ಕುಷ್ಟಗಿ: ದೇಶದ ಸ್ವಾತಂತ್ರ್ಯಕ್ಕಾಗಿ ಹಾಗೂ ಕಲ್ಯಾಣ ಕರ್ನಾಟಕ ಭಾಗದ ಜನರು ಸ್ವತಂತ್ರವಾಗಿ ಬದುಕಬೇಕೆಂಬ ಆಶಯದಿಂದ ಹೋರಾಡಿದ ಹಿರಿಯರ ತ್ಯಾಗ, ಆದರ್ಶ ಮತ್ತು ಸೇವೆ ಇಂದಿನ ಪೀಳಿಗೆ ಮರೆಯಬಾರದು. ಅವರ ಜೀವನದ ಹಾದಿ, ಚಿಂತನೆ ಹಾಗೂ ಸಮಾಜಮುಖಿ ಕಾರ್ಯ ಮುಂದಿನ ಪೀಳಿಗೆಗೆ ಪರಿಚಯಿಸುವ ಕೆಲಸ ನಿರಂತರವಾಗಿ ನಡೆಯಬೇಕು ಎಂದು ಶಾಸಕ ದೊಡ್ಡನಗೌಡ ಪಾಟೀಲ ಹೇಳಿದರು.
ಪಟ್ಟಣದ ಬಸವ ಭವನದಲ್ಲಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಮಹಾತಪಸ್ವಿ ಭೀಮಜ್ಜ ಮುರಡಿ ಪುಣ್ಯತಿಥಿ ಹಾಗೂ ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ಮಾಜಿ ಶಾಸಕ ಪುಂಡಲೀಕಪ್ಪ ಜ್ಞಾನಮೋಟೆ ಪುಣ್ಯಸ್ಮರಣೆ ಅಂಗವಾಗಿ ಹೈದರಾಬಾದ್ ಕರ್ನಾಟಕ ಸ್ವಾತಂತ್ರ್ಯ ಯೋಧರಿಗೆ ಗೌರವ ನಮನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ಸ್ವಾತಂತ್ರ್ಯ ದೊರಕಬೇಕು, ಎಲ್ಲರೂ ಸ್ವತಂತ್ರವಾಗಿ ಬದುಕಬೇಕು ಎಂಬ ದೃಢ ಸಂಕಲ್ಪದೊಂದಿಗೆ ಭೀಮಜ್ಜ ಮುರಡಿ ಸೇರಿದಂತೆ ಅನೇಕರು ಹೋರಾಟ ನಡೆಸಿದ್ದರು. ತಮ್ಮ ಬದುಕನ್ನು ದೇಶ ಹಾಗೂ ಸಮಾಜಕ್ಕಾಗಿ ಅರ್ಪಿಸಿಕೊಂಡಿದ್ದ ಇಂತಹ ಮಹನೀಯರ ತ್ಯಾಗ ಸ್ಮರಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದರು.
ಮಹನೀಯರ ಪುಣ್ಯಸ್ಮರಣೆ ಕೇವಲ ಒಂದು ದಿನದ ಕಾರ್ಯಕ್ರಮಕ್ಕೆ ಸೀಮಿತವಾಗಬಾರದು. ಅವರ ಜೀವನ, ಹೋರಾಟ ಹಾಗೂ ಚಿಂತನೆ ಇಂದಿನ ಪೀಳಿಗೆಗೆ ಪರಿಚಯಿಸುವ ಕಾರ್ಯವಾಗಬೇಕು. ಮಕ್ಕಳು ಹಿರಿಯರ ಜೀವನಚರಿತ್ರೆ ಹಾಗೂ ಅವರು ಬರೆದಿರುವ ಪುಸ್ತಕ ಓದುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಮಹನೀಯರ ಬದುಕು ಮತ್ತು ಸಾಧನೆ ಮರೆತು ಹೋಗುವ ಸಾಧ್ಯತೆಯಿದೆ ಎಂದು ಹೇಳಿದರು.ಪುಣ್ಯಸ್ಮರಣೆ ಅಂಗವಾಗಿ ಆರೋಗ್ಯ ಶಿಬಿರ ಹಾಗೂ ವಿವಿಧ ಚಿಕಿತ್ಸಾ ಪದ್ಧತಿಗಳ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿರುವುದು ಉತ್ತಮ ಕಾರ್ಯ. ಮುಂದಿನ ದಿನಗಳಲ್ಲಿಯೂ ಇಂತಹ ಆರೋಗ್ಯ ಜಾಗೃತಿ ಕಾರ್ಯಕ್ರಮ ಇನ್ನಷ್ಟು ಪರಿಣಾಮಕಾರಿಯಾಗಿ ನಡೆಸಿ ಜನರ ಆರೋಗ್ಯ ಸುಧಾರಣೆಗೆ ನೆರವಾಗಬೇಕು ಎಂದು ಹೇಳಿದರು.
ಮಾಜಿ ಶಾಸಕ ಕೆ.ಶರಣಪ್ಪ ವಕೀಲರು ಕಾರ್ಯಕ್ರಮ ಉದ್ಘಾಟಿಸಿದರು. ಕೊಪ್ಪಳ ವಿಶ್ವವಿದ್ಯಾಲಯದ ಪ್ರಭಾರಿ ಕುಲಪತಿ ಡಾ.ಎಸ್.ವಿ. ಡಾಣಿ, ಶಿಕ್ಷಕ ಕಿಶನರಾವ್ ಕುಲಕರ್ಣಿ, ಶಿವಪ್ಪ ನೀರಾವರಿ, ದೇವೇಂದ್ರಪ್ಪ ಬಳೂಟಗಿ, ವೀರೇಶ ಬಂಗಾರಶೆಟ್ಟರ್, ಅಮೃತರಾಜ ಜ್ಞಾನಮೋಟೆ, ಎ.ವೈ.ಲೋಕರೆ, ಅಪ್ಪಣ್ಣ ನವಲೆ, ಬಸವರಾಜ ಗಾಣಿಗೇರ, ನಜೀರಸಾಬ್ ಮೂಲಿಮನಿ, ಆನಂದ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಂಗವಾಗಿ ಸಾರ್ವಜನಿಕರಿಗೆ ಬಸವ ಅಕ್ಯುಪ್ರೆಶರ್ ಹಾಗೂ ಕಲರ್ ಥೆರಪಿ ಆರೋಗ್ಯ ಚಿಕಿತ್ಸಾ ಶಿಬಿರ ಆಯೋಜಿಸಲಾಗಿತ್ತು. ಸಾರ್ವಜನಿಕರು ಶಿಬಿರದ ಪ್ರಯೋಜನ ಪಡೆದುಕೊಂಡರು.