ಸಾರ್ವಜನಿಕರಿಗೂ ಇರಲಿ ಮರ ರಕ್ಷಣೆ ಹೊಣೆ

| Published : May 24 2024, 12:48 AM IST

ಸಾರಾಂಶ

ಮರ ರಕ್ಷಣೆಯ ಹೊಣೆಯನ್ನು ಸಾರ್ವಜನಿಕರೂ ಸಹ ವಹಿಸಿಕೊಳ್ಳಬೇಕು. ಅಂದಾಗ ಮಾತ್ರ ಹಸಿರೀಕರಣ ಸಾಧ್ಯ.

ಉಪವಲಯ ಅರಣ್ಯಾಧಿಕಾರಿ ಅಂದಪ್ಪ ಕುರಿ ಹೇಳಿಕೆ । ನೆಡುತೋಪು ಪ್ಲಾಂಟೇಶನ್‌ಗೆ ಚಾಲನೆ

ಕನ್ನಡಪ್ರಭ ವಾರ್ತೆ ಕುಕನೂರು

ಮರ ರಕ್ಷಣೆಯ ಹೊಣೆಯನ್ನು ಸಾರ್ವಜನಿಕರೂ ಸಹ ವಹಿಸಿಕೊಳ್ಳಬೇಕು. ಅಂದಾಗ ಮಾತ್ರ ಹಸಿರೀಕರಣ ಸಾಧ್ಯ ಎಂದು ಪ್ರಾದೇಶಿಕ ಉಪ ವಲಯ ಅರಣ್ಯಾಧಿಕಾರಿ ಅಂದಪ್ಪ ಕುರಿ ಹೇಳಿದರು.

ತಾಲೂಕಿನ ಬೆಣಕಲ್ಲಿನಿಂದ ತಿಪ್ಪರಸನಾಳ ಗ್ರಾಮದವರೆಗೆ ಪ್ರಾದೇಶಿಕ ಅರಣ್ಯ ಇಲಾಖೆಯಿಂದ ಕೈಗೊಂಡ ರೋಡ್ ಸೈಡ್ ನೆಡುತೋಪು ಪ್ಲಾಂಟೇಶನ್‌ಗೆ ಚಾಲನೆ ನೀಡಿ ಮಾತನಾಡಿದ ಅವರು, ಹಸಿರು ಎಂಬುದು ಅತ್ಯಂತ ಮುಖ್ಯವಾದದ್ದು. ಜಾಗತೀಕರಣದಲ್ಲಿ ಹಸಿರು ಮಾಯವಾಗುತ್ತಿದೆ. ಜನರು ಪರಿಸರದ ಬಗ್ಗೆ ಆಲೋಚನೆ ಮಾಡುತ್ತಿಲ್ಲ. ಈ ಹಿಂದೆ ಹಿರಿಯರು ಮಕ್ಕಳಿಗೆ, ಮೊಮ್ಮಕ್ಕಳಿಗೆ ಕೂಡಲು ನೆರಳು ಇರಲಿ ಎಂದು ಗಿಡ ನೆಡುತ್ತಿದ್ದರು. ಅದನ್ನು ಪೋಷಿಸಿ ಬೆಳೆಸುತ್ತಿದ್ದರು. ಆದರೆ ಆ ವಾತಾವರಣ ಸದ್ಯಕ್ಕಿಲ್ಲ. ಇದರಿಂದ ಹಸಿರೀಕರಣ ಮಾಯವಾಗುತ್ತಿದೆ. ಅರಣ್ಯ ಇಲಾಖೆಯಿಂದ ರಸ್ತೆ ಬದಿಗಳಲ್ಲಿ ಗಿಡ ನೆಡಲಾಗುತ್ತಿದೆ. ಅವುಗಳಿಗೆ ನಾವೇ ಸಹ ನೀರನ್ನು ಹಾಕುತ್ತೇವೆ. ಮುಳ್ಳು ಸಹ ಕಟ್ಟುತ್ತೇವೆ. ಆದರೆ ಅರಣ್ಯ ಇಲಾಖೆ ರಸ್ತೆ ಬದಿ ಯಾರಿಗೂ ತೊಂದರೆ ಮಾಡದ ಜಾಗದಲ್ಲಿ ನೆಟ್ಟಂತಹ ಗಿಡಗಳನ್ನು ಸಹ ಜನರು ಕಡಿಯುತ್ತಾರೆ. ಕಿತ್ತೊಗೆಯುತ್ತಾರೆ. ಇದು ದುರ್ದೈವದ ಸಂಗತಿ ಆಗಿದೆ. ಇಂತಹ ಕಾರ್ಯ ಆಗಬಾರದು. ಜೀವಮಾನದಲ್ಲಿ ಗಿಡ ನೆಡುವುದು ಒಂದು ಸಾಧನೆಯೇ ಸರಿ. ಪ್ರಕೃತಿ ನಮಗಾಗಿ ಸ್ವಚ್ಛ ಗಾಳಿ ನೀಡುತ್ತದೆ. ಗಿಡಗಳಿಂದ ಮಾತ್ರ ಪರಿಶುದ್ಧ ಗಾಳಿ ಸಿಗುವುದು. ಅಂತಹ ಉಸಿರು ನೀಡುವ ಹಸಿರನ್ನು ತಿರಸ್ಕರಿಸಬಾರದು. ಸಾರ್ವಜನಿಕರು ಗಿಡಗಳನ್ನು ಪೋಷಿಸುವಲ್ಲಿ ಕಾಳಜಿ ವಹಿಸಬೇಕು. ಮನೆ ಮಕ್ಕಳಂತೆ ಗಿಡಗಳನ್ನು ಕಾಳಜಿ ವಹಿಸಿ ಪೋಷಿಸಬೇಕು ಎಂದರು.

ಅರಣ್ಯ ರಕ್ಷಕ ಶರೀಫ್, ಅರಣ್ಯ ಕಾವಲುಗಾರರಾದ ಜಗದೀಶ ಮರಡಿ, ನಜೀರ್, ಯಲ್ಲಪ್ಪ, ಫಕೀರಪ್ಪ ಇತರರಿದ್ದರು.

6 ಕಿಮೀ ನೆಡುತೋಪು:

ಬೆಣಕಲ್ ಗ್ರಾಮದಿಂದ ತಿಪ್ಪರಸನಾಳ ಗ್ರಾಮದವರೆಗೆ ಒಟ್ಟು 6 ಕಿಮೀ ರಸ್ತೆಯ ಎರಡು ಬದಿ ಗಿಡಗಳನ್ನು ನೆಡಲು ಚಾಲನೆ ನೀಡಲಾಯಿತು. ಸುಮಾರು 1800 ವಿವಿಧ ಮಾದರಿಯ ಅರಣ್ಯ ಗಿಡಗಳನ್ನು ನೆಡಲಾಗುತ್ತಿದೆ.