ಈ ಬಾರಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 40 ಡಿಗ್ರಿ ಸಲ್ಸಿಯಸ್ ತಾಪಮಾನ ದಾಖಲೆಯಾಗಿದ್ದು. ಈ ರಣ ಬಿಸಿಲಿನ ಪರಿಣಾಮ ಬೆಳೆದ ಬೆಳೆಗಳೆಲ್ಲವೂ ನಾಶವಾಗುವ ಹಂತ ತಲುಪಿದ್ದವು. ಇತ್ತೀಚಿನ ಮಳೆಯಿಂದಾಗಿ ಮತ್ತೆ ಚೇತರಿಸಿಕೊಳ್ಳುತ್ತಿವೆ

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಹಾಲು,ರೇಷ್ಮೆ,ಹೂವು, ಹಣ್ಣು, ತರಕಾರಿಗಳಿಗೆ ಖ್ಯಾತಿಯಾಗಿರುವ ಚಿಕ್ಕಬಳ್ಳಾಪುರ ಜಿಲ್ಲೆಯ ರೈತರು ಮಳೆರಾಯನ ಮೇಲೆ ಅವಲಂಬಿತರಾಗಿದ್ದರು. ಆದರೆ ಸಕಾಲಕ್ಕೆ ಮಳೆ-ಬೆಳೆ ಇಲ್ಲದೇ ಕಳೆದ ವರ್ಷವೂ ಬರಗಾಲಕ್ಕೆ ತುತ್ತಾಗಿದ್ದರು. ಕೊನೆಗೂ ಕಳೆದ ವಾರದಿಂದ ಧಾರಾಕಾರವಾಗಿ ಸುರಿದ ಮಳೆಯಿಂದಾಗಿ, ಬರದಿಂದ ನೀರಿಲ್ಲದೆ ಸೊರಗಿ ಹೋಗಿದ್ದ ಬೆಳೆಗಳೆಲ್ಲವೂ ಈಗ ಮರು ಜೀವ ಪಡೆದುಕೊಂಡಿದ್ದು ಜೀವ ಕಳೆ ತುಂಬಿಕೊಂಡು ನಳನಳಿಸುತ್ತಿವೆ.

ಆದರೆ ಈ ಬಾರಿ ಜಿಲ್ಲೆಯಲ್ಲಿ 40 ಡಿಗ್ರಿ ಸಲ್ಸಿಯಸ್ ತಾಪಮಾನ ದಾಖಲೆಯಾಗಿದ್ದು. ಈ ರಣ ಬಿಸಿಲಿನ ಪರಿಣಾಮ ಬೆಳೆದ ಬೆಳೆಗಳೆಲ್ಲವೂ ನಾಶವಾಗುವಂತಾಗಿತ್ತು.

ಬಿಸಿಲಿಗೆ ಬಾಡಿದ ತರಕಾರಿ ಬೆಳೆ

ಜಿಲ್ಲೆಯರೈತರು ಹೂವು ಹಣ್ಣು ತರಕಾರಿಗಳನ್ನ ಬೆಳೆಯೋದರಲ್ಲಿ ಖ್ಯಾತಿಯಾಗಿದ್ದಾರೆ. ಆದರೆ ಈ ಬಾರಿಯ ರಣಬಿಸಿಲಿನ ಪರಿಣಾಮ ಜಿಲ್ಲೆಯಲ್ಲೂ ಸಹ ದಾಖಲೆಯ ಉಷ್ಣಾಂಶ ತಾಪಮಾನ ಏರಿಕೆಯಿಂದಾಗಿ ಬೆಳೆಗಳೆಲ್ಲವೂ ಒಣಗುವಂತಾಗಿತ್ತು.

ರೈತರು ಬೆಳೆದ ಸೇವಂತಿ, ಚೆಂಡು, ರೋಸ್ ಹೂವು ತೋಟಗಳಂತೂ ಸಂಪೂರ್ಣ ಬಿಸಿಲಿನ ತಾಪಮಾನದಿಂದ ಒಣಗಿ ಹೋಗಿತ್ತು. ಆದರೆ ಕಳೆದ ಎರಡು ಮೂರು ದಿನಗಳಿಂದ ಸುರಿದ ಧಾರಾಕಾರ ಮಳೆಗೆ ಜಿಲ್ಲೆಯಾದ್ಯಂತ ಹೊಸ ಜೀವ ಕಳೆ ಬಂದಿದೆ. ಜಿಲ್ಲೆಯ ವಿವಿಧೆಡೆ ಮಳೆ ಸುರಿದಿರುವುದು ಅನ್ನದಾತರಿಗೆ ಸಂತಸವಾಗಿದೆ.

ಬಿತ್ತನೆಗೆ ರೈತರ ಸಿದ್ಧತೆ

ಕಳೆದ ಬಾರಿ ಮಳೆಯಾಶ್ರಿತ ಜಮೀನುಗಳು ಬಿತ್ತನೆಯಾದರೂ ಬೆಳೆ ಇಲ್ಲದೇ ಸೊರಗಿದ್ದವು. ಇದರಿಂದ ಚಿಕ್ಕಬಳ್ಳಾಪುರ ತಾಲ್ಲೂಕು ಬರಪೀಡಿತ ತಾಲ್ಲೂಕು ಆಗಿತ್ತು. ಆದರೆ ಈಗ ವಾರದಿಂದ ಬಿದ್ದ ಮಳೆಯಿಂದಾಗಿ ಮತ್ತೆ ಚಿಕ್ಕಬಳ್ಳಾಫುರ ತಾಲೂಕು ಫಲಪುಷ್ಪ ಗಿರಿಧಾಮಗಳ ನಾಡಾಗಿ ಕಂಗೊಳಿಸಲು ಶುರುವಾಗಿದೆ. ಸಹಜವಾಗಿ ಜಿಲ್ಲೆಯ ರೈತರು, ಮಳೆಯಾಶ್ರಿತ ಪ್ರದೇಶಗಳಲ್ಲಿ ರಾಗಿ, ಜೋಳ, ನೆಲಗಡಲೆ, ಅವರೆ,ಹಲಸಂದೆ, ಸಾಸುವೆ, ಹುಚ್ಚೆಳ್ಳು ಸೇರಿದಂತೆ ನಾನಾ ರೀತಿಯ ಸಾಂಪ್ರದಾಯಕ ಬೆಳೆಗಳನ್ನು ಬೆಳೆಯುತ್ತಾರೆ.

ಈ ಭಾರಿ ಜಿಲ್ಲೆಯ ರೈತರು ಉತ್ತಮ ಮಳೆಯಾಗಲಿ ಎಂದು ಸಾಕಷ್ಟು ದೇವರುಗಳ ಮೊರೆ ಸಹಾ ಹೋಗಿದ್ದರು. ಆದರೆ ಮುಂಗಾರು ಪೂರ್ವ ಮಳೆಯು ರೈತರ ಮೊಗದಲ್ಲಿ ಹರ್ಷ ತಂದಿದ್ದು, ರೈತರು ತಮ್ಮ ಜಮೀನುಗಳನ್ನು ಉಳುಮೆ ಮಾಡಿ,ಹದಗೊಳಿಸಿ ಬಿತ್ತನೆಗೆ ಸಿದ್ದಗೊಳಿಸಿಕೊಳ್ಳುತ್ತಿದ್ದಾರೆ.