ಕೊಪ್ಪಳ: ವಿಕಸಿತ ಭಾರತದ ನಿರ್ಮಾಣದಲ್ಲಿ ಯುವಕರ ಪಾತ್ರ ನಿರ್ಣಾಯಕವಾಗಿದ್ದು, ಯುವಕರನ್ನು ಈ ದಿಸೆಯಲ್ಲಿ ಜಾಗ್ರತರನ್ನಾಗಿ ಮಾಡಬೇಕಾಗಿದೆ ಎಂದು ಕೊಪ್ಪಳ ವಿವಿ ಪ್ರಭಾರ ಕುಲಪತಿ ಡಾ. ಎಸ್.ವಿ. ಡಾಣಿ ಹೇಳಿದರು.
ನಗರದ ಶ್ರೀ ಗವಿಸಿದ್ಧೇಶ್ವರ ಪದವಿ ಮಹಾವಿದ್ಯಾಲಯದಲ್ಲಿ ಯುವಜನ ಮತ್ತು ಕ್ರೀಡಾ ಸಚಿವಾಲಯ, ಭಾರತ ಸರ್ಕಾರ, ಕೊಪ್ಪಳ ವಿಶ್ವವಿದ್ಯಾಲಯ, ಕೊಪ್ಪಳ, ಮೈ ಭಾರತ ಕೇಂದ್ರ, ಕೊಪ್ಪಳ ಮತ್ತು ರಾಷ್ಟ್ರೀಯ ಸೇವಾ ಯೋಜನೆ ಘಟಕದ ಸಹಯೋಗದಲ್ಲಿ ವಿಕಸಿತ್ ಭಾರತ ಜಿಲ್ಲಾ ಯುವ ಸಂಸತ್-2026 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಯುವಕರು ಪ್ರಧಾನಿಯವರ ವಿಕಸಿತ್ ಭಾರತದ ಕನಸನ್ನು ನನಸಾಗಿಸಲು ಧ್ವನಿ ಎತ್ತಬೇಕೆಂದು ಕರೆ ನೀಡಿದರು. ಸಹೋದರತ್ವ, ಭಾರತದ ಸಂಸ್ಕೃತಿ, ಸಮಾಜ ಸೇವೆಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಹೊಸ ಭಾರತವನ್ನು ಕಟ್ಟುವಲ್ಲಿ ಇಂದಿನಿಂದಲೇ ಕಾರ್ಯಪ್ರವೃತ್ತರಾಗಬೇಕು ಎಂದರು.ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಕೊಪ್ಪಳ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಮಹಾಂತೇಶ ಎಸ್. ದರಗದ ಮಾತನಾಡಿ, ವಿದ್ಯಾರ್ಥಿಗಳು ಕೇವಲ ಅಂಕಗಳನ್ನು ಪಡೆಯಲು ಮಾತ್ರ ಶಿಕ್ಷಣ ಕಲಿಯಬಾರದು ಮತ್ತು ನೌಕರಿ ತೆಗೆದುಕೊಳ್ಳಲು ಸೀಮಿತವಾಗದೇ ಸಮಾಜಮುಖಿ ಕಾರ್ಯಗಳನ್ನು ಮಾಡುವಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದರು.
ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಹಾಂತೇಶ ಪಾಟೀಲ ಮಾತನಾಡಿ, ವಿದ್ಯಾರ್ಥಿ ಜೀವನದಿಂದಲೇ ಸಮಾಜಸೇವೆ, ಹೋರಾಟ ಮನೋಭಾವನೆ ಬೆಳೆಸಿಕೊಳ್ಳಬೇಕು. ಜತೆಗೆ ರಾಜಕೀಯದತ್ತ ಯುವಕರು ಒಲವು ತೋರಬೇಕು ಎಂದರು.ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಚನ್ನಬಸವ ಅಧ್ಯಕ್ಷತೆ ವಹಿಸಿದ್ದರು. ಆನಂತರದಲ್ಲಿ ಕೊಪ್ಪಳ ಜಿಲ್ಲೆಯ ವಿವಿಧ ಪದವಿ ಕಾಲೇಜುಗಳಿಂದ ಆಗಮಿಸಿದ್ದ 80ಕ್ಕೂ ಹೆಚ್ಚು ಅಭ್ಯರ್ಥಿಗಳು ಐವತ್ತು ವರ್ಷಗಳ ತುರ್ತು ಪರಿಸ್ಥಿತಿ: ಭಾರತೀಯ ಪ್ರಜಾಪ್ರಭುತ್ವದಿಂದ ಪಾಠಗಳು ಎಂಬ ವಿಷಯದ ಮೇಲೆ ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು.
ಕೊಪ್ಪಳದ ಮೈ ಭಾರತ್ ಕೇಂದ್ರದ ಉಪನಿರ್ದೇಶಕ ಲೋಕೇಶಕುಮಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಕಾರ್ಯಕ್ರಮಾಧಿಕಾರಿ ಡಾ. ಜಾಲಿಹಾಳ ಶರಣಪ್ಪ ಸ್ವಾಗತಿಸಿದರು. ಕಾರ್ಯಕ್ರಮಾಧಿಕಾರಿ ಶರಣಪ್ಪ ಕಾರ್ಯಕ್ರಮ ನಿರೂಪಿಸಿದರು. ಡಾ. ಮಂಜುನಾಥ ಎಂ. ವಂದಿಸಿದರು.
ಡಾ. ಸಿದ್ದಲಿಂಗಪ್ಪ ಕೊಟ್ನೆಕಲ್, ಡಾ. ಅರುಣಕುಮಾರ, ಡಾ. ಸುಂದರ ಎಸ್. ಮೇಟಿ, ಡಾ. ಕರಿಬಸವೇಶ್ವರ ಬಿ., ಶ್ರೀದೇವಿ, ಡಾ. ನಾಗರಾಜ ದಂಡೋತಿ, ವಿನೋದ ಸಿ. ಮುದಿಬಸನಗೌಡರ, ಡಾ. ಮಂಜುನಾಥ ಗಾಳಿ, ಡಾ. ಶಶಿಕಾಂತ ಉಮ್ಮಾಪುರೆ, ಕನಕಪ್ಪ ಗೊಂಡಬಾಳ, ಮಂಜುನಾಥ ಹಿರೇಮಠ, ಡಾ. ನಾಗೇಶ ಮತ್ತು ಜಿಲ್ಲೆಯ ವಿವಿಧ ಕಾಲೇಜುಗಳ ಸ್ಪರ್ಧಾರ್ಥಿಗಳು ಭಾಗವಹಿಸಿದ್ದರು.