ಸಾರಾಂಶ
ಹಾಲು ಉತ್ಪಾದಕರಿಗೆ ಲೀಟರ್‌ಗೆ 5 ರು. ಹೆಚ್ಚಳ ಸೇರಿದಂತೆ, ಉತ್ಪಾದಕರ ಮತ್ತು ನೌಕರರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಡೇರಿ ಸಹಕಾರ ಸಂಘಗಳ ನೌಕರರ ಕ್ಷೇಮಾಭಿವೃದ್ಧಿ ಸಂಘವು ಕೋಮುಲ್ ಆಡಳಿತಾಧಿಕಾರಿ ಡಾ.ಮೈತ್ರಿ ಅವರಿಗೆ ಮನವಿ ಸಲ್ಲಿಸಿತು.
ಕೋಲಾರ : ಹಾಲು ಉತ್ಪಾದಕರಿಗೆ ಲೀಟರ್‌ಗೆ 5 ರು. ಹೆಚ್ಚಳ ಸೇರಿದಂತೆ, ಉತ್ಪಾದಕರ ಮತ್ತು ನೌಕರರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಡೇರಿ ಸಹಕಾರ ಸಂಘಗಳ ನೌಕರರ ಕ್ಷೇಮಾಭಿವೃದ್ಧಿ ಸಂಘವು ಕೋಮುಲ್ ಆಡಳಿತಾಧಿಕಾರಿ ಡಾ.ಮೈತ್ರಿ ಅವರಿಗೆ ಮನವಿ ಸಲ್ಲಿಸಿತು.
ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ವಿಟ್ಟಪ್ಪನಹಳ್ಳಿ ಡೇರಿ ವೆಂಕಟೇಶ್ ಮಾತನಾಡಿ, ಪ್ರತಿ ವರ್ಷ ಸಂಕ್ರಾಂತಿ ಸಂದರ್ಭದಲ್ಲಿ ಹಾಲು ಖರೀದಿ ದರ ಹೆಚ್ಚಿಸಲಾಗುತ್ತಿತ್ತು. ಈ ಬಾರಿ ಬೇಸಿಗೆ ಪ್ರಾರಂಭವಾಗಿದ್ದರೂ ಹೆಚ್ಚಳ ಮಾಡಿಲ್ಲ ಎಂದರು.
ಹಾಲಿನ ಗುಣಮಟ್ಟ ಕುಸಿತ
ಒಕ್ಕೂಟದಿಂದ ಪ್ರಾಥಮಿಕ ಸಂಘಳಿಗೆ ಮೂರು ವಾರಗಳ ಬಟವಾಡೆ ಬಾಕಿ ಇದ್ದು ಸಂಘಗಳು ಮತ್ತು ಉತ್ಪಾದಕರ ಮಧ್ಯೆ ಗಲಾಟೆಗಳಿಗೆ ಕಾರಣವಾಗಿದ್ದು ಬಾಕಿ ಉಳಿದಿಕೊಂಡಿರುವ ಬಟವಾಡೆವನ್ನು ಕೂಡಲೇ ಸಂಘಗಳ ಖಾತೆಗೆ ವರ್ಗಾವಣೆ ಮಾಡಬೇಕು. ಈಗಾಗಲೇ ಬೇಸಿಗೆ ಕಾಲ ಪ್ರಾರಂಭವಾಗಿದ್ದು ವಾತಾವರಣದ ಪರಿಣಾಮ ಹಾಲಿನ ಗುಣಮಟ್ಟ ಕಡಿಮೆಯಾಗುತ್ತಿದೆ. ಒಕ್ಕೂಟದ ೦.೫ ಗುಣಮಟ್ಟದ ವ್ಯತ್ಯಾಸವನ್ನು ಪರಿಗಣಿಸಿ ಉತ್ಪಾದಕರಿಗೆ ಉಂಟಾಗುವ ನಷ್ಟವನ್ನು ಸರಿಪಡಿಸಬೇಕು ಎಂದರು.
ಉತ್ಪಾದಕರ ಬಳಿ ರಾಸುಗಳಿಗೆ ವಿಮೆ ಮಾಡಿಸುವ ಸಂದರ್ಭದಲ್ಲೇ ಡೇರಿಯ ಬಟವಾಡದಲ್ಲಿ ಹಣ ಕಡಿತ ಮಾಡಲಾಗುತ್ತದೆ ಆದರೆ ರಾಸುಗಳಿಗೆ ಕೊಡಬೇಕಾದರೆ ಕನಿಷ್ಠ ಆರು ತಿಂಗಳು ಆಗುತ್ತದೆ. ರಾಸುಗಳು ಮರಣ ಹೊಂದಿದ ಕೂಡಲೇ ವಿಮಾ ಮೊತ್ತವನ್ನು ಉತ್ಪಾದಕರ ಕೈಸೇರುವಂತೆ ಮಾಡಬೇಕು ಬಿಎಂಸಿಗಳ ನಿರ್ವಹಣಾ ವೆಚ್ಚ ಹೆಚ್ಚಳ ಮಾಡಬೇಕು ಎಂದು ಮನವಿ ಮಾಡಿದರು.
ಪ್ರಾಥಮಿಕ ಡೇರಿ ಪ್ರಾಮುಖ್ಯತೆ
ವಿವಿಧ ಸಂಘಗಳ ಕಾರ್ಯದರ್ಶಿಗಳು ಮಾತನಾಡಿ ಪ್ರಾಥಮಿಕ ಡೇರಿಗಳಿಂದ ಒಕ್ಕೂಟವಿದೆ ಎಂಬುದನ್ನು ಅಧಿಕಾರಿಗಳು ಮರೆಯಬಾರದು ಸಾಫ್ಟ್‌ವೇರ್ ಹೆಸರಿನಲ್ಲಿ ಸಂಘಗಳಿಗೆ ತೊಂದರೆಯಾಗಿದೆ ಮೊದಲು ಒಕ್ಕೂಟದಲ್ಲಿ ಸಾಫ್ಟ್‌ವೇರ್ ಅಳವಡಿಸಿಕೊಳ್ಳಿ ನಂತರ ಸಂಘಗಳಿಗೆ ಆದೇಶ ಮಾಡಲಿ, ಮೂಲಭೂತ ಸೌಕರ್ಯಗಳ ಹೆಸರಿನಲ್ಲಿ ಹಗಲು ದರೋಡೆ ಮಾಡಲಾಗುತ್ತಿದೆ ಅದರ ಬಗ್ಗೆ ಮೊದಲು ಕ್ರಮವಾಗಬೇಕು ಎಂದು ವ್ಯವಸ್ಥಾಪಕ ನಿರ್ದೇಶಕ ಗೋಪಾಲಮೂರ್ತಿ ಹಾಗೂ ಮ್ಯಾನೇಜರ್ ಚೇತನ್ ಅವರನ್ನು ತರಾಟೆಗೆ ತೆಗೆದುಕೊಂಡರು.
ಮನವಿ ಸ್ವೀಕರಿಸಿ ಮಾತನಾಡಿದ ಆಡಳಿತಾಧಿಕಾರಿ ಡಾ.ಮೈತ್ರಿ, ಅಧಿಕಾರಿಗಳು ಸರಿಯಾಗಿ ಕೆಲಸ ಮಾಡದೇ ಇರುವುದೇ ಇಂತಹ ಸಮಸ್ಯೆಗಳಿಗೆ ಕಾರಣವಾಗಿದೆ. ಹಾಲು ಉತ್ಪಾದಕರು ಹಾಗೂ ಡೇರಿ ನೌಕರರಿಗೆ ಅನುಕೂಲ ಮಾಡಲು ನಾನು ಇರುವಷ್ಟು ದಿನದಲ್ಲಿ ಪ್ರಾಮಾಣಿಕವಾಗಿ ಮಾಡತ್ತೇನೆ. ಜೊತೆಗೆ ರಾಸುಗಳಿಗೆ ವಿತರಿಸುತ್ತಿರುವ ವಿಮಾ ಏಜೆನ್ಸಿಯನ್ನು ಬದಲಾವಣೆ ಮಾಡಲಾಗುತ್ತದೆ.
ಈ ತಿಂಗಳೊಳಗೆ ನಿಮ್ಮ ಬೇಡಿಕೆಗಳ ಈಡೇರಿಕೆಗೆ ಕೂಡಲೇ ಸಭೆ ಕರೆದು ತೀರ್ಮಾನ ತೆಗೆದುಕೊಂಡು ಉತ್ಪಾದಕರ ಮತ್ತು ನೌಕರರ ಹಿತ ಕಾಯುವ ಕೆಲಸ ಮಾಡುವುದಾಗಿ ಭರವಸೆ ನೀಡಿದರುನೌಕರರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಗೌರವಾಧ್ಯಕ್ಷ ಚಿನ್ನಹಳ್ಳಿ ಗೋಪಾಲ್, ಉಪಾಧ್ಯಕ್ಷ ಮಿಂಡಹಳ್ಳಿ ಮುನಿರಾಜು, ಪ್ರಧಾನ ಕಾರ್ಯದರ್ಶಿ ಬಗಲಹಳ್ಳಿ ನಾಗೇಶಗೌಡ, ಖಜಾಂಚಿ ವಕ್ಕಲೇರಿ ನಾಗರಾಜ್, ಜಿಲ್ಲಾ ಸಮಿತಿ ನಿರ್ದೇಶಕರಾದ ಎಸ್.ಎಂ ಗೋಪಾಲ್, ಮದನಹಳ್ಳಿ ರಮೇಶ್, ತಾಲೂಕು ಅಧ್ಯಕ್ಷ ತೊಂಡಾಲ ಮಂಜುನಾಥ್, ಪ್ರಧಾನ ಕಾರ್ಯದರ್ಶಿ ತಿಮ್ಮೇಗೌಡ, ಮುಖಂಡರಾದ ಗಂಗಾಪುರ ಬಾಬು, ಚಿಂತಾಮಣಿ ಕೆಂಪರೆಡ್ಡಿ, ಮಿಟ್ಟಮಾಲಹಳ್ಳಿ ಮಂಜುನಾಥ್, ಮುದುವಾಡಿಹೊಸಹಳ್ಳಿ ಮೋಹನ್, ಚಿನಪನಹಳ್ಳಿ ಗೋಪಾಲ್, ವೆಂಕಟಾಪುರ ಶ್ರೀನಿವಾಸ್, ಅಲಹಳ್ಳಿ ಮಂಜುನಾಥ್ ಇದ್ದರು.