ಜನ ಸ್ಪಂದನಾ ಸಭೆಯಲ್ಲಿ ಸ್ಮಶಾನ ದಾರಿಯ ಸದ್ದು

| Published : Oct 17 2024, 12:53 AM IST

ಸಾರಾಂಶ

ಡಿಸಿ, ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರೂ ಸಮಸ್ಯೆ ಬಗೆಹರಿದಿಲ್ಲ. ದಯಮಾಡಿ ದಾರಿ ಮಾಡಿಕೊಡಿ

ಹೂವಿನಹಡಗಲಿ: ನಮ್ಮೂರಿಗೆ ಮೂರು ಎಕರೆ ಸ್ಮಶಾನ ಜಾಗ ಒತ್ತುವರಿಯಾಗಿತ್ತು. ಅದನ್ನು ತೆರವುಗೊಳಿಸಿ ನರೇಗಾದಲ್ಲಿ ಅಭಿವೃದ್ಧಿ ಮಾಡಿದ್ದೇವೆ. ಆದರೆ ಶವಗಳನ್ನು ಹೊತ್ತುಕೊಂಡು ಹೋಗಲು ದಾರಿಯೇ ಇಲ್ಲ. ಡಿಸಿ, ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರೂ ಸಮಸ್ಯೆ ಬಗೆಹರಿದಿಲ್ಲ. ದಯಮಾಡಿ ದಾರಿ ಮಾಡಿಕೊಡಿ...ಇದು ನವಲಿ ಗ್ರಾಮಸ್ಥರು ಜಿಪಂ ಸಿಇಒ ಎದುರು ತಮ್ಮ ನೋವು ತೋಡಿಕೊಂಡ ಪರಿ.

ತಾಲೂಕು ಕೇಂದ್ರದಿಂದ ಕೂಗಳತೆ ದೂರದ ನವಲಿ ಗ್ರಾಪಂನಲ್ಲಿ ಜಿಪಂ ಸಿಇಒ ನೋಂಗ್ಜಾಯ್‌ ಮೊಹಮ್ಮದ್‌ ಅಕ್ರಮ್‌ ಅಲಿ ಷಾ ನೇತೃತ್ವದಲ್ಲಿ ಜರುಗಿದ ಜನ ಸ್ಪಂದನಾ ಕಾರ್ಯಕ್ರಮದ ಆರಂಭದಲ್ಲೇ, ಸ್ಮಶಾನದ ದಾರಿ ಮಾಡಿಕೊಡಿ ಎಂದು ಗ್ರಾಮಸ್ಥರು ಮನವಿ ಮಾಡಿದರು.

ಮನವಿ ಸ್ವೀಕರಿಸಿ ಮಾತನಾಡಿದ ಜಿಪಂ ಸಿಇಒ, ಸ್ಮಶಾನದ ದಾರಿ ಕಂದಾಯ ಇಲಾಖೆಗೆ ಸಂಬಂಧಿಸಿದೆ. ಈ ಕುರಿತು ಒಂದು ಬಾರಿ ಸಭೆ ಕರೆದು ಚರ್ಚಿಸುತ್ತೇನೆ. ಜತೆಗೆ ಸ್ಮಶಾನದ ದಾರಿಗಾಗಿ ಜಮೀನು ಖರೀದಿ ಮಾಡಲು ಸರ್ಕಾರದಲ್ಲಿ ಹಣವಿಲ್ಲ. ಈ ಸಮಸ್ಯೆಯನ್ನು ಸರ್ಕಾರಕ್ಕೆ ಕಳಿಸಿ ಕ್ರಮಕ್ಕೆ ಮುಂದಾಗುತ್ತೇವೆ ಎಂದರು.

ಸಿಂಗಟಾಲೂರು ಹಿನ್ನೀರಿನಲ್ಲಿ ಮುಳುಗಡೆಯಾದ ಅಲ್ಲಿಪುರ ಸ್ಥಳಾಂತರ, ನವಲಿ ಗ್ರಾಮದಲ್ಲಿ ಸರ್ಕಾರಿ ಜಾಗ ಒತ್ತುವರಿಯಾಗುತ್ತಿದೆ. ಇದಕ್ಕಾಗಿ ನರೇಗಾ ಯೋಜನೆಯಲ್ಲಿ ಕಂಪೌಂಡ್‌ ನಿರ್ಮಾಣಕ್ಕೆ ಅನುದಾನ ನೀಡಬೇಕೆಂದು ಕ್ರಿಯಾ ಯೋಜನೆ ಸಲ್ಲಿಸಿ. ಅದನ್ನು ಮಂಜೂರು ಮಾಡುತ್ತೇವೆಂದು ಹೇಳಿದರು.

ರಾಜವಾಳ, ನವಲಿ, ಅಲ್ಲಿಪುರ, ಹೊನ್ನೂರು, ಕಾಗನೂರು ಗ್ರಾಮಗಳು ನವಲಿ ಗ್ರಾಪಂ ವ್ಯಾಪ್ತಿಗೆ ಒಳಪಟ್ಟಿವೆ. ಈ ಗ್ರಾಮದಲ್ಲಿ ಚರಂಡಿ, ಸಿಸಿ ರಸ್ತೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ನರೇಗಾ ಯೋಜನೆಯ, ಅನುದಾನ ನೀಡಬೇಕೆಂಬ ಮನವಿಗೆ ಸಿಇಒ ಸ್ಪಂದಿಸುತ್ತಾ, ನೀವು ಕೇಳಿರುವ ಕಾಮಗಾರಿಗಳು ವೈಯಕ್ತಿಕ ಅಲ್ಲ, ಸಮುದಾಯ ಅಭಿವೃದ್ಧಿಗೆ ಅನುದಾನ ಕೊಡಿ ಎಂದು ಕೇಳುತ್ತಿರುವುದು ಸಂತೋಷ ತಂದಿದೆ. ಈ ಕುರಿತು ಕೂಡಲೇ ಕ್ರಮ ಕೈಗೊಳ್ಳುತ್ತೇನೆಂದು ಹೇಳಿದರು.

ಹೊನ್ನೂರು, ನವಲಿಯಲ್ಲಿನ ಕರೆಹಳ್ಳಿದ ದಡದ ಮಣ್ಣು ಕೊರೆದು ಹೋಗದಂತೆ ನರೇಗಾದಲ್ಲಿ ಎರಡು ಬದಿಗೆ ಕಲ್ಲಿನಿಂದ ಪಿಂಚಿಂಗ್‌ ಮಾಡಿದ್ದು, ಜತೆಗೆ 4 ಕಡೆಗಳಲ್ಲಿ ಚೆಕ್‌ ಡ್ಯಾಂ ನಿರ್ಮಾಣ ಮಾಡಬೇಕಿದೆ. ಈ ಕಾಮಗಾರಿ ತುಂಗಭದ್ರಾ ನದಿವರೆಗೂ ವಿಸ್ತರಣೆ ಮಾಡಬೇಕೆಂದು ಗ್ರಾಮಸ್ಥರು ಮನವಿ ಸಲ್ಲಿಸಿದರು.

ನವಲಿಯ ಪ್ರಾಥಮಿಕ ಆರೋಗ್ಯ ಕೇಂದ್ರ ಕುಸಿದು ಬೀಳುವ ಸ್ಥಿತಿಯಲ್ಲಿದೆ. ಹಣ ಮಂಜೂರಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಆದರೆ ಕಾಮಗಾರಿ ಆರಂಭವಾಗುತ್ತಿಲ್ಲ. ಹಳೆ ಕಟ್ಟಡವನ್ನು ಇನ್ನು ತೆರವು ಮಾಡಿಲ್ಲ. ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಜನತೆ ಅಹವಾಲು ಸಲ್ಲಿಸಿದರು.

ಸಭೆಯಲ್ಲಿ ಗ್ರಾಪಂ ಅಧ್ಯಕ್ಷೆ ಸುಷ್ಮಿತಾ, ಜಿಪಂ ಯೋಜನಾಧಿಕಾರಿ ಅಶೋಕ ತೋಟದ್‌, ಜಿಪಂ ಡಿಎಸ್‌ ಭೀಮಪ್ಪ ಲಾಳಿ, ತಾಪಂ ಇಒ ಉಮೇಶ, ನರೇಗಾ ಎಡಿ ವೀರಣ್ಣ ನಾಯ್ಕ, ತಾಪಂ ಎಡಿ ಹೇಮಾದ್ರಿ ನಾಯ್ಕ ಸೇರಿದಂತೆ ಗ್ರಾಪಂ ಸದಸ್ಯರು ಗ್ರಾಮಸ್ಥರು ಉಪಸ್ಥಿತರಿದ್ದರು.ಜನ ಸ್ಪಂದನಾ ಕಾರ್ಯಕ್ರಮದಲ್ಲಿ ಯಾವ ಸಮಸ್ಯೆಗೂ ಸ್ಥಳದಲ್ಲೇ ಪರಿಹಾರ ಸಿಗಲಿಲ್ಲ. ಸಭೆಗೆ ವಿವಿಧ ಇಲಾಖೆಗಳ ಅಧಿಕಾರಿಗಳು ಆಗಮಿಸಿದ್ದರೂ ಸಮಸ್ಯೆ ಕುರಿತು ಯಾವ ಅಧಿಕಾರಿಗಳನ್ನು ಜಿಪಂ ಸಿಇಒ ಪ್ರಶ್ನಿಸಲಿಲ್ಲ. ಒಟ್ಟಾರೆ ಜನ ಸ್ಪಂದನಾ ಕಾಟಾಚಾರದ ಕಾರ್ಯಕ್ರಮವಾಗಿತ್ತು.