ಸಾರಾಂಶ
ಗಜೇಂದ್ರಗಡ: ಮನೆಯ ಸ್ವಚ್ಛತೆಗೆ ಆದ್ಯತೆ ನೀಡಿದಂತೆ, ಮನೆಯಂಗಳದ ಸ್ವಚ್ಛತೆಗೆ ಪ್ರತಿಯೊಬ್ಬರು ಮುಂದಾದರೆ ನಾವು ಪೌರಕಾರ್ಮಿಕರಿಗೆ ನೀಡುವ ಗೌರವವಾಗಿದೆ ಎಂದು ಸಾಯಿದತ್ತಾ ಮಲ್ಟಿಸ್ಪೇಶಾಲಿಟಿ ಆಸ್ಪತ್ರೆಯ ವೈದ್ಯಾಧಿಕಾರಿ ಆರ್.ಎಸ್. ಜೀರೆ ಹೇಳಿದರು.
ಪಟ್ಟಣದ ಸಾಯಿ ದತ್ತಾ ಮಲ್ಟಿ ಸ್ಪೇಶಾಲಿಟಿ ಆಸ್ಪತ್ರೆಯಲ್ಲಿ ಮಂಗಳವಾರ ಪುರಸಭೆಯಿಂದ ನಡೆದ ಪೌರ ಕಾರ್ಮಿಕರ ಆರೋಗ್ಯ ತಪಾಸಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.ಮಳೆ,ಗಾಳಿ, ಬಿಸಿಲು ಲೆಕ್ಕಿಸಿದೆ, ಹಬ್ಬ ಹರಿದಿನಗಳನ್ನೂ ಬದಿಗೊತ್ತಿ ಸಾರ್ವಜನಿಕರ ಆರೋಗ್ಯ ರಕ್ಷಣೆಗಾಗಿ ಪಟ್ಟಣದಲ್ಲಿ ಸ್ವಚ್ಛತೆಗಾಗಿ ಶ್ರಮಿಸುವ ಪೌರ ಕಾರ್ಮಿಕರು ಸ್ವಚ್ಛ ಭಾರತದ ನಿಜವಾದ ರಾಯಬಾರಿಗಳಾಗಿದ್ದಾರೆ. ಅವರಿಗೆ ಗೌರವ ನೀಡುವುದು ನಮ್ಮೆಲ್ಲರ ಕರ್ತವ್ಯ. ಹೀಗಾಗಿ ಪೌರಕಾರ್ಮಿಕರ ಆರೋಗ್ಯ ತಪಾಸಣಾ ಶಿಬಿರಗಳು ನಿಯಮಿತವಾಗಿ ನಡೆಯಬೇಕು. ಸಮಾಜ ಹಾಗೂ ಪರಿಸರದ ಆರೋಗ್ಯ ಕಾಪಾಡುವವರು ಪೌರ ಕಾರ್ಮಿಕರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ನೀಡಬೇಕು. ಧೂಮ ಮತ್ತು ಮಧ್ಯಪಾನದಂತಹ ದುಶ್ಚಟಗಳಿಂದ ಕಾರ್ಮಿಕರು ದೂರವಿರಬೇಕು ಎಂದರು.
ಪುರಸಭೆ ಪ್ರಭಾರಿ ಮುಖ್ಯಾಧಿಕಾರಿ ಬಸವರಾಜ ಬಳಗಾನೂರ ಮಾತನಾಡಿ, ಪಟ್ಟಣದ ಸ್ವಚ್ಛತಾ ಸೇನಾನಿಗಳಾದ ಪೌರ ಕಾರ್ಮಿಕರ ಆರೋಗ್ಯ ತಪಾಸಣೆ ವರ್ಷದಲ್ಲಿ ೨-೩ ಬಾರಿ ನಡೆಸುವುದರ ಜತೆಗೆ ಆರೋಗ್ಯ ರಕ್ಷಣೆಗಾಗಿ ಕಿಟ್‌ಗಳ ವಿತರಣೆ ಹಾಗೂ ಸ್ವಚ್ಛತಾ ಸಂದರ್ಭದಲ್ಲಿ ಪೌರಕಾರ್ಮಿಕರು ಅನುಸರಿಸಬೇಕಾದ ಕ್ರಮಗಳ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.ಪುರಸಭೆ ಸಮುದಾಯ ಸಂಘಟನಾಧಿಕಾರಿ ಬಿ. ಮಲ್ಲಿಕಾರ್ಜುನಗೌಡ ಮಾತನಾಡಿ, ಪುರಸಭೆಯಿಂದ ನಡೆಯುತ್ತಿರುವ ಪೌರ ಕಾರ್ಮಿಕರ ರಕ್ತ ತಪಾಸಣಾ ಶಿಬಿರದಲ್ಲಿ ಮಧುಮೇಹ, ರಕ್ತದೊತ್ತಡ, ಅಸ್ತಮಾ, ಚರ್ಮರೋಗ, ಇಸಿಜಿ ಸೇರಿ ಮುಂತಾದ ಕಾಯಿಲೆಗಳ ತಪಾಸಣೆ ನಡೆಸಲಾಗುತ್ತದೆ ಎಂದರು.
ಪುರಸಭೆ ಉಪಾಧ್ಯಕ್ಷೆ ಸವಿತಾ ಬಿದರಳ್ಳಿ ಅಧ್ಯಕ್ಷ ವಹಿಸಿದ್ದರು. ಪುರಸಭೆ ಸದಸ್ಯರಾದ ಶಿವರಾಜ ಘೋರ್ಪಡೆ, ವೀರಪ್ಪ ಪಟ್ಟಣಶೆಟ್ಟಿ, ಮುದಿಯಪ್ಪ ಮುಧೋಳ, ಕನಕಪ್ಪ ಅರಳಿಗಿಡದ, ಶರಣಪ್ಪ ಉಪ್ಪಿನಬೆಟಗೇರಿ, ರಫೀಕ್ ತೋರಗಲ್, ಆರೋಗ್ಯ ಸುರಕ್ಷಾ ಸಮಿತಿ ಸದಸ್ಯ ಶರಣಪ್ಪ ಚಳಗೇರಿ, ಶ್ರೀಧರ ಬಿದರಳ್ಳಿ, ಸಿದ್ದಣ್ಣ ಚೋಳಿನ, ಗುಲಾಂ ಹುನಗುಂದ, ಶಿವಕುಮಾರ ಇಲಾಳ, ರಾಘವೇಂದ್ರ ಮಂತಾ ಸೇರಿದಂತೆ ಇತರರು ಇದ್ದರು.