ಸಾರಾಂಶ
ಕನ್ನಡಪ್ರಭವಾರ್ತೆ ಬಸವನಬಾಗೇವಾಡಿ ಪುರಸಭೆ ಅಧ್ಯಕ್ಷೆ ಜಗದೇವಿ ಗುಂಡಳ್ಳಿ ಅವರು ಆಡಳಿತ ಪಕ್ಷದ ಕೆಲ ಸದಸ್ಯರ ವಿಶ್ವಾಸ ಪಡೆಯದೇ ಏಕಪಕ್ಷೀಯ ನಿರ್ಧಾರ ಕೈಗೊಳ್ಳುತ್ತಿದ್ದಾರೆ. ಇದರಿಂದಾಗಿ ಪಟ್ಟಣದ ಅಭಿವೃದ್ಧಿಗೆ ಹಿನ್ನೆಡೆಯಾಗುತ್ತಿದೆ ಎಂದು ಪುರಸಭೆ ಉಪಾಧ್ಯಕ್ಷ ಅಶೋಕ ಹಾರಿವಾಳ ಆರೋಪಿಸಿದರು
ಕನ್ನಡಪ್ರಭವಾರ್ತೆ ಬಸವನಬಾಗೇವಾಡಿ
ಪುರಸಭೆ ಅಧ್ಯಕ್ಷೆ ಜಗದೇವಿ ಗುಂಡಳ್ಳಿ ಅವರು ಆಡಳಿತ ಪಕ್ಷದ ಕೆಲ ಸದಸ್ಯರ ವಿಶ್ವಾಸ ಪಡೆಯದೇ ಏಕಪಕ್ಷೀಯ ನಿರ್ಧಾರ ಕೈಗೊಳ್ಳುತ್ತಿದ್ದಾರೆ. ಇದರಿಂದಾಗಿ ಪಟ್ಟಣದ ಅಭಿವೃದ್ಧಿಗೆ ಹಿನ್ನೆಡೆಯಾಗುತ್ತಿದೆ ಎಂದು ಪುರಸಭೆ ಉಪಾಧ್ಯಕ್ಷ ಅಶೋಕ ಹಾರಿವಾಳ ಆರೋಪಿಸಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪುರಸಭೆಯ ೧೫ನೇ ಹಣಕಾಸು, ನಗರೋತ್ಥಾನ ಯೋಜನೆ ಸೇರಿ ವಿವಿಧ ಯೋಜನೆಗಳಲ್ಲಿ ಪುರಸಭೆಯ ಕೆಲ ವಾರ್ಡ್‌ಗಳಲ್ಲಿ ಅಪೂರ್ಣ ಕಾಮಗಾರಿ ಮತ್ತು ಅನುದಾನ ಬಿಡುಗಡೆಯಲ್ಲಿ ತಾರತಮ್ಯವಾಗಿದೆ. ಆಡಳಿತ ಪಕ್ಷಕ್ಕಿಂತ ವಿರೋಧ ಪಕ್ಷದವರನ್ನು ಹೆಚ್ಚು ವಿಶ್ವಾಸಕ್ಕೆ ತೆಗೆದುಕೊಳ್ಳಲಾಗುತ್ತಿದೆ. ಪುರಸಭೆಯಲ್ಲಿ ಲಂಚವಿಲ್ಲದೇ ಯಾವುದೇ ಕೆಲಸಗಳು ಆಗದೇ ಇರುವದು ನೋವು ತರಿಸಿದೆ ಎಂದು ಹೇಳಿದರು.
ಪುರಸಭೆ ಸಾಮಾನ್ಯ ಸಭೆ ಜು.೧೧ಕ್ಕಿರುವುದಾಗಿ ನೋಟಿಸ್ ನೀಡಿದ್ದಾರೆ. ಈ ಬಗ್ಗೆ ಯಾರೊಂದಿಗೂ ಚರ್ಚಿಸಿಲ್ಲ. ಸಭೆಯ ನಡಾವಳಿಯ ಕುರಿತು ಯಾವುದೇ ಮಾಹಿತಿ ನಮಗೆ ಇಲ್ಲ. ಸಭೆಗೆ ಹಾಜರಾಗುವ ಕುರಿತು 11 ಜನ ಸದಸ್ಯರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತೇನೆ. ಮುಂದಿನ ದಿನಗಳಲ್ಲಿ ಪುರಸಭೆ ಅಧ್ಯಕ್ಷರು ಪಟ್ಟಣದ ಅಭಿವೃದ್ಧಿಗಾಗಿ ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯನಿರ್ವಹಿಸಿದರೆ ಕೈಜೋಡಿಸುತ್ತೇವೆ. ವಿಶ್ವಾಸಕ್ಕೆ ತೆಗೆದುಕೊಳ್ಳದೇ ಹೋದರೆ ರಾಜೀನಾಮೆ ಸಲ್ಲಿಸಿ ಕರವೇ ಸಂಘಟನೆ ಮೂಲಕ ಹೋರಾಟ ನಡೆಸುತ್ತೇನೆ ಎಂದರು.ಪುರಸಭೆ ಸದಸ್ಯರಾದ ಪ್ರವೀಣ ಪೂಜಾರಿ, ರವಿ ನಾಯ್ಕೋಡಿ, ಅಬ್ದುಲ ರೆಹಮಾನ ಚೌಧರಿ ಮಾತನಾಡಿ, ವಾರ್ಡ್ ಕಾಮಗಾರಿಗಳ ಕುರಿತು ಅಧ್ಯಕ್ಷರು ನಮ್ಮ ಗಮನಕ್ಕೆ ತಂದಿಲ್ಲ. ಇದು ನೋವುಂಟು ಮಾಡಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಪುರಸಭೆ ಸದಸ್ಯ ದೇವೇಂದ್ರ ಚವ್ಹಾಣ, ಪುರಸಭೆ ಮಾಜಿ ಅಧ್ಯಕ್ಷ ಸಂಜೀವ ಕಲ್ಯಾಣಿ, ಮುಖಂಡರಾದ ಮಹತಾಬ ಬಮ್ಮನಳ್ಳಿ, ಶರಣಪ್ಪ ಬೆಲ್ಲದ, ಸಂಜೀವ ಗಾಯಕವಾಡ, ಮಹೇಶ ಬೆಕಿನಾಳ ಇತರರು ಇದ್ದರು.