ಸಾರಾಂಶ
ಪಾವಗಡ: ಅಭಿವೃದ್ಧಿ ಹೆಸರಿನಲ್ಲಿ ಸೋಲಾರ್ ವಿಶೇಷ ನಿಧಿ ಹಣ ಬೇರೆ ಜಿಲ್ಲೆಗಳ ಸರ್ಕಾರೇತರ ಸಂಸ್ಥೆಗಳಿಗೆ ವರ್ಗಾವಣೆ ಹಾಗೂ 60 ಎಕರೆಗಿಂತ ಹೆಚ್ಚು ಸರ್ಕಾರಿ ಖರಾಬು ಜಮೀನು ಸರ್ಕಾರ ಹಾಗೂ ಖಾಸಗಿ ಸೋಲಾರ್ ಕಂಪನಿಗಳ ಸ್ವಾಧೀನಕ್ಕೆ ವಿರೋಧಿಸಿ, ತಾಲೂಕು ಬಹುಜನ ಸಮಾಜ ಪಕ್ಷದಿಂದ ಹಮ್ಮಿಕೊಂಡಿರುವ ಧರಣಿ ಸತ್ಯಾಗ್ರಹ ನಾಲ್ಕನೇ ದಿನಕ್ಕೆ ಮುಂದುವರಿದ ಬೆನ್ನಲ್ಲೇ ಸೋಮವಾರ ತಹಸೀಲ್ದಾರ್ ವರದರಾಜ್ ಹಾಗೂ ಸೋಲಾರ್ ಅಭಿವೃದ್ಧಿ ನಿಗಮ ಕಚೇರಿಯ ವ್ಯವಸ್ಥಾಪಕ ನಿರ್ದೇಶಕ ಪ್ರಕಾಶ್ ತಾ.ಕಚೇರಿಯ ಸ್ಥಳಕ್ಕೆ ಭೇಟಿ ಪ್ರತಿಭಟನಾಕಾರರಿಂದ ಸಮಸ್ಯೆ ಅಲಿಸಿದರು.
ಈ ವೇಳೆ ಮಾತನಾಡಿದ ಬಿಎಸ್‌ಪಿ ಜಿಲ್ಲಾ ಕಾರ್ಯದರ್ಶಿ ಪಾವಗಡದ ಟಿ.ಹನುಮಂತರಾಯಪ್ಪ, ಕಳೆದ ಆರೇಳು ವರ್ಷಗಳ ಹಿಂದೆ ರಾಜ್ಯ ಸೋಲಾರ್ ಅಭಿವೃದ್ಧಿ ನಿಗಮದಿಂದ ಗುತ್ತಿಗೆ ಆಧಾರದ ಮೇಲೆ ತಾಲೂಕಿನ ತಿರುಮಣಿ ವಳ್ಳೂರು ಗ್ರಾಪಂನ 13 ಸಾವಿರ ಎಕರೆ ರೈತರ ಜಮೀನುಗಳಲ್ಲಿ 2500 ಮೆಗಾ ವ್ಯಾಟ್ ಸೌರಶಕ್ತಿ ವಿದ್ಯುತ್ ಉತ್ಪಾದನೆಯ ಘಟಕಗಳು ಕಾರ್ಯಾರಂಭದಲ್ಲಿವೆ. ಸರ್ಕಾರದ ನಿಯಮಾನುಸಾರ ಸ್ಥಳೀಯ ವಿದ್ಯಾವಂತ ಯುವಕರಿಗೆ ಉದ್ಯೋಗ ಕಲ್ಪಿಸುವಲ್ಲಿ ಸೋಲಾರ್ ಅಭಿವೃದ್ಧಿ ನಿಗಮದ ಅಧಿಕಾರಿಗಳು ವಂಚಿಸಿದ್ದಾರೆ. ಅಲ್ಲದೇ ಸೌರಶಕ್ತಿ ಘಟಕಗಳ ನಿರ್ಮಾಣಕ್ಕೆ ರೈತರಿಂದ ಜಮೀನು ವಶಕ್ಕೆ ಪಡೆದಿದ್ದು, ಈ ವೇಳೆ ಸುಮಾರು 60ಕ್ಕಿಂತ ಹೆಚ್ಚು ಎಕರೆ ಸರ್ಕಾರಿ ಖರಾಬು ಸೋಲಾರ್‌ಗೆ ಸ್ವಾಧೀನ ಪಡೆದಿದ್ದಾರೆ ಎಂದು ದೂರಿದರು.ಖಾಸಗಿ ಸೋಲಾರ್ ಕಂಪನಿಯ ವಶದಲ್ಲಿರುವ ಅನಧಿಕೃತ ಸರ್ಕಾರಿ ಖರಾಬು ಜಮೀನು ಒತ್ತುವರಿ ತೆರವುಗೊಳಿಸಬೇಕು. ಜಮೀನಿಲ್ಲದ ಬಡ ರೈತರಿಗೆ ನೀಡಬೇಕು ಎಂದು ಒತ್ತಾಯಿಸಿದರು.
ಸೋಲಾರ್ ವಿಶೇಷ ನಿಧಿಯ ಅನುದಾನ ಜಿಲ್ಲಾಧಿಕಾರಿಗಳ ಖಾತೆಗೆ ಜಮಾವಾಗುತ್ತಿದ್ದು, ಸ್ಥಳೀಯ ಸರ್ಕಾರಿ ಶಾಲಾ- ಕಾಲೇಜು ರಸ್ತೆ ಇತರೆ ಮೂಲಭೂತ ಸಮಸ್ಯೆ ನಿವಾರಣೆಗೆ ಬಳಸಿಕೊಳ್ಳಲು ಅವಕಾಶವಿದೆ. ಆದರೆ ಪ್ರಭಾವಿಗಳ ಒತ್ತಡಕ್ಕೆ ಮಣಿದು ತಾಲೂಕಿಗೆ ಬಳಕೆಯಾಗಬೇಕಿದ್ದ ಸೋಲಾರ್ ವಿಶೇಷ ನಿಧಿಯ ಹಣ ಮಧುಗಿರಿ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಎನ್‌ಜಿಒಗಳಿಗೆ ಈ ಅನುದಾನ ಕಲ್ಪಿಸಿರುವ ಬಗ್ಗೆ ದಾಖಲೆಗಳಿವೆ. ಇದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.ಪಟ್ಟಣದ ಅಂಬೇಡ್ಕರ್ ವಸತಿ ಶಾಲೆಯಲ್ಲಿ 1ರಿಂದ 5ನೇ ತರಗತಿಯವರೆಗೆ ನೂರಾರು ಬಡ ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಆ ಕಟ್ಟಡ ಶಿಥಿಲವಾಗಿ ಯಾವ ಕ್ಷಣದಲ್ಲಾದರೂ ಮಕ್ಕಳ ಮೇಲೆ ಬೀಳುವ ಸಾಧ್ಯತೆ ಇದೆ. ಇಂತಹ ವಸತಿ ಶಾಲೆಗಳ ದುರಸ್ತಿ ಹಾಗೂ ತಾಲೂಕಿನ ಅನೇಕ ಕಡೆ ಅತಂತ್ರವಾಗಿರುವ ಶಾಲಾ ಕಾಲೇಜುಗಳಿಗೆ ಏಕೆ, ಈ ಅನುದಾನ ಬಳಕೆಯಾಗುತ್ತಿಲ್ಲ. ತಾಲೂಕಿನಲ್ಲೇ ಅನೇಕ ಮೂಲಭೂತ ಸಮಸ್ಯೆಯಿದ್ದರೂ ಸೋಲಾರ್‌ನ ವಿಶೇಷ ನಿಧಿ ಬೇರೆ ಜಿಲ್ಲೆಗೆ ಕಲ್ಪಿಸುವ ಉದ್ದೇಶವಾದರೂ ಏನು? ಎಂದರು.
ತಾಲೂಕಿನಲ್ಲಿ ಐಟಿಐ ಡಿಪ್ಲೋಮೋ ಕೋರ್ಸ್ ವ್ಯಾಸಂಗ ಮಾಡಿದ ಅನೇಕ ವಿದ್ಯಾವಂತ ಯುವಕರಿದ್ದು, ಅಗತ್ಯ ದಾಖಲೆ ಸಲ್ಲಿಸಿದ್ದರೂ ಅವರಿಗೆ ಸೋಲಾರ್ ಪಾರ್ಕ್‌ಗಳಲ್ಲಿ ಉದ್ಯೋಗ ನೀಡದೇ ಆಂಧ್ರ ಹಾಗೂ ಇತರೆ ಹೊರ ರಾಜ್ಯ ಮತ್ತು ಜಿಲ್ಲೆಯವರಿಗೆ ಉದ್ಯೋಗ ನೀಡುತ್ತಿದ್ದೀರಾ. ಇದು ಸರಿಯೇ ಎಂದು ಆಕ್ರೋಶ ವ್ಯಕ್ತಪಡಿಸಿದರು.ಈ ಎಲ್ಲಾ ಸಮಸ್ಯೆ ನಿವಾರಣೆ ಆಗುವವರೆಗೂ ಪ್ರತಿಭಟನೆ ಕೈಬಿಡುವುದಿಲ್ಲ ಎಂದು ಪಟ್ಟುಹಿಡಿದಿರು.
ಸಮಸ್ಯೆ ಅಲಿಸಿದ ಬಳಿಕ ತಹಸೀಲ್ದಾರ್ ವರದರಾಜು ಮಾತನಾಡಿ, ಸೋಲಾರ್ ನಿಧಿ ದುರುಪಯೋಗ ಹಾಗೂ ಇತರೆ ಸಮಸ್ಯೆ ಕುರಿತು ದಾಖಲೆ ಸಮೇತ ದೂರು ನೀಡಿ ಕ್ರಮ ಜರುಗಿಸುವುದಾಗಿ ಭರವಸೆ ನೀಡಿದರು.ಇದಕ್ಕೊಪ್ಪದ ಪ್ರತಿಭಟನಾಕಾರರು ನಿಮ್ಮಿಂದ ನಮ್ಮ ಪಶ್ನೆಗೆ ಸೂಕ್ತ ಉತ್ತರ ದೊರಕಲಿಲ್ಲ. ಈ ಕೂಡಲೇ ಸಮಸ್ಯೆ ನಿವಾರಣೆ ಆಗಬೇಕೆಂದು ಪಟ್ಟು ಹಿಡಿದು ಧರಣಿ ಮುಂದುವರೆಸಿದರು.
ಸೋಲಾರ್ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಪ್ರಕಾಶ್ ಮಾತನಾಡಿ, ಸೋಲಾರ್ ಪಾರ್ಕ್‌ಗಳಲ್ಲಿ ಸರ್ಕಾರದ ನಿಯಮಾನುಸಾರ ಕ್ರಮವಹಿಸಿದ್ದೇವೆ. ಸೋಲಾರ್ ವಿಶೇಷ ನಿಧಿಯಲ್ಲಿ ಅಭಿವೃದ್ಧಿ ವಿಚಾರವಾಗಿ ಸ್ಥಳೀಯ ಸಮಸ್ಯೆ ನಿವಾರಣೆಗೆ ಶೇ.80ರಷ್ಟು ಹಣ ವಿನಿಯೋಗಿಸುತ್ತಿದ್ದು, ಉಳಿಕೆ 20ರಷ್ಟು ಹಣ ಬೇರೆಡೆ ಬಳಸಲು ಅವಕಾಶವಿದೆ. ಇದು ಜಿಲ್ಲಾಧಿಕಾರಿಯ ಹಂತದಲ್ಲಿ ನಡೆಯಲಿದೆ. ಡೀಸಿ ಗಮನಕ್ಕೆ ತಂದು ಪರಿಶೀಲಿಸಿ ಕ್ರಮವಹಿಸುವ ಭರವಸೆ ವ್ಯಕ್ತಪಡಿಸಿದರು.ಸೋಲಾರ್ ನಿಗಮದ ವ್ಯವಸ್ಥಾಪಕರಾದ ಮಹೇಶ್, ಕಂಪನಗೌಡ, ಕಂದಾಯ ಇಲಾಖೆಯ ರಾಜ್‌ಗೋಪಾಲ್ ಹಾಗೂ ಪ್ರತಿಭಟನಾಕಾರರಾದ ಕನ್ನಮೇಡಿ ಕೃಷ್ಣಮೂರ್ತಿ, ವದನಕಲ್ಲು ತಿಪ್ಪೇಸ್ವಾಮಿ, ಕೆ.ವೆಂಕಟೇಶ್, ನರಸಿಂಹಮೂರ್ತಿ ಇದ್ದರು.