ಸಾರಾಂಶ
ಖಾಜಾಮೈನುದ್ದೀನ್ ಪಟೇಲ್
ಕನ್ನಡಪ್ರಭ ವಾರ್ತೆ ವಿಜಯಪುರ ಕಳೆದ ಸಾರಿಯ ಬರಗಾಲದಿಂದ ಜನರು ಕಂಗಾಲಾಗಿದ್ದರು. ಆದರೆ, ಈ ಸಾರಿ ಮಳೆಯಾರ್ಭಟ ಜೋರಾಗಿದೆ. ಆದರೆ, ಮಹಾನಗರ ಪಾಲಿಕೆ ಮಳೆಗಾಲದ ಮುನ್ನೆಚ್ಚರಿಕೆ ತೆಗೆದುಕೊಳ್ಳದ ಕಾರಣಕ್ಕೆ ಜನರು ಪರದಾಟ ಅನುಭವಿಸುವ ಸ್ಥಿತಿ ಬಂದು ಮಹಾನಗರ ಪಾಲಿಕೆಯ ಅಧಿಕಾರಿಗಳ ವಿರುದ್ಧ ಹರಿಹಾಯುತ್ತಿದ್ದಾರೆ.ನಗರದಲ್ಲಿ ಒಂದು ಗಂಟೆಗೂ ಅಧಿಕ ಧಾರಾಕಾರ ಮಳೆ ಬಂದರೆ ನಗರದಲ್ಲಿ ವಿವಿಧ ಬಡಾವಣೆಗಳ ಮುಖ್ಯರಸ್ತೆಗಳಲ್ಲಿ ಅಪಾರ ಪ್ರಮಾಣದಲ್ಲಿ ನೀರು ಸಂಗ್ರಹವಾಗುತ್ತಿದೆ. ಚರಂಡಿಗಳು ತುಂಬಿ ಕೊಳಚೆ ನೀರು ರಸ್ತೆ ಮೇಲೆಯೇ ಹರಿಯುತ್ತಿದೆ. ಮರಗಳು ನೆಲಕ್ಕುರುಳುವುದು, ವಿದ್ಯುತ್ ಪರಿಕರಗಳಿಗೆ ಹಾನಿಯಾಗುವುದು, ತಗ್ಗು ಪ್ರದೇಶದಲ್ಲಿನ ಮನೆಗಳಿಗೆ ನೀರು ನುಗ್ಗುವುದು ಸಾಮಾನ್ಯವಾಗಿದೆ. ನಗರದಲ್ಲಿ ಕಳೆದ ಗುರುವಾರ ಹಾಗೂ ಶನಿವಾರ ಸುರಿದ ಭಾರೀ ಮಳೆ ಅನೇಕ ಅವಾಂತರಗಳನ್ನು ಸೃಷ್ಟಿಸಿದೆ. ಪೊಲೀಸ್ ವಸತಿ ಗೃಹ ಸೇರಿದಂತೆ ಅನೇಕ ಕಡೆಗಳಲ್ಲಿ ನೀರು ನುಗ್ಗಿತ್ತು. ರಾತ್ರಿಯಿಡಿ ಕಾರ್ಯಾಚರಣೆ ನಡೆದಿತ್ತು. ಅನೇಕ ಬೃಹತ್ ಮರಗಳು ಧರೆಗುರುಳಿದ್ದವು. ವಿದ್ಯುತ್ ಕಂಬಗಳು ಸಹ ನೆಲಕ್ಕುರುಳಿದ್ದವು. ಅನೇಕ ಬಡಾವಣೆಗಳಿಗೆ ನೀರು ನುಗ್ಗಿತ್ತು. ಜಮಖಂಡಿ ರಸ್ತೆ ಭಾಗದ ಬಡಾವಣೆಗಳಲ್ಲಿ ದೊಡ್ಡ ಆತಂಕ ಶುರುವಾಗಿದೆ.
ನಿವಾಸಿಗಳಿಂದ ರಸ್ತೆ ತಡೆ:ರಾಮ ನಗರ, ಕನ್ನಾನ್ ನಗರ, ಪ್ರೈಂ ಬಡಾವಣೆ ಸೇರಿದಂತೆ ಅನೇಕ ಭಾಗಗಳಿಂದ ದೊಡ್ಡ ಮಟ್ಟದ ನೀರು ಈ ಭಾಗಕ್ಕೆ ನುಗ್ಗುತ್ತಿದೆ. ಪ್ರವಾಹ ರೀತಿಯ ವಾತಾವರಣ ಸೃಷ್ಟಿಯಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿ ನಿವಾಸಿಗಳು ದೊಡ್ಡ ಹೋರಾಟವನ್ನೇ ಮಾಡಿದ್ದು ಜಮಖಂಡಿ ರಸ್ತೆಯನ್ನೇ ಕೆಲ ಕಾಲ ತಡೆದು ಹೋರಾಟ ನಡೆಸಿದರು.
ನಗರದ ಸರ್ದಾರ್ ವಲ್ಲಭಬಾಯಿ ವೃತ್ತದಲ್ಲಿ ರಸ್ತೆ ತಡೆದು ಹೋರಾಟ ರಸ್ತೆಗೆ ಮುಳ್ಳು ಕಂಟಿಗಳನ್ನು ಹಚ್ಚಿ ಬಡವಾಣೆಯ ಇಬ್ರಾಹಿಂನಗರ, ಭಾಗವಾನ್ ಕಾಲೋಣಿ, ಮುಜಾವರ್ ಕಾಲೋನಿ, ಪ್ರೈಂ ನಗರದ ಸೇರಿದಂತೆ ಇತರರೆ ಕಾಲೋನಿಗಳ ನಿವಾಸಗಳು ಪ್ರತಿಭಟನೆ ನಡೆಸಿದರು.ನಿವಾಸಿಗಳ ಗೋಳಾಟ:
ಬಬಲೇಶ್ವರ ಜಮಖಂಡಿ ರಸ್ತೆ ಮಾರ್ಗ ಹಾಗೂ ವಜ್ರಹನುಮಾನ ನಗರ ರಾಮನಗರ ನವಭಾಗ ರಸ್ತೆ ವಾಟರ್ ಟ್ಯಾಂಕ್ ರಸ್ತೆ ಸಂಪರ್ಕ ಬಂದ್ ಆಗಿದರಿಂದ ಸಾಲುಗಟ್ಟಿ ನಿಂತ ವಾಹನದಿಂದ ಸವಾರು ಪರದಾಟ ನಡೆಸಿದರೆ ಇತ್ತ ಮಳೆ ನೀರು ಮನೆ ಒಳಗೆ ನಿಲ್ಲುತ್ತದೆಂದು ನಿವಾಸಿಗಳ ಗೋಳಾಗುತ್ತಿದ್ದಾರೆ. ಒಟ್ಟಿನಲ್ಲಿ ಪಾಲಿಕೆ ಅಧಿಕಾರಿಗಳನ್ನು ಪ್ರತಿಭಟನಾಕಾರರು ಹಾಗೂ ವಾಹನ ಸವಾರು ತರಾಟೆಗೆ ತೆಗೆದುಕೊಂಡು ಘಟನೆ ನಡೆದಿದೆ.ಪಾಲಿಕೆಗೆ ಹಿಡಿಶಾಪ:
ನಗರದ ವಾರ್ಡ್ ನಂಬರ್ ೧೨ರ ಮಲ್ಲಿಕಾರ್ಜುನ ನಗರದದಲ್ಲಿ ಸಾಕಷ್ಟು ಮನೆಗಳಿದ್ದು, ಒಳ್ಳೆಯ ಪ್ರಜ್ಞಾವಂತರ ಬಡಾವಣೆ ಅಂದರೆ ತಪ್ಪಾಗಲಿಕ್ಕಿಲ್ಲ. ಪ್ರತಿವರ್ಷ ಘರಪಟ್ಟಿ ಮುಂಚಿತವಾಗಿಯೇ ತುಂಬುತ್ತಾ ಬಂದಿದ್ದು, ಇಲ್ಲಿಯವರೆಗೆ ಒಂದು ಮನೆಯ ಬಾಕಿ ಕೂಡಾ ಉಳಿದಿಲ್ಲ. ಆದರೆ ಸುಮಾರು ೧೯೮೪ ರಲ್ಲಿಯೇ ಎನ್.ಎ ಆಗಿ ಪರಿವರ್ತನೆ ಆಗಿದ್ದರೂ ಇಲ್ಲಿಯವರೆಗೆ ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿ ಪ್ರತಿ ಸಲ ಮಳೆ ಬಂದಾಗಲೂ ಕೆರಸು ಗದ್ದೆಯಾದ ರಸ್ತೆಗಳನ್ನು ನೋಡಿ ಮಹಾನಗರಪಾಲಿಕೆ ಅಧಿಕಾರಿಗಳಿಗೆ ನಿವಾಸಿಗಳು ಹಿಡಿಶಾಪ ಹಾಕುವುದು ತಪ್ಪುತ್ತಿಲ್ಲ.--
ಬಾಕ್ಸ್ನದಿ ಪಾತ್ರಗಳಲ್ಲಿ ಎಚ್ಚರಿಕೆ
ಆಲಮಟ್ಟಿ ಜಲಾಶಯದಲ್ಲಿಯೂ ವ್ಯಾಪಕವಾದ ಒಳಹರಿವು ಪ್ರಮಾಣ ಹೆಚ್ಚಾಗುತ್ತಿದೆ. ಡೋಣಿ ನದಿಯೂ ತನ್ನ ಹರಿಯುವ ಮಾರ್ಗ ಬದಲಾವಣೆಯಿಂದ ಅನೇಕ ಗ್ರಾಮಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ. ಡೋಣಿ ವ್ಯಾಪ್ತಿಯ ಚಬನೂರ, ದಾಸ್ಯಾಳ, ಸಾಸನೂರ, ತುಂಬಗಿ, ಹಿರೂರ, ಪತ್ತೇಪೂರ, ಬೋಳವಾಡ, ಗುತ್ತಿಹಾಳ, ತಾಳಿಕೋಟೆ, ಮಿಣಜಿ, ಹಡಗಿನಾಳ, ಹರನಾಳ, ನಾಗೂರ ಸೇರಿದಂತೆ ಗ್ರಾಮಗಳಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗುವ ಸಾಧ್ಯತೆ ಇದ್ದು, ಈ ಗ್ರಾಮದ ಜನತೆ ಅತ್ಯಂತ ಎಚ್ಚರಿಕೆಯಿಂದ ಇರಬೇಕು, ನದಿಪಾತ್ರಕ್ಕೆ ತೆರಳಬಾರದು ಎಂದು ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ.---
ಆಲಮಟ್ಟಿ 3,879 ಕ್ಯುಸೆಕ್ ಒಳ ಹರಿವುನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಆಲಮಟ್ಟಿ ಒಳ ಹರಿವು 3,879 ಕ್ಯುಸೆಕ್ ಇದೆ. ಜಲಾಶಯದಿಂದ ಕೆಪಿಸಿಎಲ್ ಮೂಲಕ ನದಿ ಪಾತ್ರಕ್ಕೆ 50 ಕ್ಯುಸೆಕ್ ಮತ್ತು 380 ಕುಡಿಯುವ ನೀರು ನೀಡಲಾಗಿದೆ. 430 ಕ್ಯುಸೆಕ್ ಹೊರಹರಿವು ಇದೆ.
--ಕೋಟ್
ಮಳೆಯಾದರೆ ಜೀವ ಕೈಯಲ್ಲಿ ಹಿಡಿದು ಜನರು ಮನೆ ಬಿಟ್ಟು ಸುರಕ್ಷಿತ ಜಾಗಗಳಿಗೆ ಹೋಗೋ ಅನಿವಾರ್ಯತೆ ಇದೆ. ಮನೆಗಳಲ್ಲಿರೋ ವಸ್ತಗಳು ಧವಸ ಧಾನ್ಯ ಬಟ್ಟೆಗಳು ನೀರಲ್ಲಿ ನೆನೆದು ಹಾನಿಯಾಗುತ್ತದೆ.-ಇಮರಾನ್ ಬಾಗವಾನ. ಭಾಗವಾನ್ ಕಾಲೋನಿ.
--ಮಳೆ ಬಂದರೆ ಸಾಕು ರಸ್ತೆ ತುಂಬೆಲ್ಲ ನೀರು ನಿಂತು ಸಾಕಷ್ಟು ಜನಜಂಗುಳಿಯಿಂದ ಕೂಡಿರುವ ಈ ರಸ್ತೆಯಲ್ಲಿ ಅನೇಕ ಅಪಘಾತಗಳು ಆಗಿದ್ದು ಉಂಟು. ಪಕ್ಕದಲ್ಲಿಯೇ ಇರುವ ಜ್ಞಾನಯೋಗಾಶ್ರಮಕ್ಕೆ ನಗರ ಮಾತ್ರವಲ್ಲದೇ ಬೇರೆ ಬೇರೆ ಜಿಲ್ಲೆ ಹಾಗೂ ರಾಜ್ಯಗಳಿಂದ ಭಕ್ತಾದಿಗಳು ಆಗಮಿಸುವರು. ಆದರೆ ಆಶ್ರಮದ ಪಕ್ಕದಲ್ಲಿರುವ ಈ ಬಡಾವಣೆಯಲ್ಲಿ ಅಭಿವೃದ್ಧಿ ಎನ್ನುವುದು ಮರೀಚಿಕೆ ಆಗಿದೆ.
- ವಿಜಯಾ ನಂದರಗಿ, ವಾರ್ಡ್ ನಂ.೧೨ ರ ನಿವಾಸಿ.