ಕಮಲಾಪುರ ಕೆರೆಯಲ್ಲಿ ಮತ್ತೆ ಒತ್ತುವರಿ ಸದ್ದು

| Published : May 05 2024, 02:01 AM IST

ಸಾರಾಂಶ

ಕಮಲಾಪುರ ಕೆರೆ 476 ಎಕರೆ ವಿಸ್ತೀರ್ಣ ಹೊಂದಿದೆ. ಈ ಹಿಂದೆ 150 ಎಕರೆವರೆಗೂ ಒತ್ತುವರಿ ಮಾಡಲಾಗಿತ್ತು.

ಕೃಷ್ಣ ಎನ್‌. ಲಮಾಣಿ

ಹೊಸಪೇಟೆ: ಐತಿಹಾಸಿಕ ಕಮಲಾಪುರ ಕೆರೆ ನೀರು ಖಾಲಿಯಾಗುತ್ತಿದ್ದಂತೆಯೇ ಪ್ರಭಾವಿಗಳು ಕೆರೆ ಒತ್ತುವರಿ ಮಾಡಿಕೊಳ್ಳುತ್ತಿದ್ದಾರೆ. ಈ ಕೆರೆ ಸಂರಕ್ಷಣೆಗೆ ಈ ಹಿಂದೆ ಹೋರಾಟ ನಡೆದಿದ್ದು, ಈಗ ಮತ್ತೆ ಒತ್ತುವರಿ ಸದ್ದು ಜೋರಾಗಿದೆ.

ಕಮಲಾಪುರ ಕೆರೆ 476 ಎಕರೆ ವಿಸ್ತೀರ್ಣ ಹೊಂದಿದೆ. ಈ ಹಿಂದೆ 150 ಎಕರೆವರೆಗೂ ಒತ್ತುವರಿ ಮಾಡಲಾಗಿತ್ತು. 2017ರಲ್ಲಿ ಹೋರಾಟಕ್ಕೆ ಇಳಿದ ಜನಸಂಗ್ರಾಮ ಪರಿಷತ್‌ ಹಾಗೂ ಸ್ಥಳೀಯ ಯುವಕರ ಪಡೆ ಕೆರೆ ಒತ್ತುವರಿ ತಡೆದಿದ್ದರು. ಆಗ ಬಳ್ಳಾರಿ ಜಿಲ್ಲಾಡಳಿತ ಆದ್ಯತೆ ನೀಡಿ ಕೆರೆ ಒತ್ತುವರಿ ತೆರವುಗೊಳಿಸಿತ್ತು. ಕೆರೆ ಸುತ್ತ ಕಂದಕಗಳನ್ನು ನಿರ್ಮಿಸಿ ಸಂರಕ್ಷಣೆಗೆ ಒತ್ತು ನೀಡಿತ್ತು. ಈಗ ಕೆರೆಯಲ್ಲಿ ನೀರು ಕಡಿಮೆಯಾಗುತ್ತಾ ಹೋದಂತೆಲ್ಲ ಕೆಲ ಕಡೆ ಕಂದಕ ಮುಚ್ಚಿ ಮತ್ತೆ ಕೆರೆ ಒತ್ತುವರಿ ಮಾಡಿಕೊಳ್ಳಲಾಗುತ್ತಿದೆ.

60 ಎಕರೆ ಒತ್ತುವರಿ?

ಸರಿಸುಮಾರು 60 ಎಕರೆಯಷ್ಟು ಒತ್ತುವರಿ ಮಾಡಲಾಗಿದೆ ಎಂದು ಸ್ಥಳೀಯರು ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.

ಈ ಹಿಂದೆ 150 ಎಕರೆ ಒತ್ತುವರಿ ತೆರವು ಮಾಡಲಾಗಿತ್ತು. ಕಮಲಾಪುರ ಕೆರೆ ತಾಂಡಾದ ನಿವಾಸಿಗಳು ಸ್ವಯಂಪ್ರೇರಿತರಾಗಿ ಐತಿಹಾಸಿಕ ಕೆರೆ ಒತ್ತುವರಿ ತೆರವು ಮಾಡಲಾಗಿತ್ತು. ಇನ್ನು ಕೆಲ ಪ್ರಭಾವಿಗಳಿಗೆ ನೋಟಿಸ್‌ ನೀಡಿ ತೆರವುಗೊಳಿಸಲಾಗಿತ್ತು. ಈಗ ಮತ್ತೆ ಕೆರೆ ಒತ್ತುವರಿ ಕಾರ್ಯ ಕೆಲ ಪ್ರಭಾವಿ ರೈತರಿಂದಲೇ ನಡೆಯುತ್ತಿದೆ. ಇದರಿಂದ ಐತಿಹಾಸಿಕ ಕೆರೆಗೂ ಧಕ್ಕೆಯಾಗಲಿದೆ. ಕಮಲಾಪುರ ಕೆರೆ ನೀರಿನಿಂದ 1200 ಎಕರೆ ಪ್ರದೇಶದಲ್ಲಿ ನೀರಾವರಿ ಮಾಡಲಾಗುತ್ತಿದೆ. ಇದೊಂದು ವಿಜಯನಗರ ಆಳರಸರ ಕಾಲದ ಐತಿಹಾಸಿಕ ಕೆರೆಯಾಗಿದೆ.

ಯುನೆಸ್ಕೊ ಪಟ್ಟಿಯಲ್ಲಿರುವ ಕೆರೆ:

ಹಂಪಿ ಸ್ಮಾರಕಗಳ ಗುಚ್ಛಗಳ ಸಾಲಿನಲ್ಲಿ ಈ ಕೆರೆಯೂ ಸೇರ್ಪಡೆಯಾಗಿದ್ದರಿಂದ ಯುನೆಸ್ಕೊ ಪಟ್ಟಿಯಲ್ಲಿದೆ. ಕೆರೆ ಪಕ್ಕದಲ್ಲಿ ರಸ್ತೆ ವಿಸ್ತರಣೆ ಮಾಡಿದ್ದರಿಂದ ಕೆರೆಯ ನೈಜ ಸ್ವರೂಪಕ್ಕೆ ಹಾಗೂ ತೂಬುಗಳಿಗೆ ಧಕ್ಕೆಯಾಗಲಿದೆ ಎಂದು ಕೇಂದ್ರ ಪುರಾತತ್ವ ಇಲಾಖೆ ಅಧಿಕಾರಿಗಳು ರಾಜ್ಯ ಸರ್ಕಾರಕ್ಕೆ ಈ ಹಿಂದೆ ಪತ್ರ ಬರೆದು ಎಚ್ಚರಿಸಿದ್ದರು. ಇದರಿಂದ ರಾಜ್ಯ ಸರ್ಕಾರದ ಉನ್ನತಮಟ್ಟದ ಅಧಿಕಾರಿಗಳ ನಿಯೋಗಯೊಂದು ಭೇಟಿ ನೀಡಿ ಪರಿಶೀಲನೆ ಕೂಡ ನಡೆಸಿತ್ತು. ಹಾಗಾಗಿ ಕೆರೆ ಏರಿ ಮೇಲೆ ರಸ್ತೆ ವಿಸ್ತರಣೆ ಕಾರ್ಯ ಸ್ಥಗಿತಗೊಂಡು ತೂಬುಗಳನ್ನು ಸಂರಕ್ಷಿಸಲಾಗಿತ್ತು.

ಈ ಕೆರೆಯನ್ನು ನೈಜ ಸ್ವರೂಪದಲ್ಲೇ ಉಳಿಸಬೇಕು ಎಂದು ಯುನೆಸ್ಕೊ ಕೂಡ ಅಭಿಮತ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಈ ಕೆರೆಯಲ್ಲಿ ಬೋಟಿಂಗ್‌ ಸೇರಿದಂತೆ ಇತರೆ ಪ್ರವಾಸೋದ್ಯಮ ಚಟುವಟಿಕೆಗೂ ಆದ್ಯತೆ ನೀಡಲಾಗಿಲ್ಲ.

ಇದು ಮೀನು ಸೇರಿದಂತೆ ಪ್ರಾಣಿ, ಪಕ್ಷಿಗಳಿಗೂ ಆಸರೆಯಾಗಿದೆ. ಈಗ ನೀರು ಕಡಿಮೆಯಾಗಿರುವುದರಿಂದ ಒತ್ತುವರಿ ಕಾರ್ಯ ಜೋರಾಗಿಯೇ ನಡೆದಿದೆ. ಈ ನಡುವೆ ಕಮಲಾಪುರ ಪಟ್ಟಣದ ಕೆಲ ಭಾಗಗಳ ಚರಂಡಿ ನೀರು ಕೂಡ ಕೆರೆಯಲ್ಲಿ ಸೇರಿಕೊಳ್ಳುತ್ತಿದೆ. ಈ ಬಗ್ಗೆಯೂ ಪರಿಸರ ಪ್ರೇಮಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪ್ರಾಣಿ, ಪಕ್ಷಿಗಳಿಗೆ ಆಸರೆಯಾಗಿರುವ ಕೆರೆಯಲ್ಲಿ ಕಲುಷಿತ ನೀರು ಬೀಡುತ್ತಿರುವುದು ಸರಿಯಲ್ಲ. ಜೊತೆಗೆ ಒತ್ತುವರಿ ತೆರವು ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಕಮಲಾಪುರ ಕೆರೆ ಒತ್ತುವರಿ ನಡೆದಿದೆ. ಕೂಡಲೇ ಸಂಬಂಧಿಸಿದವರು ಒತ್ತುವರಿ ತೆರವುಗೊಳಿಸಬೇಕು. ಕೆರೆ ಸಂರಕ್ಷಣೆಗೆ ಆದ್ಯತೆ ನೀಡಬೇಕು. ಈ ಹಿಂದೆ ಕೆರೆ ಸಂರಕ್ಷಣೆಗೆ ಹೋರಾಟ ನಡೆಸಿ ಒತ್ತುವರಿ ತೆರವುಗೊಳಿಸಲಾಗಿತ್ತು. ಈಗ ಮತ್ತೆ ಒತ್ತುವರಿ ನಡೆದಿದೆ ಎನ್ನುತ್ತಾರೆ ಕಮಲಾಪುರ ಅಚ್ಚುಕಟ್ಟು ಪ್ರದೇಶದ ರೈತ ಶಿವಕುಮಾರ ಮಾಳಗಿ.

ಕಮಲಾಪುರ ಕೆರೆ ಒತ್ತುವರಿ ಮಾಡಿದ್ದರೆ ಕೂಡಲೇ ಪರಿಶೀಲಿಸಲಾಗುವುದು. ಕೆರೆ ಸಂರಕ್ಷಣೆಗೆ ಆದ್ಯತೆ ನೀಡಲಾಗುವುದು. ಈ ನಿಟ್ಟಿನಲ್ಲಿ ಕ್ರಮ ವಹಿಸಲಾಗುವುದು ಎನ್ನುತ್ತಾರೆ ವಿಜಯನಗರ ಜಿಲ್ಲಾಧಿಕಾರಿ ಎಂ.ಎಸ್‌. ದಿವಾಕರ್‌.