ಸಮಾಜದಲ್ಲಿ ಪತ್ರಕರ್ತರು, ಪೊಲೀಸರ ಪಾತ್ರ ಮಹತ್ವದ್ದು

| Published : Nov 24 2025, 01:30 AM IST

ಸಮಾಜದಲ್ಲಿ ಪತ್ರಕರ್ತರು, ಪೊಲೀಸರ ಪಾತ್ರ ಮಹತ್ವದ್ದು
Share this Article
  • FB
  • TW
  • Linkdin
  • Email

ಸಾರಾಂಶ

ಸಮಾಜದ ಜವಾಬ್ದಾರಿಯುತ ಸ್ಥಾನದಲ್ಲಿರುವ ಪತ್ರಕರ್ತರು ಉತ್ತಮ ಸಮಾಜ ನಿರ್ಮಾಣಕ್ಕೆ ಶ್ರಮಿಸುತ್ತಿದ್ದಾರೆ. ದಾವಣಗೆರೆ ಜಿಲ್ಲೆಯಲ್ಲಿ ಉತ್ತಮ ವಾತಾವರಣ ಮೂಡಿಸುವ ಜೊತೆಗೆ ಉತ್ತಮವಾಗಿ ಕೆಲಸ ಮಾಡಲು ಪೊಲೀಸ್ ಇಲಾಖೆಗೂ ಸಹಕಾರಿಯಾಗಿದ್ದಾರೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ ಶ್ಲಾಘಿಸಿದ್ದಾರೆ.

- ವರದಿಗಾರರ ಕೂಟ ಕ್ರಿಕೆಟ್ ಟೂರ್ನಿ ಸಮಾರೋಪದಲ್ಲಿ ಜಿಲ್ಲಾ ಎಸ್‌ಪಿ ಉಮಾ ಪ್ರಶಾಂತ ಅಭಿಮತ - - -

ಕನ್ನಡಪ್ರಭ ವಾರ್ತೆ ದಾವಣಗೆರೆ ಸಮಾಜದ ಜವಾಬ್ದಾರಿಯುತ ಸ್ಥಾನದಲ್ಲಿರುವ ಪತ್ರಕರ್ತರು ಉತ್ತಮ ಸಮಾಜ ನಿರ್ಮಾಣಕ್ಕೆ ಶ್ರಮಿಸುತ್ತಿದ್ದಾರೆ. ದಾವಣಗೆರೆ ಜಿಲ್ಲೆಯಲ್ಲಿ ಉತ್ತಮ ವಾತಾವರಣ ಮೂಡಿಸುವ ಜೊತೆಗೆ ಉತ್ತಮವಾಗಿ ಕೆಲಸ ಮಾಡಲು ಪೊಲೀಸ್ ಇಲಾಖೆಗೂ ಸಹಕಾರಿಯಾಗಿದ್ದಾರೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ ಶ್ಲಾಘಿಸಿದರು.

ನಗರದ ಜಿಲ್ಲಾ ಪೊಲೀಸ್ ಕವಾಯಿತು ಮೈದಾನದಲ್ಲಿ ಭಾನುವಾರ ಜಿಲ್ಲಾ ವರದಿಗಾರರ ಕೂಟದಿಂದ ಮಾಧ್ಯಮ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಸೌಹಾರ್ದ ಕ್ರಿಕೆಟ್ ಪಂದ್ಯಾವಳಿಯ ಫೈನಲ್ ಪಂದ್ಯಕ್ಕೆ ಚಾಲನೆ ನೀಡಿದ ಅವರು, ಪತ್ರಕರ್ತರು- ಎಸ್‌ಪಿ ತಂಡ ಪಂದ್ಯದ ವಿಜೇತ ತಂಡದ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.

ಕೆಲಸಗಳ ಒತ್ತಡದಲ್ಲಿ ದುಡಿಯುವ ಪತ್ರಕರ್ತರು ಒಂದಿಷ್ಟು ಸಮಯಾವಕಾಶ ಮಾಡಿಕೊಂಡು ಕ್ರೀಡಾಕೂಟದಲ್ಲಿ ಸ್ಪರ್ಧಾ ಮನೋಭಾವದಿಂದ ಪಾಲ್ಗೊಳ್ಳಬೇಕು. ಪೊಲೀಸ್- ಪತ್ರಕರ್ತರ ತಂಡಗಳು ಹಿಂದಿನಿಂದಲೂ ಇಲ್ಲಿ ನಿರಂತರ ಕ್ರಿಕೆಟ್ ಪಂದ್ಯವಾಡಿಕೊಂಡು ಬಂದಿವೆ. ಇದರಿಂದ ಬಾಂಧವ್ಯ ವೃದ್ಧಿಯಾಗುತ್ತದೆ. ವರದಿಗಾರರ ಕೂಟ ಸೌಹಾರ್ದ ಕ್ರಿಕೆಟ್ ಟೂರ್ನಿ ನಡೆಸಿದೆ. ಕ್ರೀಡೆಗಳಲ್ಲಿ ಸೋಲು-ಗೆಲುವು ಮುಖ್ಯವಲ್ಲ. ಎಲ್ಲ ತಂಡಗಳು ಸ್ಪರ್ಧಾ ಮನೋಭಾವದಿಂದ ಪಾಲ್ಗೊಳ್ಳುವುದು ಅತಿ ಮುಖ್ಯ ಎಂದು ಎಸ್‌ಪಿ ಉಮಾ ಪ್ರಶಾಂತ ತಿಳಿಸಿದರು.

ಅಫಿಷಿಯಲ್ ಕಪ್ ಗೆದ್ದ ಎಸ್‌ಪಿ ಉಮಾ ಪ್ರಶಾಂತ ತಂಡಕ್ಕೆ ಟ್ರೋಫಿ ವಿತರಿಸಿ ಮಾತನಾಡಿದ ವಿಧಾನಸೌಧದ ಹಿರಿಯ ಶ್ರೇಣಿಯ ಕೆಎಎಸ್ ಅಧಿಕಾರಿ ಪ್ರಶಾಂತ್, ಪತ್ರಕರ್ತರು ಸದಾ ಸುದ್ದಿ ಮಾಡುವಲ್ಲಿ ಮಗ್ನರಾಗಿರುತ್ತಾರೆ. ಇಂತಹ ಸಂದರ್ಭದಲ್ಲಿ ಎಲ್ಲರೂ ಒಂದೆಡೆ ಸೇರಿ ಕ್ರೀಡೆಯಲ್ಲಿ ಪಾಲ್ಗೊಂಡು ಕ್ರೀಡಾ ಮನೋಭಾವ ಪ್ರದರ್ಶಿಸಿದ್ದಾರೆ. ಪತ್ರಕರ್ತರು ಬೇರೆ ಬೇರೆ ಪತ್ರಿಕೆಗಳಲ್ಲಿದ್ದರೂ ಎಲ್ಲರೂ ಸಹೋದರ ಮನೋಭಾವದಿಂದ ಇಲ್ಲಿ ಪಾಲ್ಗೊಂಡಿದ್ದಾರೆ. ಕೆಲಸದ ಜೊತೆ ಈ ರೀತಿ ಮನಸ್ಸಿಗೆ ಸಂತಸ ತರುವ ಆಟಗಳನ್ನು ಆಡುವ ಮೂಲಕ ದೇಹಕ್ಕೆ ಕಸರತ್ತು ನೀಡಿದರೆ, ಆರೋಗ್ಯವೂ ಉತ್ತಮವಾಗಿರುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ವರದಿಗಾರರ ಕೂಟದ ಅಧ್ಯಕ್ಷ ನಾಗರಾಜ ಎಸ್. ಬಡದಾಳ್ ಮಾತನಾಡಿ, ಪ್ರತಿವರ್ಷ ಕೂಟದಿಂದ ಕ್ರಿಕೆಟ್ ಟೂರ್ನಿ ನಡೆಸುತ್ತಿದ್ದೇವೆ. ಜನವರಿ ತಿಂಗಳಲ್ಲಿ ಪಿಪಿಎಲ್ ಮಾದರಿಯಲ್ಲಿ ಕೂಟದ ಪಂದ್ಯಾವಳಿ ಇದೆ. ಫೆಬ್ರವರಿಯಲ್ಲಿ ವರದಿಗಾರರ ಕೂಟ ಹಾಗೂ ಕಾರ್ಯನಿರತ ಪತ್ರಕರ್ತರ ಸಂಘ ಜಂಟಿಯಾಗಿ, ಜಿಲ್ಲೆಯ ಎಲ್ಲ ತಾಲೂಕುಗಳ ತಂಡ ಒಳಗೊಂಡ ಕ್ರಿಕೆಟ್ ಟೂರ್ನಿಗೆ ಚಿಂತನೆ ನಡೆಸಿವೆ ಎಂದರು.

ಹಿರಿಯ ಪತ್ರಿಕಾ ಛಾಯಾಗ್ರಾಹಕರಾದ ವಿವೇಕ್ ಬದ್ದಿ, ಮೊಹಮ್ಮದ್ ರಫೀಕ್‌, ಸತೀಶ ಬಡಿಗೇರ್‌ ಸೌಹಾರ್ದ ಕಪ್ ವಿಜೇತ ತಂಡಗಳಿಗೆ ಪ್ರಥಮ ಮೂರು ಟ್ರೋಫಿ ವಿತರಿಸಿ, ಶುಭ ಹಾರೈಸಿದರು. ಡಿಎಆರ್‌ ಡಿವೈಎಸ್ಪಿ ಪಿ.ಬಿ.ಪ್ರಕಾಶ, ಕೂಟದ ಪ್ರಧಾನ ಕಾರ್ಯದರ್ಶಿ ಎಂ.ವೈ.ಸತೀಶ, ಪಿಆರ್‌ಒ ಲೋಕೇಶ, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್.ವಿ. ಬದರೀನಾಥ, ವಿಜಯವಾಣಿ ಸ್ಥಾನಿಕ ಸಂಪಾದಕ ಎಂ.ಬಿ. ನವೀನ, ಬಿ.ಸಿಕಂದರ್, ಎನ್.ಆರ್.ರವಿ, ಮಧು ಕುಂದವಾಡ, ರಾಮಮೂರ್ತಿ, ಅಣ್ಣಪ್ಪ, ಸಂಜಯ್, ಮಹೇಶ್ ಕಾಶೀಪುರ, ರಮೇಶ, ವಿಜಯ್ ಜಾಧವ್, ಮಂಜಪ್ಪ, ಕಿರಣಕುಮಾರ, ರಮೇಶ, ಮಲ್ಲಿಕಾರ್ಜುನ ಕೈದಾಳೆ, ಅನಿಲ್‌ಕುಮಾರ್ ಬಾವಿ, ಮಲ್ಲಿಕಾರ್ಜುನ ಮೂರ್ತಿ, ಧನಂಜಯ, ಬಸವರಾಜ, ಶಿವಮೂರ್ತಿ, ಎಚ್‌ಎಂಪಿ ಕುಮಾರ, ಡಾ.ವರದರಾಜ, ರಾಮು, ಕೋಚ್ ತಿಮ್ಮೇಶ, ಅಂಪೈರ್‌ಗಳಾದ ಪ್ರದೀಪ್, ಮೋಹನ್ ಇತರರು ಇದ್ದರು.

- - -

-23ಕೆಡಿವಿಜಿ5: ದಾವಣಗೆರೆಯಲ್ಲಿ ವರದಿಗಾರರ ಕೂಟದ ಸೌಹಾರ್ದ ಕ್ರಿಕೆಟ್‌ ಕಪ್ ವಿಜೇತ ಇಮ್ಮಡಿ ಪುಲಿಕೇಶಿ ತಂಡದ ನಾಯಕ ಮಹೇಶ ಕಾಶೀಪುರ, ತಂಡಕ್ಕೆ ಹಿರಿಯ ಪತ್ರಿಕಾ ಛಾಯಾಗ್ರಾಹಕರಾದ ವಿವೇಕ್ ಬದ್ದಿ, ಮಹಮ್ಮದ್ ರಫೀಕ್‌, ಸತೀಶ ಬಡಿಗೇರ್ ಪ್ರಶಸ್ತಿ ವಿತರಿಸಿದರು. -23ಕೆಡಿವಿಜಿ6ಜೆಪಿಜಿ: ದಾವಣಗೆರೆಯಲ್ಲಿ ವರದಿಗಾರರ ಕೂಟದ ಅಫಿಷಿಯಲ್ ಕಪ್ ವಿಜೇತ ಪೊಲೀಸ್ ತಂಡದ ನಾಯಕಿ ಎಸ್‌ಪಿ ಉಮಾ ಪ್ರಶಾಂತ, ಉಪ ನಾಯಕ ಡಿವೈಎಸ್ಪಿ ಪಿ.ಬಿ.ಪ್ರಕಾಶ್‌ ಅವರಿಗೆ ಹಿರಿಯ ಶ್ರೇಣಿಯ ಕೆಎಎಸ್‌ ಅಧಿಕಾರಿ ಪ್ರಶಾಂತ ಟ್ರೋಫಿ ವಿತರಿಸಿದರು. ಕೂಟದ ಪದಾಧಿಕಾರಿಗಳು, ಸದಸ್ಯರು ಇದ್ದರು.