ಸಾರಾಂಶ
ಗದಗ: ಸುಸಂಸ್ಕೃತ, ಸುಭದ್ರ ದೇಶ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು, ಸಮಾಜದಲ್ಲಿ ಶಿಕ್ಷಕರನ್ನು ಸಾಕ್ಷಾತ್ ಬ್ರಹ್ಮನಂತೆ ಕಾಣುತ್ತಾರೆ ಅದಕ್ಕೆ ಗೌರವ ತರುವಂತೆ ಎಲ್ಲ ಶಿಕ್ಷಕ ವೃಂದ ಶಿಕ್ಷಣ ನೀಡಬೇಕು ಎಂದು ವಿಪ ಸದಸ್ಯ ಎಸ್.ವಿ. ಸಂಕನೂರು ಹೇಳಿದರು.
ಅವರು ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಗುರುವಾರ ಜಿಲ್ಲಾಡಳಿತ, ಜಿಪಂ, ಶಾಲಾ ಶಿಕ್ಷಣ ಇಲಾಖೆ, ಗದಗ ಗ್ರಾಮೀಣ ಮತ್ತು ಶಹರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಸಹಯೋಗದಲ್ಲಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್‌ರವರ ಜನ್ಮದಿನಾಚರಣೆ ಅಂಗವಾಗಿ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಶಿಕ್ಷಕರ ದಿನಾಚರಣೆಯ ಮೂಲ ಕಾರಣೀಕರ್ತರಾದ ರಾಧಾಕೃಷ್ಣನ್ ತಮ್ಮ ಹುಟ್ಟು ಹಬ್ಬದ ದಿನವನ್ನು ಶಿಕ್ಷಕರ ದಿನಾಚರಣೆ ಎಂದು ಆಚರಿಸಲು ತಿಳಿಸಿದರು. ರಾಧಾಕೃಷ್ಣನ್ ಅವರಿಗೆ ವಿವಿಧ ದೇಶಗಳು ಡಾಕ್ಟರೇಟ್ ನೀಡಿ ಗೌರವ ಸಲ್ಲಿಸಿವೆ. ಅವರ ಆದರ್ಶ ಜೀವನ ಶೈಲಿ ಇಂದಿನ ಶಿಕ್ಷಕರು ಅಳವಡಿಸಿಕೊಂಡು ಶಿಕ್ಷಕರು ತಮ್ಮ ವೃತ್ತಿಯಲ್ಲಿ ಸಾಧನೆ ಮಾಡಬೇಕು ಎಂದರು.
ದೇಶದ ಭವಿಷ್ಯ ಶಾಲೆಗಳ ನಾಲ್ಕು ಗೋಡೆಗಳ ಮಧ್ಯೆ ನಿರ್ಮಾಣವಾಗುತ್ತದೆ. ಅದರಲ್ಲಿ ಕೆಲಸ ಮಾಡುವ ಶಿಕ್ಷಕರ ಜವಾಬ್ದಾರಿ ಗುರುತರವಾದದ್ದು. ಒಬ್ಬ ತಾಯಿ ಮಗುವಿಗೆ ಜನ್ಮ ನೀಡಿದರೆ ಆ ಮಗುವಿನ ಭವಿಷ್ಯದ ನಿರ್ಮಾಣ ಮಾಡುವವರು ಶಿಕ್ಷಕರು ಎಂದು ತಿಳಿದುಕೊಂಡು ಎಲ್ಲರೂ ಗಂಭೀರತೆಯಿಂದ ಕಾರ್ಯ ನಿರ್ವಹಿಸಬೇಕು ಎಂದು ಹೇಳಿದರು.ಶಿಕ್ಷಕರು ಕೇವಲ ಮಕ್ಕಳಿಗೆ ವಿಷಯವನ್ನು ತುಂಬುವ ಯಂತ್ರ ಆಗದೇ, ಮಕ್ಕಳಿಗೆ ಉತ್ಸಾಹ ಹಾಗೂ ವಿಷಯದ ಕುರಿತು ಕುತೂಹಲ ಮೂಡುವ ಹಾಗೇ ಪಾಠ ಪರಿಣಾಮಕಾರಿಯಾಗಿ ಬೋಧನೆ ಮಾಡಬೇಕು. ಪ್ರತಿಭಾವಂತ ಶಿಕ್ಷಕರಿದ್ದರೂ ಪರಿಣಾಮಕಾರಿಯಾಗಿ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ಕೌಶಲ್ಯ ಬೆಳೆಸಿಕೊಳ್ಳಬೇಕು. ಶಿಕ್ಷಣ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಕೌಶಲ್ಯ ಬೆಳೆಸುವ ಹಾಗೇ ಎಲ್ಲರೂ ಚಿಂತನೆ ಮಾಡಬೇಕು. ಶಿಕ್ಷಣದ ಗುಣಮಟ್ಟ ಕುಸಿಯದಂತೆ ಬೋಧನೆ ನೀಡಬೇಕು ಎಂದರು.
ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ಮುದಕಮ್ಮನವರ ಮಾತನಾಡಿ, ನಾನು ಕೂಡ ಶಿಕ್ಷಕ ವೃತ್ತಿಯಿಂದ ಬಂದಿದ್ದೇನೆ. ಅದು ಹೆಮ್ಮೆಯ ವಿಷಯವಾಗಿದೆ. ಶಿಕ್ಷಕರು ಕೇವಲ ಶಾಲೆಗೆ ಸೀಮಿತವಾಗದೆ ತುರ್ತು ಪರಿಸ್ಥಿತಿಯಂತಹ ಕೋವಿಡ್ ವೇಳೆ ಮತ್ತು ಚುನಾವಣೆ ಸಂದರ್ಭದಲ್ಲಿ ಎಲ್ಲರೂ ಸರಿಯಾಗಿ ಕಾರ್ಯ ನಿರ್ವಹಿಸಿದಕ್ಕೆ ಅಭಿನಂದನೆ ಸಲ್ಲಿಸಿದರು.ಡಿಡಿಪಿಐ ಜಿ.ಎಲ್. ಬಾರಟಕ್ಕೆ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಉಪನ್ಯಾಸಕರಾಗಿ ಆಗಮಿಸಿದ್ದ ನಿವೃತ್ತ ಡಿಡಿಪಿಐ ಐ.ಬಿ. ಬೆನಕೊಪ್ಪ ವಿವಿಧ ಪ್ರಮುಖ ವಿಷಯಗಳು ಕುರಿತು ಮಾತನಾಡಿದರು.ಇದೇ ಸಂದರ್ಭದಲ್ಲಿ ಜಿಲ್ಲಾ ಪ್ರಶಸ್ತಿ ಪುರಸ್ಕೃತ ಶಿಕ್ಷಕರಿಗೆ ಪ್ರಶಸ್ತಿ ಪ್ರಧಾನ ಹಾಗೂ ನಿವೃತ್ತ ಶಿಕ್ಷಕರಿಗೆ ಸನ್ಮಾನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರ್ ಸಾಬ ಬಬರ್ಚಿ, ತಹಸೀಲ್ದಾರ್ ಶ್ರೀನಿವಾಸ ಕುಲಕರ್ಣಿ, ನೌಕರರ ಸಂಘದ ಅಧ್ಯಕ್ಷ ರವಿ ಗುಂಜಿಕರ, ಅಕ್ಷರ ದಾಸೋಹ ಅಧಿಕಾರಿ ಸರಸ್ವತಿ, ಎಸ್.ಎನ್. ಬಳ್ಳಾರಿ, ಬಿಇಓಗಳಾದ ಕ್ಷೇತ್ರ ಆರ್.ಎಸ್. ಬುರಡಿ, ವಿ.ವಿ. ನಡುವಿನಮನಿ, ಶಾಲಾ ಶಿಕ್ಷಕರು, ವಿವಿಧ ಸಂಘಟನೆಗಳ ಪ್ರತಿನಿಧಿಗಳು ಹಾಜರಿದ್ದರು. ವಿರೇಶ ವಾಲ್ಮಿಕಿ, ಬಿ.ಎಂ. ಎರಗುಡಿ ನಿರೂಪಿಸಿದರು.