ಸಾರಾಂಶ
ಕನ್ನಡಪ್ರಭ ವಾರ್ತೆ ಬ್ಯಾಡಗಿ
ಚುನಾವಣೆಗೂ ಮುನ್ನ ಕೊಟ್ಟಿರುವ ಭರವಸೆ ಈಡೇರಿಸಿದ್ದೇವೆ. ಹೀಗಾಗಿ ಯಾವುದೇ ತೊಂದರೆಯಿಲ್ಲದೇ ಮುಂದಿನ 5 ವರ್ಷಗಳ ಕಾಲ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಸುಸೂತ್ರವಾಗಿ ಅವಧಿ ಪೂರೈಸಲಿದೆ. ಇದರಲ್ಲಿ ಯಾವುದೇ ಅನುಮಾನ ಬೇಡವೆಂದು ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.ಭಾನುವಾರ ತಾಲೂಕಿನ ಶಿಡೇನೂರ ಗ್ರಾಮಸ್ಥರು ಏರ್ಪಡಿಸಿದ್ದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ರಾಜ್ಯ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ. ಕೊಟ್ಟಿರುವ ಭರವಸೆಗಳನ್ನು ಹಿಂಪಡೆದುಕೊಳ್ಳಲಿದೆ ಎಂಬ ವದಂತಿ ಹಬ್ಬುತ್ತಿದ್ದು, ಸಾರ್ವಜನಿಕರು ಇದಕ್ಕೆ ಕಿವಿಗೊಡಬಾರದು. ವಿಧಾನಸಭೆ ಚುನಾವಣೆಯ ಸೋಲಿನ ಹತಾಶೆಯಿಂದ ಹೊರ ಬರಲಾಗದ ವಿಪಕ್ಷಗಳು ಸರ್ಕಾರದ ವಿರುದ್ಧ ಇಂತಹ ಸುಳ್ಳು ಹೇಳಿಕೆಗಳನ್ನು ನೀಡುತ್ತಿವೆ ಎಂದು ಆರೋಪಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ 11 ಬಾರಿ ಬಜೆಟ್ ಮಂಡಿಸಿದ್ದು ಅವರೊಬ್ಬ ಉತ್ತಮ ಆರ್ಥಿಕ ತಜ್ಞರಾಗಿದ್ದಾರೆ. ಹೀಗಾಗಿ ಎಂದಿಗೂ ಸರ್ಕಾರವನ್ನು ದಿವಾಳಿಯಾಗಲು ಬಿಡುವುದಿಲ್ಲ. ಲೋಕಸಭೆ ಚುನಾವಣೆ ಬಳಿಕ ರಾಜ್ಯದಲ್ಲಿ ಅಸ್ತಿತ್ವ ಕಳೆದುಕೊಳ್ಳಲಿರುವ ಬಿಜೆಪಿ, ಜೆಡಿಎಸ್ ಮುಖಂಡರು ಸರ್ಕಾರದ ವಿರುದ್ಧ ಅಪಪ್ರಚಾರ ನಡೆಸುತ್ತಿದ್ದಾರೆ ಎಂದರು.ಕಳೆದ ಬಿಜೆಪಿ ಸರ್ಕಾರ ಚುನಾವಣೆ ಸಮೀಪಿಸುತ್ತಿದ್ದಂತೆ ಬಹುತೇಕ ಕಾಮಗಾರಿಗೆ ಆಡಳಿತಾತ್ಮಕ ಮಂಜೂರಾತಿ ಸಹ ಪಡೆಯದೇ ಚಾಲನೆ ನೀಡಿದ್ದಾರೆ. ಹೀಗಾಗಿ ಅನುದಾನದ ಹೊಂದಿಸುವುದು ಸಮಸ್ಯೆಯಾಗುತ್ತಿದೆ. ಲೋಕೋಪಯೋಗಿ ಇಲಾಖೆ ವಾರ್ಷಿಕವಾಗಿ ₹9 ಸಾವಿರ ಕೋಟಿ ಮಾತ್ರ ಕಾಮಗಾರಿಗೆ ಅವಕಾಶವಿದೆ, ಆದರೆ ₹27 ಸಾವಿರ ಕೋಟಿ ಕಾಮಗಾರಿಗೆ ಹಿಂದಿನವರು ಚಾಲನೆ ನೀಡಿದ್ದು, 3 ವರ್ಷದ ಹಣ ಒಂದೇ ವರ್ಷದಲ್ಲಿ ಮಂಜೂರು ನೀಡಬೇಕಿದೆ. ಬ್ಯಾಡಗಿ ಮತಕ್ಷೇತ್ರ ಸೇರಿ ರಾಜ್ಯದಲ್ಲಿ ರೈತರ ಹೊಲಗಳಿಗೆ ತೆರಳಲು ರಸ್ತೆ ಸಮಸ್ಯೆಯಿದ್ದು, ಇದಕ್ಕಾಗಿ ಹೊಸ ಯೋಜನೆಗೆ ಉಸ್ತುವಾರಿ ಸಚಿವರು, ತಾವು ಮುಖ್ಯ ಮಂತ್ರಿಗಳ ಗಮನಕ್ಕೆ ತರುವ ಮೂಲಕ ವಿಷಯ ಪ್ರಸ್ತಾಪಿಸಲಾಗಿದ್ದು ಇದಕ್ಕಾಗಿ ಭೂಸರ್ವೇ ಅಗತ್ಯವಾಗಿದೆ ಎಂದರು.
ಜೈವಿಕ ಇಂಧನ ಮಂಡಳಿ ಮಾಜಿ ಅಧ್ಯಕ್ಷ ಎಸ್.ಆರ್. ಪಾಟೀಲ ಮಾತನಾಡಿ, ಧಾರವಾಡ ಕೆಸಿಸಿ ಬ್ಯಾಂಕ್‌ನಲ್ಲಿ ಹಾವೇರಿ ಜಿಲ್ಲೆಯಿಂದ ಹೆಚ್ಚು ರೈತರು ಠೇವಣಿ ನೀಡಿದ್ದಾರೆ. ಆದರೆ ತಾಲೂಕಿನ 21 ಸಹಕಾರಿ ಪತ್ತಿನ ಸಂಘಗಳಿಗೆ ಪ್ರಸಕ್ತ ಸಾಲಿನಲ್ಲಿ ಕೇವಲ ₹38 ಕೋಟಿ ಸಾಲ ವಿತರಣೆಯಾಗಿದೆ. ಆದರೆ ₹100 ಕೋಟಿಗೂ ಅಧಿಕ ಸಾಲಕ್ಕೆ ಬೇಡಿಕೆಯಿದ್ದು ಗದಗ ಮತ್ತು ಧಾರವಾಡ ಜಿಲ್ಲೆಯವರಿಗೆ ಸಿಂಹಪಾಲು ಲಭಿಸುತ್ತಿದೆ. ₹5 ಲಕ್ಷದವರೆಗೂ ಶೂನ್ಯ ಬಡ್ಡಿ ಸಾಲ ನೀಡಬೇಕಿದ್ದು, ಆದರೆ ಶೇ.3 ರಂತೆ ಸಾಲ ವಿತರಣೆ ನಡೆದಿದೆ. ಜಿಲ್ಲೆಯ ರೈತರಿಗೆ ನ್ಯಾಯ ಸಿಗಬೇಕಿದ್ದಲ್ಲಿ ಹಾವೇರಿಗೆ ಡಿಸಿಸಿ ಬ್ಯಾಂಕ್ ಮಂಜೂರಾತಿ ನೀಡುವಂತೆ ಸರ್ಕಾರಕ್ಕೆ ಒತ್ತಾಯಿಸಿದರು. ಈ ಕುರಿತು ಸಚಿವರು ಹಾಗೂ ಶಾಸಕರ ಬಳಿ ಪ್ರಸ್ತಾಪಿಸಿರುವೆ ಎಂದರು.ಈ ವೇಳೆ ಕೆಸಿಸಿ ಬ್ಯಾಂಕ್ ನಿರ್ದೇಶಕ ಚನ್ನಬಸಪ್ಪ ಹುಲ್ಲತ್ತಿ, ಟಿಎಪಿಸಿಎಂ ಅಧ್ಯಕ್ಷ ಪರಮೇಶಪ್ಪ ತೆವರಿ, ಗ್ರಾಪಂ ಸದಸ್ಯ ಪರಮೇಶಪ್ಪ ಕೋಡಿಗದ್ದೆ, ಅಶ್ವಿನಿ ಕಿತ್ತೂರು, ಮಲ್ಲವ್ವ ಬಡಿಗೇರ, ಬಸನಗೌಡ ತೆವರಿ, ದಾನಪ್ಪ ಚೂರಿ, ರಮೇಶ ಸುತ್ತಕೋಟಿ, ಶಂಭನಗೌಡ ಪಾಟೀಲ, ಸುಮಾ ಪಾಟೀಲ ಇತರರಿದ್ದರು.