು ಪತ್ತೆ ಹಚ್ಚುವುದಷ್ಟೇ ಅಲ್ಲ. ಅವುಗಳನ್ನು ಬಳಸುವವರಿಗೂ ಟ್ರೀಟ್‌ಮೆಂಟ್‌ ಕೊಡಿಸುವ ಮೂಲಕ ಗಾಂಧಿಗಿರಿ ಪ್ರದರ್ಶಿಸುತ್ತಿದೆ. ಈ ದಂಧೆಯ ಮೂಲವನ್ನೇ ಮರೆತಂತಿದೆ!

ಹುಬ್ಬಳ್ಳಿಗೆ ಎಲ್ಲೆಲ್ಲಿಂದ ಗಾಂಜಾ ಸೇರಿದಂತೆ ವಿವಿಧ ಮಾದಕ ವಸ್ತುಗಳು ಬರುತ್ತವೆ? ಅವುಗಳ ಮೂಲ ತಡೆಯಲು ಕ್ರಮಗಳೇನು? ಆಯಾ ಠಾಣೆಯ ಪೊಲೀಸರ ಸಹಕಾರ ಇಲ್ಲದೆಯೇ ಈ ದಂಧೆ ನಡೆಯುತ್ತಿದೆಯೇ? ದಂಧೆಯ ಮೂಲಕ್ಕೆ ಕೈ ಹಾಕಿದರೆ ತನ್ನಿಂದ ತಾನೇ ಮಾದಕ ವಸ್ತುಗಳ ಹಾವಳಿ ಕಡಿಮೆಯಾಗುತ್ತೆ.!

ಇದು ಪೊಲೀಸ್‌ ಕಮಿಷನರೇಟ್‌ಗೆ ಮಹಾನಗರದ ಪ್ರಜ್ಞಾವಂತರು ಮಾಡುತ್ತಿರುವ ಒಕ್ಕೊರಲಿನ ಆಗ್ರಹ. ಅನ್ಯರಾಜ್ಯಗಳಿಂದಲೇ ವಿವಿಧ ಬಗೆಯ ಮಾದಕ ವಸ್ತುಗಳು ಬರುತ್ತಲೇ ಇರುತ್ತವೆ. ವಿದೇಶಿ ಮಾದಕ ವಸ್ತುಗಳು ಇಲ್ಲಿ ಬರುವುದು ಕಂಡು ಬರುತ್ತದೆ. ಗಾಂಜಾ ಘಮಲಿನ ಕರಾಮತ್ತು ಅಂತೂ ಹೇಳುವಂತೆಯೇ ಇಲ್ಲ. ಗಾಂಜಾ ಏರಿಸಿ ಹತ್ತು ಹಲವು ಅಪರಾಧ ಪ್ರಕರಣಗಳು ಯುವ ಸಮೂಹ ಭಾಗಿಯಾಗುತ್ತಿರುವುದು ಬಹಿರಂಗ ಸತ್ಯ.

ಎಲ್ಲೆಲ್ಲಿಂದ ಬರುತ್ತೆ?

ಹುಬ್ಬಳ್ಳಿಗೆ ಛೋಟಾ ಮುಂಬೈ ಎಂದೇ ಹೆಸರಿದೆ. ನಶೆ ಏರಿಸುವ ಗಾಂಜಾದ ದೊಡ್ಡ ಜಾಲವೇ ಇಲ್ಲಿದೆ. ದಶಕಗಳಿಂದಲೇ ಇಲ್ಲಿ ಗಾಂಜಾ ವಹಿವಾಟು ಎಗ್ಗಿಲ್ಲದೇ ನಡೆಯುತ್ತದೆ. ಗಾಂಜಾ ಮಾರಾಟ ಸೇವನೆ ತಡೆಗಟ್ಟಲು ಪೊಲೀಸ್‌ ಕಮಿಷನರೇಟ್‌ ಏನೂ ಕ್ರಮ ಕೈಗೊಂಡಿಲ್ಲ ಅಂತೇನೂ ಇಲ್ಲ. ಆಗಾಗ ದಾಳಿ ಮಾಡುತ್ತದೆ. ಒಂದಿಷ್ಟು ಜನರನ್ನು ಹಿಡಿದು ಕಂಬಿಯೊಳಗೆ ಕಳುಹಿಸುತ್ತದೆ. ಅವರು ಮತ್ತೆ ಕೆಲ ದಿನಗಳ ಬಳಿಕ ಬಂಧನಕ್ಕೊಳಗಾದವರು ಜಾಮೀನಿನ ಮೇಲೆ ಬಿಡುಗಡೆಯಾಗುತ್ತಾರೆ. ಮತ್ತೆ ತಮ್ಮ ಚಾಳಿಯನ್ನು ಮುಂದುವರಿಸುತ್ತಾರೆ. ಆದರೆ ಯಾವ ಪೊಲೀಸ್‌ ಕಮಿಷನರ್‌ ಕೂಡ ಮಹಾನಗರ ಬರುವಂತಹ ಗಾಂಜಾದ ಮೂಲ ಯಾವುದು? ಬರುವುದ್ಹೇಗೆ? ಎಂಬ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ.

ಆದರೆ ವಾಣಿಜ್ಯನಗರಿಗೆ ಎಲ್ಲಿಂದ ಬರುತ್ತದೆ ಎಂಬ ಪ್ರಶ್ನೆಗೆ ಉತ್ತರ ಹುಡುಕಲು ಪ್ರಯತ್ನಿಸಿದರೆ ದೊಡ್ಡ ಶಾಕ್‌ ಆಗುತ್ತದೆ. ಆಂಧ್ರಪ್ರದೇಶ ಸೇರಿ ವಿವಿಧ ರಾಜ್ಯಗಳಿಂದ ಇಲ್ಲಿಗೆ ಬರುತ್ತದೆ. ಇನ್ನು ಮಹಾರಾಷ್ಟ್ರಕ್ಕೆ ಹೊಂದಿಕೊಂಡಿರುವಂತಹ ಕೆಲ ಗ್ರಾಮಗಳಲ್ಲಿ ಬೆಳೆಯಲಾಗುತ್ತದೆ. ರಾಯಚೂರು, ಬಳ್ಳಾರಿ ಮತ್ತಿತರರ ಗಡಿಯಂಚಿನ ಗ್ರಾಮಗಳಲ್ಲಿ ಬೆಳೆಯುವ ಗಾಂಜಾ ಇಲ್ಲಿಗೆ ಸರಬರಾಜು ಆಗುತ್ತದೆ ಎಂದು ಮೂಲಗಳು ತಿಳಿಸುತ್ತವೆ. ಧಾರವಾಡ ಜಿಲ್ಲೆಯ ಕೆಲ ತಾಲೂಕಿನ ಗಡಿ ಗ್ರಾಮಗಳಲ್ಲೂ ಗಾಂಜಾ ಬೆಳೆಯಲಾಗುತ್ತದೆ.

ಹೇಗೆ ಬರುತ್ತೆ?

ಬಸ್‌, ರೈಲು, ಕಾರು, ಸರಕು ಸಾಗಾಣಿಕೆ ವಾಹನಗಳ ಮೂಲಕ ಇಲ್ಲಿಗೆ ಬರುತ್ತದೆ. ಗಾಂಜಾ ವಾಸನೆ ಬಾರದಂತೆ ಅತ್ಯಂತ ಅಚ್ಚುಕಟ್ಟಾಗಿ ಪ್ಯಾಕ್‌ ಮಾಡಲಾಗಿರುತ್ತದೆ. ಹಾಗೆ ನೋಡಿದರೆ 5, 10, 15, 20 ಹಾಗೂ 25 ಕೆಜಿಯ ಪಾರ್ಸಲ್‌ ಕೂಡ ಬರುತ್ತದೆ. ಇದನ್ನು ಇಲ್ಲಿನ ವ್ಯಕ್ತಿಯೊಬ್ಬ ಪಡೆದುಕೊಳ್ಳುತ್ತಾನಂತೆ. ಆತ ಅದನ್ನು 1 ಅಥವಾ 2 ಕೆಜಿ ಲೆಕ್ಕದಲ್ಲಿ ಮತ್ತೆ ಪ್ರತ್ಯೇಕ ಪ್ಯಾಕ್‌ ಮಾಡಿ ಎಂಟ್ಹತ್ತು ಜನರಿಗೆ ಸರಬರಾಜು ಮಾಡುತ್ತಾನೆ. ಹೀಗೆ ಒಂದೆರಡು ಕೆಜಿ ಪಡೆದವರು ಅದನ್ನು ಗ್ರಾಂಗಳ ಪ್ಯಾಕೆಟ್‌ ಮಾಡುತ್ತಾರೆ. 5 ಗ್ರಾಂ ಅಥವಾ 10 ಗ್ರಾಂಗಳ ಪ್ಯಾಕೆಟ್‌ ಮಾಡಿ ಮಾರಾಟ ಮಾಡಲಾಗುತ್ತದೆ ಎನ್ನುವ ಸುದ್ದಿ ಬಲು ಜೋರಾಗಿದೆ. ಹಿಂದೆ ಪೊಲೀಸರು ದಾಳಿ ನಡೆಸಿದ ವೇಳೆ ಪಾರ್ಸಲ್‌ನಲ್ಲಿ ಆಂಧ್ರಪ್ರದೇಶದಿಂದ ಭಾರೀ ಪ್ರಮಾಣದಲ್ಲಿ ಗಾಂಜಾ ಬಂದಿದ್ದು ಇದಕ್ಕೆಲ್ಲ ಪುಷ್ಠಿ ನೀಡಿದೆ.

ಹೀಗೆ 5 ಅಥವಾ 10 ಗ್ರಾಂಗಳ ಪ್ಯಾಕೆಟ್‌ಗಳೇ ಕಾಲೇಜ್‌ ಅಕ್ಕಪಕ್ಕದ ನಿರ್ಜನ ಪ್ರದೇಶಗಳಲ್ಲಿ ಹಾಗೂ ಇಲ್ಲಿನ ಕೆಲ ಬಡಾವಣೆ ಅಥವಾ ಗಲ್ಲಿಗಳಲ್ಲಿ ಮಾರಾಟವಾಗುತ್ತವೆ. ಇಲ್ಲಿಂದಲೇ ಧಾರವಾಡಕ್ಕೂ ರವಾನೆಯಾಗುತ್ತದೆ. ಕೆಲವೊಂದು ಹಬ್ಬ-ಹರಿದಿನಗಳಲ್ಲಿ ಇದರ ಬೆಲೆಯೂ ದುಪ್ಪಟ್ಟಾಗಿರುತ್ತದೆ.

ದೊಡ್ಡ ದೊಡ್ಡ ಕುಳಗಳು

ಪೊಲೀಸ್‌ ಕಮಿಷನರೇಟ್‌ ಕಳೆದ ಒಂದು ವಾರದಿಂದ ನಿರಂತರವಾಗಿ ಬೇಟೆಯಾಡುತ್ತಿದೆ. ಪಾಳು ಬಿದ್ದ ಕಟ್ಟಡದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ 12 ಜನರನ್ನು, ಅದಕ್ಕಿಂತ ಮೊದಲು 13 ಜನರನ್ನು ಹೀಗೆ ಪದೇ ಪದೇ ದಾಳಿ ನಡೆಸಿ ಬಂಧಿಸುತ್ತಿದೆ. ಇದು ಒಳ್ಳೆಯ ಬೆಳವಣಿಗೆ. ಆದರೆ ಆಳಕ್ಕಿಳಿದು ಗಾಂಜಾ ಎಲ್ಲೆಲ್ಲಿಂದ ಬರುತ್ತದೆ. ಅಲ್ಲಿಂದಲೇ ತಡೆಯುವ ಪ್ರಯತ್ನ ನಡೆಯಬೇಕಿದೆ. ಅಂದ ಹಾಗೆ ಗಾಂಜಾ ಘಮಲಿನ ಹಿಂದೆ ದೊಡ್ಡ ದೊಡ್ಡ ಕುಳಗಳ ಕೈ ಇರುವುದನ್ನು ತಳ್ಳಿಹಾಕುವಂತಿಲ್ಲ. ಅವುಗಳನ್ನು ಪತ್ತೆ ಹಚ್ಚಲು ಕಮಿಷನರೇಟ್‌ ಪ್ರಾಮಾಣಿಕವಾಗಿ ಪ್ರಯತ್ನಿಸಬೇಕಿದೆ.

ಗಾಂಜಾ ಸೇವನೆ ಮಾಡುವವರ ಪರೀಕ್ಷೆಗೊಳಪಡಿಸುವ ಜತೆ ಜತೆಗೆ ಗಾಂಜಾ ಬುಡಕ್ಕೆ ಕೈ ಹಾಕಿ ಬಾರದಂತೆ ತಡೆಯಲು ಕ್ರಮ ಕೈಗೊಳ್ಳಬೇಕು ಎಂಬುದು ನಾಗರಿಕರ ಒತ್ತಾಸೆ.