ಸಾಮೂಹಿಕ ಆಸ್ತಿಗಳಾದ ಅರಣ್ಯ, ಗೋಮಾಳ, ಹುಲ್ಲು ಬನ್ನಿ, ಕೆರೆ, ಗೋಕಟ್ಟೆಗಳನ್ನು ಸಂರಕ್ಷಣೆ ಮಾಡುವುದರೊಂದಿಗೆ ಪುನರುಜ್ಜೀವನಗೊಳಿಸುವ ಜವಾಬ್ದಾರಿ ಸಮುದಾಯದ ಮೇಲಿದೆ ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಡಾ. ವೆಂಕಟೇಶ್ ಸಣ್ಣಬಿದರಿ ಕರೆ ನೀಡಿದರು.

ರಾಣಿಬೆನ್ನೂರು: ಸಾಮೂಹಿಕ ಆಸ್ತಿಗಳಾದ ಅರಣ್ಯ, ಗೋಮಾಳ, ಹುಲ್ಲು ಬನ್ನಿ, ಕೆರೆ, ಗೋಕಟ್ಟೆಗಳನ್ನು ಸಂರಕ್ಷಣೆ ಮಾಡುವುದರೊಂದಿಗೆ ಪುನರುಜ್ಜೀವನಗೊಳಿಸುವ ಜವಾಬ್ದಾರಿ ಸಮುದಾಯದ ಮೇಲಿದೆ ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಡಾ. ವೆಂಕಟೇಶ್ ಸಣ್ಣಬಿದರಿ ಕರೆ ನೀಡಿದರು.

ನಗರದ ತಾಪಂ ಸಭಾಭವನದಲ್ಲಿ ಜಿಪಂ, ತಾಪಂ ಮತ್ತು ಫೌಂಡೇಶನ್ ಫಾರ್ ಇಕಾಲಜಿಕಲ್ ಸೆಕ್ಯೂರಿಟಿ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಜರುಗಿದ ಅಂತಾರಾಷ್ಟ್ರೀಯ ಸಾಮೂಹಿಕ ಆಸ್ತಿಗಳ ರಕ್ಷಣೆಯ ಸಮ್ಮೇಳನದಲ್ಲಿ ಮಾತನಾಡಿದರು. ಮುಂದಿನ ಯುವ ಪೀಳಿಗೆ, ನಮ್ಮ ಜಾನುವಾರು, ಉಪ ಕಸಬು ಉಳಿಯಬೇಕಾದರೆ ಸಮುದಾಯದವರು ಸಮುದಾಯದ ಆಸ್ತಿಗಳನ್ನು ರಕ್ಷಣೆ ಮಾಡುವುದು ಅಗತ್ಯವಿದೆ ಎಂದರು.

ಫೌಂಡೇಶನ್ ಫಾರ್ ಇಕಾಲಜಿಕಲ್ ಸೆಕ್ಯೂರಿಟಿ ಸಂಸ್ಥೆಯ ಜಿಲ್ಲಾ ಸಂಯೋಜಕ ಪ್ರಕಾಶ್ ಲಂಬಿ ಮಾತನಾಡಿ, ಪ್ರತಿ ವರ್ಷದಂತೆ ಡಿಸೆಂಬರ್ ಮೊದಲನೇ ವಾರದಲ್ಲಿ ಮೂರು ದಿನಗಳ ವರೆಗೆ ನಡೆಯುವ ಅಂತಾರಾಷ್ಟ್ರೀಯ ಸಾಮೂಹಿಕ ಆಸ್ತಿಗಳ ರಕ್ಷಣೆ ಮತ್ತು ಅರಣ್ಯೀಕರಣ, ಗೋಮಾಳ ಅಭಿವೃದ್ಧಿ, ಜಲ ಸಂರಕ್ಷಣೆ ಮಾಡಿದ ಸಮುದಾಯವನ್ನು ಗುರುತಿಸಿ ಅವರ ಅನುಭವವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಂಚಿಕೊಳ್ಳುವ ಕಾರ್ಯಕ್ರಮವಾಗಿದೆ ಎಂದರು.

ಇದೇ ಸಂದರ್ಭದಲ್ಲಿ ತಾಲೂಕಿನ ಇಟಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾಗೋಡ ಗ್ರಾಮದ ಗೋಮಾಳ ಉಳಿವಿಗಾಗಿ ಹೋರಾಟ ಮಾಡಿದ ರೂಪರೇಷೆಗಳ ಕುರಿತು ಅನುಭವ ಹಂಚಿಕೊಳ್ಳಲಾಯಿತು. ಬೇರೆ ಬೇರೆ ರಾಜ್ಯದವರು ಅರಣ್ಯೀಕರಣ, ಜಲ ಸಂರಕ್ಷಣೆ, ಉಪಕಸುಬುಗಳ ಪುನರ್ಜೀವನ ಗೋಮಾಳ ಒತ್ತುವರಿ ತೆರವುಗೊಳಿಸುವ ಯಶೋಗಾಥೆಗಳನ್ನು ಪ್ರದರ್ಶಿಸಲಾಯಿತು.

ಇಟಗಿ ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವ ಸದಸ್ಯರು, ಮಾಗೋಡ ಗ್ರಾಮದ ಗೋಮಾಳ ಉಳಿಸಿ ಹೋರಾಟ ಸಮಿತಿಯ ಅಧ್ಯಕ್ಷರು, ಸರ್ವ ಸದಸ್ಯರು, ನರೇಗಾ ಸಹಾಯಕ ನಿರ್ದೇಶಕ ವಿಜಯಕುಮಾರ್ ಹನಗೋಡಿಮಠ, ಪಿಡಿಒ ಜಿ.ಜಿ. ನಾಯಕ, ತಾಲೂಕು ಐಇಸಿ ಸಂಯೋಜಕ ದಿಂಗಾಲೇಶ್ ಅಂಗೂರ, ತಾಲೂಕಿನ ವಿವಿಧ ಗ್ರಾಪಂ ಮಹಿಳಾ ಪ್ರತಿನಿಧಿಗಳು, ಪಾಲ್ಗೊಂಡಿದ್ದರು