ಭಾರತೀಯ ಪರಂಪರೆಯ ಹಿಂದೆ ವೈಜ್ಞಾನಿಕತೆ: ಡಾ. ಸೌಮ್ಯಶ್ರೀ ಶರ್ಮ

| Published : Feb 05 2024, 01:47 AM IST

ಸಾರಾಂಶ

ಗೋಕರ್ಣ ಕೋಟಿತೀರ್ಥಕಟ್ಟೆಯ ಮದಾಧ್ಯರಘೋತ್ತಮ ಮಠದಲ್ಲಿ ಮೈತ್ರೇಯಿ ಮಹಿಳಾ ಮಂಡಳಿಯ 17ನೇ ವಾರ್ಷಿಕೋತ್ಸವ ನಡೆಯಿತು. ಮಹಿಳೆಯರಿಗೆ ವಿವಿಧ ಸ್ಪರ್ಧೆ ಏರ್ಪಡಿಸಲಾಗಿತ್ತು.

ಗೋಕರ್ಣ: ಆತ್ಮ ಪರಿಶುದ್ಧತೆ, ನಮ್ಮ ನಡೆ, ಆಚಾರವನ್ನು ತೋರಿಸಿಕೊಟ್ಟ ಭಾರತೀಯ ಪರಂಪರೆಯ ಹಿಂದೆ ವೈಜ್ಞಾನಿಕತೆ ಅಡಿಗಿದ್ದು, ಇಂದಿನ ಪೀಳಿಗೆಗೂ ಮುಂದುವರಿಸಿಕೊಂಡು ಹೋಗುವಂತೆ ನೋಡಿಕೊಳ್ಳುವುದು ಪ್ರತಿಯೊಬ್ಬನ ಜವಾಬ್ದಾರಿ ಎಂದು ಅಶೋಕೆ ಪತಂಜಲಿ ಪಂಚಕರ್ಮ ಆಸ್ಪತ್ರೆಯ ಡಾ. ಸೌಮ್ಯಶ್ರೀ ಶರ್ಮ ಹೇಳಿದರು.

ಅವರು ಶನಿವಾರ ಸಂಜೆ ಇಲ್ಲಿನ ಕೋಟಿತೀರ್ಥಕಟ್ಟೆಯ ಮದಾಧ್ಯರಘೋತ್ತಮ ಮಠದಲ್ಲಿ ನಡೆದ ಮೈತ್ರೇಯಿ ಮಹಿಳಾ ಮಂಡಳಿಯ 17ನೇ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದರು. ಬಾಹ್ಯ ಸೌಂದರ್ಯಕ್ಕೆ ಹೆಚ್ಚು ಒತ್ತು ನೀಡುತ್ತಿರುವ ಇಂದಿನ ದಿನದಲ್ಲಿ ತಾಯಿಂದಿರು ತಮ್ಮ ಮಕ್ಕಳಿಗೆ ಸರಿಯಾದ ತಿಳಿವಳಿಕೆ ನೀಡಬೇಕು. ಅದೆಷ್ಟೋ ದೈವಿಕ ಕಾರ್ಯದಲ್ಲಿ ವಿಜ್ಞಾನವಿದೆ ಎಂದರು.ಸೀತಾ ಮಾತೆಯನ್ನು ಆರಾಧಿಸಲು ಕಾರಣ ಆದರ್ಶ ಬದುಕು ಎಂದ ಅವರು, ನಿದರ್ಶನಗಳನ್ನು ನೀಡಿದರು. ತುಂಡು ಉಡುಗೆಯ ಸಂಸ್ಕೃತಿ ತ್ಯಜಿಸಿ ನಮ್ಮತನವನ್ನು ಗಟ್ಟಿಗೊಳಿಸಬೇಕು ಎಂದು ಕರೆ ನೀಡಿದರು. ಆಧುನಿಕ ಬದುಕಿನ ಒತ್ತಡವನ್ನು ದೂರವಿಟ್ಟು ಆರೋಗ್ಯ ಕಾಪಾಡಿಕೊಳ್ಳುವ ಕುರಿತು ವಿವರಿಸಿದರು.

ಅಧ್ಯಕ್ಷತೆ ವಹಿಸಿದ್ದ ಮಹಾಬಲೇಶ್ವರ ಮಂದಿರದ ಮೇಲುಸ್ತುವಾರಿ ಸಮಿತಿ ಸದಸ್ಯ ವೇ. ಮಹಾಬಲ ಉಪಾಧ್ಯ ಮಾತನಾಡಿ, ಮಹಿಳೆಯರು ಎಲ್ಲ ರಂಗದಲ್ಲೂ ತಮ್ಮದೇ ಛಾಪು ಮೂಡಿಸುತ್ತಿದ್ದು, ಅದರಂತೆ ಇಲ್ಲಿ ಸಂಘಟನೆ ಸಮಾಜಮುಖಿ ಕಾರ್ಯ ಮಾಡುತ್ತಿರವುದು ಪ್ರಶಂಸನೀಯ ಎಂದರು. ಅಲ್ಲದೇ ವೇದವನ್ನು ಮಹಿಳೆಯರು ಅಧ್ಯಯನ ಮಾಡಬೇಕು ಎಂದು ಪ್ರತಿಪಾದಿಸಿ, ತಮ್ಮ ಮಕ್ಕಳಿಗೆ ಪಾಠ ಮಾಡಿದವರು ಇಲ್ಲಿನ ಬ್ರಹ್ಮರ್ಷಿ ದೈವರಾತರು ಎಂದರು.

ಇದೇ ವೇಳೆ ಸಾಮಾಜಿಕ ಕಾರ್ಯಕರ್ತೆ, ಮಹಿಳಾ ಮಂಡಳಿಯ ಹಿರಿಯ ಸದಸ್ಯೆ ಸಾವಿತ್ರಿ ಗಾಯತ್ರಿ ಅವರನ್ನು ಸನ್ಮಾನಿಸಲಾಯಿತು.

ಅಲ್ಲದೇ ಮೈತ್ರೇಯಿ ಸದಸ್ಯರಿಗೆ ಹಾಗೂ ಊರಿನ ಮಹಿಳೆಯರಿಗೆ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ನೀಡಲಾಯಿತು.

ಮೈತ್ರೇಯಿ ಮಹಿಳಾ ಮಂಡಳಿ ಅಧ್ಯಕ್ಷೆ ಸವಿತಾ ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಡಾ. ಶೀಲಾ ಹೊಸ್ಮನೆ ನಿರ್ವಹಿಸಿದರು.

ಕಾರ್ಯದರ್ಶಿ ಭಾಗೀರಥಿ ಉಪಾಧ್ಯ, ಸದಸ್ಯರು ಉಪಸ್ಥಿತರಿದ್ದರು. ಮೈತ್ರೇಯಿ ಮಹಿಳಾ ಮಂಡಳಿಯ ಉಪಾಧ್ಯಕ್ಷೆ ನಾಗರತ್ನ ಕೊಡಗಿ ವಂದಿಸಿದರು.

ಸಭಾ ಕಾರ್ಯಕ್ರಮದ ಆನಂತರ ಎರಡು ತಾಸಿಗೂ ಅಧಿಕಾಲ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಯಕ್ಷನೃತ್ಯ, ಹಾಡು, ನೃತ್ಯಗಳು ನೆರೆದ ಜನರನ್ನು ಮನರಂಜಿಸಿತು.