ಸಾರಾಂಶ
ಕನ್ನಡಪ್ರಭ ವಾರ್ತೆ, ಕೊಟ್ಟಿಗೆಹಾರ
ಶಿಕ್ಷಣ ಕ್ಷೇತ್ರದಲ್ಲಿ ಶಿಕ್ಷಕರ ಪಾತ್ರ ಅಪಾರವಾಗಿದೆ ಎಂದು ಖಲಂದರಿಯ ಆಶ್ರಮದ ಧರ್ಮಗುರು ಸಿನಾನ್ ಪೈಝೀ ಹೇಳಿದರು.ಚಕ್ಕಮಕ್ಕಿಯ ಖಲಂದರಿಯ ಆಶ್ರಮದಲ್ಲಿ ಆಯೋಜಿಸಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಿಕ್ಷಕ ಪಾಠ ಪ್ರವಚನ ಮಾತ್ರ ಮಾಡುವುದಿಲ್ಲ, ಅವರೊಬ್ಬ ಉತ್ತಮ ಮಾರ್ಗದರ್ಶಕ ಎಂಬುದನ್ನು ವಿದ್ಯಾರ್ಥಿಗಳು ಮರೆಯಬಾರದು. ಶಿಕ್ಷಣವಿಲ್ಲದೇ ಯಾವುದೇ ವ್ಯಕ್ತಿ ವಿಕಸನಗೊಳ್ಳಲಾರ ಎಂದರು.
ಧರ್ಮಗುರು ಮಜೀದ್ ಫೈಝೀ ಮಾತನಾಡಿ ಉತ್ತಮ ಸಮಾಜ ನಿರ್ಮಾಣಕ್ಕೆ ಶಿಕ್ಷಕರ ಕ್ಷೇತ್ರದ ಪಾತ್ರ ಅಪಾರವಾಗಿದ್ದು, ಮಕ್ಕಳನ್ನು ಬೆಳವಣಿಗೆ ಬುನಾದಿಯಲ್ಲಿ ಶಿಕ್ಷಣದಿಂದ ತಿದ್ದಿ ಉತ್ತಮ ವ್ಯಕ್ತಿಗಳಾಗಿ ಬಾಳಲು ಶಿಕ್ಷಕರ ಸಂಸ್ಕಾರ ಪ್ರಮುಖ ಪಾತ್ರವಹಿಸುತ್ತದೆ. ಶಿಕ್ಷಕರನ್ನು ಗೌರವಿಸುವುದು ವಿದ್ಯಾರ್ಥಿಗಳ ಆಧ್ಯ ಕರ್ತವ್ಯ ವಾಗಿದೆ ಎಂದು ಹೇಳಿದರು.ಸನ್ಮಾನ ಸ್ವೀಕರಿಸಿ ಮಾತನಾಡಿದ ನಿವೃತ್ತ ಶಿಕ್ಷಕ ಪಿ.ವಾಸುದೇವ್, ಮಕ್ಕಳು ಶಿಕ್ಷಣವನ್ನು ಯಶಸ್ವಿಯಾಗಿ ಪೂರೈಸಿ ಸಮಾಜದಲ್ಲಿ ಉತ್ತಮ ಸ್ಥಾನಮಾನ ಪಡೆದಾಗ, ಸತ್ಪ್ರಜೆಗಳಾಗಿ ನಡೆದಾಗ ನಾವು ವಿದ್ಯಾರ್ಥಿ ಗಳಿಗೆ ಕೊಟ್ಟ ಶಿಕ್ಷಣ ಸಾರ್ಥಕವೆನಿಸುತ್ತದೆ. ಮೂವತ್ತು ವರ್ಷದ ಹಿಂದಿನ ವಿದ್ಯಾರ್ಥಿಗಳಿಗೂ ಇಂದಿನ ವಿದ್ಯಾರ್ಥಿಗಳಿಗೂ ಅಜಗಜಾಂತರವಿದೆ. ಇಂದಿನ ಸ್ಥಿತಿ ಗಮನಿಸಿದಾಗ ಮೊಬೈಲ್ ಬಳಕೆ ಹಾಗೂ ಮಾದಕ ವಸ್ತುಗಳ ವ್ಯಸನದಿಂದ ಮಕ್ಕಳು ದಾರಿ ತಪ್ಪುತ್ತಿದ್ದಾರೆ. ಇದು ಮಕ್ಕಳ ಭವಿಷ್ಯಕ್ಕೆ ಕಂಟಕವಾಗುತ್ತದೋ ಎಂಬ ಆತಂಕ ಎದುರಾಗಿದೆ. ಚಿಕ್ಕ ಮಕ್ಕಳನ್ನು ದುಡಿಮೆಗೆ ತಳ್ಳದೇ ಉತ್ತಮ ಶಿಕ್ಷಣ ಕೊಡಿಸಿ ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಬಣಕಲ್ ಪ್ರೌಢಶಾಲೆ ಮುಖ್ಯ ಶಿಕ್ಷಕ ಜಿ.ಎಚ್. ಶ್ರೀನಿವಾಸ್ ಹಾಗೂ ನಿವೃತ್ತ ಶಿಕ್ಷಕ ಪಿ. ವಾಸುದೇವ್ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಧರ್ಮಗುರು ಝೈದ್ ಪೈಜಿ ಹಾಗೂ ಆಶ್ರಮದ ವಿದ್ಯಾರ್ಥಿಗಳು ಇದ್ದರು.ಪೋಟೋ ಫೈಲ್ ನೇಮ್ 16 ಕೆಸಿಕೆಎಂ 3ಮೂಡಿಗೆರೆ ತಾಲೂಕಿನ ಚಕ್ಕಮಕ್ಕಿಯ ಖಲಂದರಿಯ ಆಶ್ರಮದಲ್ಲಿ ಆಯೋಜಿಸಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕ ಶ್ರೀನಿವಾಸ್ ಅವರನ್ನು ಸನ್ಮಾನಿಸಲಾಯಿತು. ಸಿನಾನ್ ಫೈಝೀ, ಮಜೀದ್ ಫೈಝೀ ಇದ್ದರು.