ಪ್ರತಿದಿನ ಮುಂಜಾನೆ ಮಳೆ, ಚಳಿ, ಬಿಸಿಲನ್ನೂ ಲೆಕ್ಕಿಸದೆ ಪ್ರತಿ ಮನೆಗೂ ಪತ್ರಿಕೆ ತಲುಪಿಸುವ ಮೂಲಕ ಜನರಿಗೆ ಸುದ್ದಿಯನ್ನು ತಲುಪಿಸುವಲ್ಲಿ ಪತ್ರಿಕಾ ವಿತರಕರ ಕೊಡುಗೆ ಅಪಾರವಾಗಿದೆ ಎಂದು ಇನ್ನರ್ ವೀಲ್ ಸಂಸ್ಥೆ ಅಧ್ಯಕ್ಷೆ ಪುಷ್ಪಾ ಇಂಡಿಮಠ ಹೇಳಿದರು.
ಬ್ಯಾಡಗಿ: ಪ್ರತಿದಿನ ಮುಂಜಾನೆ ಮಳೆ, ಚಳಿ, ಬಿಸಿಲನ್ನೂ ಲೆಕ್ಕಿಸದೆ ಪ್ರತಿ ಮನೆಗೂ ಪತ್ರಿಕೆ ತಲುಪಿಸುವ ಮೂಲಕ ಜನರಿಗೆ ಸುದ್ದಿಯನ್ನು ತಲುಪಿಸುವಲ್ಲಿ ಪತ್ರಿಕಾ ವಿತರಕರ ಕೊಡುಗೆ ಅಪಾರವಾಗಿದೆ ಎಂದು ಇನ್ನರ್ ವೀಲ್ ಸಂಸ್ಥೆ ಅಧ್ಯಕ್ಷೆ ಪುಷ್ಪಾ ಇಂಡಿಮಠ ಹೇಳಿದರು.
ಪಟ್ಟಣದ ಕಸಾಪ ಭವನದಲ್ಲಿ ಇನ್ನರ್ ವೀಲ್ ಸಂಸ್ಥೆ ಹಾಗೂ ಕಸಾಪ ವತಿಯಿಂದ ಶಿಕ್ಷಕರ ಹಾಗೂ ಪತ್ರಿಕಾ ವಿತರಕರ ದಿನಾಚರಣೆ ಅಂಗವಾಗಿ ಆಯೋಜಿಸಿದ ಸನ್ಮಾನ ಕಾರ‍್ಯಕ್ರಮದಲ್ಲಿ ಜಿಲ್ಲಾ ಉತ್ತಮ ಪ್ರಶಸ್ತಿ ಪಡೆದ ಶಿಕ್ಷಕಿ ಅಪರ್ಣಾ ಎಲ್. ಹಾಗೂ ಪಟ್ಟಣದ ಪತ್ರಿಕಾ ವಿತರಕರನ್ನು ಸನ್ಮಾನಿಸಿ ಅವರು ಮಾತನಾಡಿದರು.ಪತ್ರಿಕಾ ವಿತರಕರು ಸಮಾಜದೊಂದಿಗೆ ನೇರ ಸಂಪರ್ಕ ಹೊಂದಿರುವ ಪ್ರಮುಖ ಕೊಂಡಿಯಾಗಿದ್ದಾರೆ. ದೇಶ, ರಾಜ್ಯ ಹಾಗೂ ಸ್ಥಳೀಯ ಮಟ್ಟದ ಆಗುಹೋಗುಗಳು, ಜನಪರ ಸಮಸ್ಯೆಗಳು, ಶಿಕ್ಷಣ, ಕೃಷಿ, ಉದ್ಯೋಗ ಸೇರಿದಂತೆ ವಿವಿಧ ಕ್ಷೇತ್ರಗಳ ಮಾಹಿತಿಯನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ಜವಾಬ್ದಾರಿಯನ್ನು ಪತ್ರಿಕಾ ವಿತರಕರು ನಿರ್ವಹಿಸುತ್ತಿದ್ದಾರೆ. ಬೆಳಗಿನ ಜಾವವೇ ತಮ್ಮ ಕೆಲಸ ಆರಂಭಿಸಿ, ನಿಗದಿತ ಸಮಯಕ್ಕೆ ಪತ್ರಿಕೆ ತಲುಪಿಸುವ ಅವರ ಸೇವೆ ನಿಜಕ್ಕೂ ಶ್ಲಾಘನೀಯ ಎಂದರು.
ಕಸಾಪ ಅಧ್ಯಕ್ಷ ಬಿ. ಎಂಜಗಾಪುರ ಮಾತನಾಡಿ, ಇಂದಿನ ಡಿಜಿಟಲ್ ಯುಗದಲ್ಲಿ ಮೊಬೈಲ್ ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ಕ್ಷಣಾರ್ಧದಲ್ಲಿ ಸುದ್ದಿ ಲಭ್ಯವಾಗುತ್ತಿದ್ದರೂ, ಮುದ್ರಣ ಮಾಧ್ಯಮ ತನ್ನದೇ ಆದ ವಿಶ್ವಾಸಾರ್ಹತೆ ಮತ್ತು ಮಹತ್ವವನ್ನು ಹೊಂದಿದೆ. ಆ ಪತ್ರಿಕೆಗಳನ್ನು ಪ್ರತಿದಿನ ಜನರ ಮನೆ ಬಾಗಿಲಿಗೆ ತಲುಪಿಸುವ ವಿತರಕರ ಸೇವೆಯನ್ನು ಗುರುತಿಸಿ ಗೌರವಿಸುವುದು ಸಮಾಜದ ಕರ್ತವ್ಯವಾಗಿದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಪ್ರತಿಭಾ ಮೇಲಗಿರಿ, ವಿಜಯಲಕ್ಷ್ಮಿ ಯಾದವಾಡ, ಛಾಯಾ ತಂಬಾಕದ, ಜಾಹ್ನವಿ ಯಲಿ, ಸಂದ್ಯಾರಾಣಿ ದೇಶಪಾಂಡೆ, ಮಹೇಶ್ವರಿ ಪಸಾರದ, ಪೂರ್ಣಿಮಾ ಮಕರಿಮಠ. ಶಿಕ್ಷಕ ವೈ.ಟಿ.ಹೆಬ್ಬಳ್ಳಿ, ಮೋಹನಕುಮಾರ, ಪತ್ರಿಕಾ ವಿತರಕರಾದ ಕಿರಣ ಸಿಂಧೆ ಕುಮಾರ ಕರ್ಚಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.