ಬಸವಕಲ್ಯಾಣದೆಡೆಗೆ ವಿಶ್ವದ ಪ್ರವಾಸಿಗರ ದೌಡು ನಿಶ್ಚಿತ

| Published : May 22 2024, 12:47 AM IST

ಸಾರಾಂಶ

ಸರ್ಕಾರವು ಅನುಭವ ಮಂಟಪ ನಿರ್ಮಾಣಕ್ಕೆ ಮುಂದಾಗಿ ಸುಮಾರು 620 ಕೋಟಿ ರು. ಅನುದಾನ ನೀಡಿದ್ದು ಕಟ್ಟಡದ ಕೆಲಸ ಪ್ರಗತಿಯಲ್ಲಿದೆ.

ಕನ್ನಡಪ್ರಭ ವಾರ್ತೆ ಬಸವಕಲ್ಯಾಣ

ಬಸವಣ್ಣನವರ ಕಾಲಕ್ಕೆ ಬಸವಕಲ್ಯಾಣದಲ್ಲಿ ಅನುಭವ ಮಂಟಪ ಸ್ಥಾಪಿಸಿ ಅಲ್ಲಿ ಬಸವಾದಿ ಶಿವಶರಣರು ನಡೆಸಿರುವ ಅನುಭವ ಗೋಷ್ಠಿಯಿಂದ ಜಗತ್ತಿನ ವಿದ್ವಾಂಸರು ಅನುಭವಿಗಳು ಬಸವಕಲ್ಯಾಣಕ್ಕೆ ಆಗಮಿಸಿ ಬಸವಕಲ್ಯಾಣದ ಕೀರ್ತಿಯನ್ನು ದಶ ದಿಕ್ಕುಗಳಿಗೆ ಹರಡುವಂತೆ ಮಾಡಿದರು ಎಂದು ಬಸವಕಲ್ಯಾಣ ಕ್ಷೇತ್ರ ಸಮಿತಿ ಅಧ್ಯಕ್ಷ ಬಸವರಾಜ ಪಾಟೀಲ ಸೇಡಂ ಹೇಳಿದರು.

ನಗರದ ಸುಭಾಷಚಂದ್ರ ನಾಗರಾಳೆ ಅವರ ಅರಿವು ಆಚಾರ ಅನುಭಾವ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ನ್ಯಾಯವಾದಿಗಳ ಮತ್ತು ಹಿರಿಯರೊಂದಿಗಿನ ಸಂವಾದ ಗೋಷ್ಠಿಯಲ್ಲಿ ಮಾತನಾಡಿ, ಬಸವಕಲ್ಯಾಣ ಅಭಿವೃದ್ಧಿ ಮಂಡಳಿ, ಬಸವೇಶ್ವರ ದೇವಸ್ಥಾನ ಹಾಗೂ ವಿಶ್ವ ಬಸವ ಧರ್ಮ ಟ್ರಸ್ಟ, ಬಸವ ಮಹಾಮನೆ ಸಂಸ್ಥೆಗಳು ಇಲ್ಲಿಯ ಸ್ಮಾರಕಗಳ ಜೀರ್ಣೋದ್ಧಾರ ಜೊತೆಗೆ ವಿವಿಧ ಕಾರ್ಯಕ್ರಮ ಹಮ್ಮಿಕೊಂಡು ಬಸವ ಭಕ್ತರು ಆಗಮಿಸುವಂತೆ ಕೆಲಸ ನಡೆಯುತ್ತಿದೆ ಎಂದರು.

ಸರ್ಕಾರವು ಅನುಭವ ಮಂಟಪ ನಿರ್ಮಾಣಕ್ಕೆ ಮುಂದಾಗಿ ಸುಮಾರು 620 ಕೋಟಿ ರು. ಅನುದಾನ ನೀಡಿದ್ದು ಕಟ್ಟಡದ ಕೆಲಸ ಪ್ರಗತಿಯಲ್ಲಿದೆ. ಜೊತೆಯಲ್ಲಿಯೇ ಬಸವತತ್ವದ ಪ್ರಸಾರ ಮತ್ತು ಪ್ರಚಾರದಲ್ಲಿ ಹಲವಾರು ಸಂಘ ಸಂಸ್ಥೆಗಳು ತೊಡಗಿಸಿಕೊಂಡಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಪ್ರತಿದಿನ 3 ಸಾವಿರಕ್ಕೂ ಅಧಿಕ ದೇಶ ಮತ್ತು ವಿದೇಶದ ಪ್ರವಾಸಿಗರು ಇಲ್ಲಿಗೆ ಬರುವುದು ನಿಶ್ಚಿತ ಎಂದು ಹೇಳಿದರು.

ನಿವೃತ್ತ ಜಿಲ್ಲಾ ನ್ಯಾಯಾಧೀಶ ಸುಭಾಶ್ಚಂದ್ರ ನಾಗರಾಳೆ ಮಾತನಾಡಿ, ಅರಿವು ಆಚಾರ ಅನುಭಾವ ಕೇಂದ್ರದಿಂದಲೂ ಬಸವ ತತ್ವದ ಸಂರಕ್ಷಣೆ ಮತ್ತು ಬೆಳವಣಿಗೆಗಾಗಿ ಶ್ರಮಿಸಲಾಗುತ್ತಿದೆ ಪ್ರವಾಸಿಗರಿಗೆ ವಸತಿ ವ್ಯವಸ್ಥೆ ಕಲ್ಪಿಸಲಾಗುತ್ತಿದೆ ಎಂದರು.

ಸಾಹಿತಿ ಕೆ.ಆರ್‌ ದುರ್ಗಾದಾಸ ಮಾತನಾಡಿದರು. ವಾಣಿಜ್ಯ ತೆರಿಗೆ ಇಲಾಖೆ ಸಹಾಯಕ ಆಯುಕ್ತ ಮಹೇಶ ಪಾಟೀಲ್‌, ನ್ಯಾಯವಾದಿಗಳ ಸಂಘದ ಮಾಜಿ ಅಧ್ಯಕ್ಷ ಪಂಡಿತ್‌ ನಾಗರಾಳೆ, ನ್ಯಾಯವಾದಿಗಳಾದ ವಿವೇಕ ನಾಗರಾಳೆ, ಸುಶೀಲ ಅವಸ್ಥೆ, ಚನ್ನಮಲ್ಲಿಕಾರ್ಜುನ ಸಿಗೇದಾರ, ಶಾಮರಾವ್‌ ಸಿಂಗ್‌, ನಿವೃತ್ತ ಪ್ರಾಧ್ಯಾಪಕ ಸಿ.ಬಿ ಪ್ರತಾಪುರೆ, ನಿವೃತ್ತ ಪ್ರಾಚಾರ್ಯ ಎಸ್‌ಜಿ ಕರಣೆ, ರಾಜಕುಮಾರ ಬಿರಾದಾರ, ಸೋಮನಾಥ ಬೇಲೂರೆ, ಮಲ್ಲಿಕಾರ್ಜುನ ಆಲಗೂಡೆ, ಗುರುಪ್ರಸಾದ ಪಂಡಿತ್‌, ವೀರಣ್ಣ ಪಾಟೀಲ್‌, ಭೀಮಾಶಂಕರ ಮಾಶಾಳಕರ ಉಪಸ್ಥಿತರಿದ್ದರು.