ಸಚಿವರ ಮನೆಗೆ ಮುತ್ತಿಗೆ ಹಾಸ್ಯಾಸ್ಪದ: ರೆಡ್ಡಿ ಶ್ರೀನಿವಾಸ್

| Published : Mar 27 2024, 01:10 AM IST

ಸಾರಾಂಶ

ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಧ್ವನಿ ಎತ್ತುವುದನ್ನು ಬಿಟ್ಟು ಬಿಜೆಪಿಯವರು ಸಚಿವರ ಮನೆಗೆ ಮುತ್ತಿಗೆ ಹಾಕುತ್ತಿರುವುದು ಹಾಸ್ಯಾಸ್ಪದ

ಕನ್ನಡಪ್ರಭ ವಾರ್ತೆ ಕಾರಟಗಿ

ಕಾಂಗ್ರೆಸ್‌ನ ಕಾರ್ಯಕ್ರಮಗಳಲ್ಲಿ ಬಿಜೆಪಿಯವರು ಬಂದು ದಾಂಧಲೇ ಎಬ್ಬಿಸುವುದನ್ನು ಈಗಾಗಲೇ ಎಲ್ಲೆಡೆ ನೋಡಿದ್ದೀರಿ. ರಾಷ್ಟ್ರೀಯ ನಾಯಕ ರಾಹುಲ್‌ಗಾಂಧಿಯವರ ಭಾರತ್ ಜೋಡೋ ಯಾತ್ರೆಯ ಕಾರ್ಯಕ್ರಮದಲ್ಲಿ ನುಸುಳಿಕೊಂಡು ಹೋಗಿ ಮೋದಿ ಮೋದಿ ಎಂದು ಘೋಷಣೆ ಕೂಗಿದ್ದಾರೆ. ಇದು ನಾಚಿಕೆಗೇಡಿನ ಸಂಗತಿ. ಹೀಗೆ ಇದು ಮುಂದುವರೆದರೆ ನಾವು ಅವರ ಕಪಾಳಕ್ಕೆ ಹೊಡೆಯುವುದು ಗ್ಯಾರೆಂಟಿ ಎಂದು ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಜಿಲ್ಲಾಧ್ಯಕ್ಷ ರೆಡ್ಡಿ ಶ್ರೀನಿವಾಸ್ ಹೇಳಿದರು.

ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಚಿವ ಶಿವರಾಜ್ ತಂಗಡಗಿಯವರ ಮಾತನ್ನು ಸಮರ್ಥಿಸಿಕೊಂಡರು.

ರೈತರ ಆದಾಯ ದ್ವಿಗುಣವಾಗಿಲ್ಲ. ಪೆಟ್ರೋಲ್, ಡಿಸೇಲ್, ರಸಗೊಬ್ಬರ ಹಾಗೂ ಜನಸಾಮಾನ್ಯರು ಬಳಸುವ ದಿನ ನಿತ್ಯದ ವಸ್ತುಗಳ ಬೆಲೆ ಗಗನಕ್ಕೇರಿದೆ. ಇದರ ವಿರುದ್ಧ ತಮ್ಮದೇ ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಧ್ವನಿ ಎತ್ತುವುದನ್ನು ಬಿಟ್ಟು ಬಿಜೆಪಿಯವರು ಸಚಿವರ ಮನೆಗೆ ಮುತ್ತಿಗೆ ಹಾಕುತ್ತಿರುವುದು ಹಾಸ್ಯಾಸ್ಪದ ಎಂದರು.

ಬರದ ಅನುದಾನ ನೀಡಲು ಮುಂದೆ ಬಾರದ ಪ್ರಧಾನಿ ನರೇಂದ್ರ ಮೋದಿ ಪರ ರಾಜ್ಯ ಬಿಜೆಪಿ ನಿಲ್ಲುತ್ತಿದೆ. ಇವರಿಗೆ ರೈತರ ಸಂಕಷ್ಟಕ್ಕಿಂತ ತಮ್ಮ ಪ್ರಧಾನಿಯನ್ನು ಹೊಗಳುವುದೇ ಹೆಚ್ಚಾಗಿದೆ ಎಂದು ವ್ಯಂಗ್ಯವಾಡಿದರು.

ಪಿಎಸ್‌ಐ ನೇಮಕಾತಿ ಹಗರಣದಲ್ಲಿ ಭ್ರಷ್ಟಾಚಾರವೆಸಗಿ ಆರೋಪಿಯಾಗಿರುವ ಮಾಜಿ ಶಾಸಕ ಬಸವರಾಜ್ ದಢೇಸ್ಗೂರು ಮೇಲೆ ಸಮಗ್ರ ತನಿಖೆ ನಡೆಸಿ ಪ್ರಕರಣ ಶೀಘ್ರ ತಾರ್ಕಿಕ ಅಂತ್ಯ ಕಾಣಿಸುವಂತೆ ಆಗ್ರಹಿಸಿ, ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಲು ಬೆಂಗಳೂರುವರೆಗೆ ಪಾದಯಾತ್ರೆ ನಡೆಸುತ್ತೇವೆ ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶರಣೇಗೌಡ ಮಾಲಿ ಪಾಟೀಲ ಮಾತನಾಡಿ, ಸಚಿವ ಶಿವರಾಜ ತಂಗಡಗಿ ಕಪಾಳಕ್ಕೆ ಹೊಡೆಯಿರಿ ಎಂದು ಹೇಳಿರುವುದು ಉತ್ತರ ಕರ್ನಾಟಕ ಭಾಗದಲ್ಲಿ ಭಾಷೆಯ ಶೈಲಿಯಲ್ಲಿ. ಮನೆಯ ಹಿರಿಯರಾಗಿ ಮನೆ ಮಕ್ಕಳಿಗೆ ಹೇಳುವ ರೀತಿಯಲ್ಲಿ ಹೇಳಿರುವುದಷ್ಟೇ. ಆದರೆ, ಅದನ್ನು ತಿರುಚಿ ಬಿಜೆಪಿಯವರು ದೊಡ್ಡ ಅಪರಾಧದ ರೀತಿಯಲ್ಲಿ ಬಿಂಬಿಸಲು ಹೊರಟಿರುವುದು ಅವರ ಬೌದ್ಧಿಕ ದಿವಾಳಿತನ ತೋರಿಸುತ್ತದೆ ಎಂದರು.

ಎರಡು ಕೋಟಿ ಉದ್ಯೋಗ ನೀಡುತ್ತೇವೆ ಎಂದವರನ್ನು ಪ್ರಶ್ನಿಸುವುದು ತಪ್ಪೇ..? ಈ ಬಗ್ಗೆ ಸಚಿವರು ಯುವಕರಿಗೆ, ವಿದ್ಯಾರ್ಥಿಗಳಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಈ ರೀತಿ ಮಾತನಾಡಿದ್ದಾರೆ. ಇದರಲ್ಲಿ ತಪ್ಪು ಹುಡುಕುವವರಿಗೆ ನಾವು ಏನು ಮಾಡಲು ಸಾಧ್ಯ ಎಂದು ಪ್ರಶ್ನಿಸಿದರು.

ಈ ವೇಳೆ ಕೆಪಿಸಿಸಿ ಸದಸ್ಯ ಬಸವರಾಜ್ ನೀರಗಂಟಿ, ಗ್ಯಾರಂಟಿ ಯೋಜನೆಗಳ ಪ್ರಾಧಿಕಾರ ಸಮಿತಿ ಉಪಾಧ್ಯಕ್ಷ ನಾಗರಾಜ್ ಅರಳಿ, ಜಿಲ್ಲಾ ಸದಸ್ಯರಾದ ಸೋಮನಾಥ್ ದೊಡ್ಡಮನಿ, ಶಕುಂತಲಾ, ತಾಲೂಕು ಅಧ್ಯಕ್ಷ ದೇವಪ್ಪ ಬಾವಿಕಟ್ಟಿ, ಸದಸ್ಯೆ ದೀಪಾ ರಾಥೋಡ್, ವಿಶೇಷ ಎಪಿಎಂಸಿ ಮಾಜಿ ಅಧ್ಯಕ್ಷ ಶಿವರಡ್ಡಿ ನಾಯಕ್, ನಗರ ಕಾಂಗ್ರೆಸ್ ಅಧ್ಯಕ್ಷ ಅಯ್ಯಪ್ಪ ಉಪ್ಪಾರ ಸೇರಿ ಇನ್ನಿತರರು ಇದ್ದರು.