ಸಾರಾಂಶ
ದಾವಣಗೆರೆ ಜಿಲ್ಲಾ ದಸರಾ ಕ್ರೀಡಾಕೂಟ-2024ಕ್ಕೆ ಜಿಲ್ಲೆಯ ವಿವಿಧ ತಾಲೂಕುಗಳ ಸಾವಿರಾರು ಮಕ್ಕಳು ಪ್ರಯಾಣ ಭತ್ಯೆ, ತುಟ್ಟಿಭತ್ಯೆ ಇಲ್ಲದೇ, ಕ್ರೀಡಾಕೂಟಕ್ಕೆ ನಿಯೋಜನೆಗೊಂಡಿದ್ದ ದೈಹಿಕ ಶಿಕ್ಷಕರಿಗೆ ಗೌರವಧನಕ್ಕೆ ಹಣ ಇಲ್ಲವೆಂದು, ಹಿರಿಯ ಕ್ರೀಡಾಪಟುವೊಬ್ಬರು ಕೈಗಡ ಕೊಟ್ಟ ಘಟನೆಗೆ ಕ್ರೀಡಾಕೂಟ ಸಾಕ್ಷಿಯಾಗಿದೆ!
ದಾವಣಗೆರೆ : ದಾವಣಗೆರೆ ಜಿಲ್ಲಾ ದಸರಾ ಕ್ರೀಡಾಕೂಟ-2024ಕ್ಕೆ ಜಿಲ್ಲೆಯ ವಿವಿಧ ತಾಲೂಕುಗಳ ಸಾವಿರಾರು ಮಕ್ಕಳು ಪ್ರಯಾಣ ಭತ್ಯೆ, ತುಟ್ಟಿಭತ್ಯೆ ಇಲ್ಲದೇ, ಕ್ರೀಡಾಕೂಟಕ್ಕೆ ನಿಯೋಜನೆಗೊಂಡಿದ್ದ ದೈಹಿಕ ಶಿಕ್ಷಕರಿಗೆ ಗೌರವಧನಕ್ಕೆ ಹಣ ಇಲ್ಲವೆಂದು, ಹಿರಿಯ ಕ್ರೀಡಾಪಟುವೊಬ್ಬರು ಕೈಗಡ ಕೊಟ್ಟ ಅಪರೂಪದ ಘಟನೆಗೆ ಜಿಲ್ಲಾ ಕ್ರೀಡಾಂಗಣದ ವಾರ್ಷಿಕ ಕ್ರೀಡಾಕೂಟ ಸಾಕ್ಷಿಯಾಗಿದೆ!
ಜಿಲ್ಲಾಮಟ್ಟದ ದಸರಾ ಕ್ರೀಡಾಕೂಟಕ್ಕೆ ಜಿಲ್ಲೆಯ ಎಲ್ಲ ತಾಲೂಕುಗಳಿಂದ ಬಂದಿದ್ದ ಸಾವಿರಾರು ಕ್ರೀಡಾಪಟುಗಳು ಎರಡು ದಿನಗಳ ಕ್ರೀಡಾಕೂಟದಲ್ಲಿ ಖುಷಿಯಿಂದ ಭಾಗವಹಿಸಿ, ಬೇಸರದಿಂದ ಮರಳಬೇಕಾಯಿತು.
ಕ್ರೀಡಾಕೂಟಕ್ಕಾಗಿ ಇಲಾಖೆಯಿಂದ ವಿವಿಧ ಶಾಲೆಗಳ ಸುಮಾರು 500 ಶಿಕ್ಷಕರನ್ನು ನಿಯೋಜನೆ ಮಾಡಲಾಗಿದೆ. ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಕ್ರೀಡಾಪಟುಗಳಿಗೆ ಟಿಎ, ಡಿಎ ನೀಡಲು ಹಣವಿಲ್ಲವೆಂದು, ಆನ್ ಲೈನ್ ಮೂಲಕ ಖಾತೆಗೆ ಹಾಕುವುದಾಗಿ, ಶಿಕ್ಷಕರಿಗೆ ಕೊಡಲು ಗೌರವಧನಕ್ಕೆ ಅನುದಾನ ಇಲ್ಲವೆಂದು ಶುಕ್ರವಾರ ನೀಡುವುದಾಗಿ ಇಲಾಖೆ ಮನವೊಲಿಸಿದೆ.
ದಾವಣಗೆರೆ, ಹರಿಹರ, ಚನ್ನಗಿರಿ, ಜಗಳೂರು, ಹೊನ್ನಾಳಿ, ನ್ಯಾಮತಿ ಹೀಗೆ ಆರೂ ತಾಲೂಕುಗಳ ಸಾವಿರಾರು ಕ್ರೀಡಾಪಟುಗಳು ಎರಡು ದಿನಗಳ ದಸರಾ ಕ್ರೀಡಾಕೂಟಕ್ಕೆ ಬಂದಿದ್ದರು. ಕ್ರೀಡಾಕೂಟಕ್ಕೆ ಸ್ಕೋರರ್ ಆಗಿ, ತೀರ್ಪುಗಾರರಾಗಿ, ರೆಫ್ರಿಗಳಾಗಿ ಕಾರ್ಯನಿರ್ವಹಿಸಲು 500 ಶಿಕ್ಷಕರನ್ನು ಸಹ ಇಲಾಖೆ ನಿಯೋಜನೆ ಮಾಡಿದೆ. ಗುರುವಾರ ಮತ್ತು ಶುಕ್ರವಾರ ಎರಡು ದಿನಗಳ ಕ್ರೀಡೆ ಇದಾಗಿದೆ. ಮೊದಲ ದಿನ ನೀಡಬೇಕಾಗಿದ್ದ ಭತ್ಯೆಗೆ ಹಣ ಹೊಂದಿಸಲು ಇಲಾಖೆ ಪರದಾಡಿದ್ದು ಮಾತ್ರ ಅಧಿಕಾರಿಗಳ ಮುಂದಾಲೋಚನೆಯ ಕೊರತೆ ತೋರಿಸುವಂತಿತ್ತು.
ಭತ್ಯೆ ಹಣ ಹೊಂದಿಸಲು ಪರದಾಟ:
ಸಾಮಾನ್ಯವಾಗಿ ಫಲಿತಾಂಶ ನೀಡುತ್ತಿದ್ದಂತೆ, ಸಂಜೆ 5 ಗಂಟೆಯೊಳಗೆ ಕ್ರೀಡಾಪಟುಗಳಿಗೆ ಟಿಎ, ಡಿಎ ಹಾಗೂ ಶಿಕ್ಷಕರಿಗೆ ಗೌರವಧನ ನೀಡಬೇಕಾದ್ದು ಇಲಾಖೆ ಜವಾಬ್ದಾರಿ. ಆದರೆ, ಇಲಾಖೆ ಕಚೇರಿ ಬಳಿ ಸ್ಪರ್ಧಿ ಮಕ್ಕಳು, ಶಿಕ್ಷಕರು ಭತ್ಯೆಗಾಗಿ ಜಾತ್ರೆ ರೀತಿ ಸೇರಬೇಕಾಯಿತು. ಆದರೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಸೇವೆ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ ದಸರಾ ಕ್ರೀಡಾಕೂಟ ನಡೆಯುತ್ತಿದೆ. ಅ.1ರಂದು ವಿಭಾಗಮಟ್ಟದ ದಸರಾ ಕ್ರೀಡಾಕೂಟ-2024 ನಡೆಯಲಿದೆ. ಖೋ ಖೋ, ಕಬಡ್ಡಿ, ಎತ್ತರ ಜಿಗಿತ, ಉದ್ದ ಜಿಗಿತ, ಬ್ಯಾಡ್ಮಿಂಟನ್, ಗುಂಡು ಎಸೆತ, ಡಿಸ್ಕಸ್ ಎಸೆತ, ಜಾವೆಲಿನ್, 100 ಮೀಟರ್ ಓಟ, 200 ಮೀಟರ್ ಓಟ, 800 ಮೀಟರ್, ವಾಲಿಬಾಲ್, ಬಾಸ್ಕೆಟ್ ಬಾಲ್, ಯೋ ಗಾಸನ, ಟೇಬಲ್ ಟೆನ್ನಿಸ್ ಹೀಗೆ ನಾನಾ ಕ್ರೀಡೆಗಳಿಗೆ ಸ್ಪರ್ಧಿಗಳು, ಶಿಕ್ಷಕರು ಸಾಕ್ಷಿಯಾಗಿದ್ದರು. ಕ್ರೀಡಾಕೂಟವೇನೋ ಯಶಸ್ವಿಯಾಯಿತು. ಆದರೆ, ನಂತರ ಸ್ಪರ್ಧಿಗಳು, ಶಿಕ್ಷಕರ ಪಾಡು ಮಾತ್ರ ಯಾರಿಗೂ ಬೇಡ ಎನ್ನುವಂತಾಗಿದೆತ್ತು.
ಶಾಪಗ್ರಸ್ಥ ಇಲಾಖೆ, ಗರಬಡಿದ ಕ್ರೀಡಾಂಗಣ ಇಡೀ ಜಿಲ್ಲಾ ಕ್ರೀಡಾಂಗಣ ಅವ್ಯವಸ್ಥೆ ಆಗರವಾಗಿದೆ. ಈ ಮೊದಲು ಕ್ರೀಡೆಯೆಂದರೆ ದಾವಣಗೆರೆ ಎಂಬಂತಿದ್ದ ಜಿಲ್ಲಾ ಕ್ರೀಡಾಂಗಣ, ಕ್ರೀಡಾ ಇಲಾಖೆ ಈಗ ಅಧೋಗತಿಗೆ ತಲುಪಿದೆ. ಸಮಸ್ಯೆಗಳ ಆಗರವಾದ ಇಲಾಖೆಯಿಂದಾಗಿ ಇಡೀ ಸ್ಟೇಡಿಯಂ ಬಗ್ಗೆ ಕ್ರೀಡಾಪಟುಗಳು ಮರುಗುವಂತಾಗಿದೆ. ಸಂಜೆಯಿಂದ ಮಾರನೇ ಸೂರ್ಯ ಮೂಡುವವರೆಗೂ ಬೆಳಗುತ್ತಿದ್ದ ಇಲ್ಲಿನ ವಿದ್ಯುದೀಪಗಳು ಹಾಳಾಗಿ ತಿಂಗಳುಗಳೇ ಕಳೆದಿವೆ.
ಕುಡಿಯುವ ನೀರು, ಶೌಚಾಲಯ, ಮೂತ್ರಾಲಯ ಇಲ್ಲವೇ ಇಲ್ಲ. ಇನ್ನು ಸಾವಿರಾರು ಕ್ರೀಡಾಪಟುಗಳ ಅರ್ಧದಷ್ಟು ವಿದ್ಯಾರ್ಥಿನಿಯರು, ಯುವತಿಯರು, ಶಿಕ್ಷಕರಲ್ಲಿ ನೂರಾರು ಶಿಕ್ಷಕಿಯರೂ ಹಾಜರಿದ್ದರು. ಆದರೆ, ಮಹಿಳಾ ಸ್ಪರ್ಧಿಗಳಿಗೆ ಬಟ್ಟೆ ಬದಲಿಸಲು ಸಹ ವ್ಯವಸ್ಥೆ ಇರಲಿಲ್ಲ. ಮರಗಳು, ಸುತ್ತಲು ಯಾರಾದರೂ ಬಟ್ಟೆ ಅಡ್ಡ ಹಿಡಿದರೆ ಉಳಿದವರು ಬಟ್ಟೆ ಬದಲಿಸಬೇಕಾದ ಸ್ಥಿತಿ ಇತ್ತು. ಶೌಚಾಲಯ ಇಲ್ಲದೇ ಎರಡೂ ಮಹಿಳಾ ಕ್ರೀಡಾಪಟುಗಳು ಪರದಾಡಿದ್ದು ಸುಳ್ಳಲ್ಲ. ಆದರೆ, ಇದನ್ನೆಲ್ಲಾ ಇಲಾಖೆ ಅಧಿಕಾರಿ ಅಲ್ಲಗೆಳೆಯುತ್ತಾರೆ.
ವಿಭಾಗಮಟ್ಟದ ಕ್ರೀಡಾಕೂಟ ಗತಿ? ಕಳೆದ ವರ್ಷವೂ ಸ್ಪರ್ಧಿಗಳಿಗೆ ಟಿಎ-ಡಿಎ, ಶಿಕ್ಷಕರಿಗೆ ಗೌರವಧನ ನೀಡುವಲ್ಲಿ ಇಲಾಖೆ ಅನುದಾನ ಇಲ್ಲ ಎಂದು ಕೈಚೆಲ್ಲಿತ್ತು. ಈಗಲೂ ಅದೇ ಮುಂದುವರಿದಿದೆ. ಯಾವುದೇ ಸ್ಪರ್ಧೆಯ ಅಂತಿಮ ಫಲಿತಾಂಶ ಪ್ರಕಟಗೊಂಡ ತಕ್ಷಣ ತೀರ್ಪುಗಾರರಾದ ಶಿಕ್ಷಕರಿಗೆ ಗೌರವಧನ ನೀಡಬೇಕು. ಆದರೆ, ಇಲಾಖೆ ಇಲ್ಲಿ ವಿಮುಖವಾಗಿದೆ. ಸ್ಪರ್ಧಿಗಳಿಗೆ ಟಿಎ, ಡಿಎ ಕೊಡಲಿಲ್ಲ. ಈಗ ಸೋಮವಾರದಿಂದ ವಿಭಾಗಮಟ್ಟದ ದಸರಾ ಕ್ರೀಡಾಕೂಟ ವಿವಿಧ ಊರುಗಳಲ್ಲಿ ನಡೆಯಲಿದೆ. ಅಲ್ಲಿ ಪಾಲ್ಗೊಳ್ಳುವ ದಾವಣಗೆರೆ ಜಿಲ್ಲಾ ತಂಡಕ್ಕೆ ಸಮವಸ್ತ್ರ, ಟ್ರ್ಯಾಕ್ ಸೂಟ್, ಟೀ ಶರ್ಟ್, ಮುಖ್ಯವಾಗಿ ಗುರುತಿನ ಪತ್ರ ನೀಡಬೇಕು. ಅದನ್ನೂ ಸಹ ಇಲಾಖೆ ಮಾಡಲು ಆಸಕ್ತಿ ತೋರಿದಂತಿಲ್ಲ ಎಂಬ ಮಾತುಕೇಳಿ ಬರುತ್ತಿವೆ.
ಇಲಾಖೆಗೆ ದಸರಾ ಕ್ರೀಡಾಕೂಟಕ್ಕೆ ಅನುದಾನ ಇಲ್ಲವೆಂದಿದ್ದರೆ ಜಿಲ್ಲಾಧಿಕಾರಿ, ಜಿಪಂ ಸಿಇಒ ಗಮನಕ್ಕೆ ತರಬೇಕಿತ್ತು. ದಸರಾ ಕ್ರೀಡಾಕೂಟಕ್ಕೆ ಬೇರೆ ಅನುದಾನ ಬಳಸಲು ಡಿಸಿ, ಸಿಇಒಗೆ ಅಧಿಕಾರ ಇದೆ. ಇಲ್ಲವೇ, ಏನಾದರೂ ಮಾಡಿ, ಹಣದ ವ್ಯವಸ್ಥೆ ಮಾಡುತ್ತಿದ್ದರು. ಆದರೆ, ಅದ್ಯಾವುದನ್ನೂ ಕ್ರೀಡಾ ಇಲಾಖೆ ಅಧಿಕಾರಿಗಳು ಮಾಡಲಿಲ್ಲ.
ಕ್ರೀಡಾಪಟುಗಳ ಸಂಘದ ದಿನೇಶ ಶೆಟ್ಟಿ ಸಹಾಯಹಸ್ತ ದೂರದ ಹಳ್ಳಿ, ತಾಲೂಕಿನಿಂದ ಬಂದ ಕ್ರೀಡಾಪಟುಗಳ ಪರಿಸ್ಥಿತಿ ಗಮನಿಸಿದವರು ಜಿಲ್ಲಾ ಕ್ರೀಡಾಪಟುಗಳ ಸಂಘದ ಅಧ್ಯಕ್ಷ ಹಾಗೂ ದೂಡಾ ಅಧ್ಯಕ್ಷ ದಿನೇಶ ಕೆ. ಶೆಟ್ಟಿ ಗಮನಕ್ಕೆ ವಿಷಯ ತಂದಿದ್ದಾರೆ. ಮೊದಲೇ ಕ್ರೀಡಾ ಇಲಾಖೆ ಬಗ್ಗೆ ರೋಸಿರುವ ದಿನೇಶ ಶೆಟ್ಟಿ ಅಧಿಕಾರಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ.
ಹಳ್ಳಿ, ತಾಲೂಕಿನಿಂದ ಬಂದ ಮಕ್ಕಳು ಸುರಕ್ಷಿತವಾಗಿ ವಾಪಸಾಗಲು ಅನುಕೂಲ ಆಗುವಂತೆ ತಕ್ಷಣವೇ ಸುಮಾರು ₹1.5 ಲಕ್ಷವನ್ನು ತಮ್ಮ ಮನೆಯಿಂದ ಜಿಲ್ಲಾ ಚೆಸ್ ಸಂಸ್ಥೆಯ ಕಾರ್ಯದರ್ಶಿ ಯುವರಾಜ ಕೈಯಲ್ಲಿ ಕೊಟ್ಟು ಕಳಿಸಿದ್ದಾರೆ. ಆನಂತರವಷ್ಟೇ ಮಕ್ಕಳಿಗೆ ಟಿಎ, ಡಿಎ ಕೊಟ್ಟು, ಸುರಕ್ಷಿತವಾಗಿ ಊರು ತಲುಪಲು ಕಾರಣವಾಗಿದ್ದಾರೆ. ದಿನೇಶ ಶೆಟ್ಟಿ ಕಾಳಜಿಗೆ ಕ್ರೀಡಾಪಟುಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕ್ರೀಡಾಪಟುಗಳಿಗೆ ಟಿಎ, ಡಿಎ, ಶಿಕ್ಷಕರಿಗೆ ಭತ್ಯೆಯನ್ನು ಆನ್ ಲೈನ್ ಮೂಲಕ ನೀಡಬೇಕಾಗಿದೆ. ಹಾಗಾಗಿ, ಒಂದಿಷ್ಟು ತಾಂತ್ರಿಕ ಸಮಸ್ಯೆಯಾಗಿದೆ. ಶುಕ್ರವಾರ ಸ್ಪರ್ಧಿಗಳಿಗೆ ಟಿಎ, ಡಿಎ, ಶಿಕ್ಷಕರಿಗೆ ಗೌರವಧನ ಸ್ಥಳದಲ್ಲೇ ನೀಡಲಾಗುವುದು. ಕ್ರೀಡಾ ಇಲಾಖೆ ಕಚೇರಿಯಲ್ಲೇ ಹೆಣ್ಣುಮಕ್ಕಳಿಗೆ ಶೌಚಾಲಯ, ಬಟ್ಟೆ ಬದಲಿಸಲು ವ್ಯವಸ್ಥೆ ಇದೆ. ಹೊಸದಾಗಿ ಕಟ್ಟಡವನ್ನು ಇನ್ನು 6 ತಿಂಗಳಲ್ಲೇ ನಿರ್ಮಿಸಲಾಗುವುದು. ಸ್ಟೇಡಿಯಂನಲ್ಲಿ ವಿದ್ಯುದೀಪ ವ್ಯವಸ್ಥೆ ದುರಸ್ತಿಯಾಗಬೇಕಿದೆ. ಹೊಸದಾಗಿ ವೈರಿಂಗ್ ಮಾಡಿಸುವ ಕೆಲಸ ನಡೆದಿದೆ. 3 ದಿನದಲ್ಲೇ ಕೆಲಸ ಆಗಲಿದೆ
- ಜಯಲಕ್ಷ್ಮೀ ಬಾಯಿ, ಯುವಜನ ಸೇವೆ-ಕ್ರೀಡಾಧಿಕಾರಿ
ದಸರಾ ಸೇರಿದಂತೆ ವಾರ್ಷಿಕ ಕ್ರೀಡಾಕೂಟಕ್ಕೆ ಇಲಾಖೆ ಕ್ರಿಯಾ ಯೋಜನೆ ತಯಾರಿಸಿದೆ. ವರ್ಷಕ್ಕೆ 8-10 ಕ್ರೀಡಾಕೂಟ ಇರುತ್ತವೆ. ಅದನ್ನೆಲ್ಲಾ ಕ್ರೀಡಾ ಇಲಾಖೆ ನೋಡಿಕೊಳ್ಳಬೇಕು. ಲಿಂಕ್ ಡಾಕ್ಯುಮೆಂಟೇಷನ್ ಏನು ಮಾಡಿದ್ದಾರೆಂದು ಪರಿಶೀಲಿಸುತ್ತೇವೆ. ಕ್ರೀಡಾಪಟುಗಳು, ಶಿಕ್ಷಕರಿಗೆ ಭತ್ಯೆ ನೀಡುವ ವಿಚಾರದಲ್ಲಿ ಯಾವುದೇ ಗೊಂದಲ ಆಗಬಾರದು. ಈ ಬಗ್ಗೆ ಕ್ರೀಡಾ ಇಲಾಖೆಗೆ ಕಾರಣ ಕೇಳುತ್ತೇವೆ - ಸುರೇಶ ಬಿ. ಇಟ್ನಾಳ್, ಸಿಇಒ, ಜಿಪಂ