ಬಿತ್ತಿದ ಬೆಳೆ ತುತ್ತಾಗುವ ಮುನ್ನ ಹೊತ್ತೊಯ್ತು ನೆರೆ!

| Published : Aug 19 2024, 12:49 AM IST

ಸಾರಾಂಶ

ಈ ಸಲ ಭಾರಿ ಮಳೆ ಪರಿಣಾಮ ಶಿವಮೊಗ್ಗ ಜಿಲ್ಲೆಯಲ್ಲಿ 5 ಸಾವಿರ ಹೆಕ್ಟೇರ್‌ಗೂ ಹೆಚ್ಚು ಪ್ರದೇಶದಲ್ಲಿ ಬೆಳೆದಿದ್ದ ಬೆಳೆ ಹಾನಿಯಾಗಿರುವುದು ಆತಂಕ ತಂದೊಡ್ಡಿದೆ.

ಗಣೇಶ್‌ ತಮ್ಮಡಿಹಳ್ಳಿ

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಕಳೆದ ಬಾರಿ ಮಳೆ ಕೊರತೆ ಕಾರಣ ವರ್ಷದ ಕೂಳು ಕಳೆದುಕೊಂಡು ಬರಗಾಲದ ಪರಿಸ್ಥಿತಿ ಎದುರಿಸಿದ್ದ ಮಲೆನಾಡಿನಲ್ಲಿ ಈ ಬಾರಿ ಸುರಿದ ಧಾರಕಾರ ಮಳೆಗೆ ಜಲಾಶಯಗಳು, ನದಿ, ಕರೆಗಳು ತುಂಬಿಕೊಂಡಿರುವುದು ಆಶಾಭಾವ ಮೂಡಿಸಿದೆ. ಆದರೆ, ಭಾರಿ ಮಳೆ ಪರಿಣಾಮ ಜಿಲ್ಲೆಯಲ್ಲಿ 5 ಸಾವಿರ ಹೆಕ್ಟೇರ್‌ಗೂ ಹೆಚ್ಚು ಪ್ರದೇಶದಲ್ಲಿ ಬೆಳೆದಿದ್ದ ಬೆಳೆ ಹಾನಿಯಾಗಿರುವುದು ಆತಂಕ ತಂದೊಡ್ಡಿದೆ.

ಕಳೆದ ಬಾರಿ ಮಳೆಯ ಕೊರತೆ ಕಾರಣ ಬರಿದಾಗಿದ್ದ ಜಲಾಶಯಗಳು ಈಗ ಮೈದುಂಬಿ ಹರಿಯುತ್ತಿವೆ. ಕೆರೆ-ಕಟ್ಟೆಗಳು ಕೋಡಿ ಬಿದ್ದಿವೆ. ಜಿಲ್ಲೆಯ ಬಹುತೇಕ ಕೆರೆ ಗಳಲ್ಲಿ ನೀರು ತುಂಬಿಕೊಂಡಿದೆ. ಅಲ್ಲದೇ ಇನ್ನೂ ಒಂದು ವಾರ ಕಾಲ ಜಿಲ್ಲೆಯಲ್ಲಿ ಮಳೆ ಸುರಿಯುವ ಮುನ್ಸೂಚನೆ ಇದೆ. ಒಂದು ವೇಳೆ ಮತ್ತೆ ಭಾರೀ ಮಳೆ ಸುರಿದರೂ ಸಾಕಷ್ಟು ಸಮಸ್ಯೆಯಾಗಲಿದೆ.

ಈ ಬಾರಿ ಮುಂಗಾರು ಹಂಗಾಮಿನಲ್ಲಿ ಸುರಿದ ಮಳೆಗೆ ಈಗಾಗಲೇ 5447 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆದಿದ್ದ ಬೆಳೆ ಭಾರಿ ಮಳೆ ಸುರಿದ ಪರಿಣಾಮ ಹಾನಿಯಾಗಿದೆ. ಕಳೆದ ಬಾರಿ ಮಳೆ ಕೈಕೊಟ್ಟು ಪರಿಣಾಮ ಬೆಳೆ ಬಾರದೆ ರೈತ ಸಂಕಷ್ಟಕ್ಕೆ ಒಳಗಾಗಿದ್ದ, ಈ ಬಾರಿ ಉತ್ತಮ ಮಳೆಯ ಕಾರಣ ಕೃಷಿಗೆ ಹೆಚ್ಚಿನ ಬಂಡವಾಳ ಹೂಡಿ ಬಿತ್ತನೆ ಮಾಡಿದ್ದ ಬೆಳೆ ನೆರೆಗೆ ಹಾನಿಯಾಗಿರುವುದರಿಂದ ರೈತರು ಮತ್ತೆ ಕಂಗಾಲಾಗಿದ್ದಾರೆ.

ಮೆಕ್ಕೆಜೋಳಕ್ಕೆ ಹೆಚ್ಚಿನ ಹಾನಿ:

ಜಿಲ್ಲೆಯಲ್ಲಿ ಅತಿಹೆಚ್ಚು 3676 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆದಿದ್ದ ಮೆಕ್ಕೆಜೋಳದ ಬೆಳೆ ನಷ್ಟವಾಗಿದೆ. ಇನ್ನೊಂದೆಡೆ 1770 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆದಿದ್ದ ಭತ್ತ ಬೆಳೆಗೆ ಹಾನಿಯಾಗಿದೆ.

ಭತ್ತ ನೀರು ಪಾಲು:

ಇನ್ನು ಜಿಲ್ಲೆಯ ಪ್ರಮುಖ ಬೆಳೆಯಾಗಿರುವ ಭತ್ತ ಬೆಳೆಗೂ ಹಾನಿಯಾಗಿದೆ. ಜಿಲ್ಲಾದ್ಯಂತ 1770 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆದಿದ್ದ ಭತ್ತ ಬೆಳೆ ಹಾಳಾಗಿದೆ. ಜಿಲ್ಲೆಯಲ್ಲಿ ಸಾಮಾನ್ಯವಾಗಿ ಆಗಸ್ಟ್‌ ಅಂತ್ಯದವರೆಗೂ ನಾಟಿ ಕಾರ್ಯ ನಡೆಯುವುದರಿಂದ ಇನ್ನೂ ಸಾವಿರಾರು ಹೆಕ್ಟೇರ್‌ ಪ್ರದೇಶದಲ್ಲಿ ಭತ್ತ ಬಿತ್ತನೆ ಕಾರ್ಯ ಭರದಿಂದ ಸಾಗಿದೆ. ಆದರೆ, ಮೊದಲೇ ಬಿತ್ತನೆ ಮಾಡಿದ್ದ ಭತ್ತ ಬೆಳೆ ಜೋರು ಮಳೆಗೆ ಹಾನಿಗೊಳಗಾಗಿದೆ.

ಬರಗಾಲದಿಂದ ಹೊರಬಂದು ಇನ್ನೇನು ಚೇತರಿಸಿಕೊಂಡೆವು ಎನ್ನುವ ಪರಿಸ್ಥಿತಿಯಲ್ಲಿ ಧುತ್ತನೆ ಕಾಕದೃಷ್ಟಿ ಬೀರಿರುವ ವರುಣ ಪ್ರತಿನಿತ್ಯ ಭೀತಿ ಹುಟ್ಟಿಸಿದ್ದಾನೆ. ಕಳೆದ ಒಂದು ತಿಂಗಳಲ್ಲಿ ಜಿಲ್ಲೆಯಲ್ಲಿ ಬಿಸಿಲು ಬಂದಿದ್ದೇ ಕಡಿಮೆ. ಮೋಡ ಮುಸುಕಿದ ವಾತಾವರಣ ಇಲ್ಲವೇ ಮಳೆ ಬೀಳುತ್ತಿದ್ದು, ರೈತರು ಗದ್ದೆ ಕಡೆ ಹೆಜ್ಜೆ ಇಡಲೂ ಆಗದ ಪರಿಸ್ಥಿತಿ ನಿರ್ಮಾಣವಾಗಿತ್ತು.

ಸದ್ಯಕ್ಕೆ ಜಿಲ್ಲೆಯಲ್ಲಿ ಇನ್ನೂ ಒಂದು ವಾರ ಮಳೆ ಸುರಿಯುವ ಮುನ್ಸೂಚನೆ ಇದೆ. ಆದರೆ, ಈಗಾಗಲೇ ಜಲಾಶಯಗಳು ಭರ್ತಿಯಾಗಿರುವುದು ರೈತರ ಪಾಲಿಗೆ ಆಶಾದಾಯಕವಾಗಿದ್ದರೂ ಜುಲೈನಲ್ಲೇ ಸುರಿದ ಮಳೆ ಆಗಸ್ಟ್‌ನಲ್ಲೂ ಸುರಿದರೆ ಇನ್ನಷ್ಟು ಬೆಳೆ ಹಾನಿಯಾಗುವ ಸಾಧ್ಯತೆ ಹೆಚ್ಚಿದೆ. ಮಳೆ ಬಿಡುವ ಕೊಟ್ಟರೆ ಮಾತ್ರ ಜಿಲ್ಲೆಯ ರೈತನಷ್ಟದಿಂದ ಪಾರಾಗಬಹುದು, ಇಲ್ಲವಾದಲ್ಲಿ ಅತಿವೃಷ್ಟಿಯ ಇನ್ನಷ್ಟು ಕರಾಳ ಅನುಭವ ಎದುರಿಸಬೇಕಾದೀತು!ತಾಲೂಕ ಬೆಳೆಹಾನಿ ಪ್ರಮಾಣ ಸೊರಬದಲ್ಲೇ ಹೆಚ್ಚು ಹಾನಿ!:

ಈವರೆಗೆ ಆಗಿರುವ 5447 ಹೆಕ್ಟೇರ್‌ ಬೆಳೆ ಹಾನಿಯಲ್ಲಿ ಸೊರಬ ತಾಲೂಕಿನಲ್ಲೇ ಹೆಚ್ಚು ಬೆಳೆ ಹಾನಿಯಾಗಿದೆ. ಭತ್ತ, ಮೆಕ್ಕೆಜೋಳ ಸೇರಿ 3048 ಹೆಕ್ಟೇರ್‌ನಷ್ಟು ಬೆಳೆ ಹಾನಿಯಾಗಿದೆ. ಇನ್ನು ಶಿಕಾರಿಪುರದಲ್ಲಿ 1350 ಹೆಕ್ಟೇರ್‌ ಮೆಕ್ಕೆಜೋಳ ಹಾನಿಯಾಗಿದ್ದರೆ, ಸಾಗರದಲ್ಲಿ 1036 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆದಿದ್ದ ಬೆಳೆ ಮಳೆಗೆ ಹಾನಿ ಯಾಗಿದೆ. ಹೊಸನಗರದಲ್ಲಿ 7 ಹೆಕ್ಟೇರ್‌, ತೀರ್ಥಹಳ್ಳಿಯಲ್ಲಿ 1 ಹೆಕ್ಟೇರ್‌ ಬೆಳೆ ಹಾನಿಯಾಗಿದ್ದು, ಶಿವಮೊಗ್ಗ, ಭದ್ರಾವತಿಯಲ್ಲಿ ಯಾವುದೇ ಹಾನಿಯಾಗಿಲ್ಲ ಎಂದು ಕೃಷಿ ಇಲಾಖೆ ವರದಿ ನೀಡಿದೆ. ವಾರ, 15 ದಿನಗಳವರೆಗೆ ಜಮೀನಲ್ಲಿ ನೀರು ನಿಂತಿದ್ದರಿಂದ ಹಲವಡೆ ಬೆಳೆಗಳು ನೀರಿನ ಪ್ರಮಾಣ ಹೆಚ್ಚಾಗಿ ಜಮೀನಲ್ಲೇ ಕೊಳೆತು ಹೋಗಿವೆ.