ಕನ್ನಡಪ್ರಭ ವಾರ್ತೆ ಅಥಣಿ
ಪಟ್ಟಣದ ಹೊರವಲಯದ ಆರ್‌ಟಿಒ ಕಚೇರಿ ಬಳಿ ನಿರ್ಮಿಸಲಾಗುತ್ತಿರುವ ಶ್ರಮಿಕ ವಸತಿ ಶಾಲೆ ಕಟ್ಟಡ ಮುಂದಿನ 2 ವರ್ಷಗಳಲ್ಲಿ ಪೂರ್ಣವಾಗಿ ತಾಲೂಕಿನ ಕಾರ್ಮಿಕರ ಮಕ್ಕಳಿಗೆ ಉಚಿತವಾದ ಗುಣಮಟ್ಟದ ಶಿಕ್ಷಣ ನೀಡಲಿದೆ ಎಂದು ಶಾಸಕ ಲಕ್ಷ್ಮಣ ಸವದಿ ಭರವಸೆ ನೀಡಿದರು.ಇಲ್ಲಿನ ಶಿವಯೋಗಿ ವೃತ್ತದಲ್ಲಿ ಅಥಣಿ ತಾಲೂಕು ಕಟ್ಟಡ ನಿರ್ಮಾಣ ಅಸಂಘಟಿತ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದಿಂದ ಶುಕ್ರವಾರ ಹಮ್ಮಿಕೊಂಡಿದ್ದ ವಿಶ್ವ ಕಾರ್ಮಿಕ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಶ್ರಮಿಕರ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರಕಬೇಕು, ಅವರ ಬದುಕಿನಲ್ಲಿ ಬದಲಾವಣೆ ತರಬೇಕು, ಕಾರ್ಮಿಕರ ಕುಟುಂಬದಲ್ಲಿ ಹೊಸ ಬೆಳಕು ಬರಲಿ ಎಂಬ ಉದ್ದೇಶದಿಂದ ಸರ್ಕಾರ ಕಾರ್ಮಿಕರ ಮಕ್ಕಳಿಗೆ ವಸತಿ ಶಾಲೆಗಳನ್ನ ಆರಂಭಿಸುತ್ತದೆ. ಮೊದಲ ಹಂತದಲ್ಲಿಯೇ ಅಥಣಿ ಕ್ಷೇತ್ರಕ್ಕೆ ಶ್ರಮಿಕರ ವಸತಿ ಶಾಲೆ ಮಂಜೂರಾತಿ ಪಡೆದು ಭೂಮಿಪೂಜೆ ನೆರವೇರಿಸಲಾಗಿದೆ. 8 ಎಕರೆ ಸರ್ಕಾರಿ ಜಮೀನನ್ನು ಪಡೆದು ಕಾರ್ಮಿಕ ಇಲಾಖೆಯಿಂದ ₹ 36 ಕೋಟಿ ಅನುದಾನ ಪಡೆದುಕೊಳ್ಳಲಾಗಿದೆ. ಸುಂದರ ಹಾಗೂ ಹೈಟೆಕ್ ಸೌಲಭ್ಯಗಳನ್ನು ಹೊಂದಿರುವ ಕಟ್ಟಡ ನಿರ್ಮಿಸಲಾಗುವುದು. ತಾಲೂಕಿನ 7 ಸಾವಿರಕ್ಕೂ ಅಧಿಕ ಕಾರ್ಮಿಕ ಕುಟುಂಬಗಳ ಮಕ್ಕಳ ಶಿಕ್ಷಣಕ್ಕೆ ಇದರಿಂದ ಬಹಳಷ್ಟು ಅನುಕೂಲವಾಗಲಿದೆ. ತಾಲೂಕಿನ ಕಾರ್ಮಿಕರ ಹಿತರಕ್ಷಣೆಗಾಗಿ ಶ್ರಮಿಸುತ್ತಿರುವ ಅಥಣಿ ತಾಲೂಕಿನ ಕಟ್ಟಡ ನಿರ್ಮಾಣ ಅಸಂಘಟಿತ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ಕಚೇರಿಗಾಗಿ ಸ್ಥಳ ಗುರುತಿಸಿ ಸಮಾರಂಭಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕಚೇರಿ ಕಟ್ಟಡ ನಿರ್ಮಾಣಕ್ಕಾಗಿ ಅನೇಕ ಬಾರಿ ಮನವಿ ನೀಡಿದ್ದಾರೆ. ಅಥಣಿ ಗ್ರಾಮೀಣ ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ಥಳವನ್ನು ಗುರುತಿಸಿ ₹ 10 ಲಕ್ಷ ಸಹಾಯಧನ ನೀಡುವುದಾಗಿ ಭರವಸೆ ನೀಡಿದರು.ಪುರಸಭೆಯ ಉಪಾಧ್ಯಕ್ಷೆ ಭುವನೇಶ್ವರಿ ಯಕ್ಕಂಚಿ ಮಾತನಾಡಿ, ದೇಶದಲ್ಲಿ ಅನೇಕ ವಲಯಗಳಲ್ಲಿ ಶ್ರಮಿಕ ವರ್ಗ ಕೆಲಸ ಮಾಡುತ್ತಿದೆ. ಅವರ ಕಾಯಕ ಅತ್ಯಂತ ಶ್ರೇಷ್ಠವಾದದ್ದು. ಅವರ ಹಕ್ಕುಗಳು ಮತ್ತು ಅನೇಕ ಸಮಸ್ಯೆಗಳ ಕುರಿತು, ಚಿಂತನ ಮಂಥನ ಮಾಡಿಕೊಳ್ಳಲು ಕಾರ್ಮಿಕರ ದಿನ ಅತ್ಯಂತ ಸೂಕ್ತ ವೇದಿಕೆಯಾಗಿದೆ. ಎಲ್ಲ ಕಾರ್ಮಿಕರ ಪರವಾಗಿ ಶಾಸಕರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದರು.ಕಾರ್ಮಿಕ ಇಲಾಖೆಯ ತಾಲೂಕಾ ನಿರೀಕ್ಷಕಿ ಭುವನೇಶ್ವರಿ ಡಾಲೆ ಮಾತನಾಡಿದರು. ಈ ವೇಳೆ ಎಸ್ಎಸ್ಎಲ್ಸಿ ಮತ್ತು ಪಿಯುಸಿಯಲ್ಲಿ ಉತ್ತಮ ಶ್ರೇಣಿಯಲ್ಲಿ ಪಾಸಾದ ಕಾರ್ಮಿಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಗುತ್ತಿಗೆದಾರ ರಾಜು ಆಲಬಾಳ ವಿದ್ಯಾರ್ಥಿಗಳಿಗೆ ಉಚಿತ ಸೈಕಲ್ ಮತ್ತು ಸುರಕ್ಷತಾ ಕಿಟ್ ವಿತರಿಸಿದರು. ಸಾನಿಧ್ಯವನ್ನು ಶೆಟ್ಟರ ಮಠದ ಮರಳಸಿದ್ದ ಸ್ವಾಮೀಜಿ ಆಶೀರ್ವಚನ ನೀಡಿದರು.ಈ ವೇಳೆ ಗುತ್ತಿಗೆದಾರ ರಾಜು ಆಲಬಾಳ, ಕಾರ್ಮಿಕ ಸಂಘಟನೆಯ ಸಲಹಾ ಸಮಿತಿ ಅಧ್ಯಕ್ಷ ಸುರೇಶ್ ಮೋಪಗಾರ, ತಾಲೂಕಾಧ್ಯಕ್ಷ ಸುರೇಶ್ ನಿಕ್ಕಮ, ಉಪಾಧ್ಯಕ್ಷ ಕೇದಾರಿ ಹಳ್ಳದಮಳ, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಐಗಳಿ, ಖಜಾಂಚಿ ಕುಮಾರ ಬಡಿಗೇರ, ಅಶೋಕ ಸೇಜೋಳಿ, ಕುಮಾರ ಮಾಳಿ, ಅಪ್ಪಾಸಾಬ ಬೊಮ್ಮನಾಳೆ, ಅಪ್ಪಯ್ಯ ನಂದಿಕೋಲಮಠ, ಗಿರೀಶ್ ಕುಲಕರ್ಣಿ, ಕೇದಾರಿ ದಿವಾನಮಳ, ಅಪ್ಪಾಸಾಬ ಸೂರ್ಯವಂಶಿ ಸೇರಿ ಇನ್ನಿತರರು ಉಪಸ್ಥಿತರಿದ್ದರು.ಶೋಭಾ ಯಾತ್ರೆ:ಪಟ್ಟಣದ ಶಿವಯೋಗಿ ವೃತ್ತದಿಂದ ನಡೆದ ಶೋಭಾಯಾತ್ರೆಗೆ ಶಾಸಕ ಲಕ್ಷ್ಮಣ ಸವದಿ ಚಾಲನೆ ನೀಡಿದರು. ವಿವಿಧ ವಾದ್ಯ ಮೇಲುಗಳೊಂದಿಗೆ ಆರಂಭವಾದ
ಶೋಭಾ ಯಾತ್ರೆ ಮೆರವಣಿಗೆ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿತು. ಶಿವಯೋಗಿ ವೃತ್ತದಲ್ಲಿ ಸಮಾರೋಪಗೊಂಡಿತು.