ದೇಶಕ್ಕೆ ಸ್ವಾತಂತ್ರ್ಯ ತರುವಲ್ಲಿ ಮತ್ತು ನಂತರವೂ ಸುಸಂಸ್ಕೃತ ಸಮಾಜ ನಿರ್ಮಾಣದಲ್ಲಿಯೂ ವಕೀಲರ ಪಾತ್ರ ಮಹತ್ವದ್ದಾಗಿದೆ ಎಂದು ಮುಖ್ಯಮಂತ್ರಿ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿದ್ದಾರೆ.
ಕೊಪ್ಪಳ: ದೇಶಕ್ಕೆ ಸ್ವಾತಂತ್ರ್ಯ ತರುವಲ್ಲಿ ಮತ್ತು ನಂತರವೂ ಸುಸಂಸ್ಕೃತ ಸಮಾಜ ನಿರ್ಮಾಣದಲ್ಲಿಯೂ ವಕೀಲರ ಪಾತ್ರ ಮಹತ್ವದ್ದಾಗಿದೆ ಎಂದು ಮುಖ್ಯಮಂತ್ರಿ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿದ್ದಾರೆ.
ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಹಮ್ಮಿಕೊಂಡಿದ್ದ ವಕೀಲರ ದಿನಾಚರಣೆ ಕಾರ್ಯಕ್ರಮದ ಅವರು ಸಮಾರೋಪ ಭಾಷಣ ಮಾಡಿದರು. ದೇಶದ ಸ್ವಾತಂತ್ರ್ಯ ಹೋರಾಟದಲ್ಲಿಯೂ ವಕೀಲರು ಮುಂಚೂಣಿಯಲ್ಲಿದ್ದರು ಮತ್ತು ಹೋರಾಟಕ್ಕೆ ಮಾರ್ಗದರ್ಶನ ಮಾಡಿದರು. ಅಷ್ಟೇ ಅಲ್ಲ, ದೇಶ ಸ್ವಾತಂತ್ರ್ಯ ಬಂದಾಗ ಅದಕ್ಕೆ ಸಂವಿಧಾನ ರಚನೆ ಮಾಡಿದ ಡಾ. ಬಿ.ಆರ್. ಅಂಬೇಡ್ಕರ್ ಅವರು ಸೇರಿದಂತೆ ಕಾನೂನು ರೂಪಿಸುವಲ್ಲಿ ವಕೀಲರು ಮಹತ್ವದ ಪಾತ್ರ ನಿಭಾಯಿಸಿದರು ಎಂದರು.ವಕೀಲರು ಕೇವಲ ಕಾನೂನು ಅರಿವು ಇದ್ದರೆ ಸಾಲದು, ಅವರು ಎಲ್ಲ ವಿಷಯಗಳ ಮೇಲೆಯೂ ವಾದ ಮಾಡಬೇಕಾಗಿರುವುದರಿಂದ ಎಲ್ಲವನ್ನು ತಿಳಿದುಕೊಂಡಿರಬೇಕಾಗುತ್ತದೆ ಎಂದರು. ನಾನು ಸಹ ಕಾನೂನು ಪದವೀಧರನಾಗಿದ್ದೇನೆ ಎನ್ನುವುದು ಹೆಮ್ಮೆಯ ಸಂಗತಿ ಎಂದರು.
ಮಾಜಿ ಸಂಸದ ಸಂಗಣ್ಣ ಕರಡಿ ಮಾತನಾಡಿ, ಸಂವಿಧಾನ ರಚನೆಯಲ್ಲಿಯೂ ವಕೀಲರ ಪಾತ್ರ ದೊಡ್ಡದಿದೆ. ನಂತರವೂ ಅದರ ಅನುಷ್ಠಾನ ಸೇರಿದಂತೆ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ವಕೀಲರ ಪಾತ್ರ ಮಹತ್ವದ್ದಾಗಿದೆ ಎಂದರು.ಬಳ್ಳಾರಿ ವಿಭಾಗೀಯ ಹಿರಿಯ ಕಾನೂನು ಅಧಿಕಾರಿ ಬಿ.ಎಸ್. ಪಾಟೀಲ್, ಕೊಪ್ಪಳ ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್ ಮಾತನಾಡಿದರು.
ವಕೀಲರ ಸಂಘದ ಜಿಲ್ಲಾಧ್ಯಕ್ಷ ಎ.ವಿ. ಕಣವಿ, ಮುಖಂಡರಾದ ಸಿ.ವಿ. ಚಂದ್ರಶೇಖರ, ಡಾ. ಬಸವರಾಜ ಕ್ಯಾವಟರ, ಸಂಘದ ಉಪಾಧ್ಯಕ್ಷ ಬಿ.ವಿ. ಸಜ್ಜನ, ಕಾರ್ಯದರ್ಶಿ ಪಿ.ಎಲ್. ಹಾದಿಮನಿ, ಸಂಘದ ಜಂಟಿ ಕಾರ್ಯದರ್ಶಿ ಸಂತೋಷ ಕವಲೂರು, ಖಜಾಂಜಿ ರಾಜಾಸಾಬ ಬೆಳಗುರಕಿ ಮೊದಲಾದವರು ಇದ್ದರು.ಹನುಮಂತರಾವ್ ಕೆಂಪಳ್ಳಿ ಕಾರ್ಯಕ್ರಮ ನಿರೂಪಿಸಿದರು. ವಕೀಲರ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಕ್ರೀಡಾಕೂಟದ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಯಿತು.