ಅಂಚೆ ಕಚೇರಿಗೆ ಹಿಡಿದಿದೆ ಸರ್ವರ್ ಡೌನ್ ಗ್ರಹಣ!

| Published : Aug 07 2025, 12:45 AM IST

ಸಾರಾಂಶ

ದಾವಣಗೆರೆ ಪ್ರಧಾನ ಅಂಚೆ ಕಚೇರಿ ಸೇರಿದಂತೆ ಯಾವುದೇ ಅಂಚೆ ಕಚೇರಿಗಳಲ್ಲೂ ಕೆಲಸ, ಕಾರ್ಯಗಳು ಸರಾಗವಾಗಿ ಸಾಗುತ್ತಿಲ್ಲ. ಕಾರಣ ಸರ್ವರ್ ಡೌನ್... ಸರ್ವರ್‌ ಡೌನ್‌. ಈ ಸಮಸ್ಯೆಯಿಂದ ಜನಸಾಮಾನ್ಯರು, ವಿದ್ಯಾರ್ಥಿಗಳು, ನೌಕರಸ್ಥರು, ವಕೀಲರಿಗೆ ಇನ್ನಿಲ್ಲದಂತಹ ತೊಂದರೆ ಆಗುತ್ತಿದೆ.

- ಗಂಟೆಗಟ್ಟಲೆ ಗ್ರಾಹಕರು ಕಾದರೂ ಸಮಸ್ಯೆ ಪರಿಹಾರ ಮಾತ್ರ ಶೂನ್ಯ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ದಾವಣಗೆರೆ ಪ್ರಧಾನ ಅಂಚೆ ಕಚೇರಿ ಸೇರಿದಂತೆ ಯಾವುದೇ ಅಂಚೆ ಕಚೇರಿಗಳಲ್ಲೂ ಕೆಲಸ, ಕಾರ್ಯಗಳು ಸರಾಗವಾಗಿ ಸಾಗುತ್ತಿಲ್ಲ. ಕಾರಣ ಸರ್ವರ್ ಡೌನ್... ಸರ್ವರ್‌ ಡೌನ್‌. ಈ ಸಮಸ್ಯೆಯಿಂದ ಜನಸಾಮಾನ್ಯರು, ವಿದ್ಯಾರ್ಥಿಗಳು, ನೌಕರಸ್ಥರು, ವಕೀಲರಿಗೆ ಇನ್ನಿಲ್ಲದಂತಹ ತೊಂದರೆ ಆಗುತ್ತಿದೆ.

ಅಂಚೆ ಗ್ರಾಹಕರಿಗೆ ಸಕಾಲಕ್ಕೆ ತ್ವರಿತ ಸೇವೆ ಸಿಗುತ್ತಿಲ್ಲ. ಗಂಟೆಗಟ್ಟಲೇ ಅಂಚೆ ಕಚೇರಿಗಳ ಕೌಂಟರ್‌ಗಳ ಮುಂದೆ ಜನತೆ ಹಾಗೂ ಅಂಚೆ ಸಿಬ್ಬಂದಿ ಸರ್ವರ್‌ಗಾಗಿ ಕಾಯುವಂತಾಗುತ್ತಿದೆ. ಇಲ್ಲಿ ಪ್ರತಿ ದಿನವೂ ಸರ್ವರ್ ಡೌನ್ ಎಂಬ ಸಿದ್ಧ ಉತ್ತರ ಬರುತ್ತಿದೆ ಎಂಬ ದೂರುಗಳು ಕೇಳಿಬರುತ್ತಿವೆ.

ನ್ಯಾಯಾಲಯದ ಪ್ರಕರಣಗಳಿಗೆ ಸಂಬಂಧಿಸಿದಂತೆ ದಾಖಲೆಗಳನ್ನು ಕಳಿಸಲು ಅಂಚೆ ಇಲಾಖೆಯ ಸೇವೆಯನ್ನೇ ಅನಿವಾರ್ಯವಾಗಿ ಬಳಸಬೇಕಾದ ನಾಗರೀಕರು, ವಕೀಲರು, ಸಂಘ-ಸಂಸ್ಥೆ, ಉದ್ಯಮ, ಕಂಪನಿಗಳು, ತಮ್ಮ ಅಮೂಲ್ಯ ಮತ್ತು ಬೆಲೆ ಬಾಳುವ ವಸ್ತುಗಳನ್ನು ರಿಜಿಸ್ಟರ್ಡ್ ಪಾರ್ಸೆಲ್ ಕಳಿಸಲು, ಉದ್ಯೋಗಕ್ಕೆ ಅರ್ಜಿ ಸಲ್ಲಿಸುವವರು ಭಾರತೀಯ ಅಂಚೆ ಇಲಾಖೆಯೇ ಯೋಗ್ಯವೆಂದು ನಂಬಿದವರ ಪರದಾಟ ಹೇಳತೀರದಾಗಿದೆ.

ಅಲ್ಲದೇ, ಅಂಚೆ ಕಚೇರಿಗಳಲ್ಲಿ ಉಳಿತಾಯ ಖಾತೆಗಳನ್ನು ಹೊಂದಿರುವ, ಅದರಲ್ಲಿ ವ್ಯವಹರಿಸುತ್ತಿರುವವರು, ಅಂಚೆ ಇಲಾಖೆ ಮೇಲೆ ಅಪರಿಮಿತ ನಂಬಿಕೆ ಇಟ್ಟುಕೊಂಡು, ವಿಶ್ರಾಂತ ಜೀವನಕ್ಕೆ ಉಳಿತಾಯ ಮಾಡಿಕೊಂಡು ಜೀವನ ನಡೆಸುತ್ತಿರುವ ಹಿರಿಯ ನಾಗರೀಕರು ಸರದಿ ಸಾಲಿನಲ್ಲಿ ನಿಂತುಕೊಂಡೇ ನಿಸ್ತೇಜರಾಗುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.

ಅಂಚೆ ಕಚೇರಿಗಳಲ್ಲಿ ಜೀವವಿಮೆ ಮಾಡಿಸಿದವರು ಸಕಾಲದಲ್ಲಿ ಪ್ರೀಮಿಯಂ ಹಣ ಪಾವತಿಸಲು ಪರದಾಡುವಂತಾಗಿದೆ. ಇತ್ತೀಚೆಗೆ ಅಂಚೆ ಸೇವೆ ಉನ್ನತೀಕರಣಗೊಳಿಸಿರುವುದಾಗಿ ಇಲಾಖೆ ಹೇಳುತ್ತಿದೆ. ಆದರೆ, ಗ್ರಾಹಕರಿಗೆ ಸಿಗುತ್ತಿರುವ ಸೇವೆ ಮಾತ್ರ ಕಳಪೆ, ನಿರಾಶಾದಾಯಕವಾಗಿದೆ. ಅಂಚೆ ಸೇವೆ ವ್ಯವಸ್ಥೆಯ ಉನ್ನತೀಕರಣದ ನಂತರ ಈವರೆಗೆ ಕೇವಲ ದಕ್ಷಿಣ ಭಾರತಕ್ಕೆ ಬಳಸುತ್ತಿದ್ದ ಈ ಅಂತರ್ಜಾಲದ ಸೇವೆಗಳನ್ನು ಉತ್ತರ ಭಾರತವೂ ಬಳಸುತ್ತಿರುವುದರಿಂದ ಸಮಸ್ಯೆ ಸೃಷ್ಟಿಯಾಗಿದೆ ಎಂಬುದು ಇಲಾಖೆಯ ಕೆಲವರ ಹೇಳಿಕೆಯಾಗಿದೆ.

- - -

(ಕೋಟ್‌) ಪರ ಊರುಗಳಿಂದ ಬಂದವರು ಸರದಿಯಲ್ಲಿ ಕಾದುಕಾದು ಸಹನೆಯ ಕಟ್ಟಿಯೊಡೆದು, ಅಂಚೆ ಇಲಾಖೆಯ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ. ನ್ಯಾಯಾಲಯ ಪ್ರಕರಣಗಳ ಸಂಬಂಧ ರಿಜಿಸ್ಟರ್ಡ್ ಅಂಚೆ ಮೂಲಕ ನೋಟಿಸ್ ಕಳಿಸಲು ದಿನವಿಡೀ ಕಾದರೂ ಸಾಧ್ಯವಾಗಿಲ್ಲ. ಅಂಚೆ ಇಲಾಖೆ ಶೀಘ್ರ ಸಮಸ್ಯೆ ಪರಿಹರಿಸಲು ಮುಂದಾಗಬೇಕು.

- ಕೆ.ಸಿ.ನಾಗರಾಜ, ಹಿರಿಯ ವಕೀಲ, ತೆರಿಗೆ ಸಲಹೆಗಾರ.

- - -

-6ಕೆಡಿವಿಜಿ3:

ದಾವಣಗೆರೆ ಪ್ರಧಾನ ಅಂಚೆ ಕಚೇರಿಯಲ್ಲಿ ಸರ್ವರ್ ಡೌನ್ ಸಮಸ್ಯೆಯಿಂದಾಗಿ ಜನರು ಅಂಚೆ ಸೇವೆ ಸದುಪಯೋಗಕ್ಕೆ ಕಾದು ನಿಂತಿರುವುದು.