ಸಾರಾಂಶ
ಹಾನಗಲ್ಲ: ನೀರಾವರಿ ವಿದ್ಯುತ್‌ಗೆ ಆದ್ಯತೆ ನೀಡುವ ಇಚ್ಛಾಶಕ್ತಿ ಸರಕಾರಗಳಿಗೆ ಬೇಕು, ನೀರಾವರಿಯ ಅಭಿವೃದ್ಧಿಯಲ್ಲಿ ದೊಡ್ಡ ಹೆಜ್ಜೆ ಹಾಕಿದ ನೂತನ ಸಂಸದ ಬಸವರಾಜ ಬೊಮ್ಮಾಯಿ ಕರ್ನಾಟಕದ ಏಕೈಕ ನದಿ ಜೋಡಣೆಯಾದ ಬೇಡ್ತಿ ವರದಾ ನದಿ ಜೋಡಣೆಗೆ ಮೊದಲ ಆದ್ಯತೆ ನೀಡಬೇಕು. ರಾಜ್ಯದ ಕಾಂಗ್ರೆಸ್ ಸರಕಾರ ರೈತರ ಹೊಸ ನೀರಾವರಿ ಪಂಪ್ ಸೆಟ್‌ಗಳಿಗೆ ವಿದ್ಯುತ್ ಒದಗಿಸಲು ಹಾಕಿದ ದುಬಾರಿ ಬೆಲೆಯನ್ನು ಕೈ ಬಿಡಬೇಕು ಎಂದು ಬಿಜೆಪಿ- ಜೆಡಿಎಸ್ ನಾಯಕರು ಜಂಟಿ ಹೇಳಿಕೆಯಲ್ಲಿ ಒತ್ತಾಯಿಸಿದರು.ಮಂಗಳವಾರ ಹಾನಗಲ್ಲಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಬಿಜೆಪಿ ರೈತ ಮೋರ್ಚಾ ರಾಜ್ಯ ಕಾರ್ಯದರ್ಶಿ ಬಸವರಾಜ ಹಾದಿಮನಿ, ಬೇಡ್ತಿ ವರದಾ ನದಿ ಜೋಡಣಾ ಹೋರಾಟ ಸಮಿತಿ ಅಧ್ಯಕ್ಷ ಎಸ್.ಎಂ. ಕೋತಂಬರಿ, ಜೆಡಿಎಸ್ ತಾಲೂಕು ಅಧ್ಯಕ್ಷ ಆರ್.ಬಿ. ಪಾಟೀಲ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ೭ ಜಿಲ್ಲೆಗಳಿಗೆ ನೀರಾವರಿ ಸೌಲಭ್ಯ ಒದಗಿಸುವ ಬೇಡ್ತಿ ವರದಾ ನದಿ ಜೋಡಣೆಗೆ ಕೇಂದ್ರ ಸರಕಾರದಲ್ಲಿ ನಿರ್ಣಯಿಸಿ ಕಾಮಗಾರಿ ಆರಂಭಿಸಲು ಮುಂದಾಗಬೇಕು. ಇದು ರೈತ ಸಮುದಾಯದ ಒತ್ತಾಸೆಯಾಗಿದೆ. ಅಲ್ಲದೆ ಸಮುದ್ರಕ್ಕೆ ಹೋಗಿ ಉಪ್ಪಾಗುವ ನೀರನ್ನು ರೈತರ ಭೂಮಿಗೆ ಹರಿಸುವ ಪುಣ್ಯ ನಿಮ್ಮದಾಗುತ್ತದೆ. ರೈತನ ಬದುಕು ಹಸನು ಮಾಡುವ ಯೋಜನೆಗಳಿಗೆ ಕೇಂದ್ರ ರಾಜ್ಯ ಸರಕಾರಗಳು ಆದ್ಯತೆ ನೀಡಬೇಕು. ಬರಗಾಲದಿಂದ ಬಳಲದೇ ಇರಲು ಇಂತಹ ನದಿ ಜೋಡಣಗೆ ಮಾಜಿ ಪ್ರಧಾನಿ ದಿ. ಅಟಲ್‌ಬಿಹಾರಿ ವಾಜಪೇಯಿ ಅವರ ದೂರದೃಷ್ಟಿ ಈಗಲೂ ಸಾಕಾರವಾಗಬೇಕಾಗಿದೆ. ೨ ದಶಕಗಳಿಂದ ಬೇಡ್ತಿ ವರದಾ ನದಿ ಜೋಡಣೆಗೆ ಹೋರಾಟ ನಡೆದೇ ಇದೆ. ಅದು ಬಸವರಾಜ ಬೊಮ್ಮಾಯಿ ಅವರ ಅವಧಿಯಲ್ಲಿ ಸಾಕಾರವಾಗುತ್ತದೆ ಎಂಬ ವಿಶ್ವಾಸ ರೈತರಲ್ಲಿದೆ. ಕಡಿಮೆ ವೆಚ್ಚದ ಅತಿ ದೊಡ್ಡ ನೀರಾವರಿ ಯೋಜನೆ ಇದಾಗಿದೆ. ಬುಧವಾರ ಹಾನಗಲ್ಲಿಗೆ ಆಗಮಿಸುತ್ತಿರುವ ಬಸವರಾಜ ಬೊಮ್ಮಾಯಿ ಅವರಿಗೆ ಮನವಿಯನ್ನು ಕೂಡ ನೀಡಲಾಗುತ್ತಿದೆ ಎಂದು ತಿಳಿಸಿದರು.ಅಕ್ರಮ ಸಕ್ರಮ ಯೋಜನೆಯಲ್ಲಿ ರೈತರ ಪಂಪಸೆಟ್‌ಗಳಿಗೆ ವಿದ್ಯುತ್ ಸಂಪರ್ಕ ಒದಗಿಸಲು ಹೊಸ ನಿಯಮಾವಳಿ ರೂಪಿಸಿ ಲಕ್ಷಾಂತರ ಹಣದ ಹೊರೆಗೆ ಸರಕಾರ ಮುಂದಾಗಿದ್ದು ರೈತ ವಿರೋಧಿ ನೀತಿಯಾಗಿದೆ. ಇದು ತೀರ ದುಬಾರಿಯೂ ಹೌದು. ಮೊದಲೆ ಅತಿವೃಷ್ಟಿ ಅನಾವೃಷ್ಠಿಯಿಂದ ಕಂಗೆಟ್ಟ ರೈತರ ಮೇಲೆ ಇದು ದೊಡ್ಡ ಹೊರೆಯಾಗಿದೆ. ರಾಜ್ಯದ ಕಾಂಗ್ರೇಸ್ ಸರಕಾರ ರೈತ ವಿರೋಧಿ ನೀತಿ ಮೂಲಕ ರೈತರ ಆತ್ಮ ವಿಶ್ವಾಸವನ್ನೆ ಕುಗ್ಗಿಸಿದೆ. ಕೂಡಲೇ ಆಕ್ರಮ ಸಕ್ರಮ ಮೊದಲ ನಿಯಮವನ್ನೇ ಮುಂದುವರೆಸಲಿ ಎಂದು ಒತ್ತಾಯಿಸಿದರು.ಬೆಳೆ ವಿಮಾ ಕಂಪನಿಗಳ ಲೆಕ್ಕಾಚಾರದಲ್ಲಿ ಬೆಳೆ ವಿಮೆ ರೈತರ ಪಾಲಿಗೆ ಜೂಜಾಟವಾಗಿದೆ. ಮೋಸದ ಮೂಲಕ ರೈತರನ್ನು ದಾರಿ ತಪ್ಪಿಸಿ ಬೆಳೆ ವಿಮೆ ಸರಿಯಾಗಿ ಆಗದೇ ರೈತರು ಮಾತ್ರ ಬೆಳೆ ವಿಮೆ ಕಟ್ಟಿ ಕೈ ಕಟ್ಟಿ ಕುಳಿತುಕೊಳ್ಳುವಂತಾಗಿದೆ. ಬೆಳೆ ವಿಮೆ ವಿಳಂಬದಿಂದ ರೈತ ಕೃಷಿ ಚಟುವಟಿಕೆಗಳಿಗೆ ಸಾಲ ಮಾಡಿ ಹೈರಾಣಾಗಿದ್ದಾನೆ. ರೈತರ ಸಹಾಯಕ್ಕೆ ಬರದ ಬೆಳೆ ವಿಮೆಯಿಂದ ಯಾರಿಗೆ ಲಾಭ. ಬೆಳೆ ವಿಮೆ ಪರಿಹಾರದಲ್ಲಿಯೂ ಅನ್ಯಾಯ ತಾರತಮ್ಯವಾಗುತ್ತಿದೆ. ಹಾನಗಲ್ಲ ಬ್ಯಾಡಗಿ ಶಿಗ್ಗಾಂವ ತಾಲೂಕುಗಳಿಗೆ ಮಧ್ಯಂತರ ಬೆಳೆ ಪರಿಹಾರ ಬರಲಿಲ್ಲ. ಪೆಟ್ರೋಲ್ ಡಿಸೆಲ್ ಬೆಲೆ ಏರಿಕೆಯಿಂದ ಕೃಷಿ ಸಾಮಗ್ರಿಗಳ ಉತ್ಪಾದನೆಯ ವೆಚ್ಚವೂ ಹೆಚ್ಚಾಗಿ ಮತ್ತೆ ರೈತನ ಮೇಲೆಯೇ ಬರೆ ಹಾಕುವ ಸಂದರ್ಭ ಇದಾಗಿದೆ. ಪೆಟ್ರೋಲ್ ಡಿಸೈಲ್ ಬೆಲೆ ಇಳಿಸಬೇಕು ಎಂದು ಒತ್ತಾಯಿಸಿದರು.ಬಿಜೆಪಿ ಯುವ ಮುಖಂಡ ಬಸವರಾಜ ಹಾದಿಮನಿ, ಜೆಡಿಎಸ್ ಯುವ ಘಟಕದ ಜಿಲ್ಲಾಧ್ಯಕ್ಷ ಮುತ್ತಪ್ಪ ಪವಾಡಿ ಈ ಸಂದರ್ಭದಲ್ಲಿದ್ದರು.