ರಾಜ್ಯದಲ್ಲಿ ₹450 ದಾಟಿದ ಬೆಳ್ಳುಳ್ಳಿ ಬೆಲೆ!

| Published : Feb 15 2024, 01:30 AM IST / Updated: Feb 15 2024, 12:34 PM IST

ಸಾರಾಂಶ

ರಾಜ್ಯದಲ್ಲಿ ಬೆಳ್ಳುಳ್ಳಿ ಬೆಲೆ ತುಸು ಕುಸಿದಿದೆ. ಆದರೆ ಅದರ ಲಾಭ ಗ್ರಾಹಕರಿಗೆ ಸಿಗುತ್ತಿಲ್ಲ, ಚಿಲ್ಲರೆ ವಹಿವಾಟು 450 ಆಸುಪಾಸಿನಲ್ಲಿಯೇ ಇದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಸಗಟು ಬೆಳ್ಳುಳ್ಳಿ ದರ ಇಳಿಕೆ ಕಾಣುತ್ತಿದ್ದರೂ ಚಿಲ್ಲರೆ ಮಾರುಕಟ್ಟೆಯಲ್ಲಿ ದುಬಾರಿ ದರವೇ ಮುಂದುವರಿದಿದೆ. ಇಲ್ಲಿನ ಯಶವಂತಪುರ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಪ್ರತಿ ಕೆಜಿಗೆ ₹ 320-350 ರಿಂದ ₹ 280-300 ಕ್ಕೆ ತಗ್ಗಿದ್ದು, ಇನ್ನೆರಡು ವಾರಗಳಲ್ಲಿ ಚಿಲ್ಲರೆ ಮಾರುಕಟ್ಟೆಯಲ್ಲೂ ಗ್ರಾಹಕರು ದರ ಇಳಿಕೆಯನ್ನು ಕಾಣಲಿದ್ದಾರೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.

ಪ್ರಸ್ತುತ ಚಿಲ್ಲರೆ ಮಾರುಕಟ್ಟೆಯಲ್ಲಿ ಪ್ರತಿ ಕೆಜಿಗೆ ಫಾರಮ್‌ ₹ 400 ವರೆಗೆ ಹಾಗೂ ಜವಾರಿ ₹ 450 ವರೆಗೆ ಬೆಲೆಯಿದೆ. ಯಶವಂತಪುರ ಹಾಗೂ ದಾಸನಪುರ ಕೃಷಿ ಉತ್ಪನ್ನ ಮಾರುಕಟ್ಟೆ ಸೇರಿ ಬೆಂಗಳೂರಿಗೆ ಬುಧವಾರ ಮಧ್ಯಪ್ರದೇಶದಿಂದ ಸುಮಾರು 2100 ಚೀಲ (1ಚೀಲ=50ಕೆಜಿ) ಬೆಳ್ಳುಳ್ಳಿ ಬಂದಿದೆ. 

ಎ ದರ್ಜೆಯ ಬೆಳ್ಳುಳ್ಳಿ ಬೆಲೆ ಕೆಜಿಗೆ ₹ 300 ಇತ್ತು. ಕಳೆದ ನಾಲ್ಕು ತಿಂಗಳಲ್ಲಿ ಇದು ಕಡಿಮೆ ಬೆಲೆಯಾಗಿದೆ. ಮುಂದುವರಿದು ಆವಕ ಹೆಚ್ಚಾದಂತೆ ಸ್ಥಳೀಯ ಅಂಗಡಿ ಮುಂಗಟ್ಟುಗಳಲ್ಲೂ ದರ ತಗ್ಗುವ ನಿರೀಕ್ಷೆಯಿದೆ.

ವರ್ತಕ ಎಸ್‌.ಆನಂದನ್‌ ಮಾತನಾಡಿ, ಮಧ್ಯಪ್ರದೇಶದಲ್ಲಿ ಕೊಯ್ಲು ಆರಂಭವಾಗಿದ್ದು, ಹೆಚ್ಚಿನ ಪ್ರಮಾಣದ ಬೆಳೆ ಬರುತ್ತಿದೆ. ಇದು ಸಗಟು ಬೆಲೆ ಇಳಿಕೆಯಾಗಲು ಕಾರಣವಾಗಿದೆ. 

ಮುಂದಿನ ವಾರದಲ್ಲಿ ರಾಜಸ್ಥಾನದಲ್ಲೂ ಕೊಯ್ಲು ಶುರುವಾಗಲಿದ್ದು, ಎರಡೂ ರಾಜ್ಯಗಳಿಂದ ಕರ್ನಾಟಕಕ್ಕೆ ಹೆಚ್ಚಿನ ಬೆಳೆ ಬರುವುದರಿಂದ ಬೆಲೆ ಇನ್ನಷ್ಟು ಕಡಿಮೆಯಾಗಲಿದೆ ಎಂದರು.

ಬೆಳೆ ಕೊರತೆಯಿಂದ ಸತತ ಏರಿಕೆಯಲ್ಲೇ ಇದ್ದ ಬೆಳ್ಳುಳ್ಳಿ ದರ ಸಗಟು ಮಾರುಕಟ್ಟೆಯಲ್ಲಿ ಇಳಿಕೆಯಾಗುತ್ತಿದೆ. ಸಗಟು ಮಾರುಕಟ್ಟೆಯಲ್ಲೇ ಎರಡು ದಿನ ₹ 400 ತಲುಪಿದ್ದರಿಂದ ಸ್ಥಳೀಯ ಮಳಿಗೆಗಳಲ್ಲಿ ₹ 450 ವರೆಗೆ ಬೆಲೆಯಿತ್ತು. ಇದೀಗ ದರ ತಗ್ಗುವ ಭರವಸೆಯಿದೆ ಎಂದು ಬೆಂಗಳೂರು ಬೆಳ್ಳುಳ್ಳಿ ವರ್ತಕರ ಸಂಘ ತಿಳಿಸಿದೆ.

ಬೆಂಗಳೂರು ಯಶವಂತಪುರ ಎಪಿಎಂಸಿ ಬೆಳ್ಳುಳ್ಳಿಯ ದೊಡ್ಡ ಮಾರುಕಟ್ಟೆಯಾಗಿದ್ದು, ಮಧ್ಯಪ್ರದೇಶದಿಂದ ಬೆಂಗಳೂರಿಗೆ ಬರುವ ಬೆಳೆ ಕೋಲಾರ, ತುಮಕೂರು, ಚಿಕ್ಕಬಳ್ಳಾಪುರ, ರಾಮನಗರ, ಮಂಡ್ಯ ಸೇರಿ ಸುತ್ತಲ ಜಿಲ್ಲೆಗಳಿಗೆ ಪೂರೈಕೆಯಾಗಲಿದೆ. ಉತ್ತರ ಕರ್ನಾಟಕ ಭಾಗದ ಜವಾರಿ ಬೆಳ್ಳುಳ್ಳಿಗೆ ದುಬಾರಿ ದರವಿದೆ. ಅಲ್ಲಿಂದ ದಕ್ಷಿಣ ಕರ್ನಾಟಕ ಭಾಗಕ್ಕೆ ಹೆಚ್ಚು ಪೂರೈಕೆ ಆಗುವುದಿಲ್ಲ.