ಸಾರಾಂಶ
ವಿ.ಎಂ. ನಾಗಭೂಷಣ
ಕನ್ನಡಪ್ರಭ ವಾರ್ತೆ ಸಂಡೂರುಅಭಿವೃದ್ಧಿಯ ದೃಷ್ಟಿಯಿಂದ ಗಣಿ ಬಾಧಿತ ಪ್ರದೇಶದ ಪರಿಸರ ಮತ್ತು ಜನಜೀವನ ಪುನಶ್ಚೇತನಕ್ಕಾಗಿ ರಚಿಸಲಾಗಿರುವ ಕೆಎಂಇಆರ್‌ಸಿ (ಕರ್ನಾಟಕ ಗಣಿ ಪರಿಸರ ಪುನಶ್ಚೇತನ ನಿಗಮ) ಕಡೆಗೆ ಗಣಿ ಬಾಧಿತ ಪ್ರದೇಶದ ಜನರ ಚಿತ್ತ ನೆಟ್ಟಿದೆ.೨೦೧೪ರಲ್ಲಿ ರಚಿಸಲಾದ ಕರ್ನಾಟಕ ಗಣಿ ಪರಿಸರ ಪುನಶ್ಚೇತನ ನಿಗಮದಲ್ಲಿ ಇಲ್ಲಿಯವರೆಗೆ ₹೩೦೦೦೦ ಕೋಟಿ ಜಮೆಯಾಗಿದೆ.
ಈ ಹಣವನ್ನು ಬಳ್ಳಾರಿ, ವಿಜಯನಗರ, ಚಿತ್ರದುರ್ಗ ಹಾಗೂ ತುಮಕೂರು ಜಿಲ್ಲೆಗಳ ಗಣಿ ಬಾಧಿತ ಪ್ರದೇಶಗಳ ಸಮುದಾಯ, ಶಿಕ್ಷಣ, ಆರೋಗ್ಯ, ನೈರ್ಮಲ್ಯೀಕರಣ, ಉದ್ಯೋಗ ಸೃಷ್ಟಿ, ಪರಿಸರ ಪುನಶ್ಚೇತನ, ಮೂಲ ಸೌಕರ್ಯಗಳ ಅಭಿವೃದ್ಧಿಗಾಗಿ ಬಳಸಬೇಕಿದೆ. ಈ ಹಣ ಗಣಿ ಬಾಧಿತರಿಗಾಗಿ ಯೋಗ್ಯ ರೀತಿಯಲ್ಲಿ ಬಳಕೆಯಾದರೆ, ಗಣಿ ಬಾಧಿತರ ಜೀವನಮಟ್ಟ ಸುಧಾರಿಸುವುದಲ್ಲದೆ, ಅಕ್ರಮ ಗಣಿಗಾರಿಕೆಯಿಂದ ನಲುಗಿದ್ದ ಇಲ್ಲಿನ ಪರಿಸರ ಪುನಶ್ಚೇತನ ಪಡೆದುಕೊಳ್ಳಲಿದೆ ಎಂಬ ಮಾತುಗಳು ಇಲ್ಲಿನ ಜನತೆಯಿಂದ ಕೇಳಿ ಬರುತ್ತಿದೆ. ತಾಲೂಕಿನ ಗಣಿ ಬಾಧಿತ ಜನರ ಪ್ರಮುಖ ಬೇಡಿಕೆಗಳು:ಗಣಿ ಧೂಳಿನಿಂದ ರೋಗರುಜಿನಗಳು ಹೆಚ್ಚಿರುವುದರಿಂದ, ಪ್ರತಿ ಗ್ರಾಮಕ್ಕೊಂದು ಎಎನ್‌ಎಂ ಕೇಂದ್ರ, ಪ್ರತಿ ೧೦ ಕಿಮೀಗೆ ಒಂದರಂತೆ ಪ್ರಾಥಮಿಕ ಆರೋಗ್ಯ ಕೇಂದ್ರ, ಪ್ರತಿ ೧೫ ಕಿಮೀಗೆ ಒಂದರಂತೆ ಸಮುದಾಯ ಆರೋಗ್ಯ ಕೇಂದ್ರ, ತಾಲೂಕು ಕೇಂದ್ರದಲ್ಲಿ ಅಗತ್ಯ ತಜ್ಞ ವೈದ್ಯರು, ಸಿಬ್ಬಂದಿ, ಮೂಲ ಸೌಕರ್ಯಗಳನ್ನು ಹೊಂದಿದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣವಾಗಬೇಕು. ರಾಮಘಡ ಹಾಗೂ ಕಮ್ಮತ್ತೂರು ಗ್ರಾಮಗಳಿಗೆ ಮೂಲ ಸೌಕರ್ಯ ಕಲ್ಪಿಸಿ ರಾಜ್ಯದಲ್ಲಿಯೇ ಮಾದರಿ ಗ್ರಾಮಗಳನ್ನಾಗಿ ಮಾಡಬೇಕು. ತುಂಗಭದ್ರಾ ನದಿಯಿಂದ ತಾಲೂಕಿನ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಆರಂಭಿಸಬೇಕು. ಇದರಿಂದ ಅಂತರ್ಜಲ ಹೆಚ್ಚಿ, ಕೃಷಿ, ಪಶುಸಂಗೋಪನೆ ಮುಂತಾದ ಅಭಿವೃದ್ಧಿ ಕಾರ್ಯಗಳಿಗೆ ಅನುಕೂಲವಾಗಲಿದೆ. ಕೃಷಿ, ಹೈನುಗಾರಿಕೆ, ಕೋಳಿ ಸಾಕಾಣಿಕೆ ಮುಂತಾದ ಚಟುವಟಿಕೆಗಳಿಗೆ ಕ್ರಿಯಾ ಯೋಜನೆ ರೂಪಿಸಿ, ಆರ್ಥಿಕ ಸೌಲಭ್ಯ ಒದಗಿಸಬೇಕು. ಸಂಡೂರು ಪಟ್ಟಣದಲ್ಲಿನ ಕುಡಿಯುವ ನೀರು ಸಂಗ್ರಹಿಸಲು ಹೆಚ್ಚುವರಿ ಓವರ್ ಹೆಡ್ ಟ್ಯಾಂಕ್‌ಗಳ ನಿರ್ಮಾಣ, ಕುಡಿಯುವ ನೀರು ಪೂರೈಸುವ ಪಂಪ್‌ಹೌಸ್ ಬಳಿ ಎಕ್ಸ್ಪ್ರೆಸ್ ಫೀಡರ್ ಲೈನ್ ಅಳವಡಿಸಲು ಕ್ರಮಕೈಗೊಳ್ಳುವುದು.
ಗಣಿ ಬಾಧಿತ ಗ್ರಾಮಗಳಲ್ಲಿ ಸಾಮಾಜಿಕ ಮತ್ತು ಆರ್ಥಿಕ ಸರ್ವೆ ಮಾಡಬೇಕು. ಗಣಿ ಭಾದಿತ ಪ್ರದೇಶದಲ್ಲಿನ ಮಹಿಳೆಯರ ಆರ್ಥಿಕ ಸ್ವಾವಲಂಬನೆಯ ಬದುಕಿಗಾಗಿ ಗುಡಿ ಕೈಗಾರಿಕೆಯಂತಹ ಯೋಜನೆಗಳನ್ನು ವ್ಯವಸ್ಥಿತವಾಗಿ ರೂಪಿಸಬೇಕು. ರೈಲು ಮಾರ್ಗಗಳಿರುವ ಕಡೆಗಳಲ್ಲಿ ಓವರ್ ಬ್ರಿಡ್ಜ್ ಅಥವ ಅಂಡರ್ ಬ್ರಿಡ್ಜ್ ನಿರ್ಮಿಸಬೇಕು, ಅದಿರು ಲಾರಿ ಸಂಚರಿಸಲು ಪ್ರತ್ಯೇಕ ರಸ್ತೆ ನಿರ್ಮಾಣ ಮುಂತಾದವುಗಳು ತಾಲೂಕಿನ ಜನರ ಪ್ರಮುಖ ಬೇಡಿಕೆಗಳಾಗಿವೆ.ಡಾ. ನಂಜುಂಡಪ್ಪ ವರದಿ ಪ್ರಕಾರ ಅತಿ ಹಿಂದುಳಿದ ತಾಲೂಕೆಂದು ಗುರುತಿಸಲ್ಪಟ್ಟಿರುವ ಸಂಡೂರು ತಾಲೂಕು ಕೆಎಂಇಆರ್‌ಸಿ ವತಿಯಿಂದ ಅಭಿವೃದ್ಧಿ ಕಂಡು ಅತಿ ಹಿಂದುಳಿದ ತಾಲೂಕೆಂಬ ಹಣೆಪಟ್ಟಿ ಕಳಚಿಕೊಳ್ಳುವುದೇ ಎಂಬುದನ್ನು ಕಾದು ನೋಡಬೇಕಿದೆ.