ಸಾರಾಂಶ
ಕನ್ನಡಪ್ರಭ ವಾರ್ತೆ ರಾಮನಗರ
ಅಂತಾರಾಷ್ಟ್ರೀಯ ಯೋಗ ದಿನದ ಹಿನ್ನೆಲೆಯಲ್ಲಿ ಲೈಫ್ ಎಟರ್ನಲ್ ಟ್ರಸ್ಟ್ ನ ಸಹಯೋಗದಲ್ಲಿ ಸಹಜ ಯೋಗ ಸಂಸ್ಥೆಯು ಸಾರ್ವಜನಿಕರಲ್ಲಿ ಯೋಗ ಕುರಿತು ಜಾಗೃತಿ ಮೂಡಿಸಲು ಹಾಗೂ ಧ್ಯಾನದ ಮಹತ್ವ ತಿಳಿಸಿಕೊಡಲು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಸಂಚರಿಸಲು ಸಿದ್ಧವಾಗಿರುವ ಮೊಬೈಲ್ ವಾಹನಕ್ಕೆಸಂಸದ ಡಾ. ಸಿ.ಎನ್. ಮಂಜುನಾಥ್ ಚಾಲನೆ ನೀಡಿದರು.
ಬೆಂಗಳೂರಿನ ಪದ್ಮನಾಭನಗರದಲ್ಲಿ ಮೊಬೈಲ್ ವಾಹನಕ್ಕೆ ಚಾಲನೆ ನೀಡಿದ ಅವರು, ಯೋಗವೊಂದು ಉತ್ತಮ ಆರೋಗ್ಯದ ಕೈಪಿಡಿ, ಯೋಗವನ್ನು ಅಳವಡಿಸಿಕೊಂಡರೆ ಆರೋಗ್ಯಯುತ ಜೀವನವನ್ನು ಕಾಣಬಹುದು, ಯೋಗ ಎನ್ನುವುದು ಪ್ರಾಚೀನ ಕಾಲದಿಂದಲೂ ನಡೆದುಕೊಂಡು ಬಂದ ಆಧ್ಯಾತ್ಮಿಕ ಮತ್ತು ವೈಜ್ಞಾನಿಕ ಪ್ರಕ್ರಿಯೆ. ಏಕೆಂದರೆ ಔಷಧ ಅಲ್ಲದ ಔಷಧಿಯ ಗುಂಪಿನ ಪಟ್ಟಿಯಲ್ಲಿ ಯೋಗ ಮತ್ತು ಧ್ಯಾನ ಸೇರುತ್ತವೆ. ಈ ಆಧುನಿಕ ತಂತ್ರಜ್ಞಾನ ಮತ್ತು ಡಿಜಿಟಲೀಕರಣ ಕಾಲಘಟ್ಟದಲ್ಲಿ ನಾವು ಯಂತ್ರಗಳಂತೆ ಕಾರ್ಯನಿರ್ವಹಿಸುತ್ತಿದ್ದೇವೆ. ಇಂತಹ ಸಂದರ್ಭದಲ್ಲಿ ಯೋಗ ಮತ್ತು ಧ್ಯಾನ ಮಾಡುವ ಮೂಲಕ ನಮ್ಮ ಮನಸ್ಸಿಗೆ ನೆಮ್ಮದಿ ಕಂಡುಕೊಳ್ಳಬಹುದು ಎಂದರು.ಮನಸ್ಸು, ಮೆದುಳು ಹಾಗೂ ದೇಹವನ್ನು ಒಗ್ಗೂಡಿಸುವ ಗಂಗೋತ್ರಿಯೆಂದರೆ ಅದು ಯೋಗ. ಲೈಫ್ ಎಟರ್ನಲ್ ಟ್ರಸ್ಟ್ ನ ಸಹಯೋಗದಲ್ಲಿ ಮಾತಾಜಿ ನಿರ್ಮಲಾದೇವಿಯವರ ಸಹಜ ಯೋಗ ಸಂಸ್ಥೆಯ ಸದಸ್ಯರು ಯೋಗದ ಕುರಿತು ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮೊಬೈಲ್ ವ್ಯಾನ್ ಸೇವೆಗೆ ಮುಂದಾಗಿರುವುದು ಶ್ಲಾಘನೀಯ ಎಂದು ಹೇಳಿದರು.
ನಾವು ನಮ್ಮ ದಿನಚರಿಯಲ್ಲಿ ಯೋಗವನ್ನು ಅಳವಡಿಸಿಕೊಳ್ಳಬೇಕು. ಯೋಗ ಮಾಡುವುದರಿಂದ ಹೃದಯದ ಆರೋಗ್ಯ, ಸಕ್ಕರೆ ಕಾಯಿಲೆ ನಿಯಂತ್ರಣ ಸೇರಿದಂತೆ ಹಲವಾರು ಲಾಭಗಳಿವೆ. ಇಂದು ಜೀವನಶೈಲಿಯ ಆಧಾರಿತ ಕಾಯಿಲೆಗಳಿಂದ ಭಾರತದಲ್ಲಿ ಶೇ.60ರಷ್ಟು ಜನ ಸಾವನ್ನಪ್ಪುತ್ತಿದ್ದಾರೆ. ಈ ಹಿನ್ನೆಲೆ ಎಲ್ಲರೂ ಸಂತೃಪ್ತಿ, ಮನಃಶಾಂತಿಯನ್ನು ಹುಡುಕುತ್ತಿದ್ದಾರೆ. ಯೋಗದಿಂದ ಏಕಾಗ್ರತೆ ಸಿಗಲಿದೆ, ಹೃದಯದ ಬಡಿತ ಹಿಡಿತಕ್ಕೆ ಬರಲಿದೆ.ಹೃದಯದ ಬಡಿತ ನಿಯಂತ್ರಣದಲ್ಲಿದ್ದಷ್ಟು ಹೆಚ್ಚು ಕಾಲ ಬದುಕಬಹುದು. ಹಾಗಾಗಿ ಯೋಗವನ್ನು ನಮ್ಮ ದಿನಚರಿಯಲ್ಲಿ ಅಳವಡಿಸಿಕೊಳ್ಳಬೇಕು. ಈ ಪರಿಸರದಲ್ಲಿ ಒಂದು ಡಜನ್ ಔಷಧವಲ್ಲದ ಔಷಧಗಳಿವೆ. ಅವುಗಳೆಂದರೆ ಬಿಸಿಲಿನಲ್ಲಿ ಕಾಲ ಕಳೆಯುವುದು, ವ್ಯಾಯಾಮ, ಆಗಾಗ್ಗೆ ಉಪವಾಸ, ನಿದ್ದೆ, ನಗು, ಕೃತಜ್ಞತೆ, ಸ್ನೇಹ ಬಳಗವನ್ನು ಕಟ್ಟಿಕೊಳ್ಳುವಂಥದ್ದು, ಇತರರೊಂದಿಗೆ ಮಾತುಕತೆ, ತರಕಾರಿ ಹಾಗೂ ಹಣ್ಣುಗಳ ಸೇವನೆ, ಯೋಗ, ಧ್ಯಾನ ಮತ್ತು ನಡಿಗೆ. ಯೋಗವನ್ನು ನಮ್ಮ ದಿನಚರಿಯಲ್ಲಿ ಅಳವಡಿಸಿಕೊಳ್ಳುವುದರಿಂದ ಉತ್ತಮ ಆರೋಗ್ಯವನ್ನು ಕಂಡುಕೊಳ್ಳಬಹುದು. ಆರೋಗ್ಯಕ್ಕಾಗಿ ಯೋಗ, ಆರೋಗ್ಯಕ್ಕಾಗಿ ಧ್ಯಾನ ಎಂದು ತಿಳಿಸಿದರು.
ಹಳ್ಳಿಹಳ್ಳಿಗೂ ಯೋಗವನ್ನು ಪ್ರಚಾರಮಾಡುವ ಸಲುವಾಗಿ ಮೊಬೈಲ್ ವ್ಯಾನ್ ಗೆ ಚಾಲನೆ ನೀಡಲಾಗಿದೆ. ಧ್ಯಾನದಿಂದ ಆರೋಗ್ಯ, ಧ್ಯಾನದಿಂದ ನೆಮ್ಮದಿ, ಧ್ಯಾನದಿಂದಲೇ ಮಾನಸಿಕ, ದೈಹಿಕ, ಆಧ್ಯಾತ್ಮ ಬಾಧೆಗಳು ಕಾಲಕ್ರಮೇಣ ನಿವಾರಣೆಯಾಗುವುದರ ಜೊತೆಗೆ ಪ್ರೀತಿಯನ್ನು ಹಂಚುವ ಕೆಲಸವನ್ನು ಮಾಡುತ್ತದೆ ಎಂದು ಮಂಜುನಾಥ್ ಹೇಳಿದರು.ಲೈಫ್ ಎಟರ್ನಲ್ ಟ್ರಸ್ಟ್ ನ ಅಧ್ಯಕ್ಷರಾದ ಡಾ. ಮನೋಜ್ ಕುಮಾರ್, ಸಹಜ ಯೋಗ ಸಂಸ್ಥೆಯ ಸದಸ್ಯರು ಹಾಜರಿದ್ದರು.