ಶಾಸಕ ಯತ್ನಾಳ ಭರವಸೆ ಹಿನ್ನೆಲೆಯಲ್ಲಿ ಧರಣಿ ಅಂತ್ಯ

| Published : Jun 20 2024, 01:02 AM IST

ಸಾರಾಂಶ

ನಗರದ ಮನಗೂಳಿ ಅಗಸಿ ಬಳಿ ಡಾ.ಬಿ.ಆರ್.ಅಂಬೇಡ್ಕರ್ ಭವನ ನಿರ್ಮಾಣಕ್ಕಾಗಿ ಹಾಗೂ ಭವನಕ್ಕೆ ಹೆಚ್ಚುವರಿ ಜಾಗ ನೀಡಲು ಒತ್ತಾಯಿಸಿ, ಡಾ.ಬಿ.ಆರ್.ಅಂಬೇಡ್ಕರ್ ಯುವಕ ಸಂಘದ ವತಿಯಿಂದ 29 ದಿನಗಳಿಂದ ನಿರಂತರವಾಗಿ ನಡೆಯುತ್ತಿದ್ದ ಧರಣಿ ಸ್ಥಳಕ್ಕೆ, ಮಂಗಳವಾರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಭೇಟಿ ನೀಡಿ ಭವನ ನಿರ್ಮಾಣ ಮಾಡುವ ಕುರಿತು ಭರವಸೆ ನೀಡಿದ ಹಿನ್ನೆಲೆಯಲ್ಲಿ ಸುದೀರ್ಘ ಧರಣಿ ಸತ್ಯಾಗ್ರಹ ಕೈಬಿಡಲಾಯಿತು.

ಕನ್ನಡಪ್ರಭ ವಾರ್ತೆ ವಿಜಯಪುರ

ನಗರದ ಮನಗೂಳಿ ಅಗಸಿ ಬಳಿ ಡಾ.ಬಿ.ಆರ್.ಅಂಬೇಡ್ಕರ್ ಭವನ ನಿರ್ಮಾಣಕ್ಕಾಗಿ ಹಾಗೂ ಭವನಕ್ಕೆ ಹೆಚ್ಚುವರಿ ಜಾಗ ನೀಡಲು ಒತ್ತಾಯಿಸಿ, ಡಾ.ಬಿ.ಆರ್.ಅಂಬೇಡ್ಕರ್ ಯುವಕ ಸಂಘದ ವತಿಯಿಂದ 29 ದಿನಗಳಿಂದ ನಿರಂತರವಾಗಿ ನಡೆಯುತ್ತಿದ್ದ ಧರಣಿ ಸ್ಥಳಕ್ಕೆ, ಮಂಗಳವಾರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಭೇಟಿ ನೀಡಿ ಭವನ ನಿರ್ಮಾಣ ಮಾಡುವ ಕುರಿತು ಭರವಸೆ ನೀಡಿದ ಹಿನ್ನೆಲೆಯಲ್ಲಿ ಸುದೀರ್ಘ ಧರಣಿ ಸತ್ಯಾಗ್ರಹ ಕೈಬಿಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಮನಗೂಳಿ ಅಗಸಿ ಬಳಿ ಡಾ.ಬಿ.ಆರ್.ಅಂಬೇಡ್ಕರ್ ಭವನ ನಿರ್ಮಾಣ ಮಾಡಲು ಉದ್ದೇಶಿತ ಜಾಗ ಸರ್ಕಾರದ್ದಾಗಿದೆ. ಆ ಜಾಗವನ್ನು ವಕ್ಫ್ ಆಸ್ತಿಯನ್ನಾಗಿ ಮಾಡಿಕೊಂಡಿದ್ದು, ಮರಳಿ ಸರ್ಕಾರಿ ಆಸ್ತಿಯನ್ನಾಗಿ ಮಾಡಲು ಎಲ್ಲ ರೀತಿಯ ಹೋರಾಟ ಮಾಡಲಾಗುವುದು. ಅದಕ್ಕೆ ಸಂಬಂಧಿಸಿದಂತೆ ಸಾಕಷ್ಟು ದಾಖಲೆಗಳು ಸಹ ನಮ್ಮಲ್ಲಿವೆ. ಸರ್ಕಾರಿ ಜಾಗ ಆದ ಬಳಿಕ, ಅದೇ ಜಾಗದಲ್ಲಿ ದಲಿತ ಸಮುದಾಯದವರಿಗೆ ಮನೆಗಳನ್ನು ನಿರ್ಮಿಸಿಕೊಡಲಾಗುವುದು ಎಂದು ಭರವಸೆ ನೀಡಿದರು.29 ದಿನಗಳ ಅಂಬೇಡ್ಕರ್‌ ಸಮುದಾಯ ಭವನದ ಹೋರಾಟ ಯಾವುದೇ ರೀತಿಯಿಂದ ವಿಫಲವಾಗುವುದಿಲ್ಲ. ಮುಂದಿನ ದಿನಗಳಲ್ಲಿ ಇಡೀ ದೇಶದಲ್ಲೇ ವಕ್ಫ್ ಆಸ್ತಿಯನ್ನು ಮರಳಿ ತೆಗೆದುಕೊಳ್ಳುವ ದೊಡ್ಡ ಹೋರಾಟಕ್ಕೆ ಮುನ್ನುಡಿ ಬರೆಯಲಿದೆ. ಇಡೀ ದೇಶದಲ್ಲಿರುವ ವಕ್ಫ್ ಆಸ್ತಿಯನ್ನು ಮರಳಿ ಸರ್ಕಾರಕ್ಕೆ ಪಡೆದುಕೊಂಡು, ಅದರಲ್ಲಿ ದಲಿತರು, ಹಿಂದುಳಿದವರು, ಬಡವರಿಗೆ ಮನೆಗಳನ್ನು ನಿರ್ಮಿಸಿಕೊಡಬೇಕೆಂದು ಪ್ರಧಾನಮಂತ್ರಿಗಳಿಗೂ ಪತ್ರ ಬರೆಯುವೆ ಎಂದು ಹೇಳಿದರು.ನೆಹರು ಜಾರಿಗೆ ತಂದಿರುವ ಈ ಕೆಟ್ಟ ವಕ್ಫ್ ಬೋರ್ಡ್ ಕಾನೂನನ್ನು ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಅವರು ಕೂಡ ವಿರೋಧಿಸಿದ್ದರು. ಈ ವಕ್ಫ್ ಆಸ್ತಿ ಬಗ್ಗೆ ವಿಜಯಪುರ ಮಾತ್ರವಲ್ಲ, ಇಡೀ ದೇಶದಲ್ಲೇ ಬಹುದೊಡ್ಡ ಚರ್ಚೆ ನಡೆದಿದೆ ಎಂದು ತಿಳಿಸಿದರು.

ನಗರದ ಮನಗೂಳಿ ರಸ್ತೆಯಲ್ಲಿರುವ ಸರ್ಕಾರಿ ಎರಡು ಎಕರೆ ಜಾಗದ ಪೈಕಿ ಒಂದು ಎಕರೆಯಲ್ಲಿ ಬಾಬು ಜಗಜೀವನ ರಾಮ ಹೆಸರಿನಲ್ಲಿ ಕಲ್ಯಾಣ ಮಂಟಪ ನಿರ್ಮಿಸಲಾಗುತ್ತಿದ್ದು, ಅದರ ಸುತ್ತಲು ಕಾಂಪ್ಲೆಕ್ಸ್ ಸಹ ನಿರ್ಮಾಣ ಮಾಡಲಾಗುವುದು. ಆ ಅಂಗಡಿಗಳನ್ನು ಎಸ್.ಸಿ, ಎಸ್.ಟಿ ಸಮುದಾಯವದರಿಗೆ ನೀಡಲಾಗುವುದು ಎಂದರು.ಅಲ್ಲದೇ, ಇದರ ಪಕ್ಕದಲ್ಲೇ 100x100 ಅಳತೆಯ ಜಾಗದಲ್ಲಿ ಅಂಬೇಡ್ಕರ್ ಸಮುದಾಯ ಭವನ ಸಹ ನಿರ್ಮಿಸಲಾಗುವುದು. ದಲಿತ ಸಮುದಾಯದವರಿಗೆ ಏನೇ ಅನ್ಯಾಯವಾದರೂ ನ್ಯಾಯ ಕೊಡಿಸಲು ಸದಾ ತಮ್ಮೊಂದಿಗೆ ಇರುವುದಾಗಿ ಭರವಸೆ ನೀಡಿದರು.ಬಬಲೇಶ್ವರ ನಾಕಾ ಬಳಿ ಎಸ್.ಸಿ.ಪಿ ಮತ್ತು ಟಿ.ಎಸ್.ಪಿ ಅನುದಾನದಲ್ಲಿ ನಿರ್ಮಾಣ ಮಾಡಲಾದ ಸರ್ದಾರ ವಲ್ಲಭಬಾಯಿ ಪಟೇಲ್ ವಾಣಿಜ್ಯ ಸಂಕಿರ್ಣದಲ್ಲಿ ಮುಸ್ಲಿಂ ಸಮುದಾಯದವರಿಗೆ ಅಂಗಡಿಗಳನ್ನು ಹಂಚಿಕೆ ಮಾಡಲು ಮೇಯರ್ ಹೇಳುತ್ತಿದ್ದಾರಂತೆ, ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದೆಂದು ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿದೆ. ಬೇರೆಯವರಿಗೆ ನೀಡಿದರೆ, ಹೋರಾಟ ಮಾಡುವುದಾಗಿ ತಿಳಿಸಿದ್ದೇನೆ ಎಂದು ಹೇಳಿದರು.ಧರಣಿ ಸ್ಥಳಕ್ಕೆ ತೆರಳುವ ಮೊದಲು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರ ಜೊತೆಗೆ ಸಭೆ ನಡೆಸಿದ ಶಾಸಕರು, ಸರ್ಕಾರಿ ಆಸ್ತಿಯನ್ನು ವಕ್ಫ್ ಬೋರ್ಡ್‌ಗೆ ಮಾಡಿಕೊಂಡಿರುವುದನ್ನು ಮರಳಿ ಸರ್ಕಾರಕ್ಕೆ ಪಡೆದುಕೊಳ್ಳುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ತಿಳಿಸಿದರು. ಜಿಲ್ಲಾಧಿಕಾರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಅದಕ್ಕೆ ಸಂಬಂಧಿಸಿದಂತೆ ಕೆಲಸ ಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆ.ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿರ್ದೇಶಕ ರಾಮನಗೌಡ ಪಾಟೀಲ ಯತ್ನಾಳ, ಬಿಜೆಪಿ ನಗರ ಎಸ್.ಸಿ ಮೋರ್ಚಾ ಅಧ್ಯಕ್ಷ ಪ್ರಕಾಶ ಚವ್ಹಾಣ, ಮಹಾನಗರ ಪಾಲಿಕೆ ಸದಸ್ಯರಾದ ವಿಠ್ಠಲ ಹೊಸಪೇಟ, ಜವಾಹಾರ ಗೋಸಾವಿ, ಪ್ರೇಮಾನಂದ ಬಿರಾದಾರ, ಮುಖಂಡರಾದ ಮಡಿವಾಳ ಯಾಳವಾರ, ರಾಜಶೇಖರ ಭಜಂತ್ರಿ, ದಾದಾಸಾಹೇಬ ಬಾಗಾಯತ, ನಾಗಪ್ಪ ಗುಗ್ಗರಿ, ರವಿ ಗರಸಂಗಿ, ತಮ್ಮಣ್ಣ ಗಂಜನ್ನವರ ಮತ್ತಿತರರು ಇದ್ದರು.