ಗಾಂಧೀಜಿ, ಶಾಸ್ತ್ರಿಜಿ ತತ್ವ-ಆದರ್ಶಗಳನ್ನು ಪಾಲಿಸಬೇಕು

| Published : Oct 03 2024, 01:22 AM IST

ಸಾರಾಂಶ

ಮಹಾತ್ಮ ಗಾಂಧೀಜಿ, ಲಾಲ್‌ ಬಹದ್ದೂರ್‌ ಶಾಸ್ತ್ರಿ ಪಾಲಿಸಿದ ತತ್ವ, ಸಿದ್ಧಾಂತಗಳ ಸನ್ಮಾರ್ಗಗಳನ್ನು ಮತ್ತೆ ಹುಡುಕಿಕೊಳ್ಳುವುದು ಇಂದಿನ ಸಮಾಜದ ಕರ್ತವ್ಯ ಮತ್ತು ಅಗತ್ಯವಾಗಿದೆ ಎಂದು ಶಾಸಕ ಡಿ.ಜಿ.ಶಾಂತನಗೌಡ ಹೊನ್ನಾಳಿಯಲ್ಲಿ ಅಭಿಪ್ರಾಯಪಟ್ಟಿದ್ದಾರೆ.

- ಪ್ರವಾಸಿ ಮಂದಿರದಲ್ಲಿ ನಡೆದ ಜಯಂತಿ ಕಾರ್ಯಕ್ರಮದಲ್ಲಿ ಶಾಸಕ ಶಾಂತನಗೌಡ - - - ಕನ್ನಡಪ್ರಭ ವಾರ್ತೆ ಹೊನ್ನಾಳಿ

ಮಹಾತ್ಮ ಗಾಂಧೀಜಿ, ಲಾಲ್‌ ಬಹದ್ದೂರ್‌ ಶಾಸ್ತ್ರಿ ಪಾಲಿಸಿದ ತತ್ವ, ಸಿದ್ಧಾಂತಗಳ ಸನ್ಮಾರ್ಗಗಳನ್ನು ಮತ್ತೆ ಹುಡುಕಿಕೊಳ್ಳುವುದು ಇಂದಿನ ಸಮಾಜದ ಕರ್ತವ್ಯ ಮತ್ತು ಅಗತ್ಯವಾಗಿದೆ ಎಂದು ಶಾಸಕ ಡಿ.ಜಿ.ಶಾಂತನಗೌಡ ಅಭಿಪ್ರಾಯಪಟ್ಟರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಹಾತ್ಮ ಗಾಂಧೀಜಿ ಪ್ರತಿಮೆಗೆ ಪುಷ್ಪಹಾರ ಹಾಗೂ ತ್ರಿವರ್ಣ ಖಾದಿ ನೂಲಿನ ಹಾರ ಹಾಕುವ ಮೂಕ ಗಾಂಧಿ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

1927ರಲ್ಲಿ ಸ್ವದೇಶಿ ಚಳವಳಿ ಹಿನ್ನೆಲೆ ಹೊನ್ನಾಳಿಯ ಪ್ರವಾಸಿ ಮಂದಿರಕ್ಕೆ ಗಾಂಧೀಜಿ ತಮ್ಮ ಅನುಯಾಯಿಗಳೊಂದಿಗೆ ಭೇಟಿ ನೀಡಿದ್ದರು. ಇದರ ಸವಿ ನೆನಪಿಗಾಗಿ ಪ್ರವಾಸಿ ಮಂದಿರದಲ್ಲಿ ಈ ಹಿಂದೆ ಶಾಸಕನಾಗಿದ್ದಾಗ ಗಾಂಧೀಜಿ ಪುತ್ಥಳಿ ಪ್ರತಿಷ್ಠಾಪಿಸಲಾಗಿತ್ತು. ಇಂದು ಗಾಂಧಿ ಹಾಗೂ ಲಾಲ್ ಬಹುದ್ದೂರ್ ಶಾಸ್ತ್ರಿ 120ನೇ ಜನ್ಮದಿನ. ಇಂತಹ ಪವಿತ್ರ ಸ್ಥಳದಲ್ಲಿ ಜಯಂತಿ ಆಚರಿಸುತ್ತಿರುವುದು ಹೆಮ್ಮೆಯ ವಿಚಾರ ಎಂದು ಹೇಳಿದರು.

ಲಾಲ್ ಬಹುದ್ದೂರ್‌ ಶಾಸ್ತ್ರಿ ಕೂಡ ದೇಶದ ಕಂಡ ಅಪ್ರತಿಮ ವ್ಯಕ್ತಿತ್ವದ ನಾಯಕರಾಗಿದ್ದರು. ಜೈ ಜವಾನ್ - ಜೈ ಕಿಸಾನ್ ಘೋಷಣೆ ಹರಿಕಾರರಾಗಿದ್ದಾರೆ. ದೇಶ ಕಷ್ಟಕಾಲದಲ್ಲಿದ್ದರೂ ಅತ್ಯಂತ ಸಮರ್ಥವಾಗಿ ಮುನ್ನಡೆಸಿದ ಮಹಾನ್ ನಾಯಕ ಅವರು. ಈ ಉಭಯ ನಾಯಕರ ಜೀವನವೇ ನಮಗೆಲ್ಲಾ ಆದರ್ಶ ಜೀವನಕ್ಕೆ ಮಾರ್ಗವಾಗಿದೆ ಎಂದು ಹೇಳಿದರು.

ಉಪವಿಭಾಗಾಧಿಕಾರಿ ವಿ.ಅಭಿಷೇಕ್ ಮಾತನಾಡಿ, ದೇಶಕ್ಕೆ ಅಹಿಂಸಾ ಮಾರ್ಗದಿಂದಲೇ ಸ್ವಾತಂತ್ರ್ಯ ತಂದು ಕೊಟ್ಟ ಜಗತ್ತಿನ ಏಕೈಕ ವ್ಯಕ್ತಿಯೆಂದರೆ ಗಾಂಧೀಜಿ. ಅವರು ಸಮಾಜಕ್ಕೆ ಅನೇಕ ಜೀವನ ಮೌಲ್ಯಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಇದರಲ್ಲಿ ಸ್ವಚ್ಛತೆಯೂ ಬಹುಮುಖ್ಯವಾಗಿದೆ ಎಂದ ಅವರು, ಎಲ್ಲರಿಗೂ ಸ್ವಚ್ಛತೆಯನ್ನು ಕಾಪಾಡುವ ಪ್ರತಿಜ್ಞಾವಿಧಿ ಬೋಧಿಸಿದರು.

ತಹಸೀಲ್ದಾರ್ ಪಟ್ಟರಾಜ ಗೌಡ ಮಾತನಾಡಿ, ಭಾರತ ಸಂಸ್ಕೃತಿಯ ಕಣ ಕಣದಲ್ಲಿಯೂ ಪ್ರತಿ ಸಂಗತಿಗಳಲ್ಲಿ ಗಾಂಧೀಜಿ ಇದ್ದಾರೆ. ಲಾಲ್ ಬಹುದ್ದೂರು ಶಾಸ್ತ್ರಿ ಕೂಡ ಸಾಕಷ್ಟು ನೀತಿ, ಸಿದ್ಧಾಂತಗಳನ್ನು ಬಿಟ್ಟುಹೋಗಿದ್ದಾರೆ. ಅವರ ಆದರ್ಶಗಳನ್ನು ಪರಿಪಾಲಿಸಬೇಕು ಎಂದರು.

ಹೊನ್ನಾಳಿ ತಾಲೂಕಿನ 3 ಮತ್ತು ನ್ಯಾಮತಿ ತಾಲೂಕಿನ 3 ಅಂಗನವಾಡಿ ಕೇಂದ್ರಗಳಿಗೆ ಸ್ವಚ್ಚತಾ ಹೀ ಸೇವಾ ಪ್ರಶಸ್ತಿಗಳನ್ನು ಶಾಸಕರು ವಿತರಿಸಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ ಜ್ಯೋತಿ ಕಾರ್ಯಕ್ರಮ ನಡೆಸಿಕೊಟ್ಟರು.

ಪಟ್ಟಣದ ಎಸ್.ಎಂ.ಎಸ್.ಎಫ್.ಸಿ, ಕಾಲೇಜಿನ ಉಪನ್ಯಾಸಕ ನಾಗೇಶ ಗಾಂಧೀಜಿ ಕುರಿತು ಉಪನ್ಯಾಸ ನೀಡಿದರು. ಶಿಕ್ಷಕ ತಂಡದವರು ಮೀರಾ ಭಜನ್ ಹಾಡಿದರು. ಗಾಂಧೀಜಿಗೆ ಪ್ರಿಯವಾದ ಬೇಯಿಸಿದ ಕಡಲೇಕಾಯಿಯನ್ನು ಎಲ್ಲರಿಗೂ ವಿತರಿಸಲಾಯಿತು.

ತಾಪಂ ಇಒ ಪ್ರಕಾಶ್, ಪುರಸಭೆ ಮುಖ್ಯಾಧಿಕಾರಿ ಟಿ.ಲೀಲಾವತಿ, ತಾಲೂಕುಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು, ಕಂದಾಯ ಅಧಿಕಾರಿಗಳು, ಪುರಸಭೆ ಚುನಾಯಿತ ಪ್ರತಿನಿಧಿಗಳು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.

ಕ್ಷೇತ್ರ ಶಿಕ್ಷಣಾಧಿಕಾರಿ ನಿಂಗಪ್ಪ ಸ್ವಾಗತಿಸಿದರು. ಶಿಕ್ಷಕ ಚನ್ನೇಶ್ ನಿರೂಪಿಸಿ, ಪಶುವೈದ್ಯ ಇಲಾಖೆ ಡಾ. ವಿಶ್ವನಟೇಶ್ ವಂದಿಸಿರು.

- - - -2ಎಚ್.ಎಲ್.ಐ1:

ಗಾಂಧಿ ಪ್ರತಿಮೆಗೆ ಗಣ್ಯರು ಪುಷ್ಪಹಾರ, ತ್ರಿವರ್ಣ ಖಾದಿ ನೂಲಿನ ಹಾರ ಹಾಕಿ ನಮಿಸಿದರು. ಶಾಸಕ ಡಿ.ಜಿ|ಶಾಂತನಗೌಡ, ಎಸಿ ಅಭಿಷೇಕ್, ತಹಸೀಲ್ದಾರ್ ಪಟ್ಟರಾಜ ಗೌಡ, ಇಒ ಪ್ರಕಾಶ್ ಇತರರು ಇದ್ದರು.