ಮಿತಿ ಮೀರಿದ ನಾಯಿಗಳ ಹಾವಳಿ: ಭಯದ ವಾತಾವರಣ

| Published : Oct 28 2024, 01:22 AM IST

ಸಾರಾಂಶ

ಬೀದಿ ನಾಯಿಗಳ ಹಾವಳಿಯಿಂದ ರಸ್ತೆ ಅಪಘಾತಗಳು ಹೆಚ್ಚಾಗುತ್ತಿವೆ. ಮಕ್ಕಳು ಹಗಲಿನ ಸಮಯದಲ್ಲೇ ಒಂಟಿಯಾಗಿ ಓಡಾಡುವುದಕ್ಕೆ ಹೆದರುತ್ತಿದ್ದಾರೆ. ರಾತ್ರಿ ಸಮಯದಲ್ಲಿ ಜನರೇ ಒಬ್ಬಂಟಿಯಾಗಿ ಓಡಾಡಲಾಗದಂತಹ ಸ್ಥಿತಿ ನಿರ್ಮಾಣವಾಗಿದೆ. ವಾಹನಗಳಲ್ಲಿ ತೆರಳುವಾಗ ಬೀದಿ ನಾಯಿಗಳು ಅಟ್ಟಿಸಿಕೊಂಡು ಬರುವುದು ಸಾಮಾನ್ಯವಾಗಿದೆ.

ಅಣ್ಣೂರು ಸತೀಶ್

ಕನ್ನಡಪ್ರಭ ವಾರ್ತೆ ಭಾರತೀನಗರ

ಚಿತ್ರದುರ್ಗದಲ್ಲಿ ಬೀದಿ ನಾಯಿಗಳ ದಾಳಿಗೆ ಟ್ಯೂಷನ್‌ಗೆ ತೆರಳುತ್ತಿದ್ದ ಬಾಲಕ ಬಲಿಯಾಗಿರುವ ಹಿನ್ನೆಲೆಯಲ್ಲಿ ಬೀದಿ ನಾಯಿಗಳನ್ನು ಕಂಡರೆ ಬೆಚ್ಚಿ ಬೀಳುವಂತಹ ಸ್ಥಿತಿ ನಿರ್ಮಾಣವಾಗಿದೆ. ದಿನೇ ದಿನೇ ನಾಯಿಗಳ ಸಂಖ್ಯೆ ಮಿತಿ ಮೀರುತ್ತಿದೆ. ನಾಯಿಗಳು ಗುಂಪು ಗುಂಪಾಗಿ ರಸ್ತೆಗಳಲ್ಲಿ ಓಡಾಡುತ್ತಿರುವುದನ್ನು ಕಂಡು ಸಾರ್ವಜನಿಕರು ಮತ್ತು ಮಕ್ಕಳು ಭಯದ ವಾತಾವರಣದಲ್ಲೇ ಸಂಚರಿಸುವಂತಾಗಿದೆ.

ಬೀದಿ ನಾಯಿಗಳ ಹಾವಳಿಯಿಂದ ರಸ್ತೆ ಅಪಘಾತಗಳು ಹೆಚ್ಚಾಗುತ್ತಿವೆ. ಮಕ್ಕಳು ಹಗಲಿನ ಸಮಯದಲ್ಲೇ ಒಂಟಿಯಾಗಿ ಓಡಾಡುವುದಕ್ಕೆ ಹೆದರುತ್ತಿದ್ದಾರೆ. ರಾತ್ರಿ ಸಮಯದಲ್ಲಿ ಜನರೇ ಒಬ್ಬಂಟಿಯಾಗಿ ಓಡಾಡಲಾಗದಂತಹ ಸ್ಥಿತಿ ನಿರ್ಮಾಣವಾಗಿದೆ. ವಾಹನಗಳಲ್ಲಿ ತೆರಳುವಾಗ ಬೀದಿ ನಾಯಿಗಳು ಅಟ್ಟಿಸಿಕೊಂಡು ಬರುವುದು ಸಾಮಾನ್ಯವಾಗಿದೆ. ಇದರಿಂದ ಅನಾಹುತಗಳು ಸಂಭವಿಸುವ ಆತಂಕ ಎದುರಾಗಿದೆ.

ನಾಯಿಗಳ ಸಂಖ್ಯೆಯಲ್ಲಿ ಏರಿಕೆ:

ಕೆ.ಎಂ.ದೊಡ್ಡಿ ವ್ಯಾಪ್ತಿಯಲ್ಲಿ ನಾಯಿಗಳ ಉಪಟಳ ಹೆಚ್ಚಿದ್ದರೂ ಗ್ರಾಮ ಪಂಚಾಯ್ತಿ ಯಾವುದೇ ಕ್ರಮಗಳನ್ನು ಕೈಗೊಳ್ಳದಿರುವುದರಿಂದ ನಾಯಿಗಳ ಸಂಖ್ಯೆಯಲ್ಲೂ ಏರಿಕೆಯಾಗುತ್ತಲೇ ಇದೆ. ಒಂದು ಸಾವಿರಕ್ಕೂ ಹೆಚ್ಚು ನಾಯಿಗಳು ಕೆ.ಎಂ. ದೊಡ್ಡಿ ವ್ಯಾಪ್ತಿಯಲ್ಲಿದ್ದು, ಬೀದಿ ನಾಯಿಗಳಿಗೆ ಹೆದರಿ ಜನರು ಬೇಗನೆ ಮನೆ ಸೇರಿಕೊಳ್ಳುವಂತಹ ಸ್ಥಿತಿ ಎದುರಾಗಿದೆ. ಟ್ಯೂಷನ್‌ಗೆ ಹೋಗಿ ಮನೆಗೆ ಬರುವವರೆಗೂ ಮಕ್ಕಳನ್ನು ನಾಯಿಗಳಿಂದ ಕಾಪಾಡುವುದಕ್ಕೆ ಪೋಷಕರು ಮುನ್ನೆಚ್ಚರಿಕೆ ವಹಿಸುವಂತಾಗಿದೆ.

ಕೋಳಿ, ಕುರಿ ಮತ್ತು ಹಂದಿ ಮಾಂಸದ ಅಂಗಡಿಗಳ ಮುಂದೆ ನಾಯಿಗಳ ಹಿಂಡೇ ನೆರೆದಿರುತ್ತದೆ. ಮಾಂಸದ ವಾಸನೆಗೆ ಗುಂಪು-ಗುಂಪಾಗಿ ಬಂದು ಕಿತ್ತಾಡುತ್ತವೆ. ಅಂಗಡಿ ಮಾಲೀಕರು ಸಾರ್ವಜನಿಕರ ಸ್ಥಳ, ಕಸದ ತೊಟ್ಟಿಯಲ್ಲಿ ಮಾಂಸದ ತ್ಯಾಜ್ಯ ಹಾಕುವುದರಿಂದ ನಾಯಿಗಳ ರಂಪಾಟ ಹೆಚ್ಚಾಗಿದೆ ಎನ್ನುತ್ತಾರೆ ಸ್ಥಳೀಯರು.

ಕಾನೂನಿನ ಭಯ:

ಹೆಚ್ಚುತ್ತಿರುವ ಬೀದಿ ನಾಯಿಗಳ ಹಾವಳಿಗೆ ಕಡಿವಾಣ ಹಾಕುವುದಕ್ಕೆ ಮುಖ್ಯವಾಗಿ ಕಾನೂನಿನ ಭಯ ಸ್ಥಳೀಯ ಗ್ರಾಮ ಪಂಚಾಯ್ತಿಯಿಂದ ಹಿಡಿದು ಎಲ್ಲರನ್ನೂ ಕಾಡುತ್ತಿದೆ. ನಾಯಿಗಳನ್ನು ಹಿಡಿದು ದೂರದ ಕಾಡಿಗೆ ಬಿಡುವಂತೆಯೂ ಇಲ್ಲ. ಅವುಗಳ ಉಪಟಳವನ್ನು ಸಹಿಸಿಕೊಳ್ಳುವುದಕ್ಕೂ ಸಾಧ್ಯವಾಗುತ್ತಿಲ್ಲ. ಅವುಗಳ ತಂಟೆಗೆ ಹೋದರೆ ಪ್ರಾಣಿದಯಾ ಸಂಘದವರು ನ್ಯಾಯಾಲಯದ ಮೆಟ್ಟಿಲೇರುತ್ತಾರೆ. ಕಾನೂನಿನಡಿ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ.

ನಾಯಿಗಳ ಹಾವಳಿ ಸಂಬಂಧ ಕಾನೂನು ಹೋರಾಟ ನಡೆಸಿ ನಿಯಂತ್ರಣಕ್ಕೆ ದಾರಿ ಕಂಡುಕೊಳ್ಳುವ ಧೈರ್ಯವನ್ನು ಇದುವರೆಗೂ ಯಾರೂ ಮಾಡಿಲ್ಲ. ನಾಯಿಗಳಿಂದ ಸಾರ್ವಜನಿಕರು ಹಾಗೂ ಮಕ್ಕಳಿಗೆ ರಕ್ಷಣೆ ದೊರಕಿಸುವ ಸಂಬಂಧ ಹೊಸ ಮಾದರಿಯ ಕ್ರಮಗಳನ್ನು ಕಂಡುಕೊಳ್ಳಲು ಯಾರಿಂದಲೂ ಸಾಧ್ಯವಾಗಿಲ್ಲ. ಹಾಗಾಗಿ ನಾಯಿಗಳ ಹತ್ತಿರಕ್ಕೂ ಸುಳಿಯದೆ ಅವುಗಳಿಂದ ದೂರವೇ ಉಳಿದಿದ್ದಾರೆ.

ಪ್ರಾಣಿ ದಯಾ ಸಂಘದವರ ವಿರುದ್ಧ ಚಾಟಿ:

ಪ್ರಾಣಿ ದಯಾ ಸಂಘದವರು ನಾಯಿಗಳಿಗೆ ಆಗುತ್ತಿರುವ ತೊಂದರೆ ಬಗ್ಗೆಯಷ್ಟೇ ಕಾಳಜಿ ಹೊಂದಿದ್ದಾರೆಯೇ ವಿನಃ ಅವುಗಳು ಜನಸಾಮಾನ್ಯರು, ಮಕ್ಕಳಿಗೆ ಉಂಟುಮಾಡುತ್ತಿರುವ ಅಪಾಯ, ಅನಾಹುತದ ಬಗ್ಗೆ ಕಿಂಚಿತ್ತೂ ಕಾಳಜಿಯನ್ನು ಪ್ರದರ್ಶಿಸುತ್ತಿಲ್ಲ. ಬೀದಿ ನಾಯಿಗಳ ಉಪಟಳದಿಂದ ಜನರ ನೆಮ್ಮದಿಗೆ ಭಂಗವಾಗುತ್ತಿರುವುದನ್ನೂ ಪರಿಗಣಿಸಬೇಕು ಎಂದು ಸಾರ್ವಜನಿಕರು ಪ್ರಾಣಿ ದಯಾ ಸಂಘದವರಿಗೆ ಚಾಟಿ ಬೀಸಿದ್ದಾರೆ.

ಕೆ.ಎಂ.ದೊಡ್ಡಿ ಸುತ್ತ-ಮುತ್ತಲ ಹಳ್ಳಿಗಳಿಗೆ ಕೇಂದ್ರ ಸ್ಥಳವಾಗಿದ್ದು, ಇಲ್ಲಿಗೆ ಸಾವಿರಾರು ಸಂಖ್ಯೆಯಲ್ಲಿ ಹೊರ ಜಿಲ್ಲೆಗಳಿಂದ ವ್ಯಾಪಾರ-ವಹಿವಾಟಿಗೆ ಆಗಮಿಸುತ್ತಾರೆ. ಪಟ್ಟಣದ ಬಹುತೇಕ ಬೀದಿಗಳಲ್ಲಿ ನಾಯಿಗಳ ಸಂಖ್ಯೆ ಹೆಚ್ಚಾಗಿದ್ದರೂ ಅವುಗಳನ್ನು ನಿಯಂತ್ರಿಸುವ ದಾರಿಯನ್ನೇ ಕಾಣದೆ ಸ್ಥಳೀಯ ಗ್ರಾಮ ಪಂಚಾಯ್ತಿ ಮೌನಕ್ಕೆ ಶರಣಾಗಿದೆ.

ಸಂತಾನಹರಣ ಚಿಕಿತ್ಸೆಗೆ ಕ್ರಮವಿಲ್ಲ:

ಬೀದಿ ನಾಯಿಗಳನ್ನು ನಿಯಂತ್ರಿಸುವುದಕ್ಕೆ ಸಂತಾನಹರಣ ಶಸ್ತ್ರಚಿಕಿತ್ಸೆ ನಡೆಸುವುದಕ್ಕೆ ಕಾನೂನಿನಲ್ಲಿ ಅವಕಾಶವಿದೆ. ಸಂತಾನ ಶಕ್ತಿ ಹರಣ ಚಿಕಿತ್ಸೆಗೆ ಗ್ರಾಮ ಪಂಚಾಯ್ತಿಯಲ್ಲಿ ಅನುದಾನ ಲಭ್ಯವಿದ್ದರೂ ಆ ಕೆಲಸ ಸಮರ್ಪಕವಾಗಿ ನಡೆಯುತ್ತಿಲ್ಲ ಎನ್ನುವುದು ಸಾರ್ವಜನಿಕರ ಆರೋಪವಾಗಿದೆ.

ಬೀದಿ ನಾಯಿಗಳನ್ನು ನಿಯಂತ್ರಿಸುವಂತೆ ಸಾರ್ವಜನಿಕರು ಪಂಚಾಯ್ತಿಗೆ ದೂರು ನೀಡಿದ್ದರೂ ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಕೆ.ಎಂ.ದೊಡ್ಡಿ ನಿವಾಸಿ ಬಿಳಿಯಪ್ಪ. ಜನರು ಕೊಟ್ಟ ಮನವಿಯನ್ನು ಸ್ವೀಕರಿಸಿಟ್ಟುಕೊಂಡಿದ್ದಾರೆಯೇ ಹೊರತು ಬೀದಿ ನಾಯಿಗಳಿಂದ ರಕ್ಷಣೆ ದೊರಕಿಸಲು ಪರ್ಯಾಯ ಕ್ರಮಗಳನ್ನು ಹುಡುಕುವ ಪ್ರಯತ್ನ ಗ್ರಾಪಂ ಆಡಳಿತದವರಿಂದ ನಡೆದಿಲ್ಲ ಎಂದು ದೂರಿದ್ದಾರೆ.

ಬೀದಿ ನಾಯಿಗಳನ್ನು ನಿಯಂತ್ರಿಸಿ ನಾಗರೀಕರಲ್ಲಿ ನೆಮ್ಮದಿ ಮೂಡಿಸುವುದು ಗ್ರಾಮ ಪಂಚಾಯ್ತಿಯ ಜವಾಬ್ದಾರಿಯಾಗಿದ್ದು ಈ ಬಗ್ಗೆ ಕೂಡಲೇ ಕ್ರಮ ವಹಿಸಬೇಕು ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.

ಭಾರತೀನಗರ ಪಂಚಾಯ್ತಿ ವ್ಯಾಪ್ತಿಯಲ್ಲಿ ನಾಯಿಗಳ ಹಾವಳಿ ಹೆಚ್ಚಿರುವ ಬಗ್ಗೆ ಜನರಿಂದ ಸಾಕಷ್ಟು ದೂರುಗಳು ಬಂದಿವೆ. ನಾಯಿಗಳ ನಿಯಂತ್ರಣಕ್ಕೆ ಯಾವ ಕ್ರಮ ಕೈಗೊಳ್ಳಬಹುದು ಎನ್ನುವ ಕುರಿತು ಮೇಲಧಿಕಾರಿಗಳ ಗಮನಕ್ಕೆ ತಂದು ಅಗತ್ಯ ಕ್ರಮ ವಹಿಸಲಾಗುವುದು.

- ಕೆ.ವಿ.ಶ್ರೀನಿವಾಸ್, ಗ್ರಾ.ಪಂ ಸದಸ್ಯ ಕೆ.ಎಂ.ದೊಡ್ಡಿಯಲ್ಲಿ ನಾಯಿಗಳ ಹಾವಳಿ ಹೆಚ್ಚಾಗಿದ್ದು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಜನರು ತಿರುಗಾಡಲು ಸಾಧ್ಯವಾಗುತ್ತಿಲ್ಲ. ರಸ್ತೆಗಳ ಮಧ್ಯೆ ನಿಲ್ಲುವುದರಿಂದ ದಿನನಿತ್ಯ ಅಪಘಾತಗಳು ಹೆಚ್ಚುತ್ತಿವೆ. ಈ ಬಗ್ಗೆ ಗ್ರಾಮ ಪಂಚಾಯಿತಿ ಕ್ರಮ ವಹಿಸಬೇಕು

- ರಘುವೆಂಕಟೇಗೌಡ, ಕೆ.ಎಂ.ದೊಡ್ಡಿ