ಬ್ಯಾರೇಜ್‌ಗಳಿಗೆ ನೀರು ತುಂಬಿಸುವ ಯೋಜನೆ ನನೆಗುದಿಗೆ!

| Published : Jun 14 2024, 01:06 AM IST

ಸಾರಾಂಶ

ಕೃಷಿ ಚಟುವಟಿಕೆ ಮತ್ತು ಕುಡಿಯುವ ನೀರಿಗೆ ನೆರವು ಕಲ್ಪಿಸುವ ಉದ್ದೇಶದಿಂದ ರೂಪಿಸಿರುವ ಹುಕ್ಕೇರಿ ತಾಲೂಕಿನ ಮಹತ್ವಾಕಾಂಕ್ಷಿ ನೀರಾವರಿ ಯೋಜನೆಯೊಂದು ಕಳೆದ ಎರಡು ವರ್ಷಗಳಿಂದ ನನೆಗುದಿಗೆ ಬಿದ್ದಿದೆ. ಇದರೊಂದಿಗೆ ಬಹುನಿರೀಕ್ಷಿತ ಈ ಯೋಜನೆ ಆರಂಭಿಕ ಹಂತದಲ್ಲೇ ಮುಗ್ಗರಿಸುವ ಅನುಮಾನ ವ್ಯಕ್ತವಾಗಿದೆ. ರೈತ ಸಮುದಾಯದಲ್ಲಿ ಬಹು ನಿರೀಕ್ಷೆಗಳನ್ನು ಹುಟ್ಟುಹಾಕಿದ್ದ ತಾಲೂಕಿನ ಆಯ್ದ ಬ್ಯಾರೇಜ್‌ಗಳಿಗೆ ನೀರು ತುಂಬಿಸುವ ಈ ಯೋಜನೆ ಅನುಷ್ಠಾನಕ್ಕೆ ಇದೀಗ ಮೀನಮೇಷ ಎಣಿಸಲಾಗುತ್ತಿದೆ. ಹೀಗಾಗಿ, ಈಗ ಜನರಲ್ಲಿ ನಿರಾಸೆಯ ಛಾಯೆ ಮೂಡಿದಂತಾಗಿದೆ.

ರವಿ ಕಾಂಬಳೆ

ಕನ್ನಡಪ್ರಭ ವಾರ್ತೆ ಹುಕ್ಕೇರಿ

ಕೃಷಿ ಚಟುವಟಿಕೆ ಮತ್ತು ಕುಡಿಯುವ ನೀರಿಗೆ ನೆರವು ಕಲ್ಪಿಸುವ ಉದ್ದೇಶದಿಂದ ರೂಪಿಸಿರುವ ಹುಕ್ಕೇರಿ ತಾಲೂಕಿನ ಮಹತ್ವಾಕಾಂಕ್ಷಿ ನೀರಾವರಿ ಯೋಜನೆಯೊಂದು ಕಳೆದ ಎರಡು ವರ್ಷಗಳಿಂದ ನನೆಗುದಿಗೆ ಬಿದ್ದಿದೆ. ಇದರೊಂದಿಗೆ ಬಹುನಿರೀಕ್ಷಿತ ಈ ಯೋಜನೆ ಆರಂಭಿಕ ಹಂತದಲ್ಲೇ ಮುಗ್ಗರಿಸುವ ಅನುಮಾನ ವ್ಯಕ್ತವಾಗಿದೆ. ರೈತ ಸಮುದಾಯದಲ್ಲಿ ಬಹು ನಿರೀಕ್ಷೆಗಳನ್ನು ಹುಟ್ಟುಹಾಕಿದ್ದ ತಾಲೂಕಿನ ಆಯ್ದ ಬ್ಯಾರೇಜ್‌ಗಳಿಗೆ ನೀರು ತುಂಬಿಸುವ ಈ ಯೋಜನೆ ಅನುಷ್ಠಾನಕ್ಕೆ ಇದೀಗ ಮೀನಮೇಷ ಎಣಿಸಲಾಗುತ್ತಿದೆ. ಹೀಗಾಗಿ, ಈಗ ಜನರಲ್ಲಿ ನಿರಾಸೆಯ ಛಾಯೆ ಮೂಡಿದಂತಾಗಿದೆ.

ಘಟಪ್ರಭಾ ಮತ್ತು ಹಿರಣ್ಯಕೇಶಿ ನದಿಗಳ ಸಂಗಮದ ಹಿನ್ನೀರಿನಿಂದ ಬೇಸಿಗೆ ಕಾಲದಲ್ಲಿ ಅನುಕೂಲವಾಗುವಂತೆ ಯರನಾಳ, ಬಡಕುಂದ್ರಿ, ಕೋಚರಿ, ಚಿಕ್ಕಾಲಗುಡ್ಡ, ಗೋಟೂರ ಬ್ಯಾರೇಜ್‌ಗಳಿಗೆ ನೀರು ತುಂಬಿಸುವ ಯೋಜನೆಗೆ ಆರಂಭಿಕ ಹಂತದಲ್ಲಿಯೇ ವಿಘ್ನ ಎದುರಾಗಿದೆ. ನೀರು ಹಂಚಿಕೆ ಅನುಮೋದನೆ ವಿಳಂಬದಿಂದ ಈ ಯೋಜನೆ ಸಾಕಾರಗೊಳ್ಳುವ ಸಾಧ್ಯತೆ ಕೂಡ ಕ್ಷೀಣಿಸುತ್ತಿದೆ. ಸಣ್ಣ ನೀರಾವರಿ ಇಲಾಖೆ 4702-ಏತ ನೀರಾವರಿ ಯೋಜನೆ ಶೀರ್ಷಿಕೆಯಡಿ ತಾಲೂಕಿನ ಆಯ್ದ ಬ್ಯಾರೇಜ್‌ಗಳಿಗೆ ನೀರು ತುಂಬಿಸಲು ಸುಮಾರು ₹94 ಕೋಟಿ ಅನುದಾನ ಕಾಯ್ದಿರಿಸಲಾಗಿದೆ. ಆದರೆ, ಇದುವರೆಗೆ ನೀರು ಹಂಚಿಕೆ ಪ್ರಮಾಣ ಪತ್ರ ಅನುಮೋದನೆ ಆಗದಿರುವುದು ಯೋಜನೆ ಅನುಷ್ಠಾನಕ್ಕೆ ತೊಡಕಾಗಿದೆ.ಒಂದೆಡೆ ಯೋಜನೆಗೆ ಅನುದಾನ ಕಾಯ್ದಿರಿಸಿರುವ ಸರ್ಕಾರ ಮತ್ತೊಂದೆಡೆ ನೀರು ಹಂಚಿಕೆ ಮಾಡುವಲ್ಲಿ ವಿಳಂಬ ನೀತಿ ಅನುಸರಿಸುತ್ತಿದೆ. ಇದರೊಂದಿಗೆ ಜಾತಕ ಪಕ್ಷಿಯಂತೆ ಕಾದು ಕುಳಿತ ಕೃಷಿಕರಿಗೆ ಸರ್ಕಾರ ತಣ್ಣೀರೆರಚಿದಂತಾಗುತ್ತಿದೆ. ಇದೇ ವೇಳೆ ಮುಂದಾಲೋಚನೆ ಇಲ್ಲದೇ ಯೋಜನೆ ರೂಪಿಸಿದ ನೀರಾವರಿ ಇಲಾಖೆ ಅಧಿಕಾರಿಗಳ ದ್ವಂದ್ವ ನಡೆಯ ಬಗ್ಗೆಯೂ ಸ್ಥಳೀಯರಿಂದ ವ್ಯಾಪಕ ಟೀಕೆಗಳು ಕೇಳಿ ಬರುತ್ತಿವೆ.ಬೇಸಿಗೆ ಕಾಲದಲ್ಲಿ ಕುಡಿಯುವ ನೀರಿನ ಬವಣೆ ನೀಗಿಸುವ ನಿಟ್ಟಿನಲ್ಲಿ ಮತ್ತು ಪ್ರತಿ ವರ್ಷ ಮಹಾರಾಷ್ಟ್ರದ ಜಲಾಶಯಗಳ ನೀರು ಕಾಯುವುದನ್ನು ತಪ್ಪಿಸಲು ಈ ಯೋಜನೆ ರೂಪಿಸಲಾಗಿದೆ. 36 ಕಿ.ಮೀ ಉದ್ದದ ಪೈಪ್‌ಲೈನ್ ಮಾರ್ಗ ಅಳವಡಿಸುವುದು, ಪಂಪಹೌಸ್, ಇಲೆಕ್ಟ್ರಿಕಲ್ ಕಾಮಗಾರಿಯೂ ಸಹ ಸೇರಿದೆ. ಈ ಬ್ಯಾರೇಜ್ ತುಂಬುವ ಕಾರ್ಯಕ್ರಮ ಅನುಷ್ಠಾನಕ್ಕೆ ಸಚಿವ ಸತೀಶ ಜಾರಕಿಹೊಳಿ, ಶಾಸಕ ನಿಖಿಲ್ ಕತ್ತಿ ಅವರೂ ಕೂಡ ವಿಶೇಷ ಆಸಕ್ತಿ ತೋರಿಸಿದ್ದಾರೆ.ಮುತುವರ್ಜಿ ವಹಿಸದ ಅಧಿಕಾರಿಗಳು:

ಬ್ಯಾರೇಜ್‌ಗಳಿಗೆ ನೀರು ತುಂಬಿಸುವ ಈ ಮಹತ್ತರ ಯೋಜನೆ ಅನುಷ್ಠಾನಗೊಳಿಸುವಲ್ಲಿ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳ ಇಚ್ಛಾಶಕ್ತಿ ಕೊರತೆ, ಬೇಜವಾಬ್ದಾರಿ ಎದ್ದು ಕಾಣುತ್ತಿದೆ. ನೀರು ಹಂಚಿಕೆ ಕಡತ ವಿಲೇವಾರಿಗೆ ಸಮರ್ಪಕ ದಾಖಲೆ ಸಲ್ಲಿಸಿಲ್ಲ ಮತ್ತು ಮುತುವರ್ಜಿ ವಹಿಸುತ್ತಿಲ್ಲ ಎಂಬ ಆರೋಪಗಳಿವೆ.2400 ಹೆಕ್ಟೇರ್‌ ಪ್ರದೇಶ ನೀರಾವರಿ

ಕಳೆದ 2022ರಿಂದ ನೀರಿನ ಲಭ್ಯತೆ ಅನುಮೋದನೆಗೆ ಕಾಯುತ್ತಿರುವ ಈ ಬ್ಯಾರೇಜ್ ತುಂಬುವ ಕಾರ್ಯಕ್ರಮ ಸಕಾಲಕ್ಕೆ ಆರಂಭವಾಗಿದ್ದರೆ ಇಷ್ಟೊತ್ತಿಗಾಗಲೇ ನೂರಾರು ಎಕರೆ ಪ್ರದೇಶಕ್ಕೆ ನೀರುಣಿಸುತ್ತಿತ್ತು. ಈ ಹೊಸ ಯೋಜನೆಗೆ ಈಗಾಗಲೇ ಆಡಳಿತಾತ್ಮಕ ಮತ್ತು ತಾಂತ್ರಿಕ ಮಂಜೂರಾತಿ ಸಿಕ್ಕಿದೆ. ಯೋಜನೆ ಅನುಷ್ಠಾನಕ್ಕೆ ಬೇಕಿರುವ ಎಲ್ಲ ಅಗತ್ಯ ರೂಪುರೇಷೆಗಳನ್ನೂ ಸಿದ್ಧಪಡಿಸಲಾಗಿದೆ. ಆದರೆ, ನೀರು ಹಂಚಿಕೆಗೆ ಅನುಮೋದನೆ ದೊರೆತಿಲ್ಲ. ಹಾಗಾಗಿ ಟೆಂಡರ್ ಕರೆಯುವ ಪ್ರಕ್ರಿಯೆ ಬಾಕಿಯಿದೆ.ಯೋಜನೆ ಅನುಷ್ಠಾನವಾದಲ್ಲಿ ವರ್ಷವಿಡೀ ಬ್ಯಾರೇಜ್‌ಗಳಲ್ಲಿ ಶೇ.50ರಷ್ಟು ನೀರು ಸಂಗ್ರಹಗೊಂಡು ಹಿರಣ್ಯಕೇಶಿ ನದಿ ಪಾತ್ರದ ಅಕ್ಕಪಕ್ಕ ಕುಡಿಯುವ ನೀರಿಗೆ ನೆರವಾಗಲಿದೆ. ಅಷ್ಟೇ ಅಲ್ಲದೇ ಅಂತರ್ಜಲಮಟ್ಟ ಹೆಚ್ಚಳವಾಗಿ ಸುಮಾರು 2400 ಹೆಕ್ಟೇರ್ ಪ್ರದೇಶ ನೀರಾವರಿಗೆ ಅನುಕೂಲವಾಗಿ ಕೃಷಿ ಚಟುವಟಿಕೆಗೆ ಆಧಾರವಾಗಲಿದೆ.ಹುಕ್ಕೇರಿ ತಾಲೂಕಿನ ಆಯ್ದ ಬ್ಯಾರೇಜ್‌ಗಳಿಗೆ ನೀರು ತುಂಬಿಸಲು ಸಣ್ಣ ನೀರಾವರಿ ಇಲಾಖೆಯಿಂದ ಯೋಜನೆ ರೂಪಿಸಲಾಗಿದೆ. ಶೀಘ್ರವೇ ನೀರು ಹಂಚಿಕೆಗೆ ಅನುಮೋದನೆಯಾಗಲಿದ್ದು, ಕೂಡಲೇ ಟೆಂಡರ್ ಕರೆದು ಕಾಮಗಾರಿ ಆರಂಭಿಸಲಾಗುವುದು.

ಗುರು ಬಸವರಾಜಯ್ಯ,

ಇಇ ಸಣ್ಣ ನೀರಾವರಿ ಇಲಾಖೆ.