ಸಾರಾಂಶ
ಕನ್ನಡಪ್ರಭ ವಾರ್ತೆ ಬಂಗಾರಪೇಟೆ
ಜನರು ಸಮಸ್ಯೆಗಳಿಗೆ ಕಚೇರಿಗಳಿಗೆ ಅಲೆಯ ಬಾರದೆಂಬ ಉದ್ದೇಶದಿಂದ ಸರ್ಕಾರವೇ ಜನರ ಬಳಿ ಹೋಗಿ ಅವರ ಸಮಸ್ಯೆಗಳನ್ನು ಸ್ಥಳದಲ್ಲೆ ಇತ್ಯರ್ಥಪಡಿಸಲು ಮುಂದಾಗಿದ್ದು ಇದು ಗ್ರಾಮೀಣ ಜನರಿಗೆ ಹೆಚ್ಚಿನ ಅನುಕೂಲವಾಗುತ್ತಿದೆ ಎಂದು ಶಾಸಕ ಎಸ್.ಎನ್ ನಾರಾಯಣಸ್ವಾಮಿ ಹೇಳಿದರು. ತಾಲೂಕಿನ ಬೂದಿಕೋಟೆ ಗ್ರಾಮದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಜನಸ್ಪಂದನಾ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿದರು.ಜನರ ಸೇವೆಗೆ ಅಧಿಕಾರಿಗಳು
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಸಾರ್ವಜನಿಕರು ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಜನಪ್ರತಿನಿಧಿಗಳು ಅಥವಾ ಅಧಿಕಾರಿಗಳ ಬಳಿಗೆ ಬರಬಾರದು, ಬದಲಾಗಿ ಅಧಿಕಾರಿಗಳೇ ಜನರ ಬಳಿಗೆ ಹೋಗಿ ಅವರ ಸಮಸ್ಯೆಗಳನ್ನು ಬಗೆಹರಿಸಬೇಕು ಎಂಬ ಉದ್ದೇಶದಿಂದ ಜನಸ್ಪಂದನಾ ಕಾರ್ಯಕ್ರವನ್ನು ನಡೆಸಲಾಗುತ್ತಿದೆ. ಅಧಿಕಾರಿಗಳು ಸಹ ಉತ್ತಮ ಕೆಲಸ ಮಾಡುತ್ತಿದ್ದು, ಅಕಸ್ಮಾತ್ ಎಲ್ಲಿಯಾದರೂ ತಪ್ಪು ಮಾಡಿದರೆ ನನ್ನ ಗಮನಕ್ಕೆ ತಂದರೆ ಸರಿಪಡಿಸುತ್ತೇನೆ ಎಂದು ಭರವಸೆ ನೀಡಿದರು.ಕಾಂಗ್ರೆಸ್ ಸರ್ಕಾರದಿಂದ ಅನುಷ್ಠಾನ ಮಾಡಿರುವ ಐದು ಗ್ಯಾರಂಟಿಗಳನ್ನು ಸಮರ್ಪಕವಾಗಿ ಜನರಿಗೆ ತಲುಪುತ್ತಿದ್ದು, ಇದರ ಅನುಕೂಲ ಮಹಿಳೆಯರು ಮತ್ತು ಯುವಕರಿಗೆ ಮಾತ್ರವಲ್ಲ್ಲದೆ ಕುಟುಂಬದ ಇತರೆ ಸದಸ್ಯರಿಗೂ ಅನುಕೂಲವಾಗುತ್ತಿದೆ ಎಂದು ಶಾಸಕರು ಹೇಳಿದರು. ೨೫೦ಕ್ಕೂ ಹೆಚ್ಚು ಅರ್ಜಿ ಸಲ್ಲಿಕೆ
ಜನಸ್ಪಂದನಾ ಕಾರ್ಯಕ್ರದಲ್ಲಿ ಕಂದಾಯ ಇಲಾಖೆ, ಪಂಚಾಯಿತಿ, ಸ್ಮಶಾನ, ಫವತಿ ವಾರಸು ಖಾತೆ, ಪಿಂಚಣಿ ಸೇರಿದಂತೆ ವಿವಿಧ ಇಲಾಖೆಗೆ ಸಂಬಂಧಿಸಿದ ಸುಮಾರು ೨೫೦ಕ್ಕೂ ಮೇಲ್ಪಟ್ಟ ಅರ್ಜಿಗಳು ಪಡೆಯಲಾಗಿದೆ. ಹಲವು ಅರ್ಜಿಗಳಿಗೆ ಸ್ಥಳದಲ್ಲೇ ಪರಿಹಾರ ಕಲ್ಪಿಸಲಾಗಿದ್ದು, ಉಳಿದ ಬಾಕಿ ಇರುವ ಅರ್ಜಿಗಳಿಗೆ ಕಾಲಮಿತಿಯೊಳಗೆ ವಿವಿಧ ಇಲಾಖೆಯ ಅಧಿಕಾರಿಗಳ ಮೂಲಕ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಲ್ಪಿಸಲಾಗುತ್ತದೆ. ಜೊತೆಗೆ ಬೂದಿಕೋಟೆ ಗ್ರಾಮದಲ್ಲಿನ ಎಲ್ಲಾ ಸ್ಮಶಾನಗಳನ್ನು ಸರ್ವೆ ನಡೆಸಿ ಒತ್ತುವರಿ ಆಗಿದ್ದರೆ ತೆರವುಗೊಳಿಸಿ, ಫೆನ್ಸಿಂಗ್ ಅಳವಡಿಸಲಾಗುವುದು ಎಂದರು.ಬೂದಿಕೋಟೆ ಅಭಿವೃದ್ಧಿಗೆ ₹80 ಲಕ್ಷಬಹಳ ಹುಮ್ಮಸ್ಸಿನಿಂದ ಮಲ್ಲೇಶ್ ಬಾಬುರವರಿಗೆ ಜನ ಮತ ಹಾಕಿ ಸಂಸದರನ್ನಾಗಿ ಆಯ್ಕೆ ಮಾಡಿದ್ದಾರೆ. ಅವರು ಏನು ಅಭಿವೃದ್ದಿ ಮಾಡುತ್ತಾರೋ ಮುಂದೆ ನೋಡೋಣ. ಬೂದಿಕೋಟೆ ಹೋಬಳಿ ವ್ಯಾಪ್ತಿಯಲ್ಲಿ ಬಹಳಷ್ಟು ಅಭಿವೃದ್ದಿ ಕಾರ್ಯಗಳನ್ನು ಮಾಡಿದ್ದೇನೆ. ಈಗಲೂ ಬೂದಿಕೋಟೆ ಗ್ರಾಮದಲ್ಲಿ ಹಲವು ಕಾಮಗಾರಿಗಳನ್ನು ನೆರವೇರಿಸಲು ೮೦ ಲಕ್ಷ ಅನುದಾನವನ್ನು ಮೀಸಲಿಡಲಾಗಿದೆ ಎಂದರು. ಈ ಸಂದರ್ಭದಲ್ಲಿ ಎಸಿ ಡಾ.ಮೈತ್ರಿ, ತಹಸೀಲ್ದಾರ್ ಯು. ರಶ್ಮಿ, ಡಿವೈಎಸ್ಪಿ ಪಾಂಡುರಂಗ, ಸರ್ಕಲ್ ಇನ್ಸ್‌ಪೆಕ್ಟರ್ ನಾರಾಯಣಸ್ವಾಮಿ, ತಾ.ಪಂ ಇಒ ರವಿಕುಮಾರ್, ಬಿಇಒ ಸುಕನ್ಯಾ, ಸಿಡಿಪಿಒ ಮುನಿರಾಜ್, ಗ್ರಾಪಂ ಅಧ್ಯಕ್ಷ ಬಿಆರ್.ಮಂಜುನಾಥ, ತಾಪಂ ಮಾಜಿ ಅಧ್ಯಕ್ಷ ಮಹದೇವ್, ರಾಜಸ್ವ ನಿರೀಕ್ಷಕ ಪವನ್‌ಕುಮಾರ್, ಮುಖಂಡರಾದ ಎ.ಬಾಬು, ಆರ್. ವಿಜಯಕುಮಾರ್, ಚಂದ್ರಶೇಖರ್, ಮುನಿಸ್ವಾಮಿಶೆಟ್ಟಿ ಹಾಗೂ ತಾಲ್ಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.