ಸಾರಾಂಶ
ಮುಂಡರಗಿ: ಬಡವರು ಬಡವರಾಗಿಯೇ ಬದುಕಬಾರದು. ಶಿಕ್ಷಣ ಪಡೆದು ಕಾಯಕ ಮಾಡಿ ಸಂಪಾದನೆ ಮಾಡುತ್ತ ಉತ್ತಮ ಜೀವನ ಕಟ್ಟಿಕೊಳ್ಳಬೇಕು ಎಂದು ಮಾತೋಶ್ರೀ ಕಮಲಮ್ಮ ಹನಮಂತಗೌಡ ಪಾಟೀಲ ಹೇಳಿದರು. ಅವರು ಗುರುವಾರ ಲಿಂಗೈಕ್ಯ ಶರಣ ಎಚ್.ಎಸ್. ಪಾಟೀಲ ಪ್ರತಿಷ್ಠಾನದಿಂದ ಮುಂಡರಗಿ ರಾಮೇನಹಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಯೋಗ ಮತ್ತು ಇತರ ಕ್ರೀಡಾ ಚಟುವಟಿಕೆಗಳಿಗೆ ಪೂರಕವಾಗಿ ಶನಿವಾರದ ಯುನಿಪಾರ್ಮ್ ಟೀಶರ್ಟ್-ಪ್ಯಾಂಟ್ ವಿತರಿಸಿ ಮಾತನಾಡಿದರು. ಮಕ್ಕಳು ತಂದೆ ತಾಯಿಗಳಲ್ಲಿ ಗುರು ಹಿರಿಯರಲ್ಲಿ ಗೌರವ ಭಾವ ಇಟ್ಟುಕೊಳ್ಳಬೇಕು. ದುಶ್ಚಟಗಳಿಗೆ ಬಲಿಯಾಗಬಾರದು. ಯಾವ ಕೆಲಸವೂ ಕೀಳಲ್ಲ. ಮಾಡುವ ಕೆಲಸದಲ್ಲಿ ನಿಷ್ಠೆ, ಪ್ರಾಮಾಣಿಕತೆ ಇರಬೇಕು. ಎಲ್ಲ ಮಕ್ಕಳೂ ಶಿಕ್ಷಣ ಪಡೆದು ಮುಂದುವರೆಯಬೇಕು ಎಂದರು. ಅತಿಥಿಗಳಾಗಿ ಪಾಲ್ಗೊಂಡಿದ್ದ ಪ್ರತಿಷ್ಠಾನದ ಸುಮಂಗಲಾ ಆನಂದಗೌಡ ಪಾಟೀಲ ಮಾತನಾಡಿ, ಬಹುತೇಕ ಡಿಸಿ, ಎಸಿ, ತಹಸೀಲ್ದಾರ್ ಮೊದಲಾದ ಉನ್ನತ ಹುದ್ದೆಯಲ್ಲಿರುವವರು ಸರಕಾರಿ ಶಾಲೆಯಲ್ಲಿಯೇ ಓದಿ ಬಂದವರು. ಇಂಥ ಉತ್ತಮ ಪರಿಸರದ ಶಾಲೆ, ಉತ್ತಮ ಶಿಕ್ಷಕರು ನಿಮಗೆ ದೊರೆತಿದ್ದು, ಅದನ್ನು ಸದುಪಯೋಗ ಮಾಡಿಕೊಂಡು ನಿರಂತರ ಪ್ರಯತ್ನದಿಂದ ಉನ್ನತವಾಗಿ ಬೆಳೆದು ನಿಲ್ಲಬೇಕು. ಪ್ರತಿಷ್ಠಾನದ ಮೂಲಕ ನಮ್ಮ ಕುಟುಂಬ ಈ ಶಾಲೆಗೆ ಸದಾ ಬೆಂಬಲವಾಗಿರುತ್ತದೆ ಎಂದರು. ಶಾಲಾ ಮುಖ್ಯೋಪಾಧ್ಯಾಯ ಡಾ. ನಿಂಗು ಸೊಲಗಿ ಮಾತನಾಡಿ, ಎಚ್.ಎಸ್. ಪಾಟೀಲರು ಶರಣರ ತತ್ವಾದರ್ಶಗಳ ಮೆಲೆ ನಂಬಿಕೆ ಇಟ್ಟಿದ್ದವರು. ಸಮಾಜಮುಖಿಯಾಗಿದ್ದವರು. ಹಾಗಾಗಿ ಆ ಕುಟುಂಬ ಅವರ ಹೆಸರಿನಲ್ಲಿ ಪ್ರತಿಷ್ಠಾನ ಸ್ಥಾಪಿಸಿ ಸಮಾಜ ಮುಖಿ ಕಾರ್ಯ ಮಾಡುತ್ತಿದ್ದಾರೆ. ಕಳೆದ ವರ್ಷ ಪ್ರತಿಷ್ಠಾನವು ನಮ್ಮ ಶಾಲೆಯೂ ಸೇರಿದಂತೆ ತಾಲೂಕಿನ ಎರಡು ಶಾಲೆಯ ಎಲ್ಲ ವರ್ಗದ ಕೋಣೆಗಳಿಗೆ ಸೂಕ್ತ ಕಲಿಕಾ ವಾತಾವರಣಕ್ಕೆ ಪೂರಕವಾಗಿ ಪೇಂಟಿಂಗ್ ಹಾಗೂ ಚಿತ್ರಕಲೆ ಮಾಡಿಸಿತ್ತು. ಈ ವರ್ಷ ನಮ್ಮ ಶಾಲಾ ಮಕ್ಕಳ ಅಭಿಲಾಷೆಯಂತೆ ನಮ್ಮ ಶಾಲೆಯ 120 ಮಕ್ಕಳೂ ಸೇರಿ ತಾಲೂಕಿನ ಐದು ಶಾಲೆಯ 1000 ಮಕ್ಕಳಿಗೆ ಸರ್ವಾಂಗ ಸುಂದರ ವ್ಯಾಯಾಮಕ್ಕೆ ಪೂರಕವಾಗಿ ಶನಿವಾರದ ಸಮವಸ್ತ್ರ ವಿತರಿಸುವ ಮೂಲಕ ಅಭಿನಂದನಾರ್ಹ ಕಾರ್ಯ ಮಾಡುತ್ತಿದ್ದಾರೆ. ಈ ರೀತಿ ಸಮುದಾಯದ ಪಾಲ್ಗೊಳ್ಳುವಿಕೆಯಿಂದ ಸರಕಾರಿ ಶಾಲೆಗಳು ಸರ್ವಾಂಗೀಣ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ ಎಂದ ಅವರು ಶಾಲೆಯ ಅಭಿವೃದ್ಧಿಗೆ ಸಹಕರಿಸಿದ ರಾಮೇನಹಳ್ಳಿಯ ಜನತೆಯ ಕಾರ್ಯವನ್ನು ಶ್ಲಾಘಿಸಿದರು. ಈ ಸಂದರ್ಭದಲ್ಲಿ ಪುರಸಭೆಯ ಸದಸ್ಯೆ ದೆವಕ್ಕ ಮಂಜಪ್ಪ ದಂಡಿನನ, ಎಸ್.ಡಿ.ಎಂ.ಸಿ. ಸದಸ್ಯರಾದ ಗಂಗಮ್ಮ ಹಲವಾಗಲಿ, ನಿಂಗಪ್ಪ ಮೇಗಳಮನಿ, ಪರಮೇಶ ದಂಡಿನ, ಪ್ರತಿಷ್ಠಾನದ ವೀಣಾ ಲಿಂಗರಾಜಗೌಡ ಪಾಟೀಲ, ಜ್ಯೋತಿ ಪ್ರಕಾಶಗೌಡ ಪಾಟೀಲ, ಲತಾ ಮಂಜುನಾಥಗೌಡ ಪಾಟೀಲ, ಎಂ.ಆರ್. ಗುಗ್ಗರಿ, ಶಿವಲೀಲಾ ಅಬ್ಬಿಗೇರಿ, ರಾಘವೇಂದ್ರ ದಂಡಿನ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಮಹೇಶ ಬಾಗಳಿ ಅಧ್ಯಕ್ಷತೆ ವಹಿಸಿದ್ದರು. ಪಿ.ಆರ್. ಗಾಡದ ಸ್ವಾಗತಿಸಿ, ಪಿ.ಎಂ. ಲಾಂಡೆ ನಿರೂಪಿಸಿದರು. ಬಿ.ಎಚ್. ಹಲವಾಗಲಿ ವಂದಿಸಿದರು.