ಮುಖ್ಯಗುರುಗಳ ದುರ್ವರ್ತನೆಗೆ ವಿದ್ಯಾರ್ಥಿನಿಯರ ಕಿಡಿ

| Published : Dec 21 2024, 01:16 AM IST

ಮುಖ್ಯಗುರುಗಳ ದುರ್ವರ್ತನೆಗೆ ವಿದ್ಯಾರ್ಥಿನಿಯರ ಕಿಡಿ
Share this Article
  • FB
  • TW
  • Linkdin
  • Email

ಸಾರಾಂಶ

ಹೆಬ್ಬಾಳ ಮೊರಾರ್ಜಿ ದೇಸಾಯಿ ಬಾಲಕಿಯರ ವಸತಿ ಶಾಲೆಯ ಮುಖ್ಯೋಪಾಧ್ಯಾಯರ ವರ್ತನೆಗೆ ವಿದ್ಯಾರ್ಥಿನಿಯರು ಬೇಸತ್ತು ಶುಕ್ರವಾರ ಬೆಳಗ್ಗೆ ಉಪಾಹಾರ ಮತ್ತು ನೀರು ತ್ಯಜಿಸಿ ಶಾಲೆಯ ಗೇಟ್ ಮುಂದೆ ಪ್ರತಿಭಟಿಸಿದರು.

ಕನ್ನಡಪ್ರಭ ವಾರ್ತೆ ಲೋಕಾಪುರ

ಸಮೀಪದ ಹೆಬ್ಬಾಳ ಮೊರಾರ್ಜಿ ದೇಸಾಯಿ ಬಾಲಕಿಯರ ವಸತಿ ಶಾಲೆಯ ಮುಖ್ಯೋಪಾಧ್ಯಾಯರ ವರ್ತನೆಗೆ ವಿದ್ಯಾರ್ಥಿನಿಯರು ಬೇಸತ್ತು ಶುಕ್ರವಾರ ಬೆಳಗ್ಗೆ ಉಪಾಹಾರ ಮತ್ತು ನೀರು ತ್ಯಜಿಸಿ ಶಾಲೆಯ ಗೇಟ್ ಮುಂದೆ ಪ್ರತಿಭಟಿಸಿದರು.

ಶಾಲೆಯ ಮುಖ್ಯೋಪಾಧ್ಯಾಯ ವಿಜಯಕುಮಾರ ಬಿರಾದಾರ ಅವರು ಹೆಣ್ಣು ಮಕ್ಕಳ ಬಗ್ಗೆ ಅವಾಚ್ಯ ಶಬ್ಧಗಳಿಂದ ನಿಂದಿಸುತ್ತಾರೆ. ಬೈದು ಹೊಡೆಯುತ್ತಾರೆ. ಊಟ ಕಡಿಮೆ ತಿನ್ನಿ, ಇದು ಹಾಸ್ಟೆಲ್ ನಿಮ್ಮ ಅಪ್ಪನ ಮನೆ ಎಂದು ಹೀಯಾಳಿಸಿ ಮಾತನಾಡುತ್ತಾರೆ. ನಮ್ಮ ಪಾಲಕರು ಬಂದರೆ ಅವರನ್ನು ಹೀಯಾಳಿಸಿ ಮಾತನಾಡಿ ಕಳುಹಿಸುತ್ತಾರೆ. ನನ್ನ ಬಳಿ ಇಂಟರ್ನಲ್ ಅಂಕಗಳಿವೆ ಎಂದು ಹೆದರಿಕೆ, ಬೆದರಿಕೆ ಹಾಕುತ್ತಾರೆ ಎಂದು ವಿದ್ಯಾರ್ಥಿನಿಯರು ತಮ್ಮ ಅಳಲು ತೋಡಿಕೊಂಡರು.ವಿದ್ಯಾರ್ಥಿನಿಯರಿಗೆ ಮುಖ್ಯಗುರುಗಳು ಮಾನಿಸಿಕವಾಗಿ ಕಿರುಕುಳ ನೀಡುತ್ತಿದ್ದಾರೆ. ಊಟಕ್ಕೆ ಸರದಿ ಸಾಲಿನಲ್ಲಿ ನಿಂತರೆ ಭಿಕ್ಷುಕರ ಹಾಗೆ ನಿಂತಿದ್ದೀರಿ ಎಂದು ಬೈಯ್ಯುತ್ತಾರೆ. ಹಾಸ್ಟೆಲ್ ಸೌಲವತ್ತುಗಳನ್ನು ಕೇಳಿದರೆ, ನಿಮಗೆ ಭಿಕ್ಷೆ ನೀಡಲು ತಂದಿಲ್ಲಾ ಎಂದು ಹೀಯಾಳಿಸುತ್ತಾರೆ ಎಂದು ವಿದ್ಯಾರ್ಥಿನಿಯರು ಆರೋಪಿಸಿದರು. ಶಾಲಾ ಗೇಟ್ ಮುಂದೆ ವಿದ್ಯಾರ್ಥಿನಿಯರು ಬೇಕೇ ಬೇಕು ನ್ಯಾಯ ಬೇಕು ಎಂದು ಘೋಷಣೆ ಕೂಗುತ್ತಾ, ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಅವರು ಬರುವವರೆಗೂ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಪಟ್ಟು ಹಿಡಿದರು.

ತಾಲೂಕು ಹಿಂದುಳಿದ ಅಧಿಕಾರಿಗಳು, ಪಂಚಾಯಿತಿ ಅಧಿಕಾರಿಗಳು, ಕಂದಾಯ ಅಧಿಕಾರಿಗಳು, ಗ್ರಾಮದ ಮುಖಂಡರು, ಗ್ರಾಮ ಪಂಚಾಯಿತಿ ಸದಸ್ಯರ ಮುಂದೆ ವಿದ್ಯಾರ್ಥಿನಿಯರು ತಮ್ಮ ನೋವು ವ್ಯಕ್ತಪಡಿಸಿದರು. ಸ್ಥಳಕ್ಕೆ ಬಾಗಲಕೋಟೆ ಜಿಲ್ಲಾ ಹಿಂದುಳಿದ ಕಲ್ಯಾಣಾಧಿಕಾರಿ ಎಂ.ಎಂ. ತುಮ್ಮರಮಟ್ಟಿ ಆಗಮಿಸಿ ವಿದ್ಯಾರ್ಥಿನಿಯರೊಂದಿಗೆ ಮಾತನಾಡಿ ಅವರ ಮನವೊಲಿಸಿದ ನಂತರ ಪ್ರತಿಭಟನೆ ಹಿಂಪಡೆದುಕೊಂಡರು.

ತಾಲೂಕಿನಲ್ಲಿ ಹೆಬ್ಬಾಳ ಮೊರಾರ್ಜಿ ದೇಸಾಯಿ ಬಾಲಕಿಯರ ವಸತಿ ಶಾಲೆ ಹೆಸರು ಗಳಿಸಿತ್ತು. ಈಗ ಮುಖ್ಯೋಪಾಧ್ಯಾಯ ವಿಜಯಕುಮಾರ ಬಿರಾದಾರ ಉದ್ದೇಶಪೂರ್ವಕವಾಗಿ ಶಾಲೆಯ ಹೆಸರು ಕೆಡಿಸುವ ಕೆಲಸ ಮಾಡುತ್ತಿದ್ದಾರೆ. ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಇವರನ್ನು ಮೇಲಾಧಿಕಾರಿಗಳು ಬೇರೆಡೆಗೆ ವರ್ಗಾಯಿಸಬೇಕು. ಈ ಶಾಲೆಗೆ ಬಾಲಕಿಯರ ಕಷ್ಟ ದುಃಖ ಕೇಳಲು ಮಹಿಳೆ ಮುಖ್ಯಗುರು ಹಾಗೂ ಮಹಿಳಾ ವಾರ್ಡನ್‌ ನೇಮಿಸಬೇಕು.

ಗಡ್ಡೆಪ್ಪ, ಹಣಮಂತ, ಮಾರುತಿ, ಕರಬಸು, ಗ್ರಾಮಸ್ಥರು

ಮುಖ್ಯೋಪಾಧ್ಯಾಯರು ವಿದ್ಯಾರ್ಥಿನಿಯರಿಗೆ ಮಾತನಾಡಿದ್ದು ತಪ್ಪು ಒಪ್ಪಿಕೊಂಡಿದ್ದಾರೆ. ಅವರನ್ನು ಬೇರೆಡೆಗೆ ವರ್ಗಾಯಿಸಲು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘಕ್ಕೆ ಪತ್ರವನ್ನು ಬರೆಯುತ್ತೇನೆ, ಸ್ಟಾಫ್‌ ನರ್ಸರನ್ನು ೧೫ ದಿನದೊಳಗೆ ವರ್ಗಾಯಿಸುತ್ತೇವೆ. ಉಳಿದ ಶಿಕ್ಷಕರಿಗೆ ನೋಟಿಸ್ ನೀಡುತ್ತೇನೆ. ಸಂಪೂರ್ಣ ವರದಿಯನ್ನು ಜಿಲ್ಲಾಧಿಕಾರಿಗಳಿಗೆ ತಿಳಿಸಲಾಗುವುದು.

ಎಂ.ಎಂ.ತುಮ್ಮರಮಟ್ಟಿ, ಬಾಗಲಕೋಟ ಜಿಲ್ಲಾ ಹಿಂದುಳಿದ ಕಲ್ಯಾಣಾಧಿಕಾರಿ