ಮಾರ ಮಿಂದನು ಕಥಾ ಸಂಕಲನದ ಮರುಓದು ಸಂವಾದ ಕನ್ನಡಪ್ರಭ ವಾರ್ತೆ ಕುಮಟಾ

ನಿರಂತರ ಸ್ಥಿತ್ಯಂತರಕ್ಕೆ ತೆರೆದುಕೊಂಡ ಜೀವನದ ಸೂಕ್ಷ್ಮ ವಿವರಗಳ ಮೂಲಕ ಕಾಲ-ದೇಶಗಳ ತಾತ್ವಿಕ ವಾಸ್ತವವನ್ನು ನೇಯುತ್ತ ಕಥಾವಸ್ತುವನ್ನು ಕಟ್ಟುವ ಬಳಗಾರರ ಕಥೆಗಳು ಕನ್ನಡದ ಕಥನ ಪರಂಪರೆಯ ಸಶಕ್ತ ಮುಂದುವರಿಕೆಯಾಗಿದೆ. ಒಂದರ್ಥದಲ್ಲಿ ಬಳಗಾರರ ಕಥೆಗಳು ಕನ್ನಡದ ಅಮೃತಪಡಿ ಎಂದು ಪ್ರಸಿದ್ಧ ವಿಮರ್ಶಕಿ ಎಂ.ಎಸ್. ಆಶಾದೇವಿ ಹೇಳಿದರು.

ಪಟ್ಟಣದ ವೈಭವ ಸಭಾಭವನದಲ್ಲಿ ಋತುಮಾನ ಬಳಗ ಸಂಘಟಿಸಿದ್ದ ಶ್ರೀಧರ ಬಳಗಾರರ "ಮಾರ ಮಿಂದನು " ಕಥಾ ಸಂಕಲನದ ಮರುಓದು ಸಂವಾದದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಓದುಗರ ಅನುಭವದ ಜತೆ ಸಂವಾದಿಸುವ ನಿರೂಪಣೆಗಳು ಕಥೆ ನಿಂತ ನಂತರವೂ ಮುಂದುವರಿಯುವ ಗುಣಗಳಿಂದಾಗಿ ಬದುಕಿನ ವಿಸ್ಮಯವನ್ನು ಭಾಷೆಯ ಚೂಪುತನದಿಂದ ಧ್ವನಿಸುತ್ತಲೇ ಇರುತ್ತವೆ. ಹೆಣ್ಣಿನ ಧಾರಣ್ವತ್ವವನ್ನು ಕೇಂದ್ರ ಶಕ್ತಿಯಾಗಿ ಪಡೆದ ಬಳಗಾರರ ಕಥೆಗಳು ಸಮಕಾಲೀನ ಬಹುಸ್ತರೀಯ ಬಿಕ್ಕಟ್ಟುಗಳನ್ನು ಮುಖಾಮುಖಿಯಾಗುವುದರಿಂದ ಮಹತ್ವದ್ದು ಎಂದೆನಿಸುತ್ತದೆ ಎಂದರು.

ಸಾಹಿತಿ ಚಿನ್ಮಯ ಹೆಗಡೆ ಮಾತನಾಡಿ, ದಿನನಿತ್ಯದ ಸಾಮಾನ್ಯ ಸಂಗತಿಗಳನ್ನು ಚಿತ್ರಿಸುತ್ತ ಉತ್ತರ ಕನ್ನಡದ ಪ್ರಾದೇಶಿಕ ಸತ್ವವನ್ನು ವಿಶ್ವಾತ್ಮಕವಾಗಿಸುವ ಬಳಗಾರರ ಕಥೆಗಳು ನಮ್ಮನ್ನು ನಾವು ಅರಿಯಲು ದೀಪಗಳಾಗಿವೆ ಎಂದರು.


ಸಾಹಿತಿ ಕೋನಳ್ಳಿ ರಾಜೀವ ನಾಯ್ಕ ಮಾತನಾಡಿ, ಸಾಮಾನ್ಯ ಮನುಷ್ಯರ ಅಸಾಮಾನ್ಯ ಸಾಮರ್ಥ್ಯವನ್ನು ಶೋಧಿಸುವ ಬಳಗಾರರ ಕಥೆಗಳು ಜೀವನದ ಕುರಿತು ತೀರ್ಮಾನ ನೀಡದೆ ತಿಳಿಯಲು ಒತ್ತಾಯಿಸುವುದರಿಂದ ಅವು ಅನನ್ಯ ಎಂದರು.

ಸಂವಾದದಲ್ಲಿ ಪ್ರತಿಕ್ರಿಯಿಸಿದ ಡಾ. ಶ್ರೀಧರ ಬಳಗಾರ, ಮಗುವಿನ ಮುಗ್ಧತೆ ಮತ್ತು ತಾಯಿಯ ಪ್ರಬುದ್ಧತೆಯಿಂದ ಲೇಖಕ, ಕಥಾ ಜಗತ್ತಿನಲ್ಲಿ ಹೊಸತನ್ನು ಕಾಣಿಸಬಲ್ಲ ಎಂದರು. ಋತುಮಾನ ಬಳಗದ ಕಿರಣ ಪ್ರಾಸ್ತಾವಿಕವಾಗಿ ಮಾತನಾಡಿ ಪ್ರಕಾಶನದ ಉದ್ದೇಶ ವಿವರಿಸಿದರು.