ಸಾರಾಂಶ
ಕನ್ನಡಪ್ರಭ ವಾರ್ತೆ ಹಿರಿಯೂರು
ನಗರದ ರಸ್ತೆ ಅಗಲೀಕರಣ ಕಾಮಗಾರಿಯನ್ನು ಮುಂದಿನ ಎರಡು ಮೂರು ತಿಂಗಳೊಳಗೆ ಮುಗಿಸಲಾಗುವುದು. ಇದಕ್ಕೆ ನಗರಸಭೆಯ ಎಲ್ಲಾ ಸದಸ್ಯರು ಸಹಮತ ವ್ಯಕ್ತಪಡಿಸಿದ್ದಾರೆ ಎಂದು ನಗರಸಭೆ ಅಧ್ಯಕ್ಷ ಅಜಯ್ ಕುಮಾರ್ ತಿಳಿಸಿದರು.ಇಲ್ಲಿನ ನಗರಸಭೆ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ಕೌನ್ಸಿಲ್ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
50-60 ವರ್ಷಗಳ ಹಿಂದೆ ಹಿರಿಯೂರು ನಗರ ಚಿಕ್ಕದಾಗಿತ್ತು. ದಿನ ಕಳೆದಂತೆ ನಗರ ವೇಗವಾಗಿ ಬೆಳೆಯುತ್ತಿದೆ. ಅಲ್ಲದೆ ಜನಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ರಸ್ತೆ ಕಿರಿದಾಗಿದ್ದು ಅಗಲೀಕರಣ ಅನಿವಾರ್ಯವಾಗಿದೆ. ಹಾಗಾಗಿ ರಸ್ತೆ ಅಗಲೀಕರಣ ಮಾಡಿಯೇ ತೀರುತ್ತೇವೆ ಎಂದರು.ಕಂದಾಯ ವಸೂಲಿ ಹಾಗೂ ರಸ್ತೆ ಅಗಲೀಕರಣ ವಿಷಯದಲ್ಲಿ ನನಗೆ ವಿವಿಧ ರೀತಿಯ ಆಸೆ ಆಮಿಷಗಳನ್ನು ತೋರಿಸಿದರು. ಆದರೆ ನಾನು ಇಂತಹ ಆಮಿಷಗಳಿಗೆ ಬಲಿಯಾಗದೆ ಗಟ್ಟಿ ನಿರ್ಧಾರ ಕೈಗೊಳ್ಳಲಾಗಿದೆ.
ಮಧ್ಯ ರಸ್ತೆಯಿಂದ 21 ಮೀಟರ್ ಒಳಗಡೆ ಇರುವ ಕಟ್ಟಡಗಳ ಮಾಲೀಕರಿಗೆ ಯಾವುದೇ ರೀತಿಯ ಪರಿಹಾರ ನೀಡಲು ಬರುವುದಿಲ್ಲ. ಇದಕ್ಕೆ ನಮ್ಮಲ್ಲಿ ಸೂಕ್ತ ದಾಖಲೆ ಇವೆ. ಈಗಾಗಲೇ ಕೆಲವು ಕಟ್ಟಡ ಮಾಲೀಕರು ಕೋರ್ಟ್‌ನಲ್ಲಿ ದಾವೆ ಹೂಡಿದ್ದಾರೆ. ನಗರಸಭೆ ಜಾಗದಲ್ಲಿ ಅಕ್ರಮವಾಗಿ ಕಟ್ಟಿರುವ ಕಟ್ಟಡಗಳ ಮಾಲೀಕರಿಗೆ ನೋಟಿಸ್ ನೀಡಿ ಕಾನೂನಿನ ಪ್ರಕಾರ ಕೆಡವಲು ಸುಪ್ರೀಂ ಕೋರ್ಟ್ ಸ್ಪಷ್ಟನೆ ನೀಡಿದೆ. ಕಾನೂನು ಪ್ರಕಾರ ಕಾಮಗಾರಿ ಮಾಡಲಾಗುವುದು, ಪರಿಹಾರ ನೀಡುವ ಪ್ರಶ್ನೆಯೇ ಇಲ್ಲ, ಇದರಲ್ಲಿ ಹಿಂಜರಿಯುವ ಪ್ರಶ್ನೆಯೇ ಇಲ್ಲ ಎಂದು ಖಡಕ್ ಆಗಿ ತಿಳಿಸಿದರು.ಅಕ್ರಮವಾಗಿ ಕಟ್ಟಿರುವ ಕಟ್ಟಡಗಳಿಗೆ ಯಾವುದೇ ರೀತಿಯ ವಿದ್ಯುತ್, ನೀರು ಕೊಡಬಾರದು ಎಂದು ಕೋರ್ಟ್ ಆದೇಶ ನೀಡಿದೆ. ನಗರಸಭೆ ಜಾಗದಲ್ಲಿ ಇಷ್ಟು ವರ್ಷ ಕಟ್ಟಡಗಳನ್ನು ಕಟ್ಟಿಕೊಂಡು ದುಡಿದು ಕೊಂಡಿದ್ದಾರೆ. ಹಾಗಾಗಿ ರಸ್ತೆ ಅಗಲೀಕರಣ ಕಾಮಗಾರಿ ಶೀಘ್ರವೇ ನಡೆಯಲಿದೆ ಎಂದರು.
ಸದಸ್ಯ ಬಿ.ಎನ್.ಪ್ರಕಾಶ್ ಮಾತನಾಡಿ, ಕೃಷ್ಣಂಬುದಿ ಕೆರೆ ಸಮೀಪ ಸುಮಾರು 16 ಎಕರೆಯಷ್ಟು ಸರ್ಕಾರಿ ಜಾಗ ಉಳಿದಿದ್ದು ಆ ಜಾಗವನ್ನು ಗುರುತಿಸುವ ಕಾರ್ಯವಾಗಬೇಕು ಎಂದರು.ಸದಸ್ಯ ಜಿ.ಎಸ್.ತಿಪ್ಪೇಸ್ವಾಮಿ ಮಾತನಾಡಿ, ನಗರಸಭೆ ಉಳಿತಾಯ ಮೊತ್ತದಲ್ಲಿ ತಯಾರಿಸಿದ ಕ್ರಿಯಾಯೋಜನೆ ಅನುಮೋದನೆಗೆ ಕಳಿಸಿದ್ದು ಏನಾಗಿದೆ ಎಂಬುದರ ಬಗ್ಗೆ ಸಂಬoಧಪಟ್ಟ ಎಂಜಿನಿಯರ್ ಉತ್ತರಿಸಬೇಕು. ಅಲ್ಲದೇ ಉಳಿತಾಯ ಬಜೆಟ್‌ನಲ್ಲಿ ₹5 ಲಕ್ಷ ಕಾಮಗಾರಿಗೆ ತುರ್ತು ಟೆಂಡರ್ ಕೋಟ್ ಮಾಡಿರುವ ಬಗ್ಗೆ ಸ್ಪಷ್ಟ ಮಾಹಿತಿ ಕೊಡಬೇಕು ಎಂದು ಒತ್ತಾಯಿಸಿದರು.
ಅವರಿಗೆ ಪ್ರತಿಕ್ರಿಯಿಸಿದ ಎಇಇ ರಾಜು ಈ ಕ್ರಿಯಾ ಯೋಜನೆ ಅನುಮೋದನೆ ಆಗಿಲ್ಲ. ವಿಭಾಗವಾರು ಮರು ಪರೀಶೀಲನೆ ಮಾಡಲು ಯೋಜನಾ ನಿರ್ದೇಶಕರು ತಿಳಿಸಿದ್ದಾರೆ ಎಂದರು.ಎಇಇ ಯವರ ಉತ್ತರಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷ ಅಜಯ್ ಕುಮಾರ್ ಅಧಿಕಾರಿಗಳು ಬೇಜವ್ದಾರಿತನದಿಂದ ವರ್ತಿಸುತ್ತಾರೆ. ಈ ಬಗ್ಗೆ ಆಕೌಂಟ್ ಹಾಗೂ ಎಂಜಿನಿಯರ್ ವಿಭಾಗದ ತಪ್ಪಿದೆ. ನೀವು ಕಾಟಾಚಾರದ ಕೆಲಸ ಮಾಡುವುದಾದರೆ ಬೇರೆಡೆ ವರ್ಗಾವಣೆ ಪಡೆಯಿರಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ಅನಿಲ್ ಕುಮಾರ್, ಉಪಾಧ್ಯಕ್ಷೆ ಅಂಬಿಕಾ ಆರಾಧ್ಯ, ಪೌರಾಯುಕ್ತ ಎ.ವಾಸಿಂ ಸೇರಿದಂತೆ ನಗರಸಭೆ ಸದಸ್ಯರು, ಅಧಿಕಾರಿಗಳು ಹಾಜರಿದ್ದರು.10 ಕೋಟಿ ಕಂದಾಯ ಬಾಕಿ:
ನಗರಸಭೆ ವ್ಯಾಪ್ತಿಯಲ್ಲಿ 100 ಬೃಹತ್ ಕಟ್ಟಡಗಳನ್ನು ಗುರುತಿಸಿದ್ದು ಆಸ್ಪತ್ರೆ, ಶಾಲೆಗಳು, ವಾಣಿಜ್ಯ ಮಳಿಗೆ, ಲಾಡ್ಜ್, ಹೋಟೆಲ್, ಚಿತ್ರಮಂದಿರ, ಛತ್ರಗಳು, ಸರ್ಕಾರಿ ಕಚೇರಿಗಳು ಸೇರಿದಂತೆ ಸುಮಾರು 26 ಬಿಲ್ಡಿಂಗ್‌ಗಳಿಂದ ಒಟ್ಟು 998.84 ಲಕ್ಷ ನಗರಸಭೆಗೆ ಕಂದಾಯ ಬಾಕಿ ಬರಬೇಕಿದೆ.