ಆರಂಭವಾಗದ ರಸ್ತೆ ಕಾಮಗಾರಿ, ಫೆ. ೧೪ರಂದು ರಸ್ತಾ ರೋಕಾ

| Published : Feb 13 2024, 12:50 AM IST

ಸಾರಾಂಶ

ಮಂಚೀಕೇರಿಯಿಂದ ತೋಳಗೋಡ-ಹರಿಗದ್ದೆ-ಹಿತ್ಲಳ್ಳಿ ಮೂಲಕ ಶಿರಸಿ-ಯಲ್ಲಾಪುರ ಮುಖ್ಯರಸ್ತೆಯನ್ನು ದುರಸ್ತಿಗೊಳಿಸುವಂತೆ ಸಂಬಂಧಿಸಿದ ಜನಪ್ರತಿನಿಧಿಗಳಿಗೆ ಮತ್ತು ಅಧಿಕಾರಿಗಳಿಗೆ ಅನೇಕ ಬಾರಿ ವಿನಂತಿಸಿದ್ದರೂ ಸ್ಪಂದಿಸಿಲ್ಲ.

ಯಲ್ಲಾಪುರ:ಯಲ್ಲಾಪುರ-ಶಿರಸಿ ರಾಜ್ಯ ಹೆದ್ದಾರಿಯ ಮಂಚೀಕೇರಿಯ ಮಾಗೋಡು ಕತ್ರಿಯಲ್ಲಿ ಕವಲೊಡೆಯುವ ಮಂಚೀಕೇರಿ-ಹರಿಗದ್ದೆ-ಹಿತ್ಲಳ್ಳಿ ಸಂಪರ್ಕಿಸುವ ಡಾಂಬರ್‌ ರಸ್ತೆ ತೀವ್ರ ಹದಗೆಟ್ಟಿದ್ದರು ದುರಸ್ತಿ ಮಾಡದೆ ಇರುವುದನ್ನು ಖಂಡಿಸಿ ತೋಳಗೋಡ, ಹರಿಗದ್ದೆ, ಹಿತ್ಲಳ್ಳಿ, ಕುಂದೂರು, ಯಡಳ್ಳಿ, ಇಳೇಹಳ್ಳಿ ಮುಂತಾದ ಗ್ರಾಮಸ್ಥರು ಫೆ. ೧೪ರಂದು ಬೆಳಗ್ಗೆ ೧೦ಕ್ಕೆ ಶಿರಸಿ-ಯಲ್ಲಾಪುರ ರಾಜ್ಯ ಹೆದ್ದಾರಿ ಮತ್ತು ಉಮ್ಮಚಗಿ ಬಳಿಯ ಹಿತ್ಲಳ್ಳಿ ಕತ್ರಿಯಲ್ಲಿ ಬಂದ್ ಮಾಡುವ ಮೂಲಕ ಹೋರಾಟ ನಡೆಸಲು ನಿರ್ಣಯಿಸಿದ್ದಾರೆ ಎಂದು ಹಾಸಣಗಿ ಗ್ರಾಪಂ ಸದಸ್ಯ ಎಂ.ಕೆ. ಭಟ್ಟ ಯಡಳ್ಳಿ ಹೇಳಿದರು.ಪಟ್ಟಣದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಚೀಕೇರಿಯಿಂದ ತೋಳಗೋಡ-ಹರಿಗದ್ದೆ-ಹಿತ್ಲಳ್ಳಿ ಮೂಲಕ ಶಿರಸಿ-ಯಲ್ಲಾಪುರ ಮುಖ್ಯರಸ್ತೆಯನ್ನು ದುರಸ್ತಿಗೊಳಿಸುವಂತೆ ಸಂಬಂಧಿಸಿದ ಜನಪ್ರತಿನಿಧಿಗಳಿಗೆ ಮತ್ತು ಅಧಿಕಾರಿಗಳಿಗೆ ಅನೇಕ ಬಾರಿ ವಿನಂತಿಸಿದ್ದರೂ ಸ್ಪಂದಿಸಿಲ್ಲ. ಹೀಗಾಗಿ ಹೋರಾಟ ನಡೆಸಲು ತೀರ್ಮಾನಿಸಲಾಗಿದೆ. ಕೆಲದಿನಗಳ ಹಿಂದೆ ರಸ್ತೆ ದುರಸ್ತಿ ಬಗೆಗೆ ಹಿತ್ಲಳ್ಳಿಯ ಮಾರಿಕಾಂಬಾ ದೇವಾಲಯದಲ್ಲಿ ಚರ್ಚೆ ನಡೆದ ವೇಳೆ ಶೀಘ್ರದಲ್ಲಿ (೨೦-೦೧-೨೦೨೪) ಕಾಮಗಾರಿ ಆರಂಭಿಸುವುದಾಗಿ ನೀಡಿದ್ದ ಭರವಸೆ ಮೇಲೆ ನಮ್ಮ ರಸ್ತೆ ತಡೆ ಮತ್ತು ಚುನಾವಣಾ ಬಹಿಷ್ಕಾರದ ನಿರ್ಧಾರ ಹಿಂಪಡೆದಿದ್ದೆವು. ಆದರೆ, ಈ ವರೆಗೂ ಭರವಸೆ ಈಡೇರದೇ, ನಮಗೆ ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲಿ ರಸ್ತಾರೋಖೋ ಕಾರ್ಯಕ್ರಮ ಕೈಗೊಂಡಿದ್ದೇವೆ ಎಂದು ವಿವರಿಸಿದರು. ನಮ್ಮ ಬೇಡಿಕೆಯಂತೆ ₹ ೪ ಕೋಟಿ ವೆಚ್ಚದ ಕಾಮಗಾರಿ ಮಂಜೂರಾಗಿ, ಟೆಂಡರ್ ಆಗಿ, ಅರೆಬರೆ ಕಾಮಗಾರಿಯಾಗಿ ಸ್ಥಗಿತಗೊಂಡಿರುವ ೧೨ ಕಿಮೀ ರಸ್ತೆ ದುರಸ್ತಿ ಕಾರ್ಯ ಆರಂಭಗೊಳಿಸಬೇಕು. ಇಲ್ಲದಿದ್ದರೆ ರಸ್ತೆತಡೆ ನಡೆಸುವ ಜತೆಗೆ ಲೋಕಸಭೆ ಚುನಾವಣೆ ಬಹಿಷ್ಕರಿಸುತ್ತೇವೆ ಎಂದು ಎಚ್ಚರಿಸಿದರು.ಸುದ್ದಿಗೋಷ್ಠಿಯಲ್ಲಿ ಗ್ರಾಪಂ ಸದಸ್ಯ ಗೋಪಾಲ ಶಾಸ್ತ್ರಿ, ವಿ.ಎಂ. ಹೆಗಡೆ ಜಾಲೀಮನೆ, ಮಹಾಬಲೇಶ್ವರ ಭಟ್ಟ ಗುಂಡಾನಜಡ್ಡಿ, ಜಗದೀಶ ಶೇಟ್, ನಾಗೇಂದ್ರ ಪತ್ರೇಕರ ಹುಲಿಮನೆ, ಪ್ರಸನ್ನ ಹೆಗಡೆ ಜಾಗರಮನೆ ಇದ್ದರು.