ಅಧಿವೇಶನ ಬಂದಿದ್ದರಿಂದ ಹೋದಾಣಿಕೆ ತೋರಿಸುತ್ತಿದ್ದಾರೆ. ಆದರೆ, ಅವರ ಹಿಂಬಾಲಕರ ನಡುವೆ ಕುಸ್ತಿ ನಡೆದಿದೆ ಎಂದು ಸಂಸದ ಜಗದೀಶ ಶೆಟ್ಟರ್ ಆರೋಪಿಸಿದರು.
ಶಿರಸಿ: ಸಿಎಂ, ಡಿಸಿಎಂ ನಡುವೆ ಬೂದಿ ಮುಚ್ಚಿದ ಕೆಂಡದ ಪರಿಸ್ಥಿತಿಯಿದೆ. ಮೇಲ್ನೋಟಕ್ಕೆ ಬ್ರೇಕ್‌ಫಾಸ್ಟ್ ನಾಟಕ ಮಾಡುತ್ತಿದ್ದಾರೆ. ಅಧಿವೇಶನ ಬಂದಿದ್ದರಿಂದ ಹೋದಾಣಿಕೆ ತೋರಿಸುತ್ತಿದ್ದಾರೆ. ಆದರೆ, ಅವರ ಹಿಂಬಾಲಕರ ನಡುವೆ ಕುಸ್ತಿ ನಡೆದಿದೆ ಎಂದು ಸಂಸದ ಜಗದೀಶ ಶೆಟ್ಟರ ಆರೋಪಿಸಿದರು.
ಅವರು ಶನಿವಾರ ಮಾಧ್ಯಮದವರೆ ಜತೆ ಮಾತನಾಡಿ, ಕದನ ವಿರಾಮ ತಾತ್ಕಾಲಿಕವಾಗಿದೆ. ಅದು ಸಂಪೂರ್ಣ ಶಮನವಾಗಿಲ್ಲ. ಅವರಿಬ್ಬರ ಅಧಿಕಾರದ ಬಡಿದಾಟದಿಂದ ಜನ ಕಲ್ಯಾಣ ಮರೀಚಿಕೆಯಾಗಿದೆ. ಅಭಿವೃದ್ಧಿ ಕೆಲಸ ಕಾರ್ಯ ನಿಂತಿವೆ. ರಸ್ತೆ ಗುಂಡಿ ಮುಚ್ಚಲು ಹಣವಿಲ್ಲ ಎಂದರು.ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ನಡುವಿನ ಕದನ ವಿರಾಮ ಅದು ತಾತ್ಕಾಲಿಕವಾದುದು. ಅಧಿವೇಶನದ ನಂತರ ಇದು ಮತ್ತಷ್ಟು ಜೋರಾಗುವ ಸಾಧ್ಯತೆಯಿದೆ. ಕಾಂಗ್ರೆಸ್‌ನ ಹೈಕಮಾಂಡ್‌ನಿಂದ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ನಡುವಿನ ಕದನದ ಸಂಬಂಧ ನಿರ್ಣಯ ತೆಗೆದುಕೊಳ್ಳಲು ಆಗುತ್ತಿಲ್ಲ. ಯಾವುದಾದರೂ ನಿರ್ಣಯ ತೆಗೆದುಕೊಂಡು ಸರ್ಕಾರ ಪತನವಾದರೆ ಆ ಪಕ್ಷದ ಎಟಿಎಂ ಮಶಿನ್ ಬಂದ್ ಆಗುತ್ತದೆ ಎಂಬ ಭಯದಲ್ಲಿ ಅವರಿದ್ದಾರೆ ಎಂದು ವ್ಯಂಗ್ಯವಾಡಿದರು.
ಮೆಕ್ಕೆಜೋಳ ಖರೀದಿಸಬೇಕು ಎಂದು ರೈತರಿಂದ ಎಲ್ಲೆಡೆ ಹೋರಾಟ ನಡೆಯುತ್ತಿದೆ. ಮೆಕ್ಕೆಜೋಳ ಖರೀದಿ ಮಾಡಿ ಎಂದು ಕೇಂದ್ರ ಸರ್ಕಾರ ಆದೇಶ ಮಾಡಿದೆ. ಆದರೆ, ರಾಜ್ಯ ಸರ್ಕಾರ ಇಲ್ಲದ ಸಬೂಬು ಹೇಳುತ್ತಿದೆ. ಯಾಕೆಂದರೆ ಸರ್ಕಾರದ ಖಜಾನೆಯಲ್ಲಿ ಹಣವಿಲ್ಲ. ಇದೊಂದು ತುಘಲಕ್ ಸರ್ಕಾರ, ಆಡಳಿತ ವೈಫಲ್ಯವಾಗಿದೆ. ರಾಜ್ಯದ ಹಿತಾಸಕ್ತಿಗೆ ತೊಂದರೆಯಾಗಿದೆ ಎಂದು ಟೀಕಿಸಿದರು.ಬಿಜೆಪಿಯಲ್ಲಿ ಏನಾದರೂ ವ್ಯತ್ಯಾಸವಿದ್ದರೆ ಪಕ್ಷದ ಹೈಕಮಾಂಡ್ ಸರಿಪಡಿಸುತ್ತದೆ. ರಾಜ್ಯದಲ್ಲಿ ಪಕ್ಷದ ಸಂಘಟನೆ ನಡೆದಿದೆ. ಕೆಲವರು ವೈಯಕ್ತಿಕ ಅಭಿಪ್ರಾಯ ಹೇಳಿರಬಹುದು. ಪಕ್ಷದ ಹೈಕಮಾಂಡ್ ಎಲ್ಲವನ್ನೂ ಗಮನಿಸುತ್ತಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಕುಮಟಾ-ಹೊನ್ನಾವರ ಶಾಸಕ ದಿನಕರ ಶೆಟ್ಟಿ ಇದ್ದರು.