ಜನರ ಕಿವಿಯಲ್ಲಿ ಹೂ ಇಟ್ಟ ರಾಜ್ಯ ಸರ್ಕಾರ

| Published : Jun 19 2024, 01:02 AM IST

ಸಾರಾಂಶ

ರಾಜ್ಯ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಮಾಡಿದ್ದನ್ನು ವಿರೋಧಿಸಿ ನಗರದ ಬಸವೇಶ್ವರ ವೃತ್ತದಲ್ಲಿ ಬುಧವಾರ ಎತ್ತಿನಬಂಡಿಯಲ್ಲಿ ಬೈಕ್ ಇಟ್ಟುಕೊಂಡು ಪ್ರತಿಭಟನೆ ನಡೆಸಿದರು.

ತೈಲಬೆಲೆ ಏರಿಕೆ ವಿರುದ್ಧ ಬಿಜೆಪಿ ಪ್ರತಿಭಟನೆ । ಕಿವಿಯಲ್ಲಿ ಹೂ, ಎತ್ತಿನಬಂಡಿಯಲ್ಲಿ ಬೈಕ್ ಇಟ್ಟು ಮೆರವಣಿಗೆ, ಆಕ್ರೋಶಕನ್ನಡಪ್ರಭ ವಾರ್ತೆ ಕೊಪ್ಪಳ

ರಾಜ್ಯ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಮಾಡಿದ್ದನ್ನು ವಿರೋಧಿಸಿ ನಗರದ ಬಸವೇಶ್ವರ ವೃತ್ತದಲ್ಲಿ ಬುಧವಾರ ಎತ್ತಿನಬಂಡಿಯಲ್ಲಿ ಬೈಕ್ ಇಟ್ಟುಕೊಂಡು ಪ್ರತಿಭಟನೆ ನಡೆಸಿದ ಬಿಜೆಪಿ ನಾಯಕರು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದರು.

ಬಿಜೆಪಿ ನಾಯಕರು ಎತ್ತಿನ ಬಂಡಿಯಲ್ಲಿ ಬೈಕ್ ಇಟ್ಟುಕೊಂಡು ಮೆರವಣಿಗೆ ಮಾಡುತ್ತಾ ಬಸವೇಶ್ವರ ವೃತ್ತಕ್ಕೆ ಆಗಮಿಸಿದರು. ತೈಲ ಬೆಲೆ ಏರಿಕೆಯಿಂದ ವಾಹನಗಳನ್ನು ಬಳಕೆ ಮಾಡುವುದು ಕಷ್ಟ ಸಾಧ್ಯವಾಗುತ್ತದೆ. ಹೀಗಾಗಿ, ಈ ಮೊದಲಿನಂತೆ ಎತ್ತಿನಬಂಡಿ ಬಳಕೆ ಮಾಡಬೇಕು ಎಂದು ವ್ಯಂಗ್ಯ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.

ಬಸವೇಶ್ವರ ವೃತ್ತದಲ್ಲಿ ಜಮಾಯಿಸಿದ ಬಿಜೆಪಿ ನಾಯಕರು ಪ್ರತಿಭಟನೆ ಪ್ರಾರಂಭಿಸಿದ್ದರಿಂದ ಸಂಚಾರಕ್ಕೂ ಸಮಸ್ಯೆಯಾಗಿ, ವಾಹನಗಳ ದಟ್ಟಸಾಲು ನಿಂತಿತು. ಇದು ಸಂಚಾರಕ್ಕೆ ಸಮಸ್ಯೆಯಾಗಿದ್ದರಿಂದ ಅಲ್ಲಿಯೇ ಇದ್ದ ಪೊಲೀಸರು ವಾಹನಗಳಿಗೆ ನಿಧಾನಕ್ಕೆ ದಾರಿ ಮಾಡಿ, ಪಕ್ಕದಲ್ಲಿಯೇ ಕಳುಹಿಸಿದರು.

ಇದರ ಮಧ್ಯೆ ಬಿಜೆಪಿ ನಾಯಕರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಹಾಕಿ, ತೈಲ ಬೆಲೆ ಏರಿಕೆಯನ್ನು ವಿರೋಧಿಸಿದರು.

ಕಿವಿಯಲ್ಲಿ ಹೂ:

ಪ್ರತಿಭಟನಾಕಾರರು ಕಿವಿಯಲ್ಲಿ ಹೂ ಇಟ್ಟುಕೊಂಡು ಬಂದಿದ್ದರು. ರಾಜ್ಯ ಸರ್ಕಾರ ಜನರ ಕಿವಿಯಲ್ಲಿ ಹೂ ಇಟ್ಟಿದೆ ಎಂದು ಆಕ್ರೋಶ ವ್ಯಕ್ತಪಡಿದರು.

ಗ್ಯಾರಂಟಿ ನೀಡುವುದಕ್ಕಾಗಿ ತೈಲ ಬೆಲೆ ಏರಿಕೆ ಮಾಡಲಾಗಿದೆ. ರಾಜ್ಯ ಸರ್ಕಾರಕ್ಕೆ ಆರ್ಥಿಕ ಸಮಸ್ಯೆ ಎದುರಾಗಿದ್ದು, ನಿಭಾಯಿಸಲು ಸಾಧ್ಯವಾಗುತ್ತಿಲ್ಲ. ಈ ಕಾರಣಕ್ಕಾಗಿಯೇ ಜನರಿಗೆ ಹೊರೆ ಮಾಡುತ್ತಿದ್ದಾರೆ. ಈಗಾಗಲೇ ತೈಲಬೆಲೆ ಹೆಚ್ಚಳ ವಿಪರೀತವಾಗಿದೆ. ಮತ್ತೆ ರಾಜ್ಯ ಸರ್ಕಾರ ಪ್ರತ್ಯೇಕ ಕರ ಹೆಚ್ಚಿಸಿರುವುದು ಯಾವ ನ್ಯಾಯ ಎಂದು ಪ್ರಶ್ನೆ ಮಾಡಿದರು.

ಇತಿಹಾಸದಲ್ಲಿಯೇ ರಾಜ್ಯ ಸರ್ಕಾರ ತೈಲ ಕರ ಹಾಕಿದ ಉದಾಹರಣೆ ಇಲ್ಲ. ಈಗಾಗಲೇ ಇರುವ ಕರವೇ ಹೆಚ್ಚಳವಾಗಿದ್ದು, ಇದನ್ನು ಪ್ರತ್ಯೇಕವಾಗಿ ರಾಜ್ಯ ಸರ್ಕಾರ ಹೆಚ್ಚಳ ಮಾಡುವುದು ಸರಿಯಲ್ಲ. ಕೂಡಲೇ ತೈಲಬೆಲೆ ಹೆಚ್ಚಳವನ್ನು ಕೈಬಿಟ್ಟು, ಮೊದಲಿನ ದರದಲ್ಲಿಯೇ ಪೂರೈಕೆ ಮಾಡಬೇಕು ಎಂದು ಆಗ್ರಹಿಸಿದರು.

ಆಕ್ರೋಶ:

ವಿರೋಧಪಕ್ಷದ ಮುಖ್ಯಸಚೇತಕ ದೊಡ್ಡನಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ನವೀನ್ ಗುಳಗಣ್ಣವರ, ಮಾಜಿ ಶಾಸಕ ಪರಣ್ಣ ಮುನವಳ್ಳಿ ಹಾಗೂ ವಿಪ ಸದಸ್ಯೆ ಹೇಮಲತಾ ನಾಯಕ ಮಾತನಾಡಿ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ಮಾಡಿದರು.

ಬಿಜೆಪಿ ರಾಜ್ಯ ಕಾರ್ಯದರ್ಶಿ ಶರಣು ಬಿ. ತಳ್ಳಿಕೇರಿ, ಡಾ. ಕೆ. ಬಸವರಾಜ, ಗಂಗಾವತಿ ಶಾಸಕ ಗಾಲಿ ಜನಾರ್ದನರೆಡ್ಡಿ, ಮಹಾಂತೇಶ ಮೈನಳ್ಳಿ, ಮಹೇಶ ಸಜ್ಜನ ಸೇರಿದಂತೆ ಮೊದಲಾದವರು ಇದ್ದರು.