ಮನೆಯಲ್ಲಿನ ಗ್ರಂಥಾಲಯ ಮನೆತನದ ಪ್ರತಿಷ್ಠೆಗೆ ಕಾರಣವಾಗಬೇಕು. ಎದೆಗೆ ಬಿದ್ದ ಅಕ್ಷರ, ನೆಲಕ್ಕೆ ಬಿದ್ದ ಬೀಜದಂತೆ. ಮನೋಭಾವ ವಿಸ್ತರಿಸಿ ಹೊಸ ವ್ಯಕ್ತಿತ್ವ ರೂಪಿಸುವುದೇ ಮನಗೊಂದು ಗ್ರಂಥಾಲಯದ ಉದ್ದೇಶವಾಗಿದೆ ಎಂದು ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಮಾನಸ ಹೇಳಿದರು.
ಹಾವೇರಿ: ಮನೆಯಲ್ಲಿನ ಗ್ರಂಥಾಲಯ ಮನೆತನದ ಪ್ರತಿಷ್ಠೆಗೆ ಕಾರಣವಾಗಬೇಕು. ಎದೆಗೆ ಬಿದ್ದ ಅಕ್ಷರ, ನೆಲಕ್ಕೆ ಬಿದ್ದ ಬೀಜದಂತೆ. ಮನೋಭಾವ ವಿಸ್ತರಿಸಿ ಹೊಸ ವ್ಯಕ್ತಿತ್ವ ರೂಪಿಸುವುದೇ ಮನೆಗೊಂದು ಗ್ರಂಥಾಲಯದ ಉದ್ದೇಶವಾಗಿದೆ ಎಂದು ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಮಾನಸ ಹೇಳಿದರು.ಇಲ್ಲಿಯ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗಂಗಾಧರ ನಂದಿ ಸಭಾಭವನದಲ್ಲಿ ಪುಸ್ತಕ ಪ್ರಾಧಿಕಾರ ಆಯೋಜಿಸಿದ್ದ ಮನೆಗೊಂದು ಗ್ರಂಥಾಲಯ ಯೋಜನೆ ಅನುಷ್ಠಾನದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಕರ್ನಾಟಕ ಪುಸ್ತಕ ಪ್ರಾಧಿಕಾರ ಹಲವು ಯೋಜನೆಗಳನ್ನು ಹಾಕಿಕೊಂಡಿದೆ. ರಾಜ್ಯದ ನಾಲ್ಕು ವಲಯಗಳಲ್ಲಿ ಆಯ್ದ ಅತ್ಯುತ್ತಮ ಗ್ರಂಥಾಲಯಗಳಿಗೆ ನಂಜನಗೂಡು ತಿರುಮಲಾಂಬ, ಡಾ. ಹಾ.ಮಾ. ನಾಯಕ್, ಡಾ. ಪಿ.ಆರ್. ತಿಪ್ಪೇಸ್ವಾಮಿ ಹಾಗೂ ಹಾವೇರಿ ನೆಲದ ಗಳಗನಾಥರ ಹೆಸರಿನಲ್ಲಿ ಪ್ರತಿವರ್ಷ ಪ್ರಶಸ್ತಿಗಳನ್ನು ನೀಡಲಾಗುವುದು ಎಂದರು.ಪ್ರತಿ ಜಿಲ್ಲೆಗಳಲ್ಲಿ ಮನೆಗೊಂದು ಗ್ರಂಥಾಲಯ ಅನುಷ್ಠಾನಕ್ಕಾಗಿ ಜಾಗೃತಿ ಸಮಿತಿಗಳನ್ನು ರಚಿಸಲಾಗಿದೆ. ಅಂಗಳದಲ್ಲಿ ತಿಂಗಳ ಪುಸ್ತಕ ಎಂಬ ಕಾರ್ಯಕ್ರಮಗಳನ್ನು ಪ್ರತಿ ತಿಂಗಳು ಕನಿಷ್ಠ ನೂರು ಮನೆಗಳಲ್ಲಿ ನಡೆಸಿಕೊಡುವುದು ಜಾಗೃತಿ ಸಮಿತಿಯ ಜವಾಬ್ದಾರಿಯಾಗಿದೆ ಎಂದರು.ಅಧ್ಯಕ್ಷತೆ ವಹಿಸಿದ್ದ ಹಾವೇರಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಲಿಂಗಯ್ಯ ಹಿರೇಮಠ ಮಾತನಾಡಿ, ಕರ್ನಾಟಕ ಸರಕಾರದ ಪುಸ್ತಕ ಪ್ರಾಧಿಕಾರ ಎಂದಿಗಿಂತ ಹೆಚ್ಚು ಕ್ರಿಯಾಶೀಲವಾಗಿ ಮನೆ ಮನೆಗೆ ಪುಸ್ತಕ ಪ್ರೀತಿ ಹುಟ್ಟಿಸುವ ಕೆಲಸದ ಜೊತೆಗೆ ಕನ್ನಡ ಕಟ್ಟುವ ಕೆಲಸವನ್ನು ಮಾಡುತ್ತಿದೆ ಎಂದರು.ಈ ಸಂದರ್ಭದಲ್ಲಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಮಾನಸ ಮತ್ತು ವಿಶೇಷಾಧೀಕಾರಿ ಕರಿಯಪ್ಪ ಅವರನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪರವಾಗಿ ಸನ್ಮಾನಿಸಲಾಯಿತು. ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವೈ.ಬಿ. ಆಲದಕಟ್ಟಿ ಸ್ವಾಗತಿಸಿದರು. ಜಾಗೃತಿ ಸಮಿತಿಯ ಸದಸ್ಯ ಎಸ್.ಆರ್. ಹಿರೇಮಠ ನಡೆಸಿದರು. ಪ್ರೊ. ಶೇಖರ ಭಜಂತ್ರಿ ವಂದಿಸಿದರು. ಹಾವೇರಿ ಜಿಲ್ಲಾ ಮನೆಗೊಂದು ಗ್ರಂಥಾಲಯ ಜಾಗೃತಿ ಸಮಿತಿ ಸದಸ್ಯರಾಗಿ ಲಿಂಗಯ್ಯ ಹಿರೇಮಠ, ಸಿ.ಎಸ್. ಮರಳಿಹಳ್ಳಿ, ಡಾ. ಗೀತಾ ಸುತ್ತಕೋಟಿ, ಸಿದ್ದೇಶ್ವರ ಹುಣಸಿಕಟ್ಟಿ, ಅನಿತ ಮಂಜುನಾಥ, ಎಸ್.ಆರ್. ಹಿರೇಮಠ, ಸೋಮಣ್ಣ ಡಂಬರಮತ್ತೂರ, ಸೋಮನಾಥ ಡಿ. ಲಕ್ಷ್ಮಿಕಾಂತ ಮಿರಜಕರ್ ಹಾಗೂ ಜಿಲ್ಲಾ ಸಂಚಾಲಕರಾಗಿ ಸತೀಶ ಕುಲಕರ್ಣಿ ಅವರು ನಾಮಕರಣಗೊಂಡಿದ್ದಾರೆ.