ಫೆಂಗಲ್ ಚಂಡಮಾರುತದ ಅಬ್ಬರ, ನಿರಂತರವಾಗಿ ಸುರಿದ ಮಳೆ

| Published : Dec 03 2024, 12:30 AM IST

ಸಾರಾಂಶ

ತಮಿಳುನಾಡಿನಲ್ಲಿ ಎದ್ದಿರುವ ಫೆಂಗಲ್ ಚಂಡಮಾರುತದ ಅಬ್ಬರದಿಂದ ಜಿಲ್ಲಾದ್ಯಂತ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ರೈತರು ಬೆಳೆದ ಫಸಲು ಕೈ ಸೇರುವ ಮುನ್ನವೇ ಜಮೀನಿನಲ್ಲಿ ನೀರು ತುಂಬಿ ಸಾಕಷ್ಟು ನಷ್ಟವಾಗಿದೆ. ಹಲಗೂರು ಸುತ್ತಮುತ್ತಲ ಪ್ರದೇಶಗಳಲ್ಲಿ ರಾಗಿ ಮತ್ತು ಭತ್ತದ ಫಸಲು ಕಟಾವಿಗೆ ಬಂದಿದ್ದು, ಹೊಲಗದ್ದೆಗಳಲ್ಲಿ ಬೆಳೆದ ಫಸಲನ್ನು ಕೊಯ್ಲು ಮಾಡಿ ಹಾಕಲಾಗಿತ್ತು. ಆದರೆ, ಫೆಂಗಲ್ ಚಂಡಮಾರುತದ ಪರಿಣಾಮ ನಿರಂತರ ಮಳೆಯಿಂದಾಗಿ ಭತ್ತ ಪೂರ್ತಿ ನೆನೆದು ನೀರಿನಲ್ಲಿ ಮುಳುಗಿದೆ. ಇದರಿಂದ ರೈತರು ಅಪಾರ ನಷ್ಟಕ್ಕೊಳಗಾಗಿದ್ದಾರೆ.

ಎಚ್.ಎನ್.ಪ್ರಸಾದ್

ಕನ್ನಡಪ್ರಭ ವಾರ್ತೆ ಹಲಗೂರು

ತಮಿಳುನಾಡಿನಲ್ಲಿ ಎದ್ದಿರುವ ಫೆಂಗಲ್ ಚಂಡಮಾರುತದ ಅಬ್ಬರದಿಂದ ಜಿಲ್ಲಾದ್ಯಂತ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ರೈತರು ಬೆಳೆದ ಫಸಲು ಕೈ ಸೇರುವ ಮುನ್ನವೇ ಜಮೀನಿನಲ್ಲಿ ನೀರು ತುಂಬಿ ಸಾಕಷ್ಟು ನಷ್ಟವಾಗಿದೆ.

ಹಲಗೂರು ಸುತ್ತಮುತ್ತಲ ಪ್ರದೇಶಗಳಲ್ಲಿ ರಾಗಿ ಮತ್ತು ಭತ್ತದ ಫಸಲು ಕಟಾವಿಗೆ ಬಂದಿದ್ದು, ಹೊಲಗದ್ದೆಗಳಲ್ಲಿ ಬೆಳೆದ ಫಸಲನ್ನು ಕೊಯ್ಲು ಮಾಡಿ ಹಾಕಲಾಗಿತ್ತು. ಆದರೆ, ಫೆಂಗಲ್ ಚಂಡಮಾರುತದ ಪರಿಣಾಮ ನಿರಂತರ ಮಳೆಯಿಂದಾಗಿ ಭತ್ತ ಪೂರ್ತಿ ನೆನೆದು ನೀರಿನಲ್ಲಿ ಮುಳುಗಿದೆ. ಇದರಿಂದ ರೈತರು ಅಪಾರ ನಷ್ಟಕ್ಕೊಳಗಾಗಿದ್ದಾರೆ.

ಈ ಬಾರಿ ಉತ್ತಮ ಮಳೆಯಿಂದಾಗಿ ಎಲ್ಲೆಡೆ ಫಸಲು ಚೆನ್ನಾಗಿ ಬೆಳೆದಿತ್ತು. ರೈತರು ಕೆಲ ಭಾಗಗಳಲ್ಲಿ ಫಸಲನ್ನು ಕಟಾವು ಮಾಡಿದ್ದರು. ಆದರೆ, ಅನಿರೀಕ್ಷಿತವಾಗಿ ಬಂದ ಮಳೆಯಿಂದಾಗಿ ಜಮೀನುಗಳಲ್ಲೇ ಭತ್ತ, ರಾಗಿ ಬೆಳೆ ಹಾಳಾಗಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬರದಂತೆ ಆಗಿದೆ.

ಈ ಭಾಗದ ಬಹುತೇಕ ರೈತರು ಮಳೆಯನ್ನೆ ನಂಬಿ ಕೃಷಿ ಚಟುವಟಿಕೆ ಮಾಡುತ್ತಿದ್ದರು. ಅದರಲ್ಲೂ ಒಂದೇ ಬೆಳೆ. ಆ ಬೆಳೆ ನಾಶವಾಗಿರುವುದರಿಂದ ಪುರುದೊಡ್ಡಿ ಗ್ರಾಮದ ರೈತ ನಾಗೇಶ್. ಎಚ್.ಎಸ್. ಶಿವಕುಮಾರ್ ಸೇರಿದಂತೆ ಹಲವು ರೈತರು ನಷ್ಟಕ್ಕೆ ಸೂಕ್ತ ಪರಿಹಾರ ಕೊಡಬೇಕು ಎಂದು ಸರ್ಕಾರ, ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತಕ್ಕೆ ಮನವಿ ಮಾಡಿದ್ದಾರೆ.

ರೇಷ್ಮೆ ಹುಳು ಸಾಕಾಣಿಕೆ ಮಾಡುವ ರೈತರಿಗೂ ನಿರಂತರ ಮಳೆಯಿಂದ ಸಾಕಷ್ಟು ತೊಂದರೆ ಎದುರಾಯಿತು. ಮಳೆ ನೀರು ಹಿಪ್ಪುನೇರಳೆ ಸೊಪ್ಪಿನ ಮೇಲೆ ಬೀಳುವುದರಿಂದ ತೇವಾಂಶವಿರುವ ಸೊಪ್ಪನ್ನು ಹುಳುಗಳಿಗೆ ಹಾಕಲು ರೈತರಿಗೆ ಕಷ್ಟವಾಯಿತು.

ಫೆಂಗಲ್ ಚಂಡಮಾರುತದ ಪರಿಣಾಮ ಭಾನುವಾರ ಸಂಜೆಯಿಂದಲೇ ಆರಂಭವಾದ ಮಳೆ ಸೋಮವಾರ ರಾತ್ರಿವರೆಗೂ ನಿರಂತರವಾಗಿ ಸುರಿಯಿತು. ಹಲಗೂರು ಪಟ್ಟಣ ಪ್ರದೇಶಕ್ಕೆ ವ್ಯಾಪಾರ ವಹಿವಾಟಿಗೆ ಬರಬೇಕಾದ ಗ್ರಾಮೀಣ ಜನತೆ ಮಳೆಯಿಂದ ಗ್ರಾಮದಿಂದ ಹೊರಬಾರದೆ ವ್ಯಾಪಾರಸ್ಥರು ಸುಮ್ಮನೆ ಕುಳಿತಿರುವ ದೃಶ್ಯ ಬಹುತೇಕ ಅಂಗಡಿಗಳಲ್ಲಿ ಕಂಡು ಬಂತು.

ಪಟ್ಟಣಾದ್ಯಂತ ಜನಜೀವನ ಅಸ್ತವ್ಯಸ್ತವಾಗಿತ್ತು. ರಸ್ತೆಗಳಲ್ಲೂ ವಾಹನ ಸಂಚಾರ ಕಡಿಮೆಯಾಗಿತ್ತು. ಬಹುತೇಕ ರಸ್ತೆಗಳು ಬಿಕೋ ಎನ್ನುತ್ತಿದ್ದವು. ಸಾರ್ವಜನಿಕರ ಓಡಾಟವು ವಿರಳವಾಗಿತ್ತು. ಹಲಗೂರಿನ ದಿನಸಿ, ಬಟ್ಟೆ ಅಂಗಡಿಗಳು, ಹೋಟೆಲ್ ಗಳು, ತರಕಾರಿ, ಹಣ್ಣಿನ ಹಾಗೂ ಟೀ ಅಂಗಡಿಗಳಿಗೆ ವ್ಯಾಪಾರ ಇಲ್ಲದೆ ಬಣಗುಡುತ್ತಿದ್ದವು. ಬಹುತೇಕರು ಮಳೆಯಿಂದ ಜನರು ಬಾರದೆ ಬೇಸರಪಟ್ಟು ಅಂಗಡಿ ಮುಚ್ಚಿ ಮನೆಗೆ ಸೇರಿದ್ದರು. ವ್ಯವಸಾಯವೇ ನಮ್ಮ ಜೀವನಕ್ಕೆ ಆಧಾರ. ಬೇರೆ ಯಾವುದೇ ವ್ಯಾಪಾರ ತಿಳಿದಿಲ್ಲ. ಜಮೀನಿನಲ್ಲಿ ಬೆಳೆದ ಭತ್ತದ ಫಸಲು ಕಟಾವಿಗೆ ಬಂದು ಕೊಯ್ಲು ಮಾಡಿ ಹಾಕಲಾಗಿತ್ತು. ನಿರಂತರ ಮಳೆ ಕಾರಣ ಭತ್ತ ಪೂರ್ತಿ ನೆನೆದು ಹಾಳಾಗಿದೆ. ಫಸಲು ನಮ್ಮ ಕೈ ಸೇರುವ ಮುನ್ನವೇ ಸಾವಿರಾರು ನಷ್ಟಕ್ಕೆ ಒಳಗಾಗಿದ್ದೇವೆ. ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲಿಸಿ ಸೂಕ್ತ ಪರಿಹಾರ ನೀಡಬೇಕು.

-ನಾಗೇಶ್ , ರೈತರು, ಪುರುದೊಡ್ಡಿ

ಈ ಹಿಂದೆ ಮಳೆ ಆಸರೆಯಲ್ಲಿ ವ್ಯವಸಾಯ ಮಾಡಿದ್ದು, ಬೆಳೆದ ಫಸಲು ಈಗ ಕಟಾವು ಮಾಡಿ ಹೊಲಗದ್ದೆಗಳಲ್ಲೇ ಬಿಟ್ಟಿದ್ದೇವೆ. ಫೆಂಗಲ್ ಚಂಡಮಾರುತದ ಪರಿಣಾಮ ನಿರಂತರವಾಗಿ ಮಳೆ ಬೀಳುತ್ತಿರುವುದರಿಂದ ರಾಗಿ ಬೆಳೆ ಗದ್ದೆಯಲ್ಲೇ ಮೊಳಕೆ ಬಂದು ಮಾರಾಟ ಮಾಡಲಾಗದೆ ಸಾಕಷ್ಟು ನಷ್ಟವಾಗಿದೆ. ಅಕಾಲಿಕ ಮಳೆಯಿಂದ ಆದ ನಷ್ಟಕ್ಕೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿ ಸೂಕ್ತ ಪರಿಹಾರ ಒದಗಿಸಬೇಕು.

-ಎಚ್.ಎಸ್.ಶಿವಕುಮಾರ್, ಪಟೇಲ್ ಶಿವಲಿಂಗೇಗೌಡರ ಪುತ್ರ ಹಲಗೂರು

ಹಣ್ಣುಗಳ ಜೊತೆ, ಸೊಪ್ಪು ತರಕಾರಿ ವ್ಯಾಪಾರ ಮಾಡುತ್ತಿದ್ದು, ಇದೇ ನಮ್ಮ ಜೀವನಕ್ಕೆ ಆಸರೆಯಾಗಿದೆ. ಇಂದು ಬೆಳಗ್ಗೆಯಿಂದ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಹಳ್ಳಿಯ ಜನರು ಪಟ್ಟಣಕ್ಕೆ ಬಾರದೆ ವ್ಯಾಪಾರ ಕಡಿಮೆಯಾಗಿದೆ. ವಿಧಿ ಇಲ್ಲದೆ ಬಾಗಿಲು ತೆರೆದು ಕುಳಿತಿದ್ದೇನೆ.

- ಕೃಷ್ಣ, ಹಣ್ಣಿನ ಅಂಗಡಿ ಮಾಲೀಕ, ಚನ್ನಪಟ್ಟಣ ರಸ್ತೆ