ತರೀಕೆರೆಸ್ವಚ್ಛ ಪರಿಸರ- ಪ್ರಕೃತಿದತ್ತ ತಂಪಿನ ವಾತಾವರಣ ಮತ್ತು ಶುದ್ಧ ಗಾಳಿಗೆ ಹೆಸರು ವಾಸಿಯಾಗಿರುವ ಮಲೆನಾಡ ಹೆಬ್ಬಾಗಿಲು ತರೀಕೆರೆ ಪಟ್ಟಣದಲ್ಲಿ ಈ ಬಾರಿ ಬಿಸಿಲಿನ ಅಬ್ಬರ ಹೇಳತೀರದಂತಾಗಿದೆ. ಈ ಬದಲಾದ ವಾತಾವರಣದಿಂದ ಜನರು ತಲ್ಲಣಿಸಿದ್ದಾರೆ.

ಸಹಿಸಲಾರದ ಉಷ್ಣತೆ । ರಸ್ತೆಗಳಲ್ಲಿ-ವಾಹನಗಳು ಮತ್ತು ಜನಸಂಚಾರ ವಿರಳ

ಅನಂತ ನಾಡಿಗ್ಕನ್ನಡಪ್ರಭ ವಾರ್ತೆ ತರೀಕೆರೆ

ಸ್ವಚ್ಛ ಪರಿಸರ- ಪ್ರಕೃತಿದತ್ತ ತಂಪಿನ ವಾತಾವರಣ ಮತ್ತು ಶುದ್ಧ ಗಾಳಿಗೆ ಹೆಸರು ವಾಸಿಯಾಗಿರುವ ಮಲೆನಾಡ ಹೆಬ್ಬಾಗಿಲು ತರೀಕೆರೆ ಪಟ್ಟಣದಲ್ಲಿ ಈ ಬಾರಿ ಬಿಸಿಲಿನ ಅಬ್ಬರ ಹೇಳತೀರದಂತಾಗಿದೆ. ಈ ಬದಲಾದ ವಾತಾವರಣದಿಂದ ಜನರು ತಲ್ಲಣಿಸಿದ್ದಾರೆ.ಪ್ರಕೃತಿ ಮುನಿಸಿನಿಂದಾಗಿ ಬೇಸಿಗೆ ಬಿಸಿಲಿನ ತಾಪವು ವರ್ಷಂಪ್ರತಿಯೂ ಹೆಚ್ಚಾಗುತ್ತಿದ್ದು, ಜನ ಜಾನುವಾರುಗಳು, ಪಕ್ಷಿಗಳು ಬಿಸಿಲಿನ ತೀವ್ರ ಝಳದಿಂದ ತತ್ತರಗೊಳ್ಳುವಂತಾಗಿದೆ. ಸಹಿಸಲಾರದ ಉಷ್ಣತೆಯಿಂದ ಪಟ್ಟಣದಲ್ಲಿ ವಾಹನಗಳು ಮತ್ತು ಜನಸಂಚಾರ ವಿರಳವಾಗಿದೆ.ಬೆಳಿಗ್ಗೆ 7 ಗಂಟೆಯಿಂದಲೇ ಬಿಸಿಲಿನ ಶಾಖ ಪ್ರಾರಂಭವಾಗಿ ಮಧ್ಯಾನ್ಹದ ಸುಡು ಬಿಸಿಲಿನ ತಾಪ ಮತ್ತಷ್ಟು ಹೆಚ್ಚಿಸಿದ್ದು ಜನರನ್ನು ನಿತ್ರಾಣಗೊಳಿಸುತ್ತಿದೆ. ಅಲ್ಲದೆ ರಸ್ತೆಯಲ್ಲಿ ಸಂಚರಿಸುವ ಜನರಿಗೆ ನೆರಳು, ಕುಡಿಯಲು ನೀರು ಸಿಕ್ಕರೆ ಸಾಕು ಎನ್ನುವಂತಾಗಿದೆ. ದಿನವಿಡೀ ತೀವ್ರ ಬಿಸಿಲಿನಿಂದಾಗಿ, ಮನೆ ಕಟ್ಟಡಗಳು ಕಾದು ಬಿಸಿ ಗಾಳಿಯಿಂದ ತುಂಬಿರುತ್ತದೆ. ಅಷ್ಟು ಬಿಸಿಲಿನ ತೀವ್ರತೆ ಇದೆ, ಎಷ್ಟು ನೀರು ಕುಡಿದರೂ ಬಾಯಾರಿಕೆ ತಣಿಯುವಂತಿಲ್ಲ.

ಪಟ್ಟಣದಲ್ಲಿ ದಿನವಿಡೀ ಬಿಸಿಯಾದ ಗಾಳಿಯೇ ಬೀಸುತ್ತಿದೆಯೇ ಹೊರತು ತಂಪಾದ ಗಾಳಿಯೇ ಇಲ್ಲದಂತಾಗಿದೆ. ಏಪ್ರಿಲ್ ಮಾಹೆಯಲ್ಲಿಯೇ ಇಷ್ಟು ತೀವ್ರತರ ಬಿಸಿಲಿನ ತಾಪ ತಡೆಯಲು ಆಸಾಧ್ಯವಾಗಿರುವುದರಿಂದ ಮುಂಗಾರು ಮಳೆ ಪ್ರಾರಂಭದವರೆಗೂ ಹೇಗೆ ಹೆಚ್ಚುತ್ತಿರುವ ಈ ಉಷ್ಣಾಂಶ ತಡೆಯುವುದು ಎಂಬುದು ಒಂದು ಚಿಂತೆ.ಅತಿಯಾದ ಬಿಸಿಲಿಗೆ ಊರಿನ ಸುತ್ತಮುತ್ತಲಿರುವ ಬಾವಿ, ಕೆರೆ, ಕಟ್ಟೆ ಹಳ್ಳ ಕೊಳ್ಳ ಜಲ ತೊರೆಗಳಲ್ಲಿ ನೀರು ಬರಿದಾಗುತ್ತಿದ್ದು ಪರಿಸರದಲ್ಲಿನ ಉಷ್ಣಾಂಶ ಮತ್ತಷ್ಟು ತೀವ್ರಗೊಳ್ಳಲು ಪ್ರಮುಖ ಕಾರಣವಾಗಿದೆ. ಪ್ರಾಣಿ ಪಕ್ಷಿಗಳಿಗೆ ಕುಡಿಯುವ ನೀರಿಗೂ ತತ್ವಾರ ಉಂಟಾಗುವ ಭಯ ಕಾಡುತ್ತಿದೆ. ಹೊಲ ಗದ್ದೆ ತೋಟಗಳಲ್ಲಿ ಕೊಳವೆ ಬಾವಿಗಳಲ್ಲಿ ಅಂತರ್ಜಲ ಮಟ್ಟ ಕುಸಿದು ರೈತರು ಕಂಗಾಲಾಗಿದ್ದಾರೆ. ದಿನೇ ದಿನೇ ಹೆಚ್ಚಾಗುತ್ತಿರುವ ತಾಪಕ್ಕೆ ಜನರು ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಹರಿಸಬೇಕಾದುದು ಅತ್ಯಾವಶ್ಯಕವಾಗಿದೆ. ತಂಪಾದ ಪಾನೀಯ, ಎಳನೀರು, ಹಣ್ಣು ಹಂಪಲು ಮಜ್ಜಿಗೆ ಇತ್ಯಾದಿ ದ್ರವಾಹಾರಗಳನ್ನು ಹೆಚ್ಚು ಸೇವಿಸಲೇ ಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಅಂಗಡಿ ಮುಂಗಟ್ಟು, ಸರ್ಕಾರಿ ಕಚೇರಿಗಳಲ್ಲಿ ದಿನವಿಡಿ ವಿದ್ಯುತ್ ಫ್ಯಾನುಗಳನ್ನು, ಏರ್ ಕೂಲರ್ ಗಳನ್ನು ಆಶ್ರಯಿಸಬೇಕಾಗಿದೆ. ಅರಣ್ಯದಲ್ಲಿ ಜಲಮೂಲಗಳು ಕಡಿಮೆಯಾಗಿದ್ದು ಕಾಡು ಪ್ರಾಣಿ, ಪ್ರಾಣಿಪಕ್ಷಿಗಳು ನೀರು ಮತ್ತು ಆಹಾರಕ್ಕಾಗಿ ಪರಿತಪಿಸುವಂತಾಗಿದೆ.

--ಬಾಕ್ಸ್--

38 ಸೆಲ್ಲಿಯಸ್ ತನಕ ಉಷ್ಣಾಂಶ ಹೆಚ್ಚಳ

ಬಿಸಿಲಿನ ತಾಪಮಾನದಿಂದ ಜೀವಸಂಕುಲ ನರಳುತ್ತಿದೆ. ಈ ಬಾರಿ ಸರಾಸರಿ 38 ಸೆಲ್ಲಿಯಸ್ ತನಕ ಉಷ್ಣಾಂಶ ಹೆಚ್ಚಾಗಿದ್ದು ಹ್ಯೂಮಿಡಿಟಿ ಶೇ.2 ಸೇರಿ ಶೇ.40 ಡಿಗ್ರಿ ಸೆಲ್ಲಿಯಸ್ ತಾಪಮಾನ ಗೋಚರವಾಗುತ್ತಿದೆ. ಇದಕ್ಕೆ ಸಮುದ್ರದ ನೀರಿನ ಬಿಸಿ 30 ರಿಂದ 32 ಸೆಲ್ಸಿಯಸ್ ಹೆಚ್ಚಾಗಿರುವುದೇ ಈ ತಾಪಮಾನಕ್ಕೆಕಾರಣ. ಈ ತಾಪಮಾನಕ್ಕೆ ಯಾವ ತೋಟಗಾರಿಕಾ ಬೆಳೆಗಳು ರೈತರ ಬೆಳೆಗಳು ತರಕಾರಿಗಳು ಹಣ್ಣು ಹಂಪಲುಗಳ ಸಹ ಚಿಗುರಿನಲ್ಲಿಯೇ ಮುರುಟಿಹೋಗುವ ಸಾಧ್ಯತೆ ಹೆಚ್ಚಾಗಿದೆ ಎಂದು ರಾಜ್ಯ ರೈತ ಪ್ರಶಸ್ತಿ ಪುರಸ್ಕೃತ ಡಾ.ಆರ್.ದೇವಾನಂದ್ ಆತಂಕ ವ್ಯಕ್ತಪಡಿಸಿದ್ದಾರೆ.

--ಮರಗಳ ಹನನ ಉಷ್ಣಾಂಶ ಹೆಚ್ಚಲು ಕಾರಣ

ಪ್ರಕೃತಿ ಮೇಲಿನ ದೌರ್ಜನ್ಯ ಹೆಚ್ಚಾದಂತೆ ಗಿಡ ಮರಗಳು ಹಾಗೂ ಹಸಿರು ನಾಶವಾಗುತ್ತಿದ್ದು ವಾತಾವರಣದಲ್ಲಿನ ಉಷ್ಣಾಂಶ ಹೆಚ್ಚಾಗಲು ಕಾರಣವಾಗಿದೆ. ಮುಂದಿನ ಪೀಳಿಗೆಗಾಗಿ ಇಂದೇ ಗಿಡ ಮರಗಳನ್ನು ನೆಟ್ಟು ಪೋಷಿಸುವ ಅಭ್ಯಾಸವನ್ನು ಮಕ್ಕಳಿಗೆ ತಿಳಿಸಿಕೊಡಬೇಕಾಗಿದೆ. ನೀರು ಅತ್ಯಂತ ಅಮೂಲ್ಯ. ಬೇಸಿಗೆಯಲ್ಲಿ ಹಿತಮಿತ ಬಳಕೆಯಿಂದ ನೀರನ್ನು ಉಳಿಸಬಹುದು. ಈ ಬಿಸಿಲಿನ ತಾಪ ಕಡಿಮೆಯಾಗಿ ಸಮಯಕ್ಕೆ ಸರಿಯಾಗಿ ಮುಂಗಾರು ಆರಂಭಗೊಂಡು ವಾತಾವರಣ ತಂಪಾಗುವುದು ಅಗತ್ಯವಾಗಿದೆ ಎಂದು ಕನ್ನಡಶ್ರೀ ಬಿ.ಎಸ್.ಭಗವಾನ್ ಅಭಿಪ್ರಾಯಪಟ್ಟಿದ್ದಾರೆ.

--26ಕೆಟಿಆರ್.ಕೆ.1

ತರೀಕೆರೆಯಲ್ಲಿ ಹೆಚ್ಚಾಗುತ್ತಿರುವ ಬಿಸಿಲಿನ ತಾಪದಿಂದಾಗಿ ಕೆರೆಗಳಲ್ಲಿ ನೀರಿಲ್ಲದೆ ಒಣಗಿ ಖಾಲಿಯಾಗುತ್ತಿದೆ.