ಸಾರಾಂಶ
ಬಿಂದುಮಾಧವ ಮಣ್ಣೂರ
ಕನ್ನಡಪ್ರಭ ವಾರ್ತೆ ಅಫಜಲ್ಪುರ ಬೇಸಿಗೆಯಲ್ಲಿ ಬಿಸಿಗಾಳಿಗೆ ತತ್ತರಿಸಿದ್ದ ತಾಲೂಕಿನ ಕೃಷಿಕರ ಬದುಕು ವಾರದಲ್ಲಿ ಬದಲಾಗಿದೆ. ಕುಡಿಯುವ ನೀರಿಗೂ ತತ್ವಾರ ಉಂಟಾಗಿದ್ದ ಗ್ರಾಮೀಣ ಪ್ರದೇಶದ ಜಲಮೂಲಗಳಲ್ಲಿ ನೀರು ಕಾಣಿಸಿಕೊಂಡಿದೆ. ಕೃತಿಕಾ ಮಳೆ ಇಳೆಯನ್ನು ತಂಪಾಗಿಸಿದ್ದು, ಬರದ ಬವಣೆಯನ್ನು ದೂರ ಮಾಡಿದೆ.ಕಳೆದ ವರ್ಷ ಮುಂಗಾರು ಮತ್ತು ಹಿಂಗಾರು ಹಂಗಾಮಿನಲ್ಲಿ ಉಂಟಾಗಿದ್ದ ಮಳೆಯ ಕೊರತೆಯ ಪರಿಣಾಮ ತಾಲೂಕಿನಲ್ಲಿ ಭೀಕರ ಸಮಸ್ಯೆ ಉಂಟಾಗಿತ್ತು.
ಬೇಸಿಗೆಯಲ್ಲಿ ಜನ ಮತ್ತು ಜಾನುವಾರು ಕುಡಿಯುವ ನೀರಿಗೂ ಪರಿತಪಿಸುವಂತಾಗಿತ್ತು. ಕೊಳವೆಬಾವಿಗಳು ಬತ್ತಿದ ಪರಿಣಾಮವಾಗಿ ಕಬ್ಬು ಬಾಳೆ, ತೋಟಗಳು ಒಣಗಿ ಬರದ ತೀವ್ರತೆಯನ್ನು ಸಾರುತ್ತಿದ್ದವು. ಒಂದು ವಾರದಿಂದ ಸುರಿದ ಮುಂಗಾರು ಪೂರ್ವ ಮಳೆ ಈ ಸಮಸ್ಯೆಗಳನ್ನು ನಿವಾರಿಸಿದೆ. ತಾಲೂಕಿನಾದ್ಯಂತ ಉತ್ತಮವಾಗಿ ಮಳೆ ಸುರಿದಿದ್ದರಿಂದ ಕೃಷಿ ಚಟುವಟಿಕೆ ಗರಿಗೆದರಿದೆ.ಮುಂಗಾರು ಬಿತ್ತನೆಗೆ ಭೂಮಿ ಹದ ಮಾಡಿಕೊಳ್ಳುವಲ್ಲಿ ರೈತರು ಉತ್ಸುಕತೆ ತೋರುತ್ತಿದ್ದಾರೆ. ನಿತ್ಯ ನೀರು ಎತ್ತುತ್ತಿದ್ದ ಕೊಳವೆಬಾವಿಗಳು ತಾತ್ಕಾಲಿಕವಾಗಿ ಕೆಲಸ ನಿಲ್ಲಿಸಿವೆ.ಜಮೀನುಗಳಲ್ಲಿ ಜೋಡೆತ್ತು ಬೇಸಾಯ, ಟ್ರ್ಯಾಕ್ಟರ್ ಸದ್ದು ಕೇಳತೊಡಗಿದೆ. ಬಿತ್ತನೆಯ ಕಡೆ ರೈತರ ಚಿತ್ತ ಹರಿದಿದೆ.
ತಾಲೂಕಿನಲ್ಲಿ ಉದ್ದು , ಹೆಸರು, ಸೋಯಾಬಿನ್, ಸಜ್ಜೆ ಬಿತ್ತನೆಗೆ ರೈತರು ಭೂಮಿ ಸಜ್ಜುಗೊಳಿಸುತ್ತಿದ್ದಾರೆ. ಹತ್ತಿ, ಸೂರ್ಯಕಾಂತಿ, ಈರುಳ್ಳಿ ಬಿತ್ತನೆ ಕೂಡ ಮೇ ತಿಂಗಳಲ್ಲಿಯೇ ಶುರುವಾಗುತ್ತದೆ. ಮಳೆ ಬಿದ್ದಿರುವುದು ರೈತರಲ್ಲಿ ಹುಮ್ಮಸ್ಸು ಮೂಡಿಸಿದೆ. ಸಾಮಾನ್ಯವಾಗಿ ಈ ಬೆಳೆಗಳನ್ನು ರೋಹಿಣಿ ಮಳೆಯಲ್ಲಿ ಬಿತ್ತಲಾಗುತ್ತದೆ. ಕೃತಿಕಾ ಮಳೆ ನಿರೀಕ್ಷೆ ಮೀರಿ ಸುರಿದಿದ್ದರಿಂದ ಬಿತ್ತನೆಗೆ ಭೂಮಿ ಸಿದ್ಧಪಡಿಸಿಕೊಳ್ಳಲು ಅನುಕೂಲವಾಗಿದೆ. ನಿಗದಿತ ಅವಧಿಯಲ್ಲಿ ಬಿತ್ತನೆ ಮುಗಿದರೆ ಇಳುವರಿ ಚೆನ್ನಾಗಿ ಬರುತ್ತದೆ ಎಂಬುದು ರೈತರ ಬಲವಾದ ನಂಬಿಕೆ.ಬೇಸಿಗೆ ಬಿಸಿಲಿನಲ್ಲಿ ತೋಟಗಾರಿಕೆ ಬೆಳೆ ಉಳಿಸಿಕೊಳ್ಳಲು ರೈತರು ಸಾಕಷ್ಟು ಶ್ರಮಿಸಿದರು. ಏರುತ್ತಿದ್ದ ತಾಪಮಾನ, ಬಿಸಿಗಾಳಿ ಬೆಳೆಯನ್ನು ಇನ್ನಷ್ಟು ಕುಗ್ಗಿಸಿತ್ತು. ಮಳೆ ಕಾಣಿಸಿಕೊಳ್ಳದೇ ಬೇಸಿಗೆ ಧಗೆ ಮುಂದುವರಿದಿದ್ದರೆ ತೋಟಗಾರಿಕೆ ಬೆಳೆಗಳಿಗೆ ಇನ್ನಷ್ಟು ಹಾನಿ ಆಗುತ್ತಿತ್ತು.
ವರುಣನ ಕೃಪೆಯಿಂದಾಗಿ ರೈತರು ಸಂಕಷ್ಟದಿಂದ ಪಾರಾಗಿದ್ದಾರೆ. ಹದವಾಗಿ ಸುರಿದ ಮುಂಗಾರುಪೂರ್ವ ಮಳೆಯಿಂದ ಸಂತಸಗೊಂಡಿರುವ ರೈತರು ಲವಲವಿಕೆಯಿಂದ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾರೆ. ಕಳೆದ ವರ್ಷ ಸಕಾಲಕ್ಕೆ ಮಳೆಯಿಲ್ಲದೆ ರೈತರು ಬೆಳೆ ನಷ್ಟಕ್ಕೆ ಒಳಗಾಗಿ ಸಂಕಷ್ಟದಲ್ಲಿದ್ದರು. ಸುಡು ಬಿಸಿಲಿನ ತಾಪಕ್ಕೆ ಜನ– ಜಾನುವಾರುಗಳಿಗೆ ನೀರು ಮೇವಿನ ಕೊರತೆ ಎದುರಾಗಿ ಗಾಯದ ಮೇಲೆ ಬರೆ ಎಳೆದಂತಾಗಿತ್ತು. ಆದರೆ ಕಳೆದ ಒಂದು ವಾರದಿಂದ ಹದ ಮಳೆ ಸುರಿದಿದ್ದರಿಂದ ಹಳ್ಳ ಕೊಳ್ಳಗಳು ಕೃಷಿ ಹೊಂಡಗಳಲ್ಲಿ ನೀರು ಸಂಗ್ರಹವಾಗಿದೆ.ಜಮೀನುಗಳಲ್ಲಿ ತೇವಾಂಶ ಹೆಚ್ಚಾದ ಹಿನ್ನೆಲೆಯಲ್ಲಿ ರೈತರು ಹೊಸ ಹುರುಪಿನೊಂದಿಗೆ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾರೆ. ಬಹುತೇಕ ರೈತರು ಟ್ರ್ಯಾಕ್ಟರ್ ಮತ್ತು ಎತ್ತುಗಳಿಂದ ಮಾಗಿ ಬೇಸಾಯಕ್ಕೆ ಮುಂದಾಗಿದ್ದಾರೆ.
ಅದರಲ್ಲೂ ಕೃತಿಕಾ ಮಳೆ ಸುರಿದಿದ್ದರಿಂದ ಜಮೀನುಗಳಲ್ಲಿ ಹಸಿ ಇದೆ. ಈ ಮಳೆಗಳಿಗೆ ಕರಜಗಿ ಹೋಬಳಿ ವ್ಯಾಪ್ತಿಯ ರೈತರು ಭೂಮಿಯನ್ನು ಸಿದ್ಧಗೊಳಿಸುತ್ತಿದ್ದಾರೆ.ರೋಹಿಣಿ, ಮೃಗಶಿರ, ಮತ್ತು ಆರಿದ್ರಾ ಮಳೆಗೆ ಬಿತ್ತನೆ ಕಾರ್ಯಕ್ಕೆ ಮುಂದಾಗುತ್ತಾರೆ. ಶೇಂಗಾ, ಹತ್ತಿ, ಸೂರ್ಯಕಾಂತಿ ಬಿತ್ತನೆಗೆ ಸಿದ್ಧತೆ ನಡೆಸಿದರೆ ಈ ಭಾಗದ ರೈತರು ತೊಗರಿಯನ್ನು ಬಿತ್ತುತ್ತಾರೆ. ವಾರದಿಂದ ಸುರಿದ ಮಳೆಗೆ ಅಂತರ್ಜಲ ಮಟ್ಟ ಹೆಚ್ಚಾಗುವ ವಿಶ್ವಾಸ ಮೂಡಿದೆ. ನೀರಾವರಿ ಪ್ರದೇಶದಲ್ಲಿ ಈರುಳ್ಳಿ ಬೆಳೆಯಲು ರೈತರು ಮುಂದಾಗಿದ್ದಾರೆ.