ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಸತ್ಯವನ್ನು ಎದುರಿಸಲಾಗದೆ ಬೆನ್ನು ತೋರಿಸಿ ಓಡುವುದು ಬಿಜೆಪಿಯ ಸಂಸ್ಕೃತಿಯಲ್ಲ. ಸಂಸತ್ತಿನ ಪಾವಿತ್ರ್ಯತೆಯನ್ನು ಗಾಳಿಗೆ ತೂರಿ, ಹಸಿ ಸುಳ್ಳುಗಳನ್ನೇ ಸತ್ಯವೆಂದು ನಂಬಿಸಲು ಹೊರಟಿರುವುದು ಕಾಂಗ್ರೆಸ್ ಪಕ್ಷದ ಚಾಳಿ. ಪ್ರಧಾನಿಯವರನ್ನು ಟೀಕಿಸುವ ಭರದಲ್ಲಿ ಮುಖ್ಯಮಂತ್ರಿಗಳು ಪ್ರಜಾಪ್ರಭುತ್ವದ ಪಾಠ ಮಾಡುತ್ತಿರುವುದು ಈ ಶತಮಾನದ ದೊಡ್ಡ ಹಾಸ್ಯವಾಗಿದ್ದು, ಪ್ರಧಾನಿ ನರೇಂದ್ರ ಮೋದಿಯವರನ್ನು ಪಲಾಯನವಾದಿ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕೆಗೆ ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್ ತಿರುಗೇಟು ನೀಡಿದ್ದಾರೆ.

ಇಂದು ಸಂಸತ್ತಿನ ಮರ್ಯಾದೆಯ ಬಗ್ಗೆ ಭಾಷಣ ಮಾಡುವ ಕಾಂಗ್ರೆಸ್ ಪಕ್ಷಕ್ಕೆ ತುರ್ತು ಪರಿಸ್ಥಿತಿಯ ಕರಾಳ ಇತಿಹಾಸ ಮರೆತುಹೋಗಿದೆಯೇ? ಅಂದು ಅಧಿಕಾರಕ್ಕಾಗಿ ಇಡೀ ಸಂಸತ್ತನ್ನು ಮೌನಗೊಳಿಸಿ, ಪ್ರಜಾಪ್ರಭುತ್ವದ ಕಂಠ ಹತ್ತಿಕ್ಕಿದ ಇತಿಹಾಸ ನಿಮ್ಮದಾಗಿದೆ. ನಿಮ್ಮ ನಾಯಕ ರಾಹುಲ್ ಗಾಂಧಿ ಅವರು ಸಂಸತ್ತಿನಲ್ಲಿ ಮಾತ್ರವಲ್ಲದೆ, ವಿದೇಶಿ ನೆಲದಲ್ಲಿ ಭಾರತದ ನ್ಯಾಯಾಂಗ ಮತ್ತು ಸಾಂವಿಧಾನಿಕ ಸಂಸ್ಥೆಗಳ ವಿರುದ್ಧ ವಿಷಕಾರುತ್ತಾ ದೇಶದ ಘನತೆಯನ್ನು ಹರಾಜು ಹಾಕುತ್ತಿರುವುದು ನಿಮ್ಮ ಕಣ್ಣಿಗೆ ಕಾಣಿಸುತ್ತಿಲ್ಲವೇ? ಎಂದು ಅವರು ಪ್ರಶ್ನಿಸಿದ್ದಾರೆ.

ಭಾರತ-ಅಮೆರಿಕ ವ್ಯಾಪಾರ ಒಪ್ಪಂದವನ್ನು ಶರಣಾಗತಿ ಎಂದು ಕರೆದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹೇಳಿಕೆ ಅವರ ಹತಾಶೆಯ ಪರಮಾವಧಿ. ಮೋದಿಜಿಯವರು ದೇಶದ ಹಿತಾಸಕ್ತಿಯನ್ನು ಬಲಿಗೊಟ್ಟು ಯಾವುದೇ ಒಪ್ಪಂದ ಮಾಡಿಕೊಳ್ಳುವುದಿಲ್ಲ. ಬದಲಾಗಿ ಈ ಒಪ್ಪಂದವು ಭಾರತದ ಆರ್ಥಿಕತೆಯನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವ ದೂರದೃಷ್ಟಿ ಹೊಂದಿದೆ. ಅಸಮತೋಲಿತ ಸುಂಕ ಮತ್ತು ರೈತರ ಸಂಕಷ್ಟದ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುವ ಮೂಲಕ ಸಿದ್ದರಾಮಯ್ಯನವರು ಜನರ ಹಾದಿ ತಪ್ಪಿಸುತ್ತಿದ್ದಾರೆ. ವಾಸ್ತವದಲ್ಲಿ ಮುಡಾ ಮತ್ತು ವಾಲ್ಮೀಕಿ ನಿಗಮದಂತಹ ಬೃಹತ್ ಹಗರಣಗಳಿಂದ ಜನರ ಗಮನ ಬೇರೆಡೆ ಸೆಳೆಯಲು ಅವರು ಇಂತಹ ಹಗುರ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಅರುಣ್ ಟೀಕಿಸಿದ್ದಾರೆ.

ರಾಹುಲ್ ಗಾಂಧಿ ಅವರ ಭಾಷಣಕ್ಕೆ ತಡೆ ನೀಡಲಾಗಿದೆ ಎನ್ನುವುದು ಹಸಿ ಸುಳ್ಳು. ವಾಸ್ತವವಾಗಿ ಇದು ಗೌರವಾನ್ವಿತ ಸ್ಪೀಕರ್ ಅವರ ಅಧಿಕಾರ ಮತ್ತು ಸಂಸತ್ತಿನ ನಿಯಮಗಳಿಗೆ ಸಂಬಂಧಿಸಿದ ವಿಷಯ. ಸಂಸದೀಯ ನಿಯಮಗಳನ್ನು ಗಾಳಿಗೆ ತೂರಿ ಸದನವನ್ನು ಹಾದಿ ತಪ್ಪಿಸಲು ಯತ್ನಿಸಿದಾಗ ಸಂವಿಧಾನಾತ್ಮಕ ಚೌಕಟ್ಟಿನಲ್ಲಿ ನೀಡಿದ ಎಚ್ಚರಿಕೆಯನ್ನು ಧ್ವನಿ ಹತ್ತಿಕ್ಕುವಿಕೆ ಎನ್ನುವುದು ನಿಮ್ಮ ಜಾಣ ಕುರುಡುತನವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ರಾಜ್ಯದಲ್ಲಿ ಹಗರಣಗಳ ಸರಮಾಲೆಯೇ ನಡೆಯುತ್ತಿದ್ದರೂ ಜನರ ಪ್ರಶ್ನೆಗಳಿಗೆ ಉತ್ತರಿಸಲಾಗದೆ ವಿಧಾನಸಭೆ ಹಾಗೂ ವಿಧಾನಪರಿಷತ್ತಿನ ಚರ್ಚೆಯಿಂದ ಜಾರಿಕೊಳ್ಳುವ ನೀವು ಸಂಸತ್ತಿನ ಬಗ್ಗೆ ಮಾತನಾಡುವುದು ಶೋಭಿಸುವುದಿಲ್ಲ. ಪ್ರಧಾನಿ ಮೋದಿಯವರು ದೇಶದ 140 ಕೋಟಿ ಜನರ ಧ್ವನಿ ಮತ್ತು ವಿಶ್ವಮಾನ್ಯ ನಾಯಕ. ಅವರ ಬಗ್ಗೆ ಮಾತನಾಡಲು ನಿಮ್ಮ ಕಾಂಗ್ರೆಸ್‌ಗೆ ಯಾವುದೇ ನೈತಿಕ ಹಕ್ಕಿಲ್ಲ. ಮೊದಲು ನಿಮ್ಮ ಸರ್ಕಾರದ ಭ್ರಷ್ಟಾಚಾರ ಮತ್ತು ಆಡಳಿತ ವೈಫಲ್ಯಗಳ ಬಗ್ಗೆ ಕರ್ನಾಟಕದ ಜನತೆಗೆ ಉತ್ತರಿಸಿ, ಆಮೇಲೆ ಮೋದಿಯವರ ಬಗ್ಗೆ ಮಾತನಾಡಿ ಎಂದು ಡಿ.ಎಸ್ ಅರುಣ್ ಹೇಳಿದ್ದಾರೆ.