ಅಭಯಾರಣ್ಯ ವ್ಯಾಪ್ತಿಯ ಗ್ರಾಮಗಳ ಸ್ಥಳಾಂತರ ಹುನ್ನಾರ?

| Published : Apr 24 2024, 02:20 AM IST

ಅಭಯಾರಣ್ಯ ವ್ಯಾಪ್ತಿಯ ಗ್ರಾಮಗಳ ಸ್ಥಳಾಂತರ ಹುನ್ನಾರ?
Share this Article
  • FB
  • TW
  • Linkdin
  • Email

ಸಾರಾಂಶ

ಶರಾವತಿ ಕಣಿವೆ ಸಿಂಗಳೀಕ ಅಭಯಾರಣ್ಯ ವ್ಯಾಪ್ತಿಯಲ್ಲಿರುವ ಕಂದಾಯ ಗ್ರಾಮಗಳನ್ನು ಸ್ಥಳಾಂತರಿಸಲು ಸರ್ಕಾರ ಹುನ್ನಾರ ನಡೆಸಿದ್ದು, ವಿಷಯ ತಿಳಿಯುತ್ತಿದ್ದಂತೆಯೇ ಗ್ರಾಮಸ್ಥರು ದಿಗ್ಭ್ರಾಂತಿ ವ್ಯಕ್ತಪಡಿಸಿದ್ದಾರೆ.

ಕಲಗಾರು ಲಕ್ಷ್ಮೀನಾರಾಯಣ ಹೆಗಡೆ

ಕನ್ನಡಪ್ರಭ ವಾರ್ತೆ ತಾಳಗುಪ್ಪ

ಹಲವು ಸಂಕೀರ್ಣ ಸಮಸ್ಯೆ ನಡುವೆಯೂ ಕಷ್ಟದ ಬದುಕಿಗೆ ಒಗ್ಗಿಕೊಂಡಿರುವ ಶರಾವತಿ ಕಣಿವೆ ಸಿಂಗಳೀಕ ಅಭಯಾರಣ್ಯ ವ್ಯಾಪ್ತಿಯಲ್ಲಿರುವ ಕಂದಾಯ ಗ್ರಾಮಗಳನ್ನು ಸ್ಥಳಾಂತರಿಸಲು ಸರ್ಕಾರ ಹುನ್ನಾರ ನಡೆಸಿದ್ದು, ವಿಷಯ ತಿಳಿಯುತ್ತಿದ್ದಂತೆಯೇ ಗ್ರಾಮಸ್ಥರು ದಿಗ್ಭ್ರಾಂತಿ ವ್ಯಕ್ತಪಡಿಸಿದ್ದಾರೆ. ಅಭಯಾರಣ್ಯದಲ್ಲಿರುವ ಉರಳುಗಲ್ಲು, ಕಾನೂರು, ಮೇಘಾನೆ, ಸಾಲಕೊಡ್ಲು, ಚೀಕನಹಳ್ಳಿ, ಹೆಬ್ಬಾನಕೇರಿ, ಮುಂಡವಾಳ, ಬೆಳ್ಳೂರು ಗ್ರಾಮಸ್ಥರು ಮೂಲಭೂತ ಸೌಲಭ್ಯ ಕೇಳಿದರೆ, ಸರ್ಕಾರ ಅವರನ್ನು ಸ್ಥಳಾಂತರಿಸಲು ಮುಂದಾಗಿರುವುದಕ್ಕೆ ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಸಾಗರ ವಿಧಾನಸಭಾ ಕ್ಷೇತ್ರ ಶಾಸಕ ಬೇಳೂರು ಗೋಪಾಲಕೃಷ್ಣ 2024ರ ಜನವರಿ 31ರಂದು ರಾಜ್ಯ ಅರಣ್ಯ, ಜೀವಿಶಾಸ್ತ್ರ, ಪರಿಸರ ಸಚಿವ ಈಶ್ವರ ಖಂಡ್ರೆಯವರಿಗೆ ಪತ್ರ ಬರೆದು ಕುಗ್ರಾಮಗಳ ಸಂಕಷ್ಟ ನಿವಾರಣೆಗೆ ನಾಗರಿಕ ಪುನರ್ವಸತಿಗಾಗಿ ಕ್ರಮ ಕೈಗೊಳ್ಳಲು ಕೋರಿದ್ದು ಈಗ ಗ್ರಾಮಸ್ಥರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಪರಿಹಾರಾತ್ಮಕ ಅರಣ್ಯೀಕರಣ ನಿಧಿಯಲ್ಲಿ ಕರ್ನಾಟಕದ ಪಾಲು ಸಾವಿರ ಕೋಟಿಗೂ ಅಧಿಕ ಹಣ ಲಭ್ಯವಿದೆ. ನಿಯಮ 2018 ಸೆಕ್ಷನ್ 5 ರಂತೆ ಶೇ.80ರಷ್ಟು ಹಣ ಅಭಯಾರಣ್ಯದಲ್ಲಿ ಸೌಲಭ್ಯ ವಂಚಿತರಿಗೆ ಪುನರ್ವಸತಿಗಾಗಿ ಬಳಸಿಕೊಳ್ಳಬಹುದಾಗಿದೆ. ಅಲ್ಲದೆ ಕೇಂದ್ರ ಹಾಗೂ ರಾಜ್ಯ ಸರಕಾರಗಳ ಪುನರ್ವಸತಿ ಪ್ಯಾಕೇಜ್‍ಗಳಿದ್ದು, ಕೇಂದ್ರ ಸರಕಾರದ ಪರಿಸರ ಅರಣ್ಯ, ಹವಾಮಾನ ಮಂತ್ರಾಲಯದ ಯೋಜನೆಗಳಡಿ ಪುನರ್ವಸತಿಗೊಳ್ಳುವ ಕುಟುಂಬಗಳಿಗೆ ಪ್ಯಾಕೇಜ್ ಲಭ್ಯವಿರುತ್ತದೆ. ಮೊದಲ ಹಂತದಲ್ಲಿ ಉರಳುಗಲ್ಲು, ಕಾನೂರು, ಮೇಘಾನೆ ಹಳ್ಳಿಗಳನ್ನು, ಎರಡನೇ ಹಂತದಲ್ಲಿ ಸಾಲಕೊಡ್ಲು, ಚೀಕನಹಳ್ಳಿ, ಹೆಬ್ಬಾನಕೇರಿ, ಮುಂಡವಾಳ, ಬೆಳ್ಳೂರು ಗ್ರಾಮದ ಪುನರ್ವಸತಿ ಕೈಗೆತ್ತಿಕೊಳ್ಳಬಹುದಾಗಿದೆ ಎಂದು ವಿವರಿಸಿ, ಸೂಕ್ತ ಕ್ರಮಕ್ಕೆ ಕೋರಿದ್ದಾರೆ.

ಅರಣ್ಯ ಸಚಿವರು ಇದೇ ಕೋರಿಕೆ ಅವಲಂಬಿಸಿ ಫೆ. 23ರಂದು ಟಿಪ್ಪಣಿ ಲಗತ್ತಿಸಿ, ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಮಾರ್ಚ್‌ 15ರಂದು ಶಿವಮೊಗ್ಗ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗೆ ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ. ಶಿವಮೊಗ್ಗಾದ ಅರಣ್ಯ ಸಂರಕ್ಷಣಾಧಿಕಾರಿ

ಅವರು ಏಪ್ರಿಲ್ 2ರಂದು ಪ್ರಸಾವನೆ ಅವಲೋಕಿಸಿ, ಸಂಬಂಧಪಟ್ಟ ಸ್ಥಳಗಳಿಗೆ ಭೇಟಿ ನೀಡಿ ಅಭಿಪ್ರಾಯ ಸಂಗ್ರಹಿಸಿ, ಸೂಕ್ತ ಪ್ಯಾಕೇಜ್ ಅಡಿಯಲ್ಲಿ ಪುನರ್ವಸತಿಗಾಗಿ ವಿವರವಾದ ವರದಿಯೊಡನೆ ಪ್ರಸ್ತಾವನೆ ಒಂದು ತಿಂಗಳಲ್ಲಿ ಸಲ್ಲಿಸಲು ಉಪ ಅರಣ್ಯ ಸಂರಕ್ಷಣಾಧಿಗಳಿಗೆ ಸೂಚಿಸಿದ್ದಾರೆ.ಮಾಹಿತಿಯೇ ಇಲ್ಲ ಎನ್ನುತ್ತಾರೆ ಸ್ಥಳೀಯರು:

ಶಾಸಕ ಬೇಳೂರು ಗೋಪಾಲಕೃಷ್ಣ ಅರಣ್ಯ ಸಚಿವರಿಗೆ ಪತ್ರ ಬರೆದಿದ್ದಾಗಲಿ, ಅದರನ್ವಯ ಪುನರ್ವಸತಿ ಪಕ್ರಿಯೆ ಪ್ರಾರಂಭಗೊಂಡಿರುವ ಯಾವ ಮಾಹಿತಿಯೂ ಉರಳುಗಲ್ಲು, ಹೆಬ್ಬಾನಕೆರೆ, ಮೇಘಾನೆ ಗ್ರಾಮದ ಜನರಿಗೆ ಇಲ್ಲ. 2022ರಲ್ಲಿ ಅರಣ್ಯ ಸಿಬ್ಬಂದಿಯಿಂದ ನಡೆದ ದೌರ್ಜನ್ಯಕ್ಕೆ ಬೇಸತ್ತು, ಕಾನೂರು ಕೋಟೆ ಸಮೀಪದ ನಾಲ್ಕು ಕುಟುಂಬಗಳು ಪುನರ್ವಸತಿ ಕೋರಿದ್ದರೂ ನಂತರ ಅದರಿಂದ ಹಿಂದೆ ಸರಿದಿದ್ದಾರೆ ಎನ್ನುತ್ತಾರೆ ಸ್ಥಳೀಯರು. ಪುನರ್ವಸತಿಯ ಪರಿಹಾರವೆಷ್ಟು?

ಅಭಯಾರಣ್ಯ ವ್ಯಾಪ್ತಿ ಕಂದಾಯ ಗ್ರಾಮದ ಜನರನ್ನು ಒತ್ತಾಯ ಪೂರ್ವಕವಾಗಿ ಸ್ಥಳಾಂತರಿಸಲು ಅವಕಾಶವಿಲ್ಲ. ವ್ಯಕ್ತಿ ಸ್ವಯಂ ಇಚ್ಛಿತನಾಗಿದ್ದರೆ ಪರಿಹಾರ ನೀಡಿ ಅವನ ಭೂಮಿ ಅರಣ್ಯಕ್ಕೆ ಸೇರಿಸಿಕೊಳ್ಳಬಹುದು. ಆದರೆ. ಅವರು ಬಿಟ್ಟು ಕೊಡುವ ಜಮೀನಿಗೆ ಮೌಲ್ಯ ಮಾಪನ ಇಲ್ಲ. ಪುನರ್ವಸತಿಗೊಳಗಾಗುವ ಕುಟಂಬ ಒಂದಕ್ಕೆ 15 ಲಕ್ಷ ರು. ಮಾತ್ರ ನೀಡಲಾಗುತ್ತದೆ. 18 ವರ್ಷ ಮೇಲ್ಪಟ್ಟ ವಯಸ್ಕ ಒಂದು ಕುಟುಂಬ ಎಂದು ಪರಿಗಣಿಸಲಾಗುತ್ತದೆ.

ಶರಾವತಿ ವನ್ಯಜೀವಿ ಅಭಯಾರಣ್ಯವು ಪಶ್ಚಿಮ ಘಟ್ಟಗಳಲ್ಲಿರುವ ಸಂರಕ್ಷಿತ ವನ್ಯಜೀವಿ ಅಭಯಾರಣ್ಯ . ಸರಕಾರಿ ಆದೇಶ ನಂ. ಎಫ್‍ಡಿ70 ಎಫ್‍ಡಬ್ಲೂ-71ರ ಪ್ರಕಾರ 1972ರ ಏಪ್ರಿಲ್ 20ರಂದು ಘೋಷಣೆಯಾದ ಶರಾವತಿ ಅಭಯಾರಣ್ಯವು 401.23 ಚದುರ ಕಿಮಿ ಅಥವಾ 1,06,240 ಎಕರೆ ವಿಸ್ತೀರ್ಣ ಹೊಂದಿದೆ. ಕಾರ್ಗಲ್, ಕೋಗಾರ್ ಎಂಬ ಎರಡು ವಿಭಾಗದಲ್ಲಿ ಕಾರ್ಯ ಚಟುವಟಿಕೆ ಹೊಂದಿದೆ. ನಂತರ ಉತ್ತರ ಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಅಸ್ತಿತ್ವದಲ್ಲಿರುವ ಮೀಸಲು ಅರಣ್ಯ, ಅಭಯಾರಣ್ಯವನ್ನು ಸೇರಿಸಿ 2019ರಲ್ಲಿ 930.16 ಚದುರ ಕಿಮಿಗೆ (359.14 ಚದರ ಮೈಲಿ) ವಿಸ್ತರಿಸಿ ಶರಾವತಿ ಸಿಂಗಳೀಕ ಅಭಯಾರಣ್ಯ ಎಂದು ಮರು ನಾಮಕರಣ ಮಾಡಲಾಯಿತು.ಇನ್ನು, ರಸ್ತೆ, ವಿದ್ಯುತ್, ಮೊಬೈಲ್‌ ಟವರ್‌ ಸೌಕರ್ಯಕ್ಕೆ ಒತ್ತಾಯಿಸಿದ್ದೇವೆಯೇ ಹೊರತು ಪುನರ್ವಸತಿಯನ್ನಲ್ಲ ಎನ್ನತ್ತಾರೆ ಸ್ಥಳೀಯರಾದ ನಾಗರಾಜ ಸಾಲ್ಕೋಡು.

ತಲತಲಾಂತರದಿಂದ ಬದುಕಿ ಬಾಳಿದ ನೆಲೆ ತೊರೆಯುವ ಯಾವ ಯೋಚನೆಯೂ ಉರಳುಗಲ್ಲಿನ ಗ್ರಾಮಸ್ಥರಿಗಿಲ್ಲ. ನಮಗೆ ನೆಮ್ಮದಿಯಿಂದ ಬದುಕಲು ಬಿಡಿ ಎಂಬುದಷ್ಟೇ ನಮ್ಮ ಬೇಡಿಕೆ ಎಂದು ಮತ್ತೊಬ್ಬರು ಲಕ್ಷ್ಮಣ ಹೆಬ್ಬಾನಕೇರಿ ಹೇಳಿದರು.

ಮಾ.6ರಂದು ಭಾನ್ಕುಳಿಯಲ್ಲಿ ನಡೆದ ಜಿಲ್ಲಾಧಿಕಾರಿಗಳ ಜನ ಸಂಪರ್ಕ ಸಭೆಯಲ್ಲಿ ಶಾಸಕರು, ಅರಣ್ಯಾಧಿಕಾರಿ ಗಳು ಹಾಜರಿದ್ದರು. ಸಭೆಯಲ್ಲಿ ಅರಣ್ಯಭೂಮಿ, ಕಂದಾಯ ಭೂಮಿ ವರ್ಗಿಕರಣದ ಸರ್ವೆನಡೆಸುವ ಬಗ್ಗೆ ಪ್ರಸ್ತಾಪ ವಾಗಿದ್ದನ್ನು ಬಿಟ್ಟರೆ ಪುನರ್ವಸತಿ ಕುರಿತು ಏನನ್ನು ಹೇಳಿಲ್ಲ ಎಂದು ಚೀಕನೂರು ರಾಮಚಂದ್ರ ಹೇಳಿದರು.